ಕಾಂಗ್ರೆಸ್ ಕುಖ್ಯಾತಿಯ ಭ್ರಷ್ಟ ಸರ್ಕಾರ

7

ಕಾಂಗ್ರೆಸ್ ಕುಖ್ಯಾತಿಯ ಭ್ರಷ್ಟ ಸರ್ಕಾರ

Published:
Updated:
ಕಾಂಗ್ರೆಸ್ ಕುಖ್ಯಾತಿಯ ಭ್ರಷ್ಟ ಸರ್ಕಾರ

ಸುರಪುರ/ಯಾದಗಿರಿ: ‘ರಾಜ್ಯದಲ್ಲಿ ಇರುವುದು ಕುಖ್ಯಾತಿಯ ಭ್ರಷ್ಟ ಸರ್ಕಾರ’ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ಸರ್ಕಾರವನ್ನು ಟೀಕಿಸಿದರು. ಸುರಪುರಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ರಾಜ್ಯಕ್ಕೆ ಏನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ದೇಶದ ನಂ.1 ಭ್ರಷ್ಟ ಸರ್ಕಾರ ಎಂಬ ಕುಖ್ಯಾತಿಗೆ ಪಾತ್ರವಾದ ಸಿದ್ದರಾಮಯ್ಯ ಸರ್ಕಾರ ತಮ್ಮ ಆಡಳಿತದ ಐದು ವರ್ಷದ ಅವಧಿಯ ಲೆಕ್ಕ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 13ನೇ ಹಣಕಾಸು ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ₹88,583 ಕೋಟಿ ಅನುದಾನ ನೀಡಿತ್ತು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ 14ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ ₹ 2,19,506 ಕೋಟಿ ಹಣ ಒದಗಿಸಿದೆ’ ಎಂದು ಮಾಹಿತಿ ನೀಡಿದರು.

‘ಇದಲ್ಲದೆ ರಾಜ್ಯದ ರಸ್ತೆಗಳಿಗಾಗಿ ₹27,400 ಕೋಟಿ, ಮುದ್ರಾ ಯೋಜನೆಗೆ ₹39 ಸಾವಿರ ಕೋಟಿ, ಮೆಟ್ರೊಗೆ ₹2,600 ಕೋಟಿ ಹೆಚ್ಚುವರಿಯಾಗಿ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

‘ಅಭಿವೃದ್ಧಿಗೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ 112 ಯೋಜನೆಗಳಡಿ ₹79 ಸಾವಿರ ಕೋಟಿ ಅನುದಾನ ಒದಗಿಸಿದೆ. ಆದರೆ, ಈ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಖ್ಯಾತಿ ಹೆಚ್ಚುತ್ತದೆ ಎನ್ನುವ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಅನುದಾನ ಬಳಸಿಲ್ಲ’ ಎಂದು ಆರೋಪಿಸಿದರು.

14ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ ₹1.30 ಲಕ್ಷ ಕೋಟಿ ಹೆಚ್ಚುವರಿ ಅನುದಾನ ಒದಗಿಸಿದೆ. ಈ ಹಣವನ್ನು ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಯಾವ ಯೋಜನೆಗಳಿಗೆ ಎಷ್ಟು ಹಣ ನೀಡಿದೆ ಎಂಬುದರ ಕುರಿತು ಲೆಕ್ಕ ಹೇಳುತ್ತೇವೆ. ಆದರೆ, ಸಿದ್ದರಾಮಯ್ಯ ಅನುದಾನ ಬಳಸಿರುವ ಬಗ್ಗೆ ಮಾಹಿತಿ ನೀಡುತ್ತಾರಾ’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ ರಾಜ್ಯವನ್ನು ಲೂಟಿ ಮಾಡಿದೆ. ಕೇಂದ್ರ ನೀಡಿರುವ ಅಷ್ಟೂ ಅನುದಾನದ ಹಣ ಕಾಂಗ್ರೆಸ್ ನಾಯಕರುಗಳ ಖಜಾನೆ ಸೇರಿದೆ. ಎರಡು ಕೋಣೆ ಮನೆ ಹೊಂದಿದ್ದ ಕಾಂಗ್ರೆಸ್‌ ನಾಯಕರು ಇಂದು ಬಹುಮಹಡಿ ಕಟ್ಟಡ, ಕಾರುಗಳನ್ನು ಹೊಂದಿದ್ದಾರೆ. ಜನರ ಹಣ ನುಂಗಿ ಹಾಕಿರುವ ಭ್ರಷ್ಟ ಕಾಂಗ್ರೆಸ್‌ ಅನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆದಿದ್ದೇವೆ. ಮಾರ್ಚ್‌ 3 ರಂದು ತ್ರಿಪುರಾ ಚುನಾವಣೆಯ ಫಲಿತಾಂಶ ಇದೆ. ಅಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದ ಶಾ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರ್ಯಕರ್ತರು ದಿನದ 24 ಗಂಟೆ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

‘ಕಾಂಗ್ರೆಸ್‌ನವರು ಚುನಾವಣೆ ಪ್ರಚಾರಕ್ಕೆ ದೊಡ್ಡ ರ‍್ಯಾಲಿಗಳನ್ನು ನೆಚ್ಚಿಕೊಂಡಿದ್ದಾರೆ. ನಮಗೂ ದೊಡ್ಡ ದೊಡ್ಡ ಸಮಾವೇಶಗಳು ಮಾಡಲು ಬರುತ್ತದೆ. ಆದರೆ, ನಾವು ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಇಂಥವೇ ಸಮಾವೇಶಗಳು ಇಡೀ ದೇಶದಲ್ಲಿ ಬಿಜೆಪಿ ಅಸ್ತಿತ್ವ ಸ್ಥಾಪಿಸಿ ಕಾಂಗ್ರೆಸ್‌ ಅನ್ನು ಬುಡಸಮೇತ ಕಿತ್ತೊಗೆಯಲು ನೆರವಾಗಿವೆ’ ಎಂದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 17 ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ನರೇಂದ್ರ ಮೋದಿ ಅವರಿಗೆ ಅಶೀರ್ವಾದ ನೀಡಿದ್ದೀರಿ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಂಚರಿಸಿದ್ದೇನೆ.

ಅತಿ ಹೆಚ್ಚು ಸ್ಥಾನಗಳು ಈ ಭಾಗದಿಂದ ಸಿಗುತ್ತವೆ ಎಂಬ ನಂಬಿಕೆ ಬಂದಿದೆ. ಬೂತ್‌ಮಟ್ಟದ ಕಾರ್ಯಕರ್ತರು ತಮ್ಮ ನವಶಕ್ತಿ ತೋರಿಸಿ ಬಿಜೆಪಿ ಗೆಲ್ಲಿಸಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ’ ಎಂದು ಮನವಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷಜಿ ಅಮಿತ್‌ ಶಾ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದರು.

ಬಿಜೆಪಿ ಮುಖಂಡ ರಾಜೂಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಮಿತ್‌ ಶಾ ಅವರ ದರ್ಶನ ಭಾಗ್ಯ ಸಿಕ್ಕಿದ್ದು ನಮ್ಮ ಸೌಭಾಗ್ಯ. ಅಮಿತ್‌ ಶಾ ಕೃಷ್ಣನ ಪಾತ್ರ ನಿರ್ವಹಿಸಿದರೆ, ನರೇಂದ್ರ ಮೋದಿ ಅರ್ಜುನನ ಪಾತ್ರ ನಿರ್ವಹಿಸುವುದರ ಮೂಲಕ ದೇಶವನ್ನು ಸುಭಿಕ್ಷಗೊಳಿಸಿದ್ದಾರೆ. ಇಬ್ಬರನ್ನು ನೋಡಿದರೆ ಮೈನವಿರೇಳುತ್ತದೆ’ ಎಂದು ಬಣ್ಣಿಸಿದರು.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರಜಿ, ಶಹಾಪುರ ಶಾಸಕ ಗುರು ಪಾಟೀಲ ಶಿರವಾಳ, ಯಾದಗಿರಿ ಜಿಲ್ಲಾ ಉಸ್ತುವಾರಿ ಎನ್‌. ಶಂಕ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಡಾ.ವೀರಬಸವಂತರೆಡ್ಡಿ ಮುದ್ನಾಳ,ಡಾ.ಶರಣಭೂಪಾಲರೆಡ್ಡಿ, ಡಾ.ಭೀಮಣ್ಣ ಮೇಟಿ, ತ್ರಿವಿಕ್ರಮ ಜೋಷಿ, ಅಮರಣ್ಣ ಹುಡೇದ, ಎಚ್‌.ಸಿ. ಪಾಟೀಲ, ಚನ್ನಾರಡ್ಡಿ ಪಾಟೀಲ, ಎನ್‌. ರವಿಕುಮಾರ, ರಾಜಾ ಹನುಮಪ್ಪನಾಯಕ ತಾತಾ, ಯಲ್ಲಪ್ಪ ಕುರಕುಂದಿ, ಮಹ್ಮದ ಸಲೀಂ ವರ್ತಿ, ಸುರೇಶ ಸಜ್ಜನ್, ನಾಗರತ್ನಾ ಕುಪ್ಪಿ ಇದ್ದರು. ನವಶಕ್ತಿ ಸಮಾವೇಶದಲ್ಲಿ ಸುರಪುರ ಮತ್ತು ಯಾದಗಿರಿ ವಿಧಾನಸಭಾ ಕ್ಷೇತ್ರದ 6 ಸಾವಿರಕ್ಕೂ ಹೆಚ್ಚು ಬೂತ್‌ಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು.

* * 

ಅತ್ಯಂತ ಭ್ರಷ್ಟ ಸರ್ಕಾರ ಸ್ಪರ್ಧೆ ಇಟ್ಟರೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೊದಲ ಸ್ಥಾನ ಪಡೆಯಲಿದೆ. ಕಾಂಗ್ರೆಸ್ ಮುಕ್ತ ರಾಜ್ಯ ಮಾಡೋಣ. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry