ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬಾಯಿಗೆ ರುಚಿ ಈ ತಿಂಡಿಗಳು!

ಸೀತಾ ಎಸ್.ಎನ್. ಹರಿಹರ.
Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪಾಲ್ ಮಂಜಿಲು

ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ – 1ಕಪ್‌, ಸಕ್ಕರೆ –  2ರಿಂದ 3ಚಮಚ, ತುಪ್ಪ – 1ಚಮಚ, ಕಾಯಿತುರಿ (ಹೂರಣಕ್ಕೆ) – 1ಕಪ್‌, ಬೆಲ್ಲ – 1/2ಕಪ್‌, ಅಕ್ಕಿಹಿಟ್ಟು – 1ಚಮಚ, ಏಲಕ್ಕಿಪುಡಿ – ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ತುಪ್ಪ ಹಾಕಿ ರವೆಯನ್ನು ಸ್ವಲ್ಪ ಹುರಿದು, ಸಕ್ಕರೆ ಹಾಲು ಹಾಕಿ ಗಟ್ಟಿಯಾಗಿ ಸಜ್ಜಿಗೆ ತಯಾರಿಸಿಕೊಳ್ಳಿ. ಕಾಯಿತುರಿ, ಬೆಲ್ಲ ಒಲೆಯ ಮೇಲಿಟ್ಟು ಬೆಲ್ಲ ಕರಗುವವರೆಗೆ ಹುರಿದು, ಅಕ್ಕಿಹಿಟ್ಟು, ಏಲಕ್ಕಿಪುಡಿಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ ಆರಲು ಬಿಡಿ. ಮಾಡಿಟ್ಟ ಸಜ್ಜಿಗೆಯನ್ನು ಚೆನ್ನಾಗಿ ನಾದಿ ಕೈಗೆ ತುಪ್ಪ ಸವರಿಕೊಂಡು ಸ್ವಲ್ಪ ಸಜ್ಜಿಗೆ ಅಂಗೈ ಮೇಲಿಟ್ಟು ತಟ್ಟಿ ಹೂರಣ ತುಂಬಿ (ಹೋಳಿಗೆಗೆ ತುಂಬುವಂತೆ) ತೆರೆದುಕೊಳ್ಳದಂತೆ ಚೆನ್ನಾಗಿ ಮುಚ್ಚಿ, ಉಂಡೆ ತಯಾರಿಸಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಮಕ್ಕಳಿಗೆ ತುಂಬಾ ಇಷ್ಟವಾಗುವ ಸಿಹಿಯಿದು.

*

ಅವಲಕ್ಕಿ ಬೆಲ್ಲದನ್ನ

ಬೇಕಾಗುವ ಸಾಮಗ್ರಿಗಳು: ಮೀಡಿಯಂ ಅವಲಕ್ಕಿ – 1ಕಪ್‌, ಬೆಲ್ಲ – 4/3ಕಪ್‌,  ತುಪ್ಪ, ದ್ರಾಕ್ಷಿ–ಗೋಡಂಬಿ – ತಲಾ 1ಚಮಚ, ಒಣಕೊಬ್ಬರಿ – 2ಚಮಚ, ಏಲಕ್ಕಿಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಅವಲಕ್ಕಿಯನ್ನು ತೊಳೆದು ನೀರು ಚಿಮುಕಿಸಿಡಿ. ಬೆಲ್ಲಕ್ಕೆ ನೀರು ಹಾಕಿ ಒಂದೆಳೆ ಪಾಕ ಮಾಡಿ, ನೆನೆಸಿದ ಅವಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ-ಗೋಡಂಬಿ, ಒಣಕೊಬ್ಬರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ. ಸ್ವಲ್ಪ ತುಪ್ಪ ಹಾಕಿ. ಇದನ್ನು ಅಕ್ಕಿ, ನವಣಕ್ಕಿ, ಸಾಮೆಅಕ್ಕಿ, ಗೋಧಿನುಚ್ಚಿನಿಂದಲೂ ಮಾಡಬಹುದು.

**

‘ಹೆಸರು ಉದ್ದಿನ’ ಉಂಡೆ ಪಾಯಸ

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ – 1ಕಪ್‌, ಉದ್ದಿನಬೇಳೆ – 1/2ಕಪ್‌, ತುಪ್ಪ ಹಾಗೂ ಸಕ್ಕರೆ – ತಲಾ 2ರಿಂದ 3ಚಮಚ, ಕಾಯಿತುರಿ – 1ಕಪ್‌, ಬೆಲ್ಲ – 1ಕಪ್, ಏಲಕ್ಕಿಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಹೆಸರುಬೇಳೆ ಹಾಗೂ ಉದ್ದಿನಬೇಳೆಯನ್ನು 4 ಗಂಟೆಗಳ ಕಾಲ ನೆನೆಸಿ, ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿ, ಬಾಣಲೆಗೆ ತುಪ್ಪ ಹಾಕಿ, ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಗಟ್ಟಿಯಾಗುವವರೆಗೆ ಬೇಯಿಸಿ ಆರಲು ಬಿಡಿ. ಚಿಕ್ಕ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಿ. ಕಾಯಿತುರಿ ನುಣ್ಣಗೆ ರುಬ್ಬಿ, ಬೆಲ್ಲ, ಸ್ವಲ್ಪ ನೀರು ಹಾಕಿ ಕುದಿಸಿ, ಮಾಡಿಟ್ಟ ಉಂಡೆಗಳನ್ನು ಹಾಕಿ. ಒಂದು ಕುದಿ ಕುದಿಸಿ, ಎಲ್ಲರಿಗೂ ಇಷ್ಟವಾಗುವ ಈ ಪೌಷ್ಟಿಕ ಪಾಯಸ ಆರಿದ ನಂತರ ಗಟ್ಟಿಯಾಗುತ್ತದೆ. ಬಡಿಸುವಾಗ ಬೇಕಿದ್ದಲ್ಲಿ ಸ್ವಲ್ಪ ಹಾಲು ಸೇರಿಸಿಕೊಳ್ಳಿ.

**

ಬಾಳೆಹಣ್ಣಿನ ಗುಳಿಯಪ್ಪ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1ಕಪ್‌, ಮೆಂತ್ಯ – 1/2ಕಪ್‌, ಅವಲಕ್ಕಿ – 1ಚಮಚ, ಉಪ್ಪು – ಚಿಟಿಕೆ, ಕಾಯಿತುರಿ – 1/2ಕಪ್‌, ಬೆಲ್ಲದ ಪುಡಿ – 1ಕಪ್‌, ಕಳಿತ ಬಾಳೆಹಣ್ಣು – 2, ಏಲಕ್ಕಿ ಹಾಗೂ ತುಪ್ಪು – ಸ್ವಲ್ಪ.

ತಯಾರಿಸುವ ವಿಧಾನ: ಅಕ್ಕಿಯನ್ನು 4ರಿಂದ 5 ಗಂಟೆಗಳ ಕಾಲ ನೆನೆಸಿ ರುಬ್ಬಿ. ಚಿಟಿಕೆ ಉಪ್ಪು, ಕಾಯಿತುರಿ, ಬೆಲ್ಲದ ಪುಡಿ, ಬಾಳೆಹಣ್ಣು, ಏಲಕ್ಕಿ ಎಲ್ಲವನ್ನೂ ಹಾಕಿ ದೋಸೆಹಿಟ್ಟಿನ ಹದಕ್ಕೆ ರುಬ್ಬಿ. 1ಗಂಟೆಗಳ ಕಾಲ ಹುದುಗಲು ಬಿಡಿ. ಪಡ್ಡು ಮಾಡುವ ಹಂಚಿನ ಗುಳಿಯಲ್ಲಿ ತುಪ್ಪ ಹಾಕಿ ಅರ್ಧದಷ್ಟು ಮಾತ್ರ ಹಿಟ್ಟು ಹಾಕಿ ಎರಡೂ ಕಡೆ ಬೇಯಿಸಿ. ರುಚಿಯಾದ ಗುಳಿಯಪ್ಪ ಸವಿಯಿರಿ.

**

ದಿಢೀರ್ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ– 1ಕಪ್‌, ಅಕ್ಕಿಹಿಟ್ಟು – 4ರಿಂದ 5ಕಪ್‌, ಹುರಿಗಡಲೆಹಿಟ್ಟು – 1/2ಕಪ್‌, ಕಾದ ಎಣ್ಣೆ ಅಥವಾ ತುಪ್ಪ – 1/2ಕಪ್‌, ಇಂಗು ಸ್ವಲ್ಪ. ಬಿಳಿಎಳ್ಳು – 1ಚಮಚ, ರುಚಿಗೆ ಉಪ್ಪು, ಕರಿಯಲು ರೀಪೈಂಡ್ ಎಣ್ಣೆ, ಬೇಕಾದಲ್ಲಿ ಖಾರದಪುಡಿ.

ತಯಾರಿಸುವ ವಿಧಾನ: ಉದ್ದಿನಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿ ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿ, ಅದಕ್ಕೆ ಹುರಿಗಡಲೆಪುಡಿ, ಇಂಗು, ಎಳ್ಳು, ಉಪ್ಪು ಖಾರದಪುಡಿ, ಹಿಡಿಯುವಷ್ಟು ಅಕ್ಕಿಹಿಟ್ಟು ಹಾಕಿ ಚಕ್ಕುಲಿಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ. ಚಕ್ಕುಲಿ ಮಾಡಿ ಕರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT