ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಆಗ್ರಹ

7

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಆಗ್ರಹ

Published:
Updated:

ವಿಜಯಪುರ: ತೀವ್ರ ನೀರಿನ ಬವಣೆ ಎದುರಿಸುತ್ತಿರುವ ಬಯಲುಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ನೀರು ಹರಿಸುವುದಾಗಿ ಜನಪ್ರತಿನಿಧಿಗಳ ಭರವಸೆ ಹಾಗೆಯೇ ಉಳಿದಿದೆ ಎಂದು ರೈತ ಮುಖಂಡ ಭಕ್ತರಹಳ್ಳಿ ಭೈರೇಗೌಡ ಬೇಸರ ವ್ಯಕ್ತಪಡಿಸಿದರು.

ಎತ್ತಿನಹೊಳೆ, ಕೆಸಿ ವ್ಯಾಲಿ, ಎಚ್‌.ಎನ್‌.ವ್ಯಾಲಿ ಯೋಜನೆ ಇದುವರೆಗೂ ಅನುಷ್ಠಾನಗೊಂಡಿಲ್ಲ. ಸಂಸದ ಎಂ.ವೀರಪ್ಪ ಮೊಯಿಲಿ ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಆರೇಳು ವರ್ಷಗಳಿಂದಲೂ ಹೇಳುತ್ತಲೇ ಇದ್ದಾರೆ. ‌ ಬೆಂಗಳೂರಿನ ತ್ಯಾಜ್ಯ ನೀರನ್ನು 2 ಹಂತಗಳಲ್ಲಿ ಶುದ್ಧೀಕರಿಸಿ, ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಈ ಭಾಗದ ಜನರಿಂದ ವಿರೋಧ ವ್ಯಕ್ತವಾಗಿದೆ.

ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಗೆ ಕಾವೇರಿ ನೀರಿನ ಪಾಲಿದ್ದು, ಇದನ್ನು ಕಾರ್ಯಗತಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಈಗಾಗಲೇ ₹13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಸರ್ಕಾರ ₹900 ಕೋಟಿ ವೆಚ್ಚದಲ್ಲಿ ಹೆಬ್ಬಾಳ-ನಾಗವಾರ ಕೆರೆಗಳ ತ್ಯಾಜ್ಯ ನೀರಿನ ಸಂಸ್ಕರಣೆ ಯೋಜನೆ ಜಾರಿಗೊಳಿಸಿದೆ. ಬೆಂಗಳೂರಿನ ಯಲಂಹಕದವರೆಗೂ ಹರಿಯಲಿರುವ ಕಾವೇರಿಯನ್ನು 20ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಭಾಗಕ್ಕೂ ಪೈಪ್‌ ಲೈನ್‌ ಅಳವಡಿಸಿ ನೀರು ಹರಿಸಬೇಕು ಎಂದು ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ಅವರ ಒತ್ತಾಯ.

ಪ್ರತಿ ಚುನಾವಣೆಯಲ್ಲೂ ನೀರಿನ ರಾಜಕೀಯ ಮುಂದಿಟ್ಟುಕೊಂಡು ಮತ ಕೇಳಲಾಗುತ್ತಿದೆ. ಇದು ಕೆಲವರಿಗೆ ಅನುಕೂಲವಾಗಿಯೂ ಪರಿಣಮಿಸಿದೆ. ಈಗ ಎತ್ತಿನಹೊಳೆ ಯೋಜನೆ ಹಳೆಯದು. ಎಚ್‌.ಎನ್‌ ವ್ಯಾಲಿಗೆ ವಿರೋಧವಿದೆ. ರಾಜಕೀಯ ಪಕ್ಷಗಳ ನಾಯಕರು ಚುನಾವಣೆಯಲ್ಲಿ ಮತ ವಿಭಜನೆಗೆ ಇನ್ನಾವ ಯೋಜನೆ ಮುಂದಿಟ್ಟುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ ಎನ್ನುತ್ತಾರೆ ಈ ಭಾಗದ ವಿವಿಧ ಸಂಘಟನೆಗಳ ಮುಖಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry