ಜೈನ ಸಮಾಜಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ: ಸಿಎಂ ಸಿದ್ದರಾಮಯ್ಯ

7

ಜೈನ ಸಮಾಜಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ: ಸಿಎಂ ಸಿದ್ದರಾಮಯ್ಯ

Published:
Updated:
ಜೈನ ಸಮಾಜಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ: ಸಿಎಂ ಸಿದ್ದರಾಮಯ್ಯ

ಅಥಣಿ: ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಜೈನ ಸಮುದಾಯದವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದರೆ ಅದು ನಮ್ಮ ಸರ್ಕಾರ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ನೋಡಲು, ಮಾತನಾಡಲು ಹಾಗೂ ಕೇಳಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಲ್ಲ. ದೇಶ ಹಾಗೂ ಕರ್ನಾಟಕದ ಪ್ರಗತಿ ಬಗ್ಗೆ ಮಾತನಾಡ್ತಿಲ್ಲ. ಅತ್ಯಂತ ಬೇಜವಾಬ್ದಾರಿಯಿಂದ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪ್ರಧಾನಿಯಾಗಲು ನಾಲಾಯಕ್ ಅವರು. ದಾಖಲೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಐಟಿ, ಸಿಬಿಐ ಇದೆ‌. ದಾಖಲಾತಿ ಇದ್ರೆ ತೋರಿಸಿ ಮೋದಿಯವರೆ. ಭ್ರಷ್ಟಾಚಾರ ಇಲ್ಲದ ಸರ್ಕಾರ ಇದ್ದರೆ ನಮ್ಮ ಸರ್ಕಾರ. ನೀರವ ಮೋದಿ ಎನ್ನುವುದು ಶುರುವಾಗಿದೆ. ₹11ಸಾವಿರ ಕೋಟಿ ಲೂಟಿ ಮಾಡಲು ಮೋದಿ ಕುಮ್ಮಕ್ಕು ಇಲ್ಲದೇನೆ ನಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಅದ್ಭುತವಾದ ಫೆಸಿಲಿಟೇಟರ್ ಆಗಿದ್ದಾರೆ ಮೋದಿ ಎಂದು ಸಿಎಂ ಆಪಾದಿಸಿದರು.

ಜೈಲಿಗೆ ಹೋದ ಯಡಿಯೂರಪ್ಪ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾ ಇದ್ದಾರೆ. ಅವರಿಗೆ ನಾಚಿಕೆ ಆಗುವುದಿಲ್ಲವೇ? ಮತ ಕೇಳೋಕೆ ಬಂದಿದ್ದಾರೆ. ಅಮಿತ್ ಶಾ ಕೂಡ ಜೈಲಿಗೆ ಹೋಗಿದ್ದರು. ಅವರನ್ನು ಮುಂದಿಟ್ಟುಕೊಂಡು ಮತ ಕೇಳ್ತಾ ಇದ್ದೀರಲ್ಲ. ನಾಚಿಕೆ ಆಗುವುದಿಲ್ಲವೇ. ಲಲಿತ್ ಮೋದಿ, ವಿಜಯ ಮಲ್ಯ, ನೀರವ್ ಮೋದಿ ಹಣ ಲೂಟಿ ಮಾಡಿ ಓಡಿ ಹೋಗಲು ನೀವು ಸಹಾಯ ಮಾಡಿಲ್ಲವೇ? ಎಂದು ಸಿಎಂ ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ಒಳ್ಳೆಯ ದಿನಗಳು ಬಂದಿವೆಯೇ? ₹15 ಲಕ್ಷ ಕೊಡ್ತೀವಿ ಅಂದಿದ್ರು. 15 ರೂಪಾಯಿಯನ್ನಾದರೂ ಕೊಟ್ರಾ? ರೈತರ ಸಾಲದ ಬಗ್ಗೆ ಮಾತನಾಡಲ್ಲ. ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ನರೇಂದ್ರ ಮೋದಿ ಬಂದ ಮೇಲೆ ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ. ಕೇಂದ್ರ 90 ಪರ್ಸೆಂಟ್‌ ಕಮಿಷನ್ ಸರ್ಕಾರ ಎಂದು ಸಿದ್ದರಾಮಯ್ಯ ದೂರಿದರು.

ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ನೂರಾರು ಬಾರಿ ಬಂದರೂ ಮೋದಿ ಮಾತಿಗೆ ಮರುಳಾಗುವುದಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇಲ್ಲಿನ ಶಾಸಕ ಸಚಿವ ಸ್ಥಾನ ಕಳೆದುಕೊಂಡಿದ್ದು ಏಕೆ ಎನ್ನುವುದು ನಿಮಗೆ ಗೊತ್ತಿದೆಯಲ್ಲಾ? ಅವರಿಗೆ ಮತ್ತೆ ಮತ ಹಾಕುತ್ತೀರಾ? ಎಂದು ಕೇಳಿದರು.

ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಜೈನ ಸಮುದಾಯದವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದರೆ ಅದು ನಮ್ಮ ಸರ್ಕಾರ ಮಾತ್ರ ಎಂದು ಸರ್ಕಾರದ ಕೊಡುಗೆಯನ್ನು ಪ್ರಸ್ತಾಪಿಸಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ಡೋಂಗಿತನ. ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ನೆಮ್ಮದಿಯಾಗಿ ಇರುವುದಕ್ಕೆ ಆಗುವುದಿಲ್ಲ. ಜಾತಿ, ಧರ್ಮದವರ ನಡುವೆ ಬೆಂಕಿ ಹಚ್ಚುವವರನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಹೇಳಿದರು.

ಬೆಳಗಾವಿಯನ್ನು ಕಾಂಗ್ರೆಸ್ ಭದ್ರಕೋಟೆ ಮಾಡಬೇಕು. 18ರಲ್ಲಿ 15 ಸ್ಥಾನ ಗೆಲ್ಲಲು ಶ್ರಮಿಸಬೇಕು‌. ಅಥಣಿಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಕಾಗವಾಡದ ಉತ್ತರ ಭಾಗದ ಕೆರೆಗಳನ್ನು ತುಂಬಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ನಾಂದಿ ಹಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry