ಮಂಗಳವಾರ, ಡಿಸೆಂಬರ್ 10, 2019
20 °C

ವಿಶ್ವವಿದ್ಯಾಲಯಗಳಿಂದ ಗುಲಾಮಗಿರಿ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವವಿದ್ಯಾಲಯಗಳಿಂದ ಗುಲಾಮಗಿರಿ ಸೃಷ್ಟಿ

ಕೋಲಾರ: ‘ದೇಶದ ವಿಶ್ವವಿದ್ಯಾಲಯಗಳು ಗುಲಾಮಗಿರಿ ಸೃಷ್ಟಿಸುತ್ತಿದ್ದು, ಕುಬೇರರ ಪಾದದ ಕೆಳಗೆ ತೆವಳುವ ಯುವ ಸಮುದಾಯ ರೂಪಿಸುತ್ತಿವೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತವು ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿಯಲ್ಲಿ ಮಾತನಾಡಿದರು.

ದೇಶವನ್ನು ಅಂಬಾನಿಗೆ ಅಡ ಇಡಲಾಗಿದೆ. ಸರ್ಕಾರಿ ವಿ.ವಿಗಳು ಈ ನೆಲಕ್ಕೆ ಬೇಕಾದ ಯುವ ಪೀಳಿಗೆಯನ್ನು ಸೃಷ್ಟಿಸುತ್ತಿಲ್ಲ ಎಂದು ವಿಷಾದಿಸಿದರು.

ಮುಂದಿನ 25 ವರ್ಷಗಳಿಗೆ ಸವಾಲಾಗಬಲ್ಲ ಜ್ಞಾನ ಶಿಸ್ತಿನ ಜತೆಗೆ ನಿಲ್ಲುವ ವಿ.ವಿ ಕಟ್ಟಬೇಕು. ಜತೆಗೆ ಜನತಾ ವಿ.ವಿಗಳನ್ನು ಸ್ಥಾಪಿಸಬೇಕು. ಗುಣಮಟ್ಟದ ಶಿಕ್ಷಣವೆಂದರೆ ಯುವಕ ಯುವತಿಯರು ಜವಾಬ್ದಾರಿಯುತವಾಗಿ ಬೆಳೆಯುವುದು. ಕಾರ್ಪೊರೇಟ್‌ ಉದ್ದೇಶಕ್ಕೆ ಶಿಕ್ಷಣ ಪಡೆಯುವುದಲ್ಲ. ಕ್ರಿಯೆ, ಮಾತು, ನಡೆ ಸರಿ ಇದ್ದರೆ ಸಮಾಜದ ಬದಲಾವಣೆ ಸಾಧ್ಯ ಎಂದು ಸಲಹೆ ನೀಡಿದರು.

ಇಂದು ಜಯಂತಿ ಹೆಸರಿನಲ್ಲಿ ನಡೆಯುವ ಭಜನೆ ಮಂಡಳಿಗಳ, ಸಂಸ್ಥೆಗಳ ಚಟುವಟಿಕೆಗಳನ್ನು ನೋಡಿದರೆ ಭಯವಾಗುತ್ತದೆ. ಸಮುದಾಯಗಳು ಸೇರಿ ಜಯಂತಿ ಆಚರಿಸಬೇಕು. 12ನೇ ಶತಮಾನದಲ್ಲಿ ಎಲ್ಲರನ್ನು ಒಳಗೊಳ್ಳುವ ಪ್ರಕ್ರಿಯೆ ಇತ್ತು. ಆದರೆ, ಈಗ ಆ ಪ್ರಕ್ರಿಯೆ ಕಾಣದೆ ಕರಗಿ ಹೋಗಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟಕ್ಕೆ ತಳಪಾಯ: ‘12ನೇ ಶತಮಾನದ ವಚನಕಾರರು ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು. ಆ ಶತಮಾನವು ಆಧುನಿಕ ಹೋರಾಟಕ್ಕೆ ತಳಪಾಯ. ಸಾರ್ವಕಾಲಿಕವಾದ ವಚನಗಳು ಎಲ್ಲರಿಗೂ ದಾರಿದೀಪ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

12ನೇ ಶತಮಾನದಲ್ಲಿ ಜನ ಊಹಿಸಲಾಗದಷ್ಟು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದರು. ಶೋಷಣೆಗೆ ಒಳಗಾದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕೆಂಬ ಪ್ರಯತ್ನದಲ್ಲಿದ್ದ ಬಸವಣ್ಣನವರ ಜತೆಗೂಡಿದ ದಲಿತ ವಚನಕಾರರು ವಚನಗಳನ್ನು ರಚಿಸಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು. ಅವರ ವಚನಗಳಿಂದಾಗಿ ಶೋಷಿತರು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ನೂರಾರು ವಚನಕಾರರಿದ್ದರೂ ಜನರಿಗೆ ಕೆಲವೇ ಮಂದಿಯ ಬಗ್ಗೆ ಮಾಹಿತಿ ಇದೆ. ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ, ಡೋಹಾರ ಕಕ್ಕಯ್ಯ ದಲಿತ ವಚನಕಾರರ ಬದುಕು ಸಾಧನೆ, ಶ್ರದ್ಧೆ, ನಿಷ್ಠೆ, ಭಕ್ತಿ, ನಡೆ ನುಡಿಯು ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತ. ಈ ವಚನಕಾರರು ಜಡ್ಡುಗಟ್ಟಿದ ಸಮಾಜಕ್ಕೆ ಶಸ್ತ್ರಚಿಕಿತ್ಸೆ ಮಾಡಿದರು ಎಂದು ಹೇಳಿದರು.

ಶೋಷಿತರ ಧ್ವನಿಯಾದರು: ‘ಸಮಾಜದಲ್ಲಿನ ದೋಷಗಳ ವಿರುದ್ಧ ದುರ್ಬಲರ ಸಾಂಕೇತಿಕ ಪ್ರತಿಭಟನೆ ಆರಂಭಗೊಂಡ ಕಾಲಘಟ್ಟ 12ನೇ ಶತಮಾನ. ಅಂದಿನ ಅವ್ಯವಸ್ಥೆ, ಶೋಷಣೆ ವಿರುದ್ಧದ ಸಿಟ್ಟು ಸಾಹಿತ್ಯದ ರೂಪದಲ್ಲಿ ಹೊರ ಬಂದಿತು. ಲಿಂಗಾಯಿತ ಚಳವಳಿ ಇದ್ದರೂ ಬಸವಣ್ಣನವರು ಜಾತಿ ಸಂಕೋಲೆಯಿಂದ ಹೊರ ಬಂದು ಶೋಷಿತರ ಧ್ವನಿಯಾದರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸ್ಮರಿಸಿದರು.

ಮಹನೀಯರ ಜಯಂತಿಯಂತಹ ಕಾರ್ಯಕ್ರಮಗಳು ಯುವಕ ಯುವತಿಯರನ್ನು ತಲುಪಿದರೆ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ

ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡೊಮಿನಿಕ್, ಕುಲಸಚಿವ ಪ್ರೊ.ಸುಂದರ್‌ರಾಜ ಅರಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಡಿವೈಎಸ್ಪಿ ಅಬ್ದುಲ್‌ ಸತ್ತಾರ್, ಶ್ರೀನಿವಾಸಪುರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಗೋಪಾಲನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್

ಪ್ರತಿಕ್ರಿಯಿಸಿ (+)