ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಿ

7

ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಿ

Published:
Updated:

ಕೋಲಾರ: ‘ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಮೂಡಿಸಬೇಕು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಸಲಹೆ ನೀಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಅರಿವು ಮೂಡಿಸಿದರೆ ಅದರಿಂದ ಮತ್ತಷ್ಟು ಮಂದಿಗೆ ಸಂದೇಶ ಹೋಗುತ್ತದೆ. ಇದರಿಂದ ಪರಿಸರ ರಕ್ಷಣೆಗೆ ಸಹಾಯವಾಗುತ್ತದೆ ಎಂದರು.

ಪರಿಸರ ನಾಶದಿಂದ ಮನುಷ್ಯನ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಗೆ ಮುಂದಾಗಬೇಕು. ಮಂಡಳಿಯಿಂದ ಶಾಲಾ ಆವರಣದಲ್ಲಿ ಕೈತೋಟ ನಿರ್ಮಾಣದಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಜ್ಞಾನ ಮತ್ತು ರಕ್ಷಣೆಯ ಅರಿವು ಮೂಡಿಸಲು ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದರಿಂದ ಅಲ್ಲಿನ ಶಾಲಾ ಕಾಲೇಜುಗಳಿಗೆ ವಾರಗಟ್ಟಲೇ ರಜೆ ಘೋಷಿಸಲಾಗಿತ್ತು. ಇಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಎದುರಾಗಬಹುದು. ಆದ ಕಾರಣ ಮಂಡಳಿಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ದಿನದ 24 ತಾಸೂ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಆಯ್ಧ ಸ್ಥಳಗಳಲ್ಲಿ ಜಾರಿಗೊಳಿಸಲಾಗುವುದು. ಆಯಾ ದಿನದ ಮಾಹಿತಿಯನ್ನು ಅಂತರ್ಜಾಲದಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.

ನೀರಿನ ಸಮಸ್ಯೆ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ನೀಲಗಿರಿ ಬೆಳೆ ಮುಖ್ಯ ಕಾರಣವೆಂದು ತಜ್ಞರು ಹೇಳಿರುವುದರಿಂದ ಸರ್ಕಾರ ನೀಲಗಿರಿ ಬೆಳೆ ನಿಷೇಧಕ್ಕೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಈಗಾಗಲೇ ಬೆಳೆದಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಉಪಯುಕ್ತ ಗಿಡಗಳನ್ನು ಬೆಳೆಸಬೇಕು ಎಂದು ಸಲಹೆ

ನೀಡಿದರು.

ಉತ್ತಮ ನಿದರ್ಶನ: ‘ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಮಕ್ಕಳು ಶಾಲಾ ಆವರಣದಲ್ಲಿ ಕೈತೋಟ ಮಾಡಿರುವುದೇ ಉತ್ತಮ ನಿದರ್ಶನ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನೀರಿಗೆ ಅಭಾವವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶಾಲಾ ಮಕ್ಕಳು ಕೈ ತೊಳೆಯಲು ಹಾಗೂ ಶಾಲೆಗಳಲ್ಲಿ ಅಡುಗೆ ಕಾರ್ಯಕ್ಕೆ ಬಳಸಿದ ನೀರನ್ನು ಉಪಯೋಗಿಸಿ ಕೈತೋಟ ನಿರ್ಮಿಸಿದ್ದಾರೆ. ಈ ಸಾಧನೆಯ ಹಿಂದೆ ಶಿಕ್ಷಕರ ಶ್ರಮವಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಶಾಲೆಗಳ ಪೈಕಿ ಸರ್ಕಾರಿ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಪರಿಸರ ನಾಶ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಹಿಂದೆ ಆರೋಗ್ಯಕರ ವಸ್ತುಗಳನ್ನು ಬಳಸಲಾಗುತ್ತಿತ್ತು. ಕಾಲ ಬದಲಾದಂತೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಲಾಯಿತು. ಪ್ಲಾಸ್ಟಿಕ್‌ನಿಂದ ತೊಂದರೆಯಾದ ಕಾರಣ ಆ ಉತ್ಪನ್ನಗಳ ಬಳಕೆ ನಿರ್ಬಂಧಿಸಲಾಗಿದೆ. ಆದರೂ ಕದ್ದುಮುಚ್ಚಿ ಪ್ಲಾಸ್ಟಿಕ್‌ ಬಳಸುತ್ತಿರುವುದು ವಿಷಾದಕರ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಾಡೇನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಪರಿಸರಾಧಿಕಾರಿ ಸಿ.ಆರ್.ಮಂಜುನಾಥ್, ಹಿರಿಯ ಪರಿಸರಾಧಿಕಾರಿ ಎಂ.ಲಕ್ಷ್ಮಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಮಂಜುಳಾ ಭೀಮರಾವ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry