‘ಉತ್ಸವ’ದ ಉತ್ಸಾಹಕ್ಕೆ ವಯಸ್ಸಿನ ಹಂಗಿಲ್ಲ

7

‘ಉತ್ಸವ’ದ ಉತ್ಸಾಹಕ್ಕೆ ವಯಸ್ಸಿನ ಹಂಗಿಲ್ಲ

Published:
Updated:
‘ಉತ್ಸವ’ದ ಉತ್ಸಾಹಕ್ಕೆ ವಯಸ್ಸಿನ ಹಂಗಿಲ್ಲ

ಹಾವೇರಿ: ‘ಉತ್ಸಾಹ ಹಾಗೂ ಸೌಂದರ್ಯಕ್ಕೆ ವಯಸ್ಸಿನ ಹಂಗಿಲ್ಲ’ ಎಂಬ ಮಾತನ್ನು ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಜಿಲ್ಲಾ– ಜಾನಪದ ಉತ್ಸವ’ವು ಸಾಬೀತು ಪಡಿಸಿತು. ಉತ್ಸವದ ಅಂಗವಾಗಿ ಶುಕ್ರವಾರ ನಡೆದ ‘ಶತಾಯುಷಿಗಳ ಕ್ರೀಡಾಕೂಟ’ದಲ್ಲಿ ಆರು ಶತಾಯುಷಿಗಳು ಯುವಜನರೇ ನಾಚುವಂತೆ ಉತ್ಸಾಹದಿಂದ ಸ್ಪರ್ಧಿಸಿದರು.

ನಾಲ್ವರು ಅಜ್ಜಿಯರು ಹಾಗೂ ಇಬ್ಬರು ಅಜ್ಜಂದಿರು ಪಾಲ್ಗೊಂಡು ಕ್ರಿಕೆಟ್‌ ಬಾಲ್‌ ಎಸೆಯುವುದು ಹಾಗೂ ರಿಂಗ್ ಎಸೆಯುವ ಸ್ಪರ್ಧೆಯಲ್ಲಿ ಪೈಪೋಟಿ ನೀಡಿದರು.

ಹಾವೇರಿ ತಾಲ್ಲೂಕು ಯತ್ತಿನಹಳ್ಳಿ ಗ್ರಾಮದ ಯಲ್ಲಪ್ಪ ಮಾದರ (014), ದೇವಿಹೊಸೂರ ಗ್ರಾಮದ ನಾಗಮ್ಮ ಸಾಲಿಮಠ (110), ಕನ್ನಮ್ಮ ಉಪ್ಪಣಸಿ (100), ನಜೀಕಲಕಮಾಪುರ ಗ್ರಾಮದ ಉಡಚಪ್ಪ ಕಾಸಂಬಿ (104), ವಿದ್ಯಾನಗರದ ನಿವಾಸಿಗಳಾದ ಚನ್ನಮ್ಮ ಮಡಿವಾಳರ (105) ಮತ್ತು ಮೃತ್ಯುಂಜಯ ಸ್ವಾಮಿ ಹಿರೇಮಠ (99) ಪಾಲ್ಗೊಂಡರು.

ಉದ್ಘಾಟನೆ: ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಶತಾಯಿಷಿಗಳು ಬದುಕ್ಕಿದ್ದನ್ನು ನೋಡುವುದೇ ಸೌಭಾಗ್ಯ. ಅದರಲ್ಲೂ ಅವರು ಕ್ರೀಡಾಕೂಟಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ ಎಂದರು.

ತಮ್ಮ ಜಮೀನಲ್ಲಿಯೇ ಬೆಳೆದ ಪೌಷ್ಟಿಕ ಆಹಾರವನ್ನು ಸೇವಿಸಿ ಶತಾಯುಷಿಗಳಾಗಿದ್ದಾರೆ. ಆದರೆ, ಇಂದು ನಾವು ಸೇವಿಸುವ ಆಹಾರವು ವಿಷಯುಕ್ತವಾಗಿದ್ದು, ಆಯಸ್ಸು 60ಕ್ಕೇ ಸಾಕೆನಿಸುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮಾತನಾಡಿ, ‘ಮೊಟ್ಟ ಮೊದಲ ಬಾರಿಗೆ ಶತಾಯಿಷಿಗಳ ಕ್ರೀಡಾಕೂಟವನ್ನು ಆಯೋಜಿಸಿದ್ದು ವಿಶೇಷವಾಗಿದೆ’ ಎಂದರು. ಯಾವುದೇ ವ್ಯಕ್ತಿಯು ತನಗೆ ದೊರೆತ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಸಂಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಶತಾಯುಷಿಗಳಿಗೆ ಪ್ರಶಸ್ತಿ ಪತ್ರ, ಪದಕ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ವಾಸಣ್ಣ ಹಾಗೂ ನಗರಸಭೆ ಸದಸ್ಯೆ ರತ್ನಾ ಭೀಮಕ್ಕನವರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್‌.ಬಿ.ಅಣ್ಣಿಗೇರಿ ಹಾಗೂ ಕಾರ್ಯದರ್ಶಿ ಮೊಹಮ್ಮದ್‌ ಇದ್ದರು.

* * 

ಬದುಕಿನಲ್ಲಿ ಎಷ್ಟೇ ಆಸ್ತಿ ಮಾಡಿದರೂ ಪ್ರಯೋಜನವಿಲ್ಲ, ಸಾಧನೆ ಮಾಡಿದರೆ ಮಾತ್ರ ಬದುಕಿಗೆ ಅರ್ಥ ಬರುತ್ತದೆ

ಡಾ.ವೆಂಕಟೇಶ್ ಎಂ.ವಿ.

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry