ಬುಧವಾರ, ಡಿಸೆಂಬರ್ 11, 2019
20 °C

ಕಾಂಗ್ರೆಸ್‌ ಬೆಂಬಲಿತರ ಆಯ್ಕೆ: ಚುನಾವಣಾ ದಿಕ್ಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಬೆಂಬಲಿತರ ಆಯ್ಕೆ: ಚುನಾವಣಾ ದಿಕ್ಸೂಚಿ

ದೇವನಹಳ್ಳಿ: ಸತತ ಇಪ್ಪತ್ತು ವರ್ಷಗಳಿಂದ ಜೆಡಿಎಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡ ಕೋರಮಂಗಲ ಮತ್ತು ಹಾರೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಗೊಂಡಿರುವುದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಮುನಿನರಸಿಂಹಯ್ಯ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಕಂದಾಯ ಆಡಳಿತ ಕಚೇರಿ ಆವರಣದಲ್ಲಿ ಮತ ಎಣಿಕೆಯ ನಂತರ ಅಭ್ಯರ್ಥಿಗಳ ವಿಜಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಎಂದರು.

ಸ್ಥಳೀಯ ಮತದಾರರು ರಾಜ್ಯ ಸರ್ಕಾರದ ಜನಪರ ಅಭಿವೃದ್ಧಿಯನ್ನು ಮೆಚ್ಚಿ ಹೊಂದಾಣಿಕೆಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿರುವುದು ಮುಂದಿನ ಚುನಾವಣೆಗೆ ಉತ್ತಮ ಅಡಿಪಾಯವಾಗಲಿದೆ ಎಂದರು.

ಕೆಪಿಸಿಸಿ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಗಳಿಸಿದ ವರ್ಚಸ್ಸು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬರಲು ಸಾಧ್ಯವಿಲ್ಲ ಎಂದರು.

ಎರಡೂ ಪಕ್ಷಗಳು ಬೆರಳೆಣಿಕೆ ಸ್ಥಾನಕ್ಕೆ ಸಿಮೀತವಾಗುತ್ತವೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂಬ ಗುಪ್ತ ಮಾಹಿತಿಯನ್ನು ತಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಪದೇಪದೇ ರಾಜ್ಯಕ್ಕೆ ವಿವಿಧ ಸಭೆ ಸಮಾರಂಭ ನೆಪದಲ್ಲಿ ಆಗಮಿಸಿ ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಮಂಡಿಸಿದ ಬಜೆಟ್ ನಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಂಗಾಲಾಗಿದ್ದಾರೆ ಎಂದರು.

ಆಡಳಿತ ಸರ್ಕಾರದ ವೈಫಲ್ಯಗಳು ವಿರೋಧ ಪಕ್ಷಗಳಿಗೆ ಸಿಗುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಒತ್ತಾಯದ ಮೇರೆಗೆ ಸ್ಥಳೀಯ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ಕೆಪಿಸಿಸಿ ಸದಸ್ಯ ಚೇತನ್ ಗೌಡ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ಕೆಪಿಸಿಸಿ ಜಿಲ್ಲಾ ಘಟಕ ಕಾರ್ಯಕಾರಿ ಸಮಿತಿ ಸದಸ್ಯ ಎಂ. ನಾರಾಯಣಸ್ವಾಮಿ, ಪುರಸಭೆ ಸದಸ್ಯೆ ಪುಷ್ಪ ರವಿಕುಮಾರ್, ಎ.ಪಿ.ಎಂ.ಸಿ. ನಿರ್ದೇಶಕ ಸುಧಾಕರ್, ಮುಖಂಡ ಸೋಮಣ್ಣ, ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಮತದಾರರು ರಾಜ್ಯದ ನಾಲ್ಕೂ ಮುಕ್ಕಾಲು ವರ್ಷಗಳ ಪ್ರಗತಿಪರ ಯೋಜನೆಗಳ ಸಾಧನೆಯನ್ನು ತುಲನೆ ಮಾಡಿದ್ದಾರೆ ಎಂದರು.

ಈಚೆಗಿನ ಬಜೆಟ್ ನಲ್ಲಿ ಎಲ್ಲ ಸಮುದಾಯದ ಮತ್ತು ವಿವಿಧ ಕ್ಷೇತ್ರಗಳಿಗೆ ಮೀಸಲಿಟ್ಟ ದೂರದೃಷ್ಟಿ ಯೋಜನೆ ಮತದಾರರಿಗೆ ಅರ್ಥವಾಗಿದೆ. ಯಾವುದೇ ಆಮಿಷಗಳಿಗೆ ಮತದಾರರು ಮಣಿಯದೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸಿ ದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸಮಗ್ರ ಅಭಿವೃದ್ಧಿಯ ಗೆಲುವು ಎಂದರು.

ಪ್ರತಿಕ್ರಿಯಿಸಿ (+)