ಭಾನುವಾರ, ಮೇ 31, 2020
27 °C

ಸವಾಲು ಸ್ವೀಕರಿಸಿದ ಫಲ ಟಿಕೆಟ್!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಸವಾಲು ಸ್ವೀಕರಿಸಿದ ಫಲ ಟಿಕೆಟ್!

ಬಾಗಲಕೋಟೆ: ‘ಅದು 2004ರ ವಿಧಾನಸಭೆ ಚುನಾವಣೆ. ಪಕ್ಷದ ವರಿಷ್ಠರು ಕರೆದು ಟಿಕೆಟ್ ಕೊಟ್ಟರು. ಅದು ಸುಮ್ಮನೆ ಕೊಟ್ಟದ್ದಲ್ಲ. ಸವಾಲುಗಳನ್ನು ಸ್ವೀಕರಿಸಿ ದಶಕ ಕಾಲ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿದ್ದು, ಸಂಘ ನಿಷ್ಠೆ ಹಾಗೂ ಜನರೊಂದಿಗಿನ ಒಡನಾಟ ಗುರುತಿಸಿದ್ದರು.

ಆದರೆ ಅಂದು ಜತೆಗಿದ್ದವರ ಬಂಡಾಯವೇ ಜನರಲ್ಲಿ ಗೊಂದಲ ಮೂಡಿಸಿತ್ತು. ಬಿಜೆಪಿಯಿಂದ ಇಬ್ಬರು ನಿಂತಿದ್ದಾರೆ ಎಂದೇ ವಿರೋಧಿಗಳು ಹುಯಿಲೆಬ್ಬಿಸಿದ್ದರು. ಆದರೆ ಫಲಿತಾಂಶ ಬಂದಾಗ ಎಲ್ಲರ ಹುನ್ನಾರ ಹುಸಿಗೊಂಡಿತ್ತು. ಕಾರ್ಯಕರ್ತರ ಪರಿಶ್ರಮ, ಜನರ ಒತ್ತಾಸೆ ನನ್ನ ಕೈ ಹಿಡಿದು ವಿಧಾನಸೌಧದತ್ತ ಹೆಜ್ಜೆ ಹಾಕಿಸಿತು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ 14 ವರ್ಷಗಳ ಹಿಂದಿನ ನೆನಪಿಗೆ ಜಾರಿದರು.

ಎರಡೂವರೆ ದಶಕದ ಹಿಂದೆ ಇಲ್ಲಿನ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದು ಅದನ್ನು ಹೆಮ್ಮರವಾಗಿಸಿರುವ ಚರಂತಿಮಠ, ಎರಡು ಅವಧಿಗೆ (2004,2009) ಬಾಗಲಕೋಟೆ ಕ್ಷೇತ್ರದ ಶಾಸಕರಾಗಿ ಮುಳುಗಡೆ ನೆಲದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

‘ಸಂಘದ ಆಡಳಿತ, ಕ್ಷೇತ್ರದ ಜನರ ಹಿತದ ವಿಚಾರದಲ್ಲಿ ರಾಜಿಯೇ ಇಲ್ಲ. ನಿಷ್ಠುರತೆಯ ಕಾರಣಕ್ಕೆ ತೊಂದರೆ ಎದುರಾದರೂ ರಾಜಿ ಮಾಡಿಕೊಂಡಿಲ್ಲ. ನನ್ನ ನಿಷ್ಠುರತೆಯ ಹಿಂದಿನ ಕಾಳಜಿ ಅರಿತವರ ದೊಡ್ಡ ಬೆಂಬಲವೇ ಶ್ರೀರಕ್ಷೆ. ಮುನಿಸಿಕೊಂಡವರ ಬಗ್ಗೆಯೂ ಬೇಸರವಿಲ್ಲ. ಅವರೂ ಎನ್ನ ಬಂಧುಗಳು’ ಎಂದು ಚರಂತಿಮಠ ಮನದಾಳ ಬಿಚ್ಚಿಡುತ್ತಾರೆ.

ಸುದೀರ್ಘ ಚೈತ್ರಯಾತ್ರೆ: ದೇಶದಲ್ಲಿ ತುರ್ತು ಪರಿಸ್ಥಿತಿ ಅವಧಿಯಲ್ಲಿ ಹೈಸ್ಕೂಲ್ ಓದುತ್ತಿದ್ದೆ. ಆಗ ಎಲ್ಲೆಲ್ಲೂ ಭಯದ ವಾತಾವರಣ. ಆಗಿನ ರಾಜಕೀಯ ಮಂಥನದ ವೇಳೆ ಜೈಲಿಗೆ ಕಂಡಿದ್ದ ಜಯಪ್ರಕಾಶ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್‌ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ನಮಗೆಲ್ಲಾ ಆದರ್ಶವಾಗಿದ್ದರು. ತುರ್ತುಪರಿಸ್ಥಿತಿ ನಂತರ ಲೋಕಸಭೆಗೆ ಬಾಗಲಕೋಟೆ ಕ್ಷೇತ್ರದಿಂದ ಕೆ.ಕೆ.ತುಂಗಳ ಜನತಾಪಕ್ಷದ ಅಭ್ಯರ್ಥಿ. ನಾವೆಲ್ಲಾ ವಿದ್ಯಾರ್ಥಿಗಳು ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಿದ್ದೆವು ಎಂದು ನೆನಪಿಸಿಕೊಳ್ಳುವ ಚರಂತಿಮಠ, ನಾಲ್ಕು ದಶಕಗಳ ಹಿಂದೆಯೇ ಹೀಗೆ ಸಂಘದ ನಂಟು ಶುರುವಾದ ಬಗೆ ಬಿಚ್ಚಿಡುತ್ತಾರೆ. 1980ರಲ್ಲಿ ಅಪ್ಪ ಅಕಾಲಿಕವಾಗಿ ತೀರಿಕೊಂಡರು.

ಮನೆಯ ಜವಾಬ್ದಾರಿ ಆಗಷ್ಟೇ ಪದವಿ ಮುಗಿಸಿದ್ದ ನನ್ನ ಹೆಗಲಿಗೇರಿತು. ಮುಂದೆ 10 ವರ್ಷ ಕುಟುಂಬದ ಬಳುವಳಿಯಾದ ಅಡತಿ ಅಂಗಡಿ ವ್ಯಾಪಾರದಲ್ಲಿ ತೊಡಗಿಕೊಂಡೆ. ಅಪ್ಪನ ಗೆಳೆಯರು, ಹಿರಿಯರು, ಹಿತೈಷಿಗಳ ಒತ್ತಾಸೆಯಂತೆ 1991ರಲ್ಲಿ ಬಿ.ವಿ.ವಿ ಸಂಘದ ಚುಕ್ಕಾಣಿ ವಹಿಸಿಕೊಂಡೆ. ಸಮಾಜದ ನೆರವು, ಊರ ಜನರು, ಸದಸ್ಯರು, ಸಿಬ್ಬಂದಿ ಬೆನ್ನಿಗೆ ನಿಂತ ಪರಿಣಾಮ ಸಂಘ ಉತ್ತರೋತ್ತರವಾಗಿ ಬೆಳೆಯಿತು.

ಇದೇ ಅವಧಿಯಲ್ಲಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ಆಗ ಲೋಕಸಭೆ ಉಪಸಭಾಪತಿಯಾಗಿದ್ದ ತುಮಕೂರಿನ ಎಸ್.ಮಲ್ಲಿಕಾರ್ಜುನಯ್ಯ, ಬಸವರಾಜಪಾಟೀಲ ಸೇಡಂ ಅವರೊಂದಿಗೆ ಸಂಪರ್ಕ ಬೆಳೆಯಿತು. ಅದೊಮ್ಮೆ ಎಲ್ಲರೂ ಸೇರಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ವೇದಿಕೆಗೆ ಕರೆದೊಯ್ದು ಎಲ್.ಕೆ.ಅಡ್ವಾಣಿ ಅವರಿಂದ ಹಾರ ಹಾಕಿಸಿ ಸಾರ್ವಜನಿಕ ಬದುಕಿನ ಆರಂಭಕ್ಕೆ ನೀರೆರೆದರು ಎಂದು ಸ್ಮರಿಸುತ್ತಾರೆ.

ಚುನಾವಣೆಗೆ ನಿಲ್ಲಿ: ‘ಬಾಗಲಕೋಟೆಯಿಂದ 1996ರಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಲು ವರಿಷ್ಠರು ಸೂಚಿಸಿದರು. ಅಲ್ಲಿಯವರೆಗೂ ಪಕ್ಷದ ಸ್ಪರ್ಧೆ ಇಲ್ಲಿ ಕೇವಲ ಪ್ರಾತಿನಿಧಿಕವಾಗಿತ್ತು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡು ಸಾವಿರ ಮತ ಪಡೆಯುವುದು ಕಷ್ಟವಾಗಿತ್ತು. ಬಿಜೆಪಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದು ವಿರೋಧಿಗಳು ಗೇಲಿ ಮಾಡುತ್ತಿದ್ದರು. ಅಂತಹ ಸನ್ನಿವೇಶದಲ್ಲಿ ವರಿಷ್ಠರು ನೀಡಿದ ಆಹ್ವಾನ ತಿರಸ್ಕರಿಸಿದೆ.

ಬೇಕಿದ್ದರೆ ಬಾಗಲಕೋಟೆಯಿಂದ ವಿಧಾನಸಭೆಗೆ ಸ್ಪರ್ಧಿಸುವೆ. ಲೋಕಸಭೆಗೆ ಬೇಡ ಎಂದು ಹೇಳಿದೆ. ಇದು ಪಕ್ಷದ ತೀರ್ಮಾನ. ಈಗ ನೀವು ಸ್ಪರ್ಧಿಸಿ. ಸೋತರೆ ವಿಧಾನಸಭೆ ಟಿಕೆಟ್ ಕೊಡುತ್ತೇವೆ ಎಂಬ ಭರವಸೆ ಸಿಕ್ಕಿತು. ಅದರಂತೆ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆ ಆರಂಭಿಸಿ ಸ್ಪರ್ಧೆ ನೀಡಿದೆವು. ಸೋತರೂ ಅಚ್ಚರಿ ಎಂಬಂತೆ ಮತ ಗಳಿಕೆಯಾಗಿತ್ತು. ಬಿಜೆಪಿ 1.75 ಲಕ್ಷ ಮತದಾರರ ಒಲವು ಗಳಿಸಿತ್ತು.

ಇದು ಜಿಲ್ಲೆಯಲ್ಲಿ ಪಕ್ಷದ ಪುನರುತ್ಥಾನಕ್ಕೆ ದಾರಿಯಾಗಿ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿತು. ವಾಮನರೂಪಿ ಸಂಘಟನೆ ತ್ರಿವಿಕ್ರಮನಾಗಿ ಬೆಳೆಯಿತು. ವರಿಷ್ಠರಿಂದ ಆಗ ದೊರೆತಿದ್ದ ವಿಧಾನಸಭೆ ಟಿಕೆಟ್ ಭರವಸೆ 2004ರಲ್ಲಿ ಈಡೇರಿತು’ ಎಂದು ವೀರಣ್ಣ ‘ಬಿ ಫಾರಂ' ಲಭ್ಯತೆಯ ಹಿಂದಿನ ಸುದೀರ್ಘ ಚೈತ್ರ ಯಾತ್ರೆ ಬಿಚ್ಚಿಡುತ್ತಾರೆ.

ಜೈಲಿಗೆ ಹೋಗಿದ್ದೆ: ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ. ಒಮ್ಮೆ ಆಲಮಟ್ಟಿಗೆ ಬಂದಿದ್ದರು. ಮುಳುಗಡೆ ಸಂತ್ರಸ್ತರ ಅಳಲು ಮುಟ್ಟಿಸಲು ಪಕ್ಷದ ಮುಖಂಡರೊಂದಿಗೆ ಸೇರಿ ಅವರಿಗೆ ಘೇರಾವ್ ಹಾಕಿ ಬಂಧನಕ್ಕೊಳಗಾಗಿ ವಿಜಯಪುರ ಜೈಲು ಸೇರಿದ್ದೆನು. ಆಗ ಎಚ್ಚೆತ್ತ ಸರ್ಕಾರ ಸಂತ್ರಸ್ತರಿಗೆ ₨634 ಕೋಟಿ ವೆಚ್ಚದ ಪರಿಹಾರ ಪ್ಯಾಕೇಜ್ ಘೋಷಿಸಿತ್ತು. ಮೊದಲ ಬಾರಿ ಶಾಸಕನಾದಾಗ ಅಚನೂರು–ಮುಡಪೂಜೆ ನಡುವೆ 4 ಕಿ.ಮೀ ದೂರ ಮಾದರಿ ರಸ್ತೆ ಮಾಡಿಸಿದ್ದೆ. 10 ವರ್ಷ ಕಾಲ ಒಂದೇ ಒಂದು ಗುಂಡಿ ಬೀಳದಷ್ಟು ಗುಣಮಟ್ಟ ಹೊಂದಿತ್ತು. ಗುತ್ತಿಗೆದಾರರಿಂದ ಕಮಿಷನ್ ನಿರೀಕ್ಷೆ ಮಾಡದಿದ್ದಲ್ಲಿ ಗುಣಮಟ್ಟದ ಕೆಲಸ ಮಾಡಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ಆಗ ಮಾಡಿ ತೋರಿಸಿದೆ. ಅದರ ಫಲ ಗದ್ದನಕೇರಿ ಕ್ರಾಸ್‌ನಿಂದ ಸಂಗಮ ಕ್ರಾಸ್‌ವರೆಗೆ ₨64 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರಸ್ತೆ ಸಿದ್ಧವಾಗಿ ಬಾಗಲಕೋಟೆಗೆ ಜೀವ ಕಳೆ ತಂದಿತು ಎನ್ನುತ್ತಾರೆ.

ಸ್ವಯಂಕೃತ ಅಪರಾಧ: ‘ಕಳೆದ ಚುನಾವಣೆಯಲ್ಲಿ ಬಿಜೆಪಿಯದ್ದು ವೀರೋಚಿತ ಸೋಲು. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್‌ ಎಂಬ ದಾಯಾದಿ ಮತ್ಸರ ನನ್ನ ಸೋಲಿಗೆ ಕಾರಣವೇ ಹೊರತು ಕಾಂಗ್ರೆಸ್‌ ಅಲ್ಲ’ ಎನ್ನುತ್ತಾರೆ ವೀರಣ್ಣ ಚರಂತಿಮಠ. ಹಳೆಯ ತಪ್ಪುಗಳಿಗೆ ಪರಿಹಾರದ ಲೆಕ್ಕದೊಡನೆ ಈ ಬಾರಿ ಕಣಕ್ಕಿಳಿಯಲು ತಾಲೀಮು ನಡೆಸಿದ್ದಾರೆ.

ಅಧಿಕಾರವಧಿಯ ಸಾಧನೆ...

ಬಾಗಲಕೋಟೆಗೆ ಎರಡೂ ಕಡೆ ಅಗಸಿ ಬಾಗಿಲು, ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ನಿರಂತರಜ್ಯೋತಿ ಬೆಳಕು. ಹಿರೇಮಾಗಿ, ಚಿಕ್ಕಮಾಗಿ, ಇಂಗಳಗಿ, ಮುಳ್ಳೂರು ಬ್ಯಾರೇಜ್ ನಿರ್ಮಾಣ, ಐಹೊಳೆ ಸ್ಥಳಾಂತರಕ್ಕೆ ಸರ್ಕಾರಿ ಆದೇಶ, ಆಲಮಟ್ಟಿ ಅಣೇಕಟ್ಟೆ 527 ಮೀಟರ್‌ವರೆಗಿನ ಮುಳುಗಡೆ ಪ್ರದೇಶಕ್ಕೆ ಪರಿಹಾರ, ಅಮೀನಗಡ, ಕಮತಗಿಗೆ ಕೃಷ್ಣೆಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ, ಕ್ಷೇತ್ರಾದ್ಯಂತ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ.

* * 

ಇಂತಹ ಪ್ರಾಮಾಣಿಕ ಕಾರ್ಯಕರ್ತರು ಯಾವುದೇ ಪಕ್ಷದಲ್ಲಿ ಸಿಗೊಲ್ಲ. ತಾಯಿ, ಸಹೋದರಿಯಂತೆ ಕಾಣುವ ಕಾರಣಕ್ಕೆ ಅನೇಕರು ಮಹಿಳೆಯರನ್ನು ಪಕ್ಷದ ವೇದಿಕೆಗೆ ಕಳುಹಿಸುತ್ತಿದ್ದಾರೆ.

ವೀರಣ್ಣ ಚರಂತಿಮಠ, ಮಾಜಿ ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.