ಒಳಚರಂಡಿ ಸಂಪರ್ಕ ವಿಳಂಬ: ಸಾರ್ವಜನಿಕರ ಬವಣೆ

7

ಒಳಚರಂಡಿ ಸಂಪರ್ಕ ವಿಳಂಬ: ಸಾರ್ವಜನಿಕರ ಬವಣೆ

Published:
Updated:

ಮಾಲೂರು: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಸಂಪರ್ಕ ಕಲ್ಪಿಸದ ಕಾರಣ ಕೊಳಚೆ ನೀರು ತುಂಬಿ ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪಟ್ಟಣದಲ್ಲಿ 2009ರಲ್ಲಿ ₹ 22.05 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಯಿತು. ಪೈಪ್‌ಲೈನ್ ಅಳವಡಿಕೆಗಾಗಿ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿನ ರಸ್ತೆಗಳನ್ನು ಅಗೆದು ಕಾಮಗಾರಿ ಆರಂಭಿಸಲಾಯಿತು.

ಕಾಮಗಾರಿ ಕ್ರಮೇಣ ಆಮೆ ಗತಿಯಲ್ಲಿ ಸಾಗಲಾರಂಭಿಸಿತು. ಮ್ಯಾನ್‌ಹೋಲ್‌ ನಿರ್ಮಾಣ ಸೇರಿದಂತೆ ಪೈಪ್‌ಲೈನ್‌ ಕಾಮಗಾರಿ 4 ವರ್ಷದ ಅವಧಿಯಲ್ಲಿ ಪೂರ್ಣಗೊಂಡಿತು. ನಂತರ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಜಮೀನು ನೀಡಲು ಪುರಸಭೆ ತಡ ಮಾಡಿತು. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಯಿತು. ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿದ್ದರಿಂದ ಹಳ್ಳ–ಕೊಳ್ಳ ಉಂಟಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ನರಕ ಯಾತನೆ ಅನುಭವಿಸಿದರು.

ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಪುರಸಭೆಯು 2 ವರ್ಷಗಳ ಹಿಂದೆ ಪಟ್ಟಣದ ದೊಡ್ಡ ಕೆರೆ ಸಮೀಪ ಖಾಸಗಿಯವರಿಂದ ಎರಡು ಎಕರೆ ಜಮೀನು ಖರೀದಿಸಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರಿಸಿತು. 4 ದಶಲಕ್ಷ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪೂರ್ಣಗೊಂಡು 15 ತಿಂಗಳು ಕಳೆದಿದೆ. ಆದರೆ ಮನೆಗಳಿಂದ ಕೊಳಚೆ ನೀರು ಹರಿದು ಹೋಗಲು ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿಲ್ಲ.

ಅಕ್ರಮ ಸಂಪರ್ಕ: ಪಟ್ಟಣದ ಕೆಲ ಬಡಾವಣೆಗಳಲ್ಲಿ ಸಾರ್ವಜನಿಕರೇ ಒಳಚರಂಡಿಯ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಆದರೆ, ಈ ಸಂಪರ್ಕವು ಕ್ರಮಬದ್ಧವಾಗಿ ಇರದ ಕಾರಣ ಕೊಳಚೆ ನೀರು, ಮಲಮೂತ್ರವು ಮನೆಗಳ ಮತ್ತು ಪೈಪ್‌ಲೈನ್‌ ನಡುವಿನ ಚೇಂಬರ್‌ಗಳಲ್ಲಿ ಕಟ್ಟಿಕೊಂಡು ರಸ್ತೆಗೆ ಹರಿಯುತ್ತಿದೆ. ಇದರಿಂದ ಬಡಾವಣೆಗಳು ಕೊಳೆಗೇರಿಯಂತಾಗಿದ್ದು, ಸ್ಥಳೀಯರ ಬವಣೆ ಹೇಳತೀರದು.

ಮತ್ತೊಂದೆಡೆ ದೊಡ್ಡಕೆರೆ ಮೂಲಕ ಹಾದು ಹೋಗಿರುವ ಒಳಚರಂಡಿ ಪೈಪ್‌ಲೈನ್‌ ಮಾರ್ಗದಲ್ಲಿನ ಪೈಪ್‌ಗಳು ಹಾಳಾಗಿ ಕೊಳಚೆ ನೀರು ಮ್ಯಾನ್‌ಹೋಲ್‌ಗಳಿಂದ ಕೆರೆಗೆ ಹರಿಯುತ್ತಿದೆ. ಇದರಿಂದ ಕೆರೆ ನೀರು ಮಲಿನವಾಗುತ್ತಿದೆ. ಕೊಳಚೆ ನೀರಿನಿಂದ ಸೊಳ್ಳೆ ಮತ್ತು ನೊಣದ ಕಾಟ ಹೆಚ್ಚಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry