ಗುರುವಾರ , ಡಿಸೆಂಬರ್ 12, 2019
25 °C

ನೀರಿನ ಸದ್ಬಳಕೆಗಾಗಿ ‘ಅಟಲ್ ಭೂ ಜಲ್‌’ ಜಾರಿ: ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ಸದ್ಬಳಕೆಗಾಗಿ ‘ಅಟಲ್ ಭೂ ಜಲ್‌’ ಜಾರಿ: ಗಡ್ಕರಿ

ಝಳಕಿ (ವಿಜಯಪುರ)/ ಬಳ್ಳಾರಿ: ‘ದೇಶದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಹನಿ ಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳಲು ಶೀಘ್ರದಲ್ಲೇ ‘ಅಟಲ್‌ ಭೂ ಜಲ್‌’ ಯೋಜನೆ ಜಾರಿಗೊಳಿಸಲಾಗುವುದು’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ವಿಜಯಪುರ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಮಂಗಳವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘₹6000 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ₹ 3000 ಕೋಟಿ ಅನುದಾನ ಒದಗಿಸಿದರೆ, ವಿಶ್ವಬ್ಯಾಂಕ್‌ನಿಂದ ₹ 3000 ಕೋಟಿ ನೆರವು ಪಡೆಯಲಾಗುವುದು’ ಎಂದರು.

ಈ ಯೋಜನೆ ಮೂಲಕ ನದಿ- ಹಳ್ಳಗಳ ಪುನರುಜ್ಜೀವನ, ಬಾಂದಾರ ನಿರ್ಮಾಣ, ನವೀಕರಣ ಸೇರಿದಂತೆ ಜಲ ಸಂರಕ್ಷಣೆಯ ಇನ್ನಿತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಗಡ್ಕರಿ ತಿಳಿಸಿದರು.

ಚಾಲನಾ ತರಬೇತಿ ಶಾಲೆ: ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಿಲಾನ್ಯಾಸ ಮಾಡಿದ ಬಳಿಕ ಮಾತನಾಡಿದ ಗಡ್ಕರಿ, ‘ವಾಹನ ಚಾಲಕರ ಕೊರತೆ ನೀಗಿಸುವ ಸಲುವಾಗಿ ದೇಶದಲ್ಲಿ ಎರಡು ಸಾವಿರ ವಾಹನ ಚಾಲನಾ ತರಬೇತಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಕೆಲವು ಕಾರ್ಯಾರಂಭ ಮಾಡಿವೆ’ ಎಂದರು.

‘22 ಲಕ್ಷ ಚಾಲಕರ ಕೊರತೆ ನೀಗಿಸುವ ಸವಾಲು ಎದುರಾಗಿದೆ. ಬಳ್ಳಾರಿಯೂ ಆಸಕ್ತಿ ತೋರಿದರೆ ಇಲ್ಲಿಯೂ ಒಂದು ಶಾಲೆ ತೆರೆಯಲಾಗುವುದು’ ಎಂದರು.

ಬಳ್ಳಾರಿ ಮತ್ತು ಆಂಧ್ರಪ್ರದೇಶದ ಗುಂಡ್ಲಾಪಲ್ಲಿ ನಡುವೆ 441 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

***

ಕಾವೇರಿ ಜಲ ವಿವಾದ ಬಗೆಹರಿಸುವೆ: ಗಡ್ಕರಿ

ಭಾಲ್ಕಿ (ಬೀದರ್‌ ಜಿಲ್ಲೆ): ‘ಕರ್ನಾಟಕ–ತಮಿಳುನಾಡು ನಡುವಿನ ಕಾವೇರಿ ಜಲ ವಿವಾದವನ್ನು ಬಗೆಹರಿಸಿಯೇ ತೀರುವೆ’ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ವಾಗ್ದಾನ ಮಾಡಿದರು.

ಇಲ್ಲಿನ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ  ಮಾತನಾಡಿ ‘ಕರ್ನಾಟಕ– ತೆಲಂಗಾಣ ಹಾಗೂ ಕರ್ನಾಟಕ– ಆಂಧ್ರಪ್ರದೇಶ ಮಧ್ಯೆ ಇರುವ ಜಲ ವಿವಾದಗಳನ್ನೂ ಪರಿಹರಿಸಲಾಗುವುದು’ ಎಂದು ತಿಳಿಸಿದರು.

***

₹ 7.50 ಲಕ್ಷ ಕೋಟಿ ವೆಚ್ಚದಲ್ಲಿ ‘ಭಾರತ ಮಾಲಾ’ ರಸ್ತೆ ನಿರ್ಮಾಣ ಯೋಜನೆ ಜಾರಿಗೊಳಿಸಲಾಗುತ್ತಿದೆ. ಒಟ್ಟು <br/>₹ 50 ಲಕ್ಷ ಕೋಟಿ ಮೊತ್ತದ ಕಾಮಗಾರಿ ನಡೆಸಲಾಗುವುದು

– ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಪ್ರತಿಕ್ರಿಯಿಸಿ (+)