ಸೋಮವಾರ, ಜೂನ್ 1, 2020
27 °C

ಕಾಂಗ್ರೆಸ್ ವೀಕ್ಷಕರ ಎದುರೇ ದಾಂಧಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ವೀಕ್ಷಕರ ಎದುರೇ ದಾಂಧಲೆ

ಶಿವಮೊಗ್ಗ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಅಹವಾಲು ಆಲಿಸಲು ಬಂದಿದ್ದ ಕಾಂಗ್ರೆಸ್ ವೀಕ್ಷಕರ ಎದುರೇ ಮುಖಂಡರ ಬೆಂಬಲಿಗರು ದಾಂಧಲೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಬಂದಿದ್ದ ವೀಕ್ಷಕರಾದ ಸಂಸದ ಬಿ.ಎಸ್. ಚಂದ್ರಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರು ಅವರಿಗೆ ವಿವಿಧ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಅಪಾರ ಬೆಂಬಲಿಗರ ಜತೆ ಬಂದು ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಕೆಲವರು ಶಿವಮೊಗ್ಗ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಮನವಿ ಸಲ್ಲಿಸಲು ಮುಂದಾದರು. ಆಗ ಶಾಸಕರ ಬೆಂಬಲಿಗರು ಅವರಲ್ಲಿ ಕೆಲವರನ್ನು ಹಿಡಿದು ತಳ್ಳಾಡಿದರು. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ಕೆಲ ಸಮಯ ವಾಗ್ವಾದ ನಡೆದು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

ವೀಕ್ಷಕರ ಎದುರು ತಮ್ಮ ಅಭ್ಯರ್ಥಿಗಳ ಪರ ಅರ್ಜಿ ಸಲ್ಲಿಸಲಿ, ಅಹವಾಲು ಸಲ್ಲಿಸಲಿ. ಅವರು ಎಷ್ಟು ಪ್ರಬಲರು ಎಂದು ನಿರೂಪಿಸಲು. ಅದು ಬಿಟ್ಟು ಇನ್ನೊಬ್ಬರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಮಾಡಲು ಹಣಕೊಟ್ಟು ಕಳುಹಿಸಿದ್ದಾರೆ. ಅವರಿಗೆ ಬುದ್ಧಿ ಕಲಿಸಿದ್ದೇವೆ ಇದು ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ, ಸತ್ಯನಾರಾಯಣ, ಇಂತಿಯಾಜ್ ಖಾನ್ ಮತ್ತಿತರರ ಕೃತ್ಯ’ ಎಂದು ಕೆಲವರು ಬಹಿರಂಗವಾಗಿಯೇ ಆರೋಪಿಸಿದರು.

ಮುಗಿಲುಮುಟ್ಟಿದ ಜಯ ಘೋಷಣೆ: ಶಾಸಕ ಕೆ.ಬಿ. ಪ್ರಸನ್ನಕುಮಾರ್, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಪರ ಬ್ಯಾನರ್ ಹಿಡಿದುಕೊಂಡು ಬಂದು ಮನವಿ ಸಲ್ಲಿಸಿದರು.

ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಲ್. ಸತ್ಯನಾರಾಯಣರಾವ್ ಸೇರಿದಂತೆ ಈಚೆಗೆ ದೆಹಲಿ ತೆರಳಿ ಟಿಕೆಟ್‌ ನೀಡುವಂತೆ ಹೈ ಕಮಾಂಡ್‌ಗೆ ಮನವಿ ಸಲ್ಲಿಸಿದ್ದ ಪಕ್ಷದ 11 ಮುಖಂಡರು ಇಡೀ ದಿನ ಕಾಂಗ್ರೆಸ್ ಕಚೇರಿಯಲ್ಲೇ ಮೊಕ್ಕಾಂ ಹೂಡಿದ್ದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಎಸ್. ರವಿಕುಮಾರ್, ಓ. ಶಂಕರ್, ಮಧುಸೂಧನ್, ಬಲದೇವ್ ಕೃಷ್ಣ, ಪಲ್ಲವಿ ಅವರಿಗೆ ಟಿಕೇಟ್ ನೀಡಬೇಕು ಎಂದು ಅವರ ಬೆಂಬಲಿಗರು ಪ್ರತ್ಯೇಕವಾಗಿ ವೀಕ್ಷಕರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಕರಿಯಣ್ಣ ಹಾಗೂ ಅವರ ಪುತ್ರ ಡಾ .ಶ್ರೀನಿವಾಸ್ ವೀಕ್ಷಕರ ಜತೆ ಮಾತನಾಡಿದರು.

ಭದ್ರಾವತಿ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಟೇಲ್ ಉಮೇದುವಾರಿಕೆ ಸಲ್ಲಿಸಿದರು. ಬಲ್ಕಿಶ್ ಬಾನು ಬೆಂಬಲಿಗರು ಮನವಿ ಸಲ್ಲಿಸಿದರು.

ಸಾಗರ, ತೀರ್ಥಹಳ್ಳಿ, ಶಿಕಾರಿಪುರದ ಆಕಾಂಕ್ಷಿಗಳ ಬೆಂಬಲಿಗರ ಸಂಖ್ಯೆ ತೀರ ಕಡಿಮೆ ಇತ್ತು. ಶಿವಮೊಗ್ಗ, ಗ್ರಾಮಾಂತರ, ಭದ್ರಾವತಿ ಕ್ಷೇತ್ರಗಳ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಎತ್ತ ನೋಡಿದರೂ ಬ್ಯಾನರ್, ಬೆಂಬಲಿಗರ ಘೋಷಣೆ, ನಮ್ಮ ನಾಯಕನಿಗೆ ಬರುವ ವಿಧಾನ ಸಭೆ ಚುನಾವಣೆಗೆ ತಮ್ಮ ನಾಯಕರಿಗೇ ಟಿಕೆಟ್ ನೀಡಬೇಕು ಎಂದು ಕೂಗುತ್ತಿದ್ದ ಘೋಷಣೆ ಮುಗಿಲುಮುಟ್ಟಿತು.

ಆಕಾಂಕ್ಷಿಗಳ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಬಂದ ಕಾರಣ ಕಾಂಗ್ರೆಸ್ ಕಚೇರಿ ಮುಂದೆ ಭಾರಿ ಜನಸ್ತೋಮ ನೆರೆದಿತ್ತು. ಸ್ಥಳದಲ್ಲಿ ಪೊಲೀಸ್  ಬಂದೋಬಸ್ತ್‌ ಮಾಡಲಾಗಿತ್ತು. ಆ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ಕಾಂಗ್ರೆಸ್ ಕಚೇರಿ ಅವ್ಯವಸ್ಥೆ

ವೀಕ್ಷಕರು ಬರುವ ಮೊದಲೇ ಪಕ್ಷದ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದ ಕುರ್ಚಿಗಳಲ್ಲೇ ಆಸೀನರಾಗಿದ್ದರು. ಹಾಗಾಗಿ, ಮುಖಂಡರಿಗೇ ಕುಳಿತುಕೊಳ್ಳಲು ಕುರ್ಚಿ ಸಿಗಲಿಲ್ಲ. ಭಾರಿ ಸಂಖ್ಯೆಯಲ್ಲಿ ಜನರು ಸೇರಿದ ಕಾರಣ ಇಡೀ ಸಭೆ ಗೊಂದಲದ ಗೂಡಾಯಿತು.

ವಾಗ್ವಾದ, ಗದ್ದಲ ಮುಂದುವರಿದ ಕಾರಣ ವೀಕ್ಷಕರು ಕೆಳಗಿನ ಕೊಠಡಿಗೆ ಬಂದು ಸಭೆ ಮುಂದುವರಿಸಿದರು. ಕೆಪಿಸಿಸಿ ಪದಾಧಿಕಾರಿಗಳಾದ ರಾಮಲಿಂಗೇಗೌಡ, ನಾಗಚೂಡಯ್ಯ, ಯೋಗೀಶ್ವರಿ, ಆಗಾ ಸುಲ್ತಾನ್, ರಾಜಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.