‘ಇದೇ ಅಧಿವೇಶನದಲ್ಲಿ ಕೆರೆ ಸಂರಕ್ಷಣೆಗೆ ಮಸೂದೆ’

7

‘ಇದೇ ಅಧಿವೇಶನದಲ್ಲಿ ಕೆರೆ ಸಂರಕ್ಷಣೆಗೆ ಮಸೂದೆ’

Published:
Updated:

ಬೆಂಗಳೂರು: ರಾಜ್ಯದ ಎಲ್ಲ ಕೆರೆಗಳನ್ನು ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲು ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ರಘುನಾಥ್‌ರಾವ್‌ ಮಲ್ಕಾಪೂರೆ ಪ್ರಶ್ನೆಗೆ ಉತ್ತರ ನೀಡಿದರು. ಸಾರ್ವಜನಿಕ ಸಹಭಾಗಿತ್ವ ಇಲ್ಲದೆ, ಕೆರೆ ಸಂರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ರೈತರ ಸಹಯೋಗದಿಂದ ಪ್ರತಿ ಕೆರೆಗೂ ಒಂದು ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದರು.

‘ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಸಣ್ಣ ಕೆರೆಗಳು ತುಂಬುತ್ತಿಲ್ಲ. ಬೀದರ್‌ ಜಿಲ್ಲೆಯಲ್ಲಿ 5 ಕೆರೆಗಳಲ್ಲಿ ಮಾತ್ರ ನೀರು ತುಂಬಿದೆ. 31 ಕೆರೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ನೀರಿದೆ. 88 ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರಿದೆ. 3 ಕೆರೆಗಳಿಗೆ ನೀರು ಬಂದಿಲ್ಲ. ಈ ಭಾಗದ ಕೆರೆಗಳಿಗೂ ಕಾಯಕಲ್ಪ ಕೊಡುತ್ತೇವೆ ಎಂದರು.

ಸಚಿವರ ಉತ್ತರಕ್ಕೆ ತೃಪ್ತರಾದ ಮಲ್ಕಾಪೂರೆ, ‘ಬೀದರ್‌ ಜಿಲ್ಲೆಯ 123 ಕೆರೆಗಳ ಪೈಕಿ 83 ಕೆರೆಗಳಿಂದ ರೈತರಿಗೆ ಒಂದು ಹನಿ ನೀರು ಕೊಟ್ಟಿಲ್ಲ’ ಎಂದರು. ಆಗ ಸಚಿವರು, ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರು ಇದ್ದಲ್ಲಿ ವ್ಯವಸಾಯಕ್ಕೆ ಕೊಡುವುದಿಲ್ಲ. ದನಕರುಗಳಿಗೆ ಕುಡಿಯಲು, ಅಂತರ್ಜಲಕ್ಕೆ ಬೇಕಾಗುತ್ತದೆ ಎಂದರು. ಆಗ ಮಲ್ಕಾಪೂರೆ ‘ಸಚಿವರು ಸದನಕ್ಕೆ ತಪ್ಪು ಉತ್ತರ ನೀಡುತ್ತಿದ್ದಾರೆ. ಅವರು ಕೊಟ್ಟಿರುವ ಮಾಹಿತಿ ಪ್ರಕಾರವೇ ಕೆರೆಗಳಲ್ಲಿ ನೀರಿದೆ. ನೀರಿದ್ದೂ ಕೊಡದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವ್ಯವಸಾಯ ಉದ್ದೇಶಕ್ಕಾಗಿ ನೀರು ಬಿಡಬೇಕಾದರೆ ಸಂಬಂಧಪಟ್ಟ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ನಿರ್ಧರಿಸುತ್ತದೆ ಎಂದು ಸಚಿವರು ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry