ಕಳ್ಳರ ಹಿಡಿಯಲು ಬಟ್ಟೆ ವ್ಯಾಪಾರಿಗಳಾದ ಪೊಲೀಸರು!

7
ಓಜಿಕುಪ್ಪ‍ಂ ಗ್ಯಾಂಗ್‌ ಸದಸ್ಯರ ಬಂಧನ * ಮಡಿವಾಳ ಪೊಲೀಸರ ಕಾರ್ಯಾಚರಣೆ * ಕ್ಯಾಟರ್ ಬಿಲ್‌ನಿಂದ ಗಾಜು ಒಡೆಯುವ ಆರೋಪಿಗಳು

ಕಳ್ಳರ ಹಿಡಿಯಲು ಬಟ್ಟೆ ವ್ಯಾಪಾರಿಗಳಾದ ಪೊಲೀಸರು!

Published:
Updated:
ಕಳ್ಳರ ಹಿಡಿಯಲು ಬಟ್ಟೆ ವ್ಯಾಪಾರಿಗಳಾದ ಪೊಲೀಸರು!

ಬೆಂಗಳೂರು: ಕ್ಯಾಟರ್‌ ಬಿಲ್‌ನಿಂದ ಕಾರಿನ ಗಾಜು ಒಡೆದು ₹ 39 ಲಕ್ಷ ದೋಚಿದ್ದ ಆಂಧ್ರಪ್ರದೇಶದ ಓಜಿಕುಪ್ಪಂ ಗ್ಯಾಂಗ್‌ ಸದಸ್ಯರಿಬ್ಬರನ್ನು ಮಡಿವಾಳ ಪೊಲೀಸರು ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುವವರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

‘ಓಜಿಕುಪ್ಪಂನ ಶ್ರೀನಿವಾಸಲು ಅಲಿಯಾಸ್ ಡಬ್ಬ ಸೀನಾ ಹಾಗೂ ಪಶುಪಲೇತಿ ಬಾಬು ಎಂಬುವರನ್ನು ಬಂಧಿಸಿ, ₹ 18 ಲಕ್ಷ ಜಪ್ತಿ ಮಾಡಿದ್ದೇವೆ. ಅಂಕಯ್ಯ, ವೆಂಕಟೇಶ್, ಸುಬ್ರಹ್ಮಣ್ಯ ಹಾಗೂ ರಾಮ ಎಂಬುವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಡಿ.13ರಂದು ಗುಂಟೂರಿನ ಶಿವಶಂಕರ್‌ ಎಂಬುವರ ಕಾರಿನ ಗಾಜು ಒಡೆದು ಹಣ ದೋಚಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಜಮೀನನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದ ಶಿವಶಂಕರ್, ಡಿ.13ರಂದು ಬೇಗೂರು ಉಪನೋಂದಣಿ ಕಚೇರಿಗೆ ತೆರಳಿ ನೋಂದಣಿ ಮಾಡಿಸಿಕೊಟ್ಟಿದ್ದರು. ಈ ವೇಳೆ ಅಲ್ಲೇ ಇದ್ದ ಆರೋಪಿಗಳು, ಶಿವಶಂಕರ್ ಜಮೀನಿನ ಹಣ ಪಡೆದು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದನ್ನು ನೋಡಿದ್ದರು.

ಅಲ್ಲಿಂದ ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಹೊರಟ ಶಿವಶಂಕರ್, ಮಡಿವಾಳದ ವೆಂಕಟೇಶ್ವರ ಲೇಔಟ್‌ನಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದರು. ಮೂರು ಬೈಕ್‌ಗಳಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಮನೆಯಿಂದ ನೂರು ಮೀಟರ್ ದೂರದಲ್ಲಿರುವ ‘ಸಾಯಿ ಪೇಯಿಂಗ್ ಗೆಸ್ಟ್‌’ ಕಟ್ಟಡದ ಬಳಿ ಬೈಕ್‌ಗಳನ್ನು ನಿಲ್ಲಿಸಿದ್ದರು.

ಶಿವಶಂಕರ್ ಒಳಗೆ ಹೋಗುತ್ತಿದ್ದಂತೆಯೇ ವಾಹನದ ಹತ್ತಿರ ಹೋಗಿ, ಕ್ಯಾಟರ್‌ ಬಿಲ್‌ನಿಂದ ಕಾರಿನ ಗಾಜಿಗೆ ಕಲ್ಲುಗಳನ್ನು ಹೊಡೆದಿದ್ದರು. ಈ ಸಂದರ್ಭದಲ್ಲಿ ಅಲಾರಂ ಆಗಿ ಶಿವಶಂಕರ್ ಹಾಗೂ ಆತನ ಸ್ನೇಹಿತ ಹೊರಗೆ ಓಡಿ ಬಂದಿದ್ದರು. ಅಷ್ಟರಲ್ಲಾಗಲೇ ಆರೋಪಿಗಳು ಗಾಜನ್ನು ಪುಡಿ ಪುಡಿ ಮಾಡಿ, ಹಣದ ಬ್ಯಾಗ್ ಸಮೇತ ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದರು. ನಂತರ ಅವರು ಠಾಣೆ ಮೆಟ್ಟಿಲೇರಿದ್ದರು.

ಅಪಾರ್ಟ್‌ಮೆಂಟ್ ವಾಸ: ಎಂಟು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಈ ಗ್ಯಾಂಗ್, ಎಲೆಕ್ಟ್ರಾನಿಕ್‌ಸಿಟಿಯ ಬಸಾಪುರದ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಉಳಿದುಕೊಂಡಿದ್ದರು. ತಾವು ‘ನಮ್ಮ ಮೆಟ್ರೊ’ದ ಉದ್ಯೋಗಿಗಳೆಂದು ಅಪಾರ್ಟ್‌ಮೆಂಟ್ ಮಾಲೀಕ ವಿನೋದ್ ಬಳಿ ಹೇಳಿಕೊಂಡಿದ್ದರು. ಡಿ.13ರಂದು ಹಣ ದೋಚಿದ ಬಳಿಕ ಫ್ಲ್ಯಾಟ್‌ಗೂ ಹೋಗದೆ, ಸೀದಾ ಓಜಿಕುಪ್ಪಂ ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಗಳ ಪತ್ತೆಗೆ ಡಿಸಿಪಿ ಬೋರಲಿಂಗಯ್ಯ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದೆವು. ಆಗ ಪೇಯಿಂಗ್ ಗೆಸ್ಟ್ ಕಟ್ಟಡದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದ್ದವು. ಓಜಿಕುಪ್ಪಂ ಅಥವಾ ತಮಿಳುನಾಡಿನ ರಾಮ್‌ಜೀ ಗ್ಯಾಂಗ್‌ನವರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಯಿತು. ಆ ರಾಜ್ಯಗಳ ಪೊಲೀಸರಿಗೆ ದೃಶ್ಯಗಳನ್ನು ಕಳುಹಿಸಿದಾಗ, ಓಜಿಕುಪ್ಪಂ ಗ್ರಾಮದವರು ಎಂಬುದು ಖಚಿತವಾಯಿತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಓಜಿಕುಪ್ಪಂ ಗ್ರಾಮವು ನಗರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆ ಪೊಲೀಸರನ್ನು ಸಂಪರ್ಕಿಸಿದಾಗ, ಶ್ರೀನಿವಾಸಲು ಮನೆ ತೋರಿಸಿದರು. ಆದರೆ, ಆತ ಇರಲಿಲ್ಲ. ಮೊಬೈಲ್ ಸಂಖ್ಯೆ ಆಧರಿಸಿ ‘ಟವರ್ ಡಂಪ್’ ತನಿಖೆ ನಡೆಸಿದಾಗ, ಬೆಂಗಳೂರಿನಲ್ಲೇ ಇರುವುದು ಗೊತ್ತಾಯಿತು. ಅಲ್ಲದೇ, ಆತ ವಿನೋದ್ (ಅಪಾರ್ಟ್‌ಮೆಂಟ್ ಮಾಲೀಕ) ಎಂಬುವರಿಗೆ ಕರೆ ಮಾಡಿರುವುದು ಗೊತ್ತಾಯಿತು.’

‘ವಿನೋದ್ ಅವರನ್ನು ವಿಚಾರಣೆ ನಡೆಸಿ ಆರೋಪಿಗಳ ಫೋಟೋ ತೋರಿಸಿದಾಗ, ‘ಇವರು ನಮ್ಮ ಅಪಾರ್ಟ್‌ಮೆಂಟ್‌ನಲ್ಲೇ ವಾಸವಿದ್ದರು. 2 ತಿಂಗಳಿನಿಂದ ಕಾಣಿಸುತ್ತಿಲ್ಲ. ಬಾಡಿಗೆ ಕೇಳಲು ಶ್ರೀನಿವಾಸಲುಗೆ (ಆರೋಪಿ) ಕರೆ ಮಾಡಿದ್ದೆ. ವಾರದೊಳಗೆ ಬರುವುದಾಗಿ ಹೇಳಿದ್ದಾನೆ’ ಎಂದು ಹೇಳಿದರು. ಆ ನಂತರ ಬಟ್ಟೆ ವ್ಯಾಪಾರಿಗಳ ವೇಷದಲ್ಲಿ ಕಾರ್ಯಾಚರಣೆ ಶುರು ಮಾಡಿದೆವು.’

‘ಅಪಾರ್ಟ್‌ಮೆಂಟ್ ಎದುರಿನ ಫುಟ್‌ಪಾತ್‌ನಲ್ಲಿ ನಾಲ್ವರು ಬಟ್ಟೆ ವ್ಯಾಪಾರ ಮಾಡುತ್ತಾರೆ. ಅವರಿಗೆ ಮನವಿ ಮಾಡಿ, ನಾವೇ ವ್ಯಾಪಾರ ಮುಂದುವರಿಸಿದೆವು. ನಾಲ್ಕು ದಿನಗಳ ಬಳಿಕ ಶ್ರೀನಿವಾಸಲು ಹಾಗೂ ಬಾಲು ಅಪಾರ್ಟ್‌ಮೆಂಟ್ ಬಳಿ ಬಂದರು. ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಮಾಹಿತಿ ನೀಡಿದರು.

***

ತಿಂಗಳ ಕಾರ್ಯಾಚರಣೆ ವಿವರ

ಕಳ್ಳತನ, ಸುಲಿಗೆ ಸೇರಿದಂತೆ ಒಂದು ತಿಂಗಳಲ್ಲಿ 158 ಪ್ರಕರಣಗಳನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು, 49 ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಕೆ.ಜಿ.ಚಿನ್ನ, 16 ಕಾರು, 103 ಬೈಕ್‌, 5 ಆಟೊ ಸೇರಿದಂತೆ ₹ 3.37 ಕೋಟಿ ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.

**

ಕಟ್ಟಡ ನಿರ್ಮಾಣದ ವೇಳೆಯೇ ಕೀ ಕದಿಯುತ್ತಿದ್ದ!

ನಕಲಿ ಕೀ ಬಳಸಿ ಫ್ಲ್ಯಾಟ್‌ಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಪ್ರಕಾಶ್ ಅಲಿಯಾಸ್ ಬಾಲಾಜಿ ಎಂಬಾತನನ್ನು ಬಂಧಿಸಿರುವ ಬೊಮ್ಮನಹಳ್ಳಿ ಪೊಲೀಸರು, ₹ 60 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿ ನಿವಾಸಿಯಾದ ಪ್ರಕಾಶ್ ವಿರುದ್ಧ ಬೊಮ್ಮನಹಳ್ಳಿ, ಸದ್ದುಗುಂಟೆಪಾಳ್ಯ, ಎಚ್‌ಎಸ್‌ಆರ್ ಲೇಔಟ್, ತಿಲಕ್‌ನಗರ ಹಾಗೂ ಬೊಮ್ಮನಹಳ್ಳಿ ಠಾಣೆಗಳಲ್ಲಿ 22 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಕಟ್ಟಡಗಳಿಗೆ ಹೋಗುತ್ತಿದ್ದ ಈತ, ಬಾಗಿಲುಗಳಲ್ಲೇ ಬಿಟ್ಟಿರುತ್ತಿದ್ದ ಕೀಗಳನ್ನು ಕಳವು ಮಾಡುತ್ತಿದ್ದ. ನಂತರ ಅವುಗಳನ್ನು ನಕಲಿ ಮಾಡಿಸಿಕೊಂಡು, ಅಸಲಿ ಕೀಗಳನ್ನು ಪುನಃ ಅಲ್ಲೇ ತಂದು ಇಡುತ್ತಿದ್ದ.

ಕಟ್ಟಡ ನಿರ್ಮಾಣ ಮುಗಿದ ಬಳಿಕ, ಮಾಲೀಕರು ಫ್ಲ್ಯಾಟ್‌ಗಳನ್ನು ಬಾಡಿಗೆ ಕೊಡುತ್ತಿದ್ದರು. ಬಾಡಿಗೆದಾರರು ಕೆಲಸಕ್ಕೆ ಹೋಗುತ್ತಿದ್ದಂತೆಯೇ ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತಿದ್ದ ಪ್ರಕಾಶ್, ನಕಲಿ ಕೀಗಳ ನೆರವಿನಿಂದ ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಈತನ ಚಹರೆ ಸೆರೆಯಾಗಿತ್ತು. ಹಳೇ ಆರೋಪಿಯಾದ ಕಾರಣ ಸುಲಭವಾಗಿ ಸಿಕ್ಕಿಬಿದ್ದ ಎಂದು ಪೊಲೀಸರು ಹೇಳಿದರು.

**

ಹಗಲಲ್ಲಿ ಟೆಕಿಗಳು, ರಾತ್ರಿ ಕಳ್ಳರು!

12 ಮನೆಗಳಲ್ಲಿ ಕಳ್ಳತನ ಮಾಡಿದ್ದ ಕುಂಬಳಗೋಡಿನ ಪ್ರತಾಪ್ ಹಾಗೂ ಪಶ್ಚಿಮ ಬಂಗಾಳದ ಸೋಹನ್‌ದಾಸ್ ಎಂಬುವರು ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸೂಟು–ಬೂಟು ಧರಿಸಿ ಸಾಫ್ಟ್‌ವೇರ್ ಉದ್ಯೋಗಿಗಳಂತೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ನಂತರ ರಾತ್ರಿ ವೇಳೆ ಆ ಮನೆಗಳ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದರು. ಬಂಧಿತರಿಂದ ₹32 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry