ಓದುಗರ ಮತ: ಮಾಯಾ ಡಬ್ಬಿಯ ನೋಡಾ...

7

ಓದುಗರ ಮತ: ಮಾಯಾ ಡಬ್ಬಿಯ ನೋಡಾ...

Published:
Updated:

ಮಾಯಾ ಡಬ್ಬಿಯ ನೋಡಾ...

ನಾನು ಚಿಕ್ಕವನಿದ್ದಾಗ ಹರಕು ಕೋಟು ಧರಿಸಿದ್ದ ವ್ಯಕ್ತಿಯೊಬ್ಬ ಮಾಯಾ ಡಬ್ಬಿಯನ್ನು ತೆಗೆದುಕೊಂಡು ನಮ್ಮ ಓಣಿಗೆ ಬರುತ್ತಿದ್ದ. ‘ಹವರ ಮಜ್ಜಾ ನೋಡ, ಗರ್ದಿ ಗಮ್ಮತ್ತು ನೋಡಾ, ಆಗ್ರಾದ ತಾಜ್‌ಮಹಲ್‌ ನೋಡಾ, ಬಿಜಾಪುರದ ಗೋಳಗುಮ್ಮಟ ನೋಡಾ, ಮೈಸೂರ ಅರಮನೆ ನೋಡಾ, ರಾಜಾನ ದರ್ಬಾರ ನೋಡಾ... ಕೇವಲ ನಾಲ್ಕಾಣೆ’ ಎಂದು ಆಕರ್ಷಕವಾಗಿ ಹಾಡುತ್ತಾ, ತಾಳವನ್ನು ಲಯಕ್ಕೆ ತಕ್ಕಂತೆ ಬಾರಿಸಿ ಮಕ್ಕಳನ್ನು ಸೆಳೆಯಲು ಯತ್ನಿಸುತ್ತಿದ್ದ.

ಮಾತಿನಲ್ಲೇ ಎಲ್ಲವನ್ನೂ ತೋರಿಸುವ ಹದಗಾರಿಕೆ ಮತ್ತು ಮಕ್ಕಳನ್ನು ಸೆಳೆಯುವ ವಿದ್ಯೆ ಅವನಲ್ಲಿ ಇತ್ತು. ಅದು, ಅವನ ಜೀವನ ಬಂಡಿ ಓಡಿಸಲು ಬೇಕಾದ ಬಂಡವಾಳ ಕೂಡ. ಈಗ ನಡೆಯುತ್ತಿರುವ ಚುನಾವಣಾ ವಿದ್ಯಮಾನ, ಪ್ರಚಾರದ ವೈಖರಿಯನ್ನು ನೋಡಿದರೆ ಮಾಯಾ ಡಬ್ಬಿಯನ್ನು ತೋರಿಸುತ್ತಿರುವಂತೆ ಭಾಸವಾಗುತ್ತಿದೆ. ಮಾತಿನಲ್ಲೇ ಮಣೆ ಕಟ್ಟುವವರು ಒಬ್ಬರು. ತಾಜ್‌ಮಹಲ್‌ ತಂದು ಕರ್ನಾಟಕದಲ್ಲಿ ಇರಿಸುವ ಕನಸು ಬಿತ್ತುವವರು ಇನ್ನೊಬ್ಬರು. ಆದರೆ, ಹೊತ್ತಿ ಉರಿಯುತ್ತಿರುವ ರೈತರ ಸಂಕಷ್ಟ, ಮಹದಾಯಿ, ಕಳಸಾ ಬಂಡೂರಿ ಸಮಸ್ಯೆ, ಯುವಕರು ಎದುರಿಸುತ್ತಿರುವ ನಿರುದ್ಯೋಗ, ಬಡ ಕಾರ್ಮಿಕರ ಸಮಸ್ಯೆಗಳತ್ತ ಯಾರ ಚಿತ್ತವೂ ಇಲ್ಲ.

ಎಲ್ಲರೂ ಅಂಕಿ ಅಂಶಗಳನ್ನು ವಿವರಿಸಿ ತಾವು ಸಾಧಿಸಿದ ಪ್ರಗತಿಯೇ ಅಧಿಕ ಎಂದು ಬಡಾಯಿ ಕೊಚ್ಚಿಕೊಳ್ಳುವವರೇ. ಇವು ತಮ್ಮ ಪಕ್ಷಕ್ಕೆ ಎಷ್ಟು ರೀತಿಯಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂಬುದೇ ಎಲ್ಲರ ಲೆಕ್ಕಾಚಾರ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ. ಇಂತಹ ಸ್ಥಿತಿಯಲ್ಲಿ, ಪಕ್ಷ ಮರೆತು ಕನ್ನಡ ನಾಡು, ನುಡಿ, ನೆಲ– ಜಲದ ಹಿತ ಕಾಪಾಡಬಲ್ಲ ನಾಯಕರನ್ನು ಆರಿಸಿ ಕಳಿಸಬೇಕಾದ ಹೊಣೆ ಪ್ರತಿಯೊಬ್ಬ ಮತದಾರನದ್ದು.

–ಕೆ.ಪಿ. ರಾಮಗುಂಡಿ, ಬೈಲಹೊಂಗಲ

***

ಪ್ರೌಢಿಮೆ ಬರಲಿ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕ ಕಳೆದರೂ ಪ್ರಜಾಪ್ರಭುತ್ವ ಎನ್ನುವುದು 'ಉಳ್ಳವರು' ಹಣ ಹೂಡಿ, ಹಣ ತೆಗೆಯುವ ಉದ್ಯಮದ ರೂಪ ಪಡೆಯುತ್ತಿರುವುದು ಕಳವಳಕಾರಿ. ಭಾರತವನ್ನು ಜಾತ್ಯತೀತ ದೇಶ ಎಂದು ಕರೆಯಲಾಗುತ್ತಿದೆಯಾದರೂ ಎಲ್ಲವೂ ನಿಗದಿಯಾಗುವುದು ಜಾತಿ ಸಮೀಕರಣದ ಲೆಕ್ಕಾಚಾರದಿಂದಲೇ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚುನಾವಣಾ ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ಕುಳಿತು ಮತದಾರರೊಂದಿಗೆ ಚರ್ಚಿಸುತ್ತಾರೆ. ನಮ್ಮ ದೇಶದಲ್ಲಿ ಇಂತಹ ಸನ್ನಿವೇಶ ಕಲ್ಪನೆಗೂ ನಿಲುಕದು. ಭರವಸೆ ಮತ್ತು ಸಾಧನೆಗಳ ಮೇಲೆ ಮತ ಚಲಾವಣೆಯಾಗಬೇಕು. ಯಾವುದೇ ಪ್ರಲೋಭನೆಗೆ ಒಳಗಾಗದೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂಬ ಪ್ರೌಢಿಮೆ ಮತದಾರರಲ್ಲಿ ಬರಬೇಕು. ಆಗ ನಮ್ಮದು ವಿಶ್ವದ ಶಕ್ತಿಶಾಲಿ ದೇಶವಾಗುವುದರಲ್ಲಿ ಸಂದೇಹವಿಲ್ಲ.

–ವೆಂಕಟೇಶ ಮುದಗಲ್, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry