ಬುಧವಾರ, ಡಿಸೆಂಬರ್ 11, 2019
22 °C

ಸಂಜೆಯ ಸವಿಗೆ ಸುಲಭದ ತಿಂಡಿಗಳು

Published:
Updated:
ಸಂಜೆಯ ಸವಿಗೆ ಸುಲಭದ ತಿಂಡಿಗಳು

ಆಲೂ ಪೂರಿ

ಬೇಕಾಗುವ ಸಾಮಗ್ರಿಗಳು : 1 ಕಪ್ ಬೇಯಿಸಿ ತುರಿದ ಆಲೂಗಡ್ಡೆ , 2 ಕಪ್ ಗೋಧಿ ಹಿಟ್ಟು, 1 ದೊಡ್ಡ ಚಮಚ ಬಾಂಬೆ ರವೆ, ¼ ಸಣ್ಣ ಚಮಚ ಗರಂ ಮಸಾಲೆ, ½ ಸಣ್ಣ ಚಮಚ ಅಜವೈನ, ¾ ಸಣ್ಣ ಚಮಚ ಖಾರದ ಪುಡಿ, ¼ ಸಣ್ಣ ಚಮಚ ಅಂಚೂರ್ ಪುಡಿ, ಕಲಿಸಲು ನೀರು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ತುರಿದ ಆಲೂಗಡ್ಡೆ , ಗೋಧಿ ಹಿಟ್ಟು ಮತ್ತು ರವೆಯನ್ನು ಒಟ್ಟು ಕಲಸಿ. ಈ ಮಿಶ್ರಣಕ್ಕೆ ಒಂದು ಚಮಚ ಎಣ್ಣೆ ಹಾಗೂ ಉಳಿದ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಈ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವರೆಗೆ ಕರಿದರೆ ಆಲೂ ಪೂರಿ ಸಿದ್ಧ. ಇದನ್ನು ಹಾಗೆಯೇ ಅಥವಾ ಚಟ್ನಿಯ ಜೊತೆಯೂ ಸವಿಯ ಬಹುದು.

ಬೇಸನ್ ಟೋಸ್ಟ್

ಬೇಕಾಗುವ ಸಾಮಗ್ರಿಗಳು : 4 ಬ್ರೆಡ್ ಸ್ಲೈಸ್, 1 ಕಪ್ ಬೇಸನ್, ½ ಸಣ್ಣ ಚಮಚ ಅಜವೈನ, ¾ ಸಣ್ಣ ಚಮಚ ಖಾರದ ಪುಡಿ, ¼ ಸಣ್ಣ ಚಮಚ ಅಂಚೂರ್ ಪುಡಿ, ½ ಸಣ್ಣ ಚಮಚ ಅರಿಸಿನ ಪುಡಿ, ¾ ಕಪ್ ತರಕಾರಿ( ತುರಿದ ಕ್ಯಾರೇಟ್, ಸಣ್ಣ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಇತ್ಯಾದಿ), ½ ಕಪ್ ನೀರು, ಸ್ವಲ್ಪ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಒಂದು ತಟ್ಟೆಯಲ್ಲಿ ಬೇಸನ್ ಮತ್ತು ಉಳಿದ ಪುಡಿಗಳನ್ನು ಹಾಕಿ ನೀರಿನೊಂದಿಗೆ ಗಂಟುಗಳು ಇಲ್ಲದ ಹಾಗೆ ಕಲಸಿ. ಈ ಮಿಶ್ರಣಕ್ಕೆ ತರಕಾರಿಗಳನ್ನು ಸೇರಿಸಿ. ಬ್ರೆಡ್ ಸ್ಲೈಸ್ಅನ್ನು ಹಿಟ್ಟಿನಲ್ಲಿ ಅದ್ದಿ, ಕಾದ ಕಾವಲಿಗೆ ಹಾಕಿ. ಸಣ್ಣ ಬೆಂಕಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಗಳನ್ನು ಕಾಯಿಸಿ. ಬೇಸನ್ ಟೋಸ್ಟ್ ಸಿದ್ದ.

ಮ್ಯುಸ್ಲಿ

ಬೇಕಾಗುವ ಸಾಮಗ್ರಿಗಳು : 2 ಚಮಚ ರೋಲ್ಡ್ ಓಟ್ಸ್, ¼ ಕಪ್ ಕಾರ್ನ್ ಫ್ಲೆಕ್ಸ್ , ½ ಕಪ್ ಹೆಚ್ಚಿದ ಹಣ್ಣುಗಳು ( ಸೇಬು, ದ್ರಾಕ್ಷಿ , ಬಾಳೇಹಣ್ಣು ಇತ್ಯಾದಿ), ½ ಕಪ್ ಹಾಲು, 2 ಚಮಚ ಜೇನುತುಪ್ಪ,4 ಸಣ್ಣ ಹೆಚ್ಚಿದ ಖರ್ಜೂರ, ಸಣ್ಣ ಚೂರು ಮಾಡಿದ 4 ಬಾದಾಮಿ ಮತ್ತು ಗೋಡೊಂಬಿ.

ಮಾಡುವ ವಿಧಾನ : ಸಣ್ಣ ಉರಿ ಅಲ್ಲಿ ರೋಲ್ಡ್ ಓಟ್ಸ್ ಅನ್ನು 1 ನಿಮಿಷ ಹುರಿಯಿರಿ. ನಂತರ ಇದಕ್ಕೆ ಹಾಲು, ಖರ್ಜೂರ, ಬಾದಾಮಿ ಹಾಗೂ ಗೋಡೊಂಬಿ ಹಾಕಿ 2 ನಿಮಿಷ ಕುದಿಸಿ. ನಂತರ ಒಂದು ಬೌಲ್ನಲ್ಲಿ ಹಣ್ಣುಗಳು, ಕಾರ್ನ್ ಫ್ಲೆಕ್ಸ್, ಜೇನುತುಪ್ಪ ಮತ್ತು ಕುದ್ದ ಓಟ್ಸ್-ಹಾಲನ್ನು ಹಾಕಿ ಮಿಶ್ರಣ ಮಾಡಿದರೆ ಮ್ಯುಸ್ಲಿ ಸಿದ್ಧ.

(ರಕ್ಷಿತಾ ಬಿ.ಆರ್.)

ಪ್ರತಿಕ್ರಿಯಿಸಿ (+)