‘ನೆಹರೂ, ಕಮ್ಯುನಿಸ್ಟ್ ಆಡಳಿತದಿಂದ ಆರ್ಥಿಕತೆಗೆ ಪೆಟ್ಟು’

7

‘ನೆಹರೂ, ಕಮ್ಯುನಿಸ್ಟ್ ಆಡಳಿತದಿಂದ ಆರ್ಥಿಕತೆಗೆ ಪೆಟ್ಟು’

Published:
Updated:
‘ನೆಹರೂ, ಕಮ್ಯುನಿಸ್ಟ್ ಆಡಳಿತದಿಂದ ಆರ್ಥಿಕತೆಗೆ ಪೆಟ್ಟು’

ಶಿವಮೊಗ್ಗ: ಗಾಂಧೀಜಿಯ ಅಹಿಂಸಾ ಮಾರ್ಗ ಹಾಗೂ ನೆಹರೂ ಕುಟುಂಬದ ಶ್ರಮದಿಂದ ಮಾತ್ರವೇ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಎನ್ನುವ ಕಲ್ಪನೆ ಈಗಲೂ ಜನರಲ್ಲಿ ಆಳವಾಗಿ ಬೇರೂರಿದೆ ಎಂದು ಕಾದಂಬರಿಕಾರ ಡಾ.ಎಸ್.ಎಲ್‌.ಭೈರಪ್ಪ ವಿಶ್ಲೇಷಿಸಿದರು.

ನಗರದ ಜಿಲ್ಲಾ ಸ್ಕೌಟ್ಸ್ ಭವನದ ಆವರಣದಲ್ಲಿ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯಿಂದ ಸೋಮವಾರ ಏರ್ಪಡಿಸಿದ್ದ ‘ಮಂಥನ’ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧೀಜಿಯ ಅಹಿಂಸಾ ಮಾರ್ಗ ಒಂದು ದಾರಿಯಷ್ಟೇ. ಆದರೆ ಇದೇ ಪ್ರಧಾನವಲ್ಲ. ಅನೇಕ ಹೋರಾಟಗಳು, ತ್ಯಾಗ ಬಲಿದಾನಗಳು, ತಿಲಕ್‌, ಸುಭಾಷ್‌ ಚಂದ್ರಬೋಸ್ ಅವರಂತಹ ಅನೇಕ ಮಹಾತ್ಮರ ದೂರದೃಷ್ಟಿಯ ಕಲ್ಪನೆಯಿಂದಾಗಿ ಸ್ವಾತಂತ್ರ್ಯ ಲಭಿಸಿದೆ. ಆದರೆ ಮೊದಲ ಪ್ರಧಾನಿಯಾದ ನೆಹರೂ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ಇತಿಹಾಸ’ ಎನ್ನುವ ಪುಸ್ತಕದಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಗಾಂಧೀಜಿಯ ಅಹಿಂಸಾ ಮಾರ್ಗ ಹಾಗೂ ನೆಹರೂ ಕುಟುಂಬದ ಪ್ರಧಾನ ಪಾತ್ರ ಇದೆ ಎಂಬುದನ್ನು ಇತಿಹಾಸಕಾರ ಆರ್‌.ಸಿ.ಮಜುಂದಾರ್‌ ಅವರ ಮೂಲಕ ಬರೆಸಲು ಮುಂದಾದರು. ಮಜುಂದಾರ್‌ ಇದನ್ನು ವಿರೋಧಿಸಿದ ಕಾರಣ ನೆಹರೂ ಅವರನ್ನು ಕೈಬಿಟ್ಟು, ಮತ್ತೊಬ್ಬ ಇತಿಹಾಸಕಾರ ತಾರಚಂದ್‌ ಮೂಲಕ ಬಯಸಿದ್ದನ್ನೇ ಬರೆಸಿದರು. ಹಾಗಾಗಿ ಇದೇ ಸತ್ಯ ಎಂಬುದು ಜನರ ಮನಸ್ಸಿನಲ್ಲಿ ಉಳಿದಿದೆ ಎಂದು ಭೈರಪ್ಪ ವಿಶ್ಲೇಷಿಸಿದರು.

ಈಸ್ಟ್‌ ಇಂಡಿಯಾ ಕಂಪನಿ ನಮ್ಮ ಎಲ್ಲಾ ಕಸುಬುಗಳನ್ನು ನಾಶ ಮಾಡಿ, ಎಲ್ಲೆಡೆ ಬಡತನ ಸೃಷ್ಟಿ ಮಾಡಿತು. ಮುಸ್ಲಿಂರು ಸ್ವಾತಂತ್ರ್ಯ ಚಳವಳಿಯಲ್ಲಿ ಸೇರದಂತೆ ಕುತಂತ್ರ ಮಾಡಿದರು. ಬ್ರಿಟಿಷರ ತಂತ್ರಗಳನ್ನೇ ನೆಹರೂ ಮುಂದುವರೆಸಿದರು. ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆಯಲು ಶುರುಮಾಡಿದರು. ಪರಿಣಾಮ ಜಾತಿ ಹಾಗೂ ಧರ್ಮ ಆಧಾರಿತ ಚುನಾವಣೆ ಬಂತು. ಇದನ್ನು ವಿರೋಧಿಸುವವರನ್ನು ಪ್ರಜಾಪ್ರಭುತ್ವ ವಿರೋಧಿಗಳೆಂದು ಬಿಂಬಿಸಲಾಯಿತು. ನೆಹರೂ ಕಮ್ಯುನಿಸ್ಟ್ ತತ್ವಕ್ಕೆ ಮಾರು ಹೋಗಿದ್ದರು. ತಮ್ಮ ಹೃದಯ ಮತ್ತು ಬುದ್ಧಿಯನ್ನು ರಷ್ಯಾಗೆ ಒಪ್ಪಿಸಿದ್ದರು ಎಂದು ಹೇಳಿದರು.

ಇತಿಹಾಸ ಸತ್ಯವನ್ನು ತಿಳಿಸಬೇಕು. ಆದರೆ ಆ ಪ್ರಯತ್ನ ಆಗಲಿಲ್ಲ. ಔರಂಗಜೇಬನಂತಹ ಇತರೆ ರಾಜರು ಇಲ್ಲಿನ ಮಂದಿರ ಒಡೆದಿರುವುದು, ಜೆಸಿಯಾ ಕಂದಾಯ ಹಾಕಿರುವುದು ಬರೆಯಲೇ ಇಲ್ಲ. ವಾಜಪೇಯಿ ಸರ್ಕಾರ ಪಠ್ಯ ಪುಸ್ತಕಗಳನ್ನು ರಿಪೇರಿ ಮಾಡಲು ಮುಂದಾಯಿತು. ಆದರೆ ಎಡಪಂಥೀಯರು ಸತ್ಯಕ್ಕೆ ಬೆಲೆಯೇ ಇಲ್ಲವೇ ಎನ್ನುವ ಹೋರಾಟ ರೂಪಿಸಿದರು. ಇದರಿಂದ ವಾಜಪೇಯಿ ಸರ್ಕಾರ ಮೆತ್ತಗಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎನ್ನುವ ಕೂಗು ಇಂದಿನದಲ್ಲ. ಅದು ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರಚಲಿತದಲ್ಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry