ರಂಕಲ್‌ ರಾಟೆ ಭರಾಟೆ

7

ರಂಕಲ್‌ ರಾಟೆ ಭರಾಟೆ

Published:
Updated:
ರಂಕಲ್‌ ರಾಟೆ ಭರಾಟೆ

ವೇದಿಕೆಯ ಹಿಂಭಾಗದಲ್ಲಿ ಗಡ್ಡಧಾರಿ ನಾಯಕ ನಟನ ಪೋಸ್ಟರ್‌. ಅವನ ಬೆನ್ನಿನಲ್ಲಿಯೇ ಹುಟ್ಟಿದಂತೆ ಕಸಿಯಾಗಿರುವ ಗಗನಚುಂಬಿ ಕಟ್ಟಡಗಳ ಚಿತ್ರ. ಕೆಳಗೆಲ್ಲೋ ಅಸ್ಪಷ್ಟವಾಗಿ ಸ್ಕೇಟಿಂಗ್‌ ಮಾಡುತ್ತಿರುವ ಹುಡುಗರ ಚಿತ್ರ. ಇದು ಗೋಪಿ ಕೆರೂರ್‌ ನಿರ್ದೇಶನದ ‘ರಂಕಲ್‌ ರಾಟೆ’ ಚಿತ್ರದ ಪೋಸ್ಟರ್‌.

ಸುಲಭವಾಗಿ ಊಹಿಸಬಲ್ಲಂತೆ ಇದು ಸ್ಕೇಟಿಂಗ್ ಕ್ರೀಡೆ ಆಧರಿಸಿದ ಕಥೆಯುಳ್ಳ ಸಿನಿಮಾ. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಗೋಪಿ ಕೆರೂರ್‌ ಅವರ ಬಹುದಿನದ ಸಿನಿಮಾ ಕನಸು ಈ ಚಿತ್ರದ ಮೂಲಕ ನನಸಾಗುತ್ತಿದೆ. ಇದೇ ವಾರ (ಫೆ. 23) ಈ ಚಿತ್ರ ಬಿಡುಗಡೆಯಾಗುತ್ತಿದೆ.

ಬಿಡುಗಡೆಯ ಸುದ್ದಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಗೋಪಿ ಒಮ್ಮಿಂದೊಮ್ಮೆಲೇ ಪುರಾಣ ಕಥೆಗಿಳಿದುಬಿಟ್ಟರು. ‘ಸ್ಕೇಟಿಂಗ್‌ ಕ್ರೀಡೆ ವಿದೇಶದಿಂದ ಬಂದಿದ್ದು ಎಂದು ತುಂಬ ಜನ ಅಂದುಕೊಂಡಿದ್ದಾರೆ. ಆದರೆ, ಅದನ್ನು ಮೊದಲು ಕಂಡುಹಿಡಿದಿದ್ದು ರಾವಣನ ಮಗ ಇಂದ್ರಜಿತ್‌. ಅವನು ಯುದ್ಧಕ್ಕೆ ಹೋಗುವಾಗ ಕಾಲಿಗೆ ಚಕ್ರ ಕಟ್ಟಿಕೊಂಡು ಹೋಗುವ ಉಲ್ಲೇಖ ರಾಮಾಯಣದಲ್ಲಿ ಬರುತ್ತದೆ. ಆದ್ದರಿಂದ ಸ್ಕೇಟಿಂಗ್‌ ಅನ್ನು ಮೊದಲು ಲಾಂಚ್‌ ಮಾಡಿದ್ದು ಇಂದ್ರಜಿತ್‌’ ಎಂದು ತಮ್ಮ ಪುರಾಣಜ್ಞಾನವನ್ನು ಜಗಜ್ಜಾಹೀರುಗೊಳಿಸಿದರು.

‘ಬಡತನದ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬ ಕ್ರೀಡಾಪಟುವಾಗುವ ತನ್ನ ಕನಸನ್ನು ಹೇಗೆ ಸಾಕಾರ ಮಾಡಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಥಾವಸ್ತು’ ಎಂದೂ ಅವರು ವಿವರಿಸಿದರು.

ಈ ಚಿತ್ರದ ಕಥೆಗೆ ಸ್ಕೇಟಿಂಗ್‌ ಅನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಅವರು ವಿವರಿಸಿದ್ದು ಹೀಗೆ. ‘ಸಾಮಾನ್ಯವಾಗಿ ಉಳಿದೆಲ್ಲ ಕ್ರೀಡೆಗಳಲ್ಲಿ ಮುಖವೆತ್ತಿ, ಎದೆ ಉಬ್ಬಿಸಿ ನುಗ್ಗುತ್ತಾರೆ. ಆದರೆ ಸ್ಕೇಟಿಂಗ್‌ನಲ್ಲಿ ಮುಖ ತಗ್ಗಿಸಿ, ಮೈ ಬಗ್ಗಿಸಿಕೊಂಡು ನುಗ್ಗಬೇಕು. ಸಾಧಕನಾಗಬೇಕಾದರೂ ಇಂಥ ಗುಣದ ಅವಶ್ಯಕತೆ ಇರುತ್ತದೆ. ಹಾಗಾಗಿಯೇ ಸಾಧಕನ ಬದುಕು ಮತ್ತು ಕ್ರೀಡೆಯನ್ನು ಸಮೀಕರಿಸಿ ಕಥೆ ಹೆಣೆದಿದ್ದೇನೆ’.

ಈ ಚಿತ್ರದಲ್ಲಿ ನಿರ್ದೇಶಕರ ಮಗ ರವಿ ಕೆರೂರ್‌ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾರೆ. ಮನ ಅದ್ವಿಕ್‌ ನಾಯಕ ನಟನಾಗಿ ನಟಿಸಿದ್ದಾರೆ.

‘ನಾನು ಇದುವರೆಗೆ ಆರೇಳು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಮೂಲಕ ನಾಯಕ ನಟನಾಗಿದ್ದೇನೆ. ಸ್ಕೇಟಿಂಗ್‌ ತರಬೇತುದಾರನಾಗಿ ಕಾಣಿಸಿಕೊಂಡಿದ್ದೇನೆ’ ಎಂದು

ಮನ ಅದ್ವಿಕ್‌ ಹೇಳಿಕೊಂಡರು.

ಚಿತ್ರದಲ್ಲಿನ ಐದು ಹಾಡುಗಳಿಗೆ ರಾಮಚಂದ್ರ ಹಡಪದ ಮತ್ತು ಅವಿನಾಶ್‌ ಸಂಗೀತ ಹೊಸೆದಿದ್ದಾರೆ. ಪ್ರವೀಣ್‌ ಎಂ. ಪ್ರಭು ಛಾಯಾಗ್ರಹಣವಿದೆ. ಆಶಾ, ಕೃಷ್ಣಮೂರ್ತಿ ಕವತ್ತಾರ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಭೈಸಾನಿ ಸತೀಶ್‌ ಕುಮಾರ್‌ ಹಣ ಹೂಡಿದ್ದಾರೆ. ದಯಾಳ್‌ ಪದ್ಮನಾಭನ್‌ ಮತ್ತು ನವರಸನ್‌ ಸಹಭಾಗಿತ್ವದಲ್ಲಿ ಈ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry