ಮಂಗಳವಾರ, ಮೇ 26, 2020
27 °C
ಮದ್ಯದ ಬಾಟಲಿಗೆ ಪಾಲಿಯೆಸ್ಟರ್‌ ಲೇಬಲ್‌ ಟೆಂಡರ್‌

ಅಬಕಾರಿ ಇಲಾಖೆಗೆ ಹೈಕೋರ್ಟ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬಕಾರಿ ಇಲಾಖೆಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಎಲ್ಲ ವಿಧದ ಮದ್ಯ ಬಾಟಲಿಗಳ ಬಿರಡೆ ಮೇಲೆ ಅಂಟಿಸುವ ‘ಅಬಕಾರಿ ಲೇಬಲ್‌’ಗಳನ್ನು ಪಾಲಿಯೆಸ್ಟರ್‌ ಆಧಾರಿತ ಉತ್ಪನ್ನಗಳಿಂದ ತಯಾರಿಸಿ ಅಂಟಿಸುವ ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಆಯುಕ್ತರು ಹಾಗೂ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ  ನಗರದ ವಿದ್ಯಾರಣ್ಯಪುರ ನಿವಾಸಿ ರಾಮ್‌ಪ್ರಸಾದ್‌ ಹಾಗೂ ‘ಸ್ವಚ್ಛ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ರಾಜೇಶ್‌ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌.ಪಿ.ಶಂಕರ್, ‘ಟೆಂಡರ್‌ ಪ್ರಕ್ರಿಯೆ ಜಾರಿಗೆ ಬಂದಿದ್ದೇ ಆದರೆ, ಸದ್ಯದ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳೂ 32 ಕೋಟಿ ಲೇಬಲ್‌ಗಳು ಕಸವಾಗಿ ಮಣ್ಣು ಸೇರುತ್ತವೆ. ಇವು ನೆಲದಲ್ಲಿ ಕರಗಲು ಕನಿಷ್ಠ ನೂರು ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ’ ಎಂದರು.

‘ರಾಜ್ಯದಾದ್ಯಂತ ಮಾರಾಟವಾಗುವ ಎಲ್ಲ ಬಗೆಯ ಮದ್ಯದ ಬಾಟಲಿಗಳ ಮೇಲೆ ಸದ್ಯ ಪೇಪರ್‌ ಲೇಬಲ್‌ ಅಂಟಿಸಲಾಗುತ್ತಿದೆ. ಆದರೆ, ಈ ಪೇಪರ್‌ ಲೇಬಲ್‌ಗಳ ಬದಲಿಗೆ ಇನ್ನು ಮುಂದೆ ಪಾಲಿಯೆಸ್ಟರ್‌ ಲೇಬಲ್‌ ಬಳಸಲು ರಾಜ್ಯ ಅಬಕಾರಿ ಇಲಾಖೆ ಟೆಂಡರ್‌ ಕರೆದಿದೆ. ಇದರಿಂದ ಜನರು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಈ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿದರು.

ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

ಮದ್ಯದ ಬಾಟಲಿಗಳ ಮೇಲಿನ ಮುಚ್ಚಳದ ಮೇಲೆ ಅಂಟಿಸಲಾಗುವ ಲೇಬಲ್‌ಗಳನ್ನು ‘ಎಕ್ಸೈಸ್‌ ಅಡ್ಹೆಸ್ಸೀವ್‌ ಲೇಬಲ್‌ (ಇಎಎಲ್‌) ಅಥವಾ ಎಕ್ಸ್ಐಸ್‌ ಟ್ಯಾಕ್ಸ್‌ ಬ್ಯಾಂಡ್‌’ ಎಂದು ಕರೆಯಲಾಗುತ್ತದೆ.

ಇವು 25 x 75 ಎಂ.ಎಂ.ಗಾತ್ರದಲ್ಲಿ ಇರುತ್ತವೆ. ಇವುಗಳಲ್ಲಿ ತಯಾರಿಕೆಯ ಸರಣಿ ಸಂಖ್ಯೆ, 2–ಡಿ ಬಾರ್ ಕೋಡ್‌, ಕಂಪನಿಯ ಹೆಸರು ಒಳಗೊಂಡ 14 ವಿವರಗಳು ಮುದ್ರಿತವಾಗಿರುತ್ತವೆ. ಡಿಸ್ಟಿಲರಿಗಳಲ್ಲಿ ಇವುಗಳನ್ನು ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರೇ ಅಂಟಿಸುತ್ತಾರೆ. ಇವುಗಳನ್ನು ಬದಲು ಮಾಡುವ ಪ್ರಕ್ರಿಯೆ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.