ಗುರುವಾರ, 22–2–1968

7

ಗುರುವಾರ, 22–2–1968

Published:
Updated:

‘ಪ್ರಜಾವಾಣಿ’ ಮತ ಸಂಗ್ರಹ: ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳ ಬಹುಮತ

ಬೆಂಗಳೂರು, ಫೆ. 21–
ವಿದ್ಯಾರ್ಥಿ ಚಳವಳಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರಾಜ್ಯದ ಎರಡು ವಿಶ್ವವಿದ್ಯಾನಿಲಯಗಳ 852 ವಿದ್ಯಾರ್ಥಿಗಳ ಪೈಕಿ ಶೇಕಡಾ 78 ಮಂದಿ ಚಳವಳಿ ನಿಲ್ಲಿಸಿ ತರಗತಿಗಳಿಗೆ ಹಾಜರಾಗಲು ಕಾತರರಾಗಿದ್ದಾರೆ.

ಚಳವಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಮುಂದೆ ‘ಪ್ರಜಾವಾಣಿ’ ಇಟ್ಟಿದ್ದ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿದವರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶೇಕಡಾ 74 ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶೇಕಡಾ 82 ಮಂದಿ ಚಳವಳಿಯನ್ನು ‘ಸದ್ಯಕ್ಕೆ ನಿಲ್ಲಿಸಿ’ ತರಗತಿಗಳಿಗೆ ಹಾಜರಾಗುವ ಇಚ್ಛೆಯನ್ನು ವ್ಯಕ್ತ‍ಪಡಿಸಿದ್ದಾರೆ.

ಉತ್ತರ ನೀಡಲು ಮೂರೇ ದಿನಗಳ ಅವಧಿ ನೀಡಿದ್ದರೂ ವಿದ್ಯಾರ್ಥಿಗಳ ಪ್ರತಿಕ್ರಿಯೆ ಗಮನಾರ್ಹವಾಗಿತ್ತು.

ಖಾತೆಗಳ ಮರುವಿಂಗಡಣೆ: ಆರ್.ಎಂ. ಪಾಟೀಲ್ ಅವರಿಗೆ ಗೃಹ ಸಚಿವ ಶಾಖೆ?

ಬೆಂಗಳೂರು, ಫೆ. 21–
ಈಗ ರಾಜ್ಯದ ಪೌರಾಡಳಿತ ಸಚಿವರಾಗಿರುವ ಶ್ರೀ ಆರ್.ಎಂ. ಪಾಟೀಲ್ ಅವರಿಗೆ ಗೃಹಖಾತೆಯನ್ನು ವಹಿಸಲಾಗಿದೆಯೆಂದು ಈ ರಾತ್ರಿ ಇಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಅಧಿಕೃತ ‍ಪ್ರಕಟಣೆ ಗುರುವಾರ ಹೊರಬೀಳುವ ನಿರೀಕ್ಷೆಯಿದೆ. ಪಶುಸಂಗೋಪನಾ ಇಲಾಖಾ ಮಂತ್ರಿ ಶ್ರೀ ಡಿ. ದೇವರಾಜ್ ಅರಸ್ ಅವರಿಗೆ ಕಾರ್ಮಿಕ ಖಾತೆಯನ್ನೂ ವಹಿಸಲಾಗಿದೆ. ಶ್ರೀ ಎಂ.ವಿ. ರಾಮರಾವ್ ಅವರು ರಾಜೀನಾಮೆ ಕೊಟ್ಟಿದ್ದರಿಂದ ಸಚಿವ ಸಂಪುಟದ ಖಾತೆಗಳ ಮರುವಿಂಗಡಣೆ ಅಗತ್ಯವಾಯಿತು.

ಕಛ್: ರಾಜಕೀಯ ತೀರ್ಪಿಗೆ ಭಾರತ ಬದ್ಧವಲ್ಲ– ಚಾಗಲಾ

ನವದೆಹಲಿ, ಫೆ. 21–
‘ಕಛ್ ತೀರ್ಪು ನ್ಯಾಯಾಂಗ ತೀರ್ಪಲ್ಲ. ಆದರೆ ಅದು ರಾಜಕೀಯ ತೀರ್ಪು’ ಎಂದು ಇಂದು ರಾಜ್ಯಸಭೆಯಲ್ಲಿ ನುಡಿದ ಮಾಜಿ ವಿದೇಶಾಂಗ ಸಚಿವ ಶ್ರೀ ಎಂ.ಸಿ. ಚಾಗಲಾ ಅವರು, ಈ ತೀರ್ಪನ್ನು ತಾನು ಒಪ್ಪಿಕೊಳ್ಳಬೇಕಾಗಿದೆಯೆ ಎಂಬುದನ್ನು ಸರ್ಕಾರ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದರು.

‘ತಮಿಳ್ನಾಡಿನ ವಿಮೋಚನೆ’: ಲೋಕಸಭೆಯಲ್ಲಿ ಚಕಮಕಿ

ನವದೆಹಲಿ, ಫೆ. 21–
ಭಾರತೀಯ ಒಕ್ಕೂಟದಿಂದ ‘ತಮಿಳುನಾಡಿನ ವಿಮೋಚನೆಯಾಗಬೇಕು’ ಎಂಬ ಭಾವನೆಯನ್ನು ಪ್ರಚಾರ ಮಾಡಲು ಮಧುರೆಯ ವಿದ್ಯಾರ್ಥಿಗಳ ಹಿಂದಿ ವಿರೋಧಿ ಚಳವಳಿ ಮಂಡಲಿಯು ನಿರ್ಧರಿಸಿದೆ ಎಂಬ ವರದಿಯ ಬಗ್ಗೆ ಲೋಕಸಭೆಯಲ್ಲಿ ಇಂದು ಪ್ರಸ್ತಾಪಿಸಿದಾಗ ಹುಯಿಲೆದ್ದಿತು.

ಭಾಷಾಪ್ರಶ್ನೆಯ ಬಗ್ಗೆ ವಿದ್ಯಾರ್ಥಿಗಳ ಚಳವಳಿಗೆ ಮದ್ರಾಸಿನ ಕೆಲಮಂದಿ ‘ದೊಡ್ಡ ನಾಯಕರು’ ಬೆಂಬಲವೀಯುತ್ತಿದ್ದಾರೆ ಎಂದು ಎಸ್.ಎಸ್.ಪಿ. ನಾಯಕ ಶ್ರೀ ಮಧುಲಿಮಯೆ ಅವರು ಆಪಾದಿಸಿದಾಗ, ಅವರ ಮತ್ತು ಡಿ.ಎಂ.ಕೆ. ಹಾಗೂ ಸ್ವತಂತ್ರ ಸದಸ್ಯರ ನಡುವೆ ಕೋಪಾಟೋಪದ ಮಾತುಗಳು ವಿನಿಮಯವಾದವು.

ಕೊಯಮತ್ತೂರು ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜ ದಹನ

ಕೊಯತ್ತೂರು, ಫೆ. 21–
ರಾಷ್ಟ್ರಧ್ವಜವನ್ನು ಇಂದು ಸಾರ್ವಜನಿಕ ಸ್ಥಳದಲ್ಲಿ ಸುಟ್ಟು ಹಾಕಿದ ನಾಲ್ವರು ಕಾಲೇಜ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು.

‘ಎರಡು ಸ್ಥಾನಕ್ಕೆ ಶಾಸನದ ಅಡ್ಡಿ ಇಲ್ಲ, ದ್ವಂದ್ವ ಇಲ್ಲ’ ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು, ಫೆ. 21–
‘ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಆಗಿರುವುದಕ್ಕೆ ಕಾನೂನು ಪ್ರಕಾರ ಅಡ್ಡಿ ಇಲ್ಲ, ಎರಡೂ ಆಗಿರಲು ಅಧಿಕಾರ ಇದೆ. ಎರಡಕ್ಕೂ ದ್ವಂದ್ವ ಇಲ್ಲ’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ತಿಳಿಸಿ ‘ಯಾವ ಕಾಲದಲ್ಲಿ ಯಾವುದನ್ನು ಬಿಡಬೇಕು ಅನ್ನುವುದು ನನಗೆ ಬಿಟ್ಟದ್ದು’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry