ಶನಿವಾರ, ಜೂನ್ 6, 2020
27 °C
ರಾಜ್ಯ, ಹೊರರಾಜ್ಯದಿಂದ ಬಂದಿದ್ದ ರೈತ ಮುಖಂಡರು, ಹಸಿರು ನಮನ

ಶೋಕದ ನಡುವೆ ಪುಟ್ಟಣ್ಣಯ್ಯ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೋಕದ ನಡುವೆ ಪುಟ್ಟಣ್ಣಯ್ಯ ಅಂತ್ಯಸಂಸ್ಕಾರ

ಪಾಂಡವಪುರ: ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದ ರೈತ ಹೋರಾಟಗಾರ, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಅಸಂಖ್ಯಾತ ರೈತರ ಶೋಕಸಾಗರದ ನಡುವೆ ಕ್ಯಾತನಹಳ್ಳಿ ಗ್ರಾಮದ ಅವರ ತೋಟದಲ್ಲಿ ನೆರವೇರಿತು.

ಯಾವುದೇ ಧಾರ್ಮಿಕ ವಿಧಿ ವಿಧಾನ ಇರಲಿಲ್ಲ. ರೈತಗೀತೆ ಹಾಗೂ ಕುವೆಂಪು ವಿಶ್ವಮಾನವ ಗೀತೆಯೊಂದಿಗೆ ಮೃತದೇಹವನ್ನು ಮಣ್ಣು ಮಾಡಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ತಂದಿದ್ದ ಮಣ್ಣು ಸಮರ್ಪಿಸಿ ರೈತರು ಅಗಲಿದ ನಾಯಕನ ಆತ್ಮಕ್ಕೆ ಗೌರವ ತೋರಿದರು. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಗಾಯಕ ಜನ್ನಿ ಹಾಗೂ ತಂಡ ರೈತ ಗೀತೆಗಳ ಗಾಯನ ಪ್ರಸ್ತುತಪಡಿಸಿತು.

ಹಸಿರು ನಮನ: ನಂತರ ಸಮಾಧಿ ಸ್ಥಳದಲ್ಲಿ ನೇಗಿಲು ಚಿತ್ರ ಬರೆದು, ಹಸಿರು ಕುಂಕುಮ ಇಟ್ಟು, ಸುತ್ತಲೂ ಹಸಿರು ಬಾವುಟ ನೆಟ್ಟು ರೈತ ಮುಖಂಡರು ಹಸಿರು ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತರು ಹಸಿರು ಶಾಲು ಬೀಸುವ ಮೂಲಕ ಮುಖಂಡನಿಗೆ ಗೌರವ ಅರ್ಪಿಸಿದರು. ಇದಕ್ಕೂ ಮೊದಲು ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಗಳಿಂದ ಬಂದಿದ್ದವರು ಅಂತಿಮ ದರ್ಶನ ಪಡೆದರು. ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ರೈತ ಮುಖಂಡರು ಬಂದಿದ್ದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಸ್ವರಾಜ್‌ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್‌, ಸಾಹಿತಿ ದೇವನೂರ ಮಹಾದೇವ, ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ, ಸಾಲುಮರದ ತಿಮ್ಮಕ್ಕ ಪಾಲ್ಗೊಂಡಿದ್ದರು.

‘ತಿಥಿ ಬಿಡಿ, ಸಸಿ ನೆಡಿ’ ಕಾರ್ಯಕ್ರಮ: 11ನೇ ದಿನಕ್ಕೆ ನಡೆಯುವ ತಿಥಿ ಕಾರ್ಯಕ್ಕೆ ಬದಲಾಗಿ ರೈತಸಂಘದ ಮುಖಂಡರು ಫೆ.28ರಂದು ಕ್ಯಾತನಹಳ್ಳಿ ಗ್ರಾಮದಲ್ಲಿ ‘ತಿಥಿ ಬಿಡಿ, ಸಸಿ ನೆಡಿ’ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ.

ಪುಟ್ಟಣ್ಣಯ್ಯ ಅನುಸರಿಸಿದ ವಿಚಾರಗಳ ನೆಲೆಗಟ್ಟಿನಲ್ಲೇ ತಿಥಿ ಕಾರ್ಯ ತ್ಯಜಿಸಿ ರೈತರಿಗೆ ಸಸಿ ವಿತರಣೆ ಮಾಡಲಾಗುವುದು. ಗ್ರಾಮದಲ್ಲಿ ಪಾಂಡವಪುರದ ‘ಹಸಿರು ಕಲಾವಿದರು’ ತಂಡ ನಾಟಕ ಪ್ರದರ್ಶಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಿದೆ.

***

ಪುಟ್ಟಣ್ಣಯ್ಯ ಅಭಿಮಾನಿ ಆತ್ಮಹತ್ಯೆ

ಪಾಂಡವಪುರ: ಪುಟ್ಟಣ್ಣಯ್ಯ ಸಾವಿನಿಂದ ನೊಂದ ಅವರ ಅಭಿಮಾನಿ ಮರಣ ಪತ್ರ ಬರೆದಿಟ್ಟು ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

‘ನನ್ನ ಸಾವಿಗೆ ನಾನೇ ಕಾರಣ, ಪುಟ್ಟಣ್ಣಯ್ಯ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕು’ ಎಂದು ಕ್ಯಾತನಹಳ್ಳಿ ಗ್ರಾಮದ ಚಂದ್ರು (28) ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆಶಯದಂತೆ ಪುಟ್ಟಣ್ಣಯ್ಯ ಸಮಾಧಿ ಸಮೀಪದಲ್ಲೇ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಚಂದ್ರುಗೆ ವಿವಾಹ ನಿಶ್ಚಿತಾರ್ಥವಾಗಿದ್ದು ಮಾರ್ಚ್‌ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ತಂದೆ, ತಾಯಿ ಇದ್ದಾರೆ. ಬಿಡುವು ಸಿಕ್ಕಾಗ ಪುಟ್ಟಣ್ಣಯ್ಯ ಅವರು ಚಂದ್ರು ಜತೆ ಪಗಡೆ ಆಡುತ್ತಿದ್ದರು. 2 ದಿನಗಳಿಂದ ಅಂತ್ಯಕ್ರಿಯೆಗೆ ಬೇಕಾದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಬುಧವಾರ ರಾತ್ರಿ ಗ್ರಾಮದೆಲ್ಲೆಡೆ ಕಟೌಟ್‌ ಹಾಕಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.