ಶರಣರ ಏಕದೇವೋಪಾಸನೆ

7

ಶರಣರ ಏಕದೇವೋಪಾಸನೆ

Published:
Updated:

ವೈದಿಕ ಪುರೋಹಿತಶಾಹಿಯು ಇತಿಹಾಸದುದ್ದಕ್ಕೂ ಬಹುದೇವೋಪಾಸನೆಯನ್ನು ಪುರಸ್ಕರಿಸುತ್ತ ಅದನ್ನು ಜನರ ಶೋಷಣೆಯ ಅಸ್ತ್ರವಾಗಿ ಬಳಸಿಕೊಂಡು ಬಂದಿರುವುದನ್ನು ಗಮನಿಸಿದ ಬಸವಾದಿ ಶರಣರು ವ್ಯಕ್ತಿಯ ಆಧ್ಯಾತ್ಮಿಕ ಔನ್ನತ್ಯಕ್ಕೆ ಕಾರಣವಾಗಬಲ್ಲ ಏಕದೇವೋಪಾಸನೆಗೆ ಒತ್ತು ನೀಡಿದರು. ಮಡಕೆ ದೈವ, ಮೊರದೈವ, ಬೀದಿಯ ಕಲ್ಲು ದೈವ, ಹಣಿಗೆದೈವ, ಕೊಳಗದೈವ, ಗಿಣ್ಣಿಲು ದೈವ ಮುಂತಾದ ಕಾಲಿಡಲು ಇಂಬಿಲ್ಲದ ದೈವಗಳನ್ನು ನಿರಾಕರಿಸಿ ದೇವನೊಬ್ಬನೆ ಎಂದು ಸಾರಿದರು.

ಊರೊಳಗೊಬ್ಬದೇವ, ಮಡುವಿನೊಳಗೊಬ್ಬದೇವ, ಅಡವಿಯಲೊಬ್ಬದೇವ, ಮಡಿಲಲೊಬ್ಬ ದೇವ ಎಂಬಂತೆ ನೂರಾರು ದೇವತೆಗಳನ್ನು ಸೃಷ್ಟಿಸಿಕೊಂಡು ಅಂಧ-ಶ್ರದ್ಧೆಯಲ್ಲಿ ಮುಳುಗಿದ ಜನರನ್ನು ಕಂಡು ಜಗದಗಲ ಮುಗಿಲಗಲ, ಪಾದ ಪಾತಾಳದಿಂದತ್ತತ್ತ, ಮಕುಟ ಬ್ರಹ್ಮಾಂಡದಿಂದತ್ತತ್ತ, ಸಾವಿಲ್ಲದ, ಕೇಡಿಲ್ಲದ, ಭವವಿಲ್ಲದ, ಭಯವಿಲ್ಲದ, ತಂದೆ ಇಲ್ಲದ, ತಾಯಿ ಇಲ್ಲದ, ವೇದಾತೀತ, ವ್ಯೋಮಾತೀತ, ಷಡುವರ್ಣರಹಿತನಾದ ದೇವರು ಒಬ್ಬನೇ ಇದ್ದು, ಈ ದೇವರನರಿಯದೆ ಕಲ್ಲುದೇವರು, ಮಣ್ಣುದೇವರು, ಮರದೇವರು ಎಂದು ಆರಾಧಿಸಿ ಕೆಟ್ಟರಲ್ಲ ಎಂದು ಶರಣರು ವಿಷಾದಿಸುತ್ತಾರೆ. ಧರ್ಮಗುರು ಬಸವಣ್ಣನವರಂತೂ- ಅರಗು ತಿಂದು ಕರಗುವ ದೈವ, ಉರಿಯ ಕಂಡರೆ ಮುರುಟುವ ದೈವವನೆಂತು ಸರಿ ಎಂಬೆನಯ್ಯಾ, ಅವಸರ ಬಂದರೆ ಮಾರುವ ದೈವವನೆಂತು ಸರಿ ಎಂಬೆನಯ್ಯಾ, ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿ ಎಂಬೆನಯ್ಯಾ- ಸಹಜ ಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೈವ ಎಂದು ಒಬ್ಬನೇ ದೇವನಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ದೇವನ ಸ್ವರೂಪವನ್ನು ನಿರಾಕಾರ, ನಿರಂಜನ, ನಿರವಯವ ಎಂದಾಗಲಿ, ಸಗುಣ-ಸಾಕಾರವೆಂದಾಗಲಿ ತಿಳಿದು ಅರ್ಚಿಸುವವರು ಒಬ್ಬನೇ ದೇವನಿದ್ದಾನೆಂದು ನಂಬಿ ನಡೆಯುವುದು ಬಹಳ ಮುಖ್ಯ. ಒಬ್ಬ ದೇವನಲ್ಲಿಯೇ ನಮ್ಮ ನಿಷ್ಠೆ ಕರಿಗೊಳ್ಳಬೇಕು. ಹಲವು ದೇವತೆಗಳಿರುವರೆಂದು ಭ್ರಮಿಸಿ, ಸದಾ ದೇವರಿಂದ ದೇವರಿಗೆ ನಿಷ್ಠೆಯನ್ನು ಬದಲಿಸುವ ಭಕ್ತನ ಭಕ್ತಿಯ ಸಾಧನೆಯು ಗುರಿಯನ್ನು ತಲುಪಲು ಸಾಧ್ಯವಾಗಲಾರದು. ಕಂಡಕಂಡವರನೆಲ್ಲ ಗಂಡನೆಂದೆಂಬ ದುಂಡೆಯವನವಳ ಸಜ್ಜನೆ ಎಂದೆನ್ನಬಹುದೆ? ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗವ ಮಾಡುವ ಬೋಸರಿ ತೊತ್ತಿಗೆಲ್ಲಿಯದೋ ನಿಜ ಮುತ್ತೈದೆತನ? ಎಂದು ಕಠೋರವಾಗಿ ಪ್ರಶ್ನಿಸುವ ಶರಣರು- ಭಕ್ತನಾದವನು ಏಕದೇವೋಪಾಸನೆಯ ಮೂಲಕ ತನ್ನ ಸಾಧನೆಯ ಮಾರ್ಗದಲ್ಲಿ ಸಜ್ಜನನಾಗಿ ಮುಂದುವರೆಯುತ್ತ ಭಕ್ತಿಯ ಪರಿಶುದ್ಧತೆಯನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾರೆ. ಇಂಥ ಏಕನಿಷ್ಠೆಯ ಸಾಧನೆ ಮಾತ್ರ ಭಕ್ತನನ್ನು ಭಗವಂತನತ್ತ ತೆಗೆದುಕೊಂಡು ಹೋಗುವುದಲ್ಲದೆ, ಭಗವಂತನ ಒಲುಮೆಗೆ ಕಾರಣವಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry