ಮಂಗಳವಾರ, ಡಿಸೆಂಬರ್ 10, 2019
20 °C

‘ಮತ್ತೊಮ್ಮೆ ಬರುವಾಗ ಕಮಲದೊಂದಿಗೆ ಬನ್ನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತ್ತೊಮ್ಮೆ ಬರುವಾಗ ಕಮಲದೊಂದಿಗೆ ಬನ್ನಿ’

ಉಡುಪಿ: ಕೃಷ್ಣ ಮಠಕ್ಕೆ ಬುಧವಾರ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ದೇವರಿಗೆ ಪೂಜೆ ಸಲ್ಲಿಸಿದರು. ಕನಕ ಕಿಂಡಿಯ ಮೂಲಕವೂ ಅವರು ದೇವರ ದರ್ಶನ ಮಾಡಿದರು. ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಶಾ ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಆ ನಂತರ ಅವರು ಕೃಷ್ಣ ಮಠದ ವಾಹನ ನಿಲುಗಡೆ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಪಲಿಮಾರು ಮಠದ ವಸತಿ ಸಂಕೀರ್ಣ ಶ್ರೀರಾಮ ಧಾಮವನ್ನು ಉದ್ಘಾಟಿಸಿದರು. ‘ಶ್ರೀಕೃಷ್ಣನ ಹಾಗೂ ರಾಜ್ಯದ ಜನರ ಆಶೀರ್ವಾದ ಪಡೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಇದು ಕನಕದಾಸರ ಕ್ಷೇತ್ರವೂ ಹೌದು. ಎಲ್ಲ ಸಂತರೊಂದಿಗೆ ಸಂವಾದ ನಡೆಸಲು ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ’ ಎಂದರು.

ಆಶೀರ್ವಚನ ನೀಡಿದ ವಿದ್ಯಾಧೀಶ ಸ್ವಾಮೀಜಿ, ‘ಎಲ್ಲ ಭಕ್ತರ ಹೃದಯಗಳಲ್ಲೂ ಕಮಲ ವಿಕಸನವಾಗಲಿ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಕಮಲ ವಿಕಸನವಾಗಲಿ. ಮುಂದಿನ ಬಾರಿಗೆ ಇಲ್ಲಿಗೆ ಬರುವಾಗ ಕಮಲ ಹಿಡಿದುಕೊಂಡು ಬನ್ನಿ ಮತ್ತು ದೇವರಿಗೆ ಅರ್ಪಿಸಿ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ’ ಎಂದರು.

‘ಹನುಮಂತನ ಧರ್ಮ ಭೂಮಿ ಕರ್ನಾಟಕ. ಶಬರಿಯೂ ಕರ್ನಾಟಕದ ಭಕ್ತೆ, ಉಡುಪಿ ಹಾಗೂ ಗುಜರಾತ್‌ಗೆ ಸಂಬಂಧ ಇದೆ. ಹನುಮಂತನ ಅವತಾರ ಆಗಿರುವ ಜಗದ್ಗುರು ಮಧ್ವಾಚಾರ್ಯರ ಭಕ್ತಿಗೆ ಒಲಿದ ಕೃಷ್ಣ ಗುಜರಾತ್‌ನಿಂದ ಉಡುಪಿಗೆ ಬಂದಿದ್ದಾನೆ. ಇಲ್ಲಿ ಬಳಸುವ ಗೋಪಿ ಚಂದನವೂ ಅಲ್ಲಿಂದಲೇ ಬರುತ್ತದೆ’ ಎಂದರು.

ಬಳಿಕ ನಡೆದ ಬಿಜೆಪಿ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಾಮಾಜಿಕ ಮಾಧ್ಯಮಗಳು ಜನರ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಟ್ವಿಟರ್ ನಮ್ಮ ವಕ್ತಾರನಂತೆ ಕೆಲಸ ಮಾಡುತ್ತಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಡಿಜಿಟಲ್ ಯೋಧನಾಗಬೇಕು ಎಂದರು.

‘ಪಕ್ಷದ ಬಗ್ಗೆ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಿ ಅದನ್ನು ಎದುರಿಸಬೇಕು. ಈ ನಿಟ್ಟಿನಲ್ಲಿ ಉಡುಪಿ ಹಾಗೂ ಮಂಗಳೂರಿನ ಕಾರ್ಯಕರ್ತರು ಸಕ್ರಿಯರಾಗಿದ್ದು, ಬೇರೆ ಜಿಲ್ಲೆಯವರಿಗೆ ಮಾದರಿಯಾಗಿದ್ದಾರೆ’ ಎಂದರು.

ನಂತರ ನಡೆದ ಮಂಗಳೂರು, ಶಿವಮೊಗ್ಗ ವಿಭಾಗಗಳ ಶಕ್ತಿಕೇಂದ್ರ ಪ್ರಮುಖರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ‘ಕಾಂಗ್ರೆಸ್ ಪಕ್ಷದಂತೆ ವಾಮ ಮಾರ್ಗದ ಗೆಲುವು ಪಡೆಯದೇ ಕಾರ್ಯಕರ್ತರ ಪರಿಶ್ರಮದಿಂದಲೇ ಕರ್ನಾಟಕದಲ್ಲಿ ಗೆಲುವು ಸಾಧಿಸಬೇಕು’ ಎಂದರು.

‘ಬಿಜೆಪಿ ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡುಕೊಂಡಿದೆ. ಈ ಬಾರಿ ಕರ್ನಾಟಕದಲ್ಲಿ ಚುನಾವಣೆಯಲ್ಲಿಯೂ ಗೆಲುವು ಸಾಧಿಸಬಹುದು. ಸಂಘಟನೆಯ ಮೂಲಕ ಚುನಾವಣೆ ಎದುರಿಸಿದರೆ ಮಾತ್ರ ನಿರಂತರ ಗೆಲುವು ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಸರ್ಕಾರದ ದುರಾಡಳಿತವೂ ನಮ್ಮ ಗೆಲುವಿಗೆ ಪೂರಕವಾಗಿದೆ’ ಎಂದರು.

170 ಕ್ಷೇತ್ರಗಳಲ್ಲಿ ಜಾಲತಾಣ ಪರಿಣಾಮ

ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಬಾಲಾಜಿ ಮಾತನಾಡಿ, ರಾಜ್ಯದ 170 ಕ್ಷೇತ್ರಗಳ ಮೇಲೆ ಸಾಮಾಜಿಕ ಮಾಧ್ಯಮಗಳು ಪರಿಣಾಮ ಬೀರುತ್ತವೆ. ರಾಜ್ಯದಲ್ಲಿ 3 ಕೋಟಿ ಇಂಟರ್‌ನೆಟ್ ಬಳಕೆದಾರರು ಇದ್ದಾರೆ. ಅವರಲ್ಲಿ 2.20 ಕೋಟಿ ಜನ ಫೇಸ್‌ಬುಕ್ ಬಳಕೆ ಮಾಡುತ್ತಿದ್ದರೆ, 11 ಲಕ್ಷ ಜನ ಟ್ವಿಟರ್ ಬಳಸುತ್ತಿದ್ದಾರೆ. 2.60 ಕೋಟಿ ಜನ ವಾಟ್ಸ್‌ಆ್ಯಪ್‌ ಬಳಕೆದಾರರು ಇದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶೇ55ರಷ್ಟು ಮತದಾರರು ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಭಾರಿ ಪ್ರಭಾವ ಬೀರಿದ್ದವು. ಅದು ಬಿಜೆಪಿಗೆ ಲಾಭವಾಗಿತ್ತು. ಆದರೆ ಈಗ ನಮ್ಮ ವಿರೋಧಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಚುರುಕಾಗಿದ್ದು, ಸ್ಪರ್ಧೆ ನೀಡುತ್ತಿವೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಇನ್ನಷ್ಟು ಚೆನ್ನಾಗಿ ಕೆಲಸ ಮಾಡಬೇಕು ಎಂದರು.

ಪ್ರತಿಕ್ರಿಯಿಸಿ (+)