ಸೋಮವಾರ, ಡಿಸೆಂಬರ್ 9, 2019
25 °C

ಮಹಿಳಾ ಸಬಲೀಕರಣದ ‘ದಿ ಫನ್‌ಟ್ಯಾಸ್ಟಿಕ್ ವುಮನ್’

Published:
Updated:
ಮಹಿಳಾ ಸಬಲೀಕರಣದ ‘ದಿ ಫನ್‌ಟ್ಯಾಸ್ಟಿಕ್ ವುಮನ್’

ಸಿನಿಮೋತ್ಸವದಲ್ಲಿ ಶನಿವಾರ (ಫೆ.24) ಮಹಿಳಾ ಸಬಲೀಕರಣದ ಸಂದೇಶ ಸಾರುವ ‘ದಿ ಫೆಂಟಾಸ್ಟಿಕ್ ವುಮನ್’ ಹಾಗೂ ‘ಎ ಸಾರ್ಟ್ ಆಫ್ ಫ್ಯಾಮಿಲಿ’ ಸಿನಿಮಾಗಳು ನೋಡಲೇಬೇಕಾದ ಸಿನಿಮಾಗಳು. ‘ದಿ ಯಂಗ್ ಕಾರ್ಲ್‌ಮಾರ್ಕ್ಸ್‌’, ‘ಡೈರೆಕ್ಷನ್ಸ್‌’, ‘ಆನ್ ಬಾಡಿ ಅಂಡ್ ಸಾಲ್’, ‘ವೆಸ್ಟರ್ನ್‌’ ಸೇರಿದಂತೆ ಕೆಲ ಒಳ್ಳೆಯ ಸಿನಿಮಾಗಳಿವೆ.

‘ದಿ ಫನ್‌ಟ್ಯಾಸ್ಟಿಕ್ ವುಮನ್’ ಸಿನಿಮಾ ಗಾಯಕಿಯಾಗಬೇಕೆಂಬ ಹಂಬಲವುಳ್ಳ ಮರೀನಾ ಎಂಬ ಯುವತಿಯ ಕಥೆ. ಜಾಗತೀಕರಣದ ಈ ದಿನಗಳಲ್ಲಿ ಒಂಟಿ ಮಹಿಳೆಯರ ಸಮಸ್ಯೆಗಳನ್ನು ಈ ಸಿನಿಮಾ ಚೆನ್ನಾಗಿ ಚಿತ್ರಿಸುತ್ತದೆ. ಸವಾಲುಗಳ ನಡುವೆಯೂ ಹೆಣ್ಣೊಬ್ಬಳು ತನ್ನಿಷ್ಟದ ಬದುಕನ್ನು ಬದುಕಲು ಸಾಧ್ಯ ಎಂಬುದನ್ನು ಈ ಚಿತ್ರ ಸೂಕ್ಷ್ಮವಾಗಿ ತೆರೆದಿಡುತ್ತದೆ.

‘ಎ ಸಾರ್ಟ್ ಆಫ್ ಫ್ಯಾಮಿಲಿ’ ಬಾಡಿಗೆ ತಾಯ್ತನ, ಬಡತನ ಮತ್ತು ಸಾಮಾಜಿಕ ಚಿತ್ರಣವನ್ನು ತೆರೆದಿಡುತ್ತದೆ. ಮಧ್ಯಮವರ್ಗದ ಕುಟುಂಬದ ವೈದ್ಯೆ ತನ್ನ ತಾಯ್ತನದ ಅವಧಿಯಲ್ಲಿ ಎದುರಿಸುವ ಕಠಿಣ ಸಮಸ್ಯೆಗಳನ್ನು ಈ ಚಿತ್ರ ಅನಾವರಣ ಮಾಡುತ್ತದೆ. ತುಂಬು ಗರ್ಭಿಣಿಯೊಬ್ಬಳು ತನ್ನ ವೃತ್ತಿ ನಿಮಿತ್ತ ಅಜ್ಞಾತ ಸ್ಥಳಕ್ಕೆ ತೆರಳುವ ಮಾರ್ಗಮಧ್ಯೆದಲ್ಲಿ ಎದುರಿಸುವ ಸಂಕಷ್ಟಗಳ ಚಿತ್ರಣ ಈ ಚಿತ್ರದಲ್ಲಿದೆ.

ಪೂರ್ವ ಯುರೋಪಿನಲ್ಲಿರುವ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸಂರಕ್ಷಣೆಯ ಸಮಸ್ಯೆಗಳನ್ನು ‘ಡೈರೆಕ್ಷನ್ಸ್‌’ ಚೆನ್ನಾಗಿ ತೋರಿಸುತ್ತದೆ. ಇದು ಮುಖ್ಯವಾದ ಸಿನಿಮಾ. ಯುರೋಪಿನಲ್ಲಿರುವ ವಾಸ್ತವವಾದಿ ನೆಲೆಗಟ್ಟನ್ನು ನಿರ್ದೇಶಕರು ಸಹಜವಾಗಿ ಚಿತ್ರಿಸಿದ್ದಾರೆ.

‘ದಿ ಯಂಗ್ ಕಾರ್ಲ್‌ಮಾರ್ಕ್ಸ್‌’ಅಂತೂ ಬಹುಚರ್ಚಿತ ಸಿನಿಮಾ. ಬಯೋಪಿಕ್ ಆಗಿರುವ ಈ ಸಿನಿಮಾಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇದು ನೋಡಲೇಬೇಕಾದ ಸಿನಿಮಾ.

‘ಆನ್ ಬಾಡಿ ಅಂಡ್ ಸಾಲ್’ ವಿಭಿನ್ನ ಬಗೆಯ ಕಥೆಯನ್ನು ಹೊಂದಿದೆ. ಕಸಾಯಿಖಾನೆಯೊಂದರಲ್ಲಿ ಕೆಲಸಗಾರರಾಗಿರುವ ಯುವಕ–ಯುವತಿ ನಡುವೆ ಸಮಾನ ಆಸಕ್ತಿ ಫಲವಾಗಿ ಪ್ರೇಮ ಚಿಗುರುತ್ತದೆ. ಪ್ರೇಮದ ಅಮಲಿನಲ್ಲಿ ಕನಸು ಕಾಣುವ ಈ ಜೋಡಿ ತಮ್ಮ ಕನಸು ನನಸು ಮಾಡಿಕೊಳ್ಳಲು ಕಾಲದೊಂದಿಗೆ ನಡೆಸುವ ಸೆಣಸಾಟದ ಚಿತ್ರಣವಿದೆ ಈ ಚಿತ್ರದಲ್ಲಿ. ದೇಹ ಮತ್ತು ಆತ್ಮ ಕುರಿತಂತೆ ಇದೊಂದು ಭಿನ್ನ ಪ್ರಯೋಗದ ಸಿನಿಮಾ. ದೈವಿಕ ನೆಲೆಯ ಪ್ರೇಮ, ಅಧ್ಯಾತ್ಮದ ಪರಿಭಾಷೆ ಚಿತ್ರದ ಒಟ್ಟಂದವನ್ನು ಹೆಚ್ಚಿಸಿದೆ.

ಪ್ರತಿಕ್ರಿಯಿಸಿ (+)