ಭಾನುವಾರ, ಜೂನ್ 7, 2020
29 °C

ನೃತ್ಯ ಸಂಶೋಧನೆ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೃತ್ಯ ಸಂಶೋಧನೆ ವಿಚಾರ ಸಂಕಿರಣ

‘ನೂಪುರ ಭ್ರಮರಿ’ ನೃತ್ಯ ಶಾಲೆ ವತಿಯಿಂದ ಇತ್ತೀಚೆಗೆ ‘ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯ ಚಿಂತನ’ ವಿಷಯ ಕುರಿತು ವಿಚಾರ ಸಂಕಿರಣ ನಡೆಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಿಗೆ ವಿಶೇಷ ಪೂಜೆ ಮಾಡಲಾಯಿತು.

‘ಅಡವುಗಳ ಸಂಸ್ಕೃತ ಆಧಾರ’ ಕುರಿತು ಅನುಪಮಾ ಜಯಸಿಂಹ, ‘ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸ’ ಕುರಿತು ರಂಜನಾ ನಾಗರಾಜ್, ‘ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯಕಭಾವದ ಪಾತ್ರ’ ಕುರಿತು ಮಧುಲಿಕಾ ಶ್ರೀವತ್ಸ, ‘ನೃತ್ಯ ಮತ್ತು ನಾಟಕಗಳಲ್ಲಿ ಸಖಿಯರ ಕರ್ತವ್ಯ ಮತ್ತು ವರ್ಗೀಕರಣ’ ಕುರಿತು ದೀಪ್ತಿಶ್ರೀ ಭಟ್ ಸಂಶೋಧನ ಪ್ರಬಂಧಗಳನ್ನು ನೃತ್ಯಸಹಿತವಾಗಿ ಮಂಡಿಸಿದರು.

ಬಳಿಕ ‘ಪ್ರಸ್ತುತ ವರ್ಷಗಳಲ್ಲಿ ನೂತನವಾಗಿ ವಿನ್ಯಾಸಗೊಳ್ಳುತ್ತಿರುವ ಪಾರಂಪರಿಕ ನೃತ್ತಬಂಧ ಅಲರಿಪುವಿನ ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳು’ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ನಾಡಿನ ಅನೇಕ ಕಡೆಯಿಂದ ಆಗಮಿಸಿದ್ದ ನೃತ್ಯ ಅಧ್ಯಯನಕಾರರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪಾಲ್ಗೊಂಡಿದ್ದರು.

ಅರ್ಜುನ್ ಭಾರದ್ವಾಜ್ ‘ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ, ಸಾಮ್ಯ ಹಾಗೂ ಅವೈಷಮ್ಯ’ ವಿಷಯವಾಗಿ ಮಾತನಾಡಿದರು. ನಂತರ ನೂಪುರ ಭ್ರಮರಿಯ ಆನ್‍ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣಗೊಳಿಸಲಾಯಿತು. ಇದೇ ಸಂದರ್ಭ ಕೆ.ಎನ್.ಅನಂತರಾಮಯ್ಯ‘ಕಲಾಯೋಜನಕೌಶಿಕ’ ಹಾಗೂ ಸುಬ್ಬುಕೃಷ್ಣ ಅವರಿಗೆ ‘ಸಹೃದಯ ಸದ್ರತ್ನ’ ಬಿರುದು ನೀಡಲಾಯಿತು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಡಾ. ಶೋಭಾ ಶಶಿಕುಮಾರ್, ಶಾಲಿನಿ ವಿಠಲ್, ಡಾ. ಮನೋರಮಾ ಬಿ.ಎನ್ ಉಪಸ್ಥಿತರಿದ್ದರು. ಸಂಜೆ ಮೇಘಾ ಶ್ರೀನಿವಾಸ್ ಮತ್ತು ಸಂಗೀತಾ ಅಯ್ಯರ್ ಶಿವಾರ್ಪಣಂ- ಭರತನೃತ್ಯ ಪ್ರಸ್ತುತಪಡಿಸಿದರು. ಬಾದಾಮಿಯ ಮಹಾನಟನ(ಶಿವ) ಕುರಿತು ಡಾ. ಮನೋರಮಾ ಬರೆದ ಮೊತ್ತ ಮೊದಲ ಕನ್ನಡ ನೃತ್ಯ ಸ್ತುತಿ-ಕೌತ್ವ, ಮಯೂರವಿನ್ಯಾಸದಲ್ಲಿ ಅರಳಿದ ಅಲರಿಪು ನೃತ್ತ ಜನಮೆಚ್ಚುಗೆ ಗಳಿಸಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.