ಭಾನುವಾರ, ಡಿಸೆಂಬರ್ 8, 2019
25 °C
7 ವರ್ಷಗಳ ಬಳಿಕ ದಿ ಕ್ಯಾರವಾನ್‌ನಲ್ಲಿ ಮರುಪ್ರಕಟ

ಐಐಪಿಎಂ ಕುರಿತ ಮುಖಪುಟ ಲೇಖನದ ತಡೆಯಾಜ್ಞೆ ತೆರವುಗೊಳಿಸಿದ ದೆಹಲಿ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಪಿಎಂ ಕುರಿತ ಮುಖಪುಟ ಲೇಖನದ ತಡೆಯಾಜ್ಞೆ ತೆರವುಗೊಳಿಸಿದ ದೆಹಲಿ ಹೈಕೋರ್ಟ್

ಬೆಂಗಳೂರು: ಏಳು ವರ್ಷಗಳ ಹಿಂದೆ ದಿ ಕ್ಯಾರವಾನ್‌ ನಿಯತಕಾಲಿಕೆ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದ್ದ ಮುಖಪುಟ ಲೇಖನ ‘ಸ್ವೀಟ್‌ ಸ್ಮೆಲ್‌ ಆಫ್‌ ಸಕ್ಸಸ್’ಗೆ ಅಸ್ಸಾಂನ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ತೆರವುಗೊಳಿಸಿದೆ. ಇದರ ಬೆನ್ನಲ್ಲೇ, ಆ ಲೇಖನವನ್ನು ಮತ್ತೆ ಪ್ರಕಟಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ (ಐಐಪಿಎಂ/ಭಾರತೀಯ ಯೋಜನಾ ಮತ್ತು ನಿರ್ವಹಣಾ ಸಂಸ್ಥೆ) ನಿರ್ದೇಶಕ ಅರಿಂದಮ್ ಚೌಧರಿ ಅವರ ವ್ಯಕ್ತಿಚಿತ್ರವನ್ನೊಳಗೊಂಡ ಲೇಖನ 2011ರಲ್ಲಿ ದಿ ಕ್ಯಾರವಾನ್‌ ವೆಬ್‌ಸೈಟ್‌ನಲ್ಲಿ ಮತ್ತು ಮುದ್ರಣ ಪ್ರತಿಯಲ್ಲಿ ಪ್ರಕಟಗೊಂಡಿತ್ತು. ನ್ಯೂಯಾರ್ಕ್‌ ಮೂಲದ ಖ್ಯಾತ ಕಾದಂಬರಿಕಾರ, ಪ್ರಾಧ್ಯಾಪಕ ಸಿದ್ಧಾರ್ಥ ದೇಬ್ ಲೇಖನ ಬರೆದಿದ್ದರು.

ಲೇಖನದಲ್ಲೇನಿದೆ?: ಅರಿಂದಮ್ ಚೌಧರಿ ಹೇಗೆ ಪ್ರಸಿದ್ಧಿಪಡೆದರು, ಹೇಗೆ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂಬುದು ಲೇಖನದಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳಾಗಿವೆ. ವಿಶ್ವವಿದ್ಯಾಲಯದ ಮಾನ್ಯತೆಯೇ ಇಲ್ಲದೆ ಚೌಧರಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದರ ಬಗ್ಗೆ ಮತ್ತು ದೇಶದ ಖ್ಯಾತ ಶಿಕ್ಷಣ ಸಂಸ್ಥೆಗಳಿಗಿಂತಲೂ ಐಐಪಿಎಂ ಮೇಲು ಎಂದು ಪ್ರಚಾರ ಮಾಡುತ್ತಿರುವುದರ ಬಗ್ಗೆ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ‘ಹೇಗೆ ಅರಿಂದಮ್‌ ಚೌಧರಿ ಯಶಸ್ಸನ್ನು ಮಾರಾಟ ಮಾಡುತ್ತಾರೆ’ ಎಂಬ ಉಪಶೀರ್ಷಿಕೆಯನ್ನೂ ಲೇಖನಕ್ಕೆ ನೀಡಲಾಗಿದೆ.

ಮಾನನಷ್ಟ ಮೊಕದ್ದಮೆ ಹೂಡಿದ್ದ ಐಐಪಿಎಂ: ಕ್ಯಾರವಾನ್‌ ಲೇಖನದ ವಿರುದ್ಧ ಐಐಪಿಎಂ ಅಸ್ಸಾಂನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ನಿಯತಕಾಲಿಕೆಯ ಮುದ್ರಣಾಲಯ ದೆಹಲಿಯಲ್ಲಿದ್ದಾಗ್ಯೂ ದೂರದ ಅಸ್ಸಾಂನ ಸಿಲ್ಚಾರ್‌ನ ನ್ಯಾಯಾಲಯದಲ್ಲಿ ₹ 50 ಕೋಟಿ ಮಾನನಷ್ಟ ದಾವೆ ಹೂಡಲಾಗಿತ್ತು. ಲೇಖಕ ಸಿದ್ಧಾರ್ಥ ದೇಬ್ ಅವರ ಪುಸ್ತಕಗಳನ್ನು ಪ್ರಕಟಿಸುವ ಪೆಂಗ್ವಿನ್ ಪ್ರಕಾಶನ (ದೇಬ್ ಪುಸ್ತಕವೊಂದರ ಅಧ್ಯಾಯವಾಗಿ ಲೇಖನವನ್ನು ಪರಿಗಣಿಸಲಾಗಿತ್ತು) ಮತ್ತು ಗೂಗಲ್‌ನ ಭಾರತದ ಘಟನವನ್ನು ಸಹ ಮೊಕದ್ದಮೆಯಲ್ಲಿ ಅಡಕಗೊಳಿಸಲಾಗಿತ್ತು.

ಇದನ್ನು ಪರಿಗಣಿಸಿದ್ದ ಸಿಲ್ಚಾರ್‌ನ ನ್ಯಾಯಾಲಯ ಲೇಖನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ವೆಬ್‌ಸೈಟ್‌ನಿಂದ ಅದನ್ನು ತೆಗೆದುಹಾಕುವಂತೆ ಸೂಚಿಸಿತ್ತು. ವಿಚಾರಣೆಯನ್ನೇ ನಡೆಸದೆ, ಕನಿಷ್ಠಪಕ್ಷ ನೋಟಿಸ್ ಸಹ ನೀಡದೆ ಲೇಖನಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ಕ್ಯಾರವಾನ್‌ ಆರೋಪಿಸಿತ್ತು. ಅಲ್ಲದೆ, ಪ್ರಕರಣವನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಸಿಲ್ಚಾರ್‌ನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ 2011ರ ಆಗಸ್ಟ್‌ನಲ್ಲಿ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿತು. 2018ರ ಫೆಬ್ರುವರಿ 16ರಂದು ವಿಚಾರಣೆ ಅಂತಿಮಗೊಳಿಸಿದ್ದ ದೆಹಲಿ ಹೈಕೋರ್ಟ್ ಲೇಖನದ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.

ಹೈಕೋರ್ಟ್ ಹೇಳಿದ್ದೇನು?: ಸತ್ಯವನ್ನು ಅಲಕ್ಷಿಸಿ ಲೇಖನ ಪ್ರಕಟಿಸಲಾಗಿದೆ ಎಂಬುದನ್ನು ಮತ್ತು ಇತರ ಆರೋಪಗಳನ್ನು ಸಾಬೀತುಪಡಿಸಲು ಐಐಪಿಎಂ ವಿಫಲವಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

‘ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂದ ಜಯ’: ಐಐಪಿಎಂ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಕೈಬಿಟ್ಟು ಲೇಖನದ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ದೆಹಲಿ ಹೈಕೋರ್ಟ್‌ನ ತೀರ್ಪಿನಿಂದಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂತಾಗಿದೆ ಎಂದು ಕ್ಯಾರವಾನ್‌ ಅಭಿಪ್ರಾಯಪಟ್ಟಿದೆ.

ತೀರ್ಪಿನ ಬಗ್ಗೆ ಕ್ಯಾರವಾನ್‌ನ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ ಜೋಸ್ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಪತ್ರಿಕಾ ಸ್ವಾತಂತ್ರ್ಯ ದಮನಿಸುತ್ತಿರುವ ಐಐಪಿಎಂನಿಂ’: ‘ಕ್ಯಾರವಾನ್‌ ವಿರುದ್ಧ ಮೊಕದ್ದಮೆ ಹೂಡಿದಂತೆಯೇ ಇತರ ಕೆಲವು ಪ್ರಕಾಶಕರ ವಿರುದ್ಧವೂ ದೆಹಲಿಗೆ ಬದಲಾಗಿ ಅಸ್ಸಾಂನ ಸಣ್ಣ ಪಟ್ಟಣಗಳ ನ್ಯಾಯಾಲಯಗಳಲ್ಲಿ ಐಐಪಿಎಂ ಮೊಕದ್ದಮೆಗಳನ್ನು ಹೂಡಿತ್ತು. ಲೇಖನಗಳಿಗೆ ತಡೆಯಾಜ್ಞೆಯನ್ನೂ ತಂದಿತ್ತು. ಸಂಸ್ಥೆಯು ಜಾಹೀರಾತುಗಳಲ್ಲಿ ಮತ್ತು ಕೈಪಿಡಿಗಳಲ್ಲಿ ಪ್ರತಿಪಾದಿಸಿದ ಅಂಶಗಳ ಬಗ್ಗೆ ಪ್ರಶ್ನಿಸಲು ಮುಂದಾದರೆ ಅಂತಹ ಪ್ರಕಾಶನಗಳ ವಿರುದ್ಧ ತಡೆಯಾಜ್ಞೆ ತರುತ್ತಿತ್ತು’ ಎಂದು ಕ್ಯಾರವಾನ್‌ ಆರೋಪಿಸಿದೆ.

‘ಸ್ವೀಟ್‌ ಸ್ಮೆಲ್‌ ಆಫ್‌ ಸಕ್ಸಸ್’ ಲೇಖನಕ್ಕಾಗಿ ಈ ಲಿಂಕ್‌ಗೆ ಭೇಟಿ ನೀಡಿ: http://bit.ly/2FmirJD

(ಕೆಲವು ಅಂತರ್ಜಾಲತಾಣ ಪುಟಗಳಲ್ಲಿ ಲೇಖನ ಇನ್ನೂ ಎನೇಬಲ್ ಆಗಿಲ್ಲ)

ಪ್ರತಿಕ್ರಿಯಿಸಿ (+)