ಸ್ಫೋಟ: ಶಾಸಕ ಮಂಕಾಳ ವೈದ್ಯ ಪಾರು

7

ಸ್ಫೋಟ: ಶಾಸಕ ಮಂಕಾಳ ವೈದ್ಯ ಪಾರು

Published:
Updated:
ಸ್ಫೋಟ: ಶಾಸಕ ಮಂಕಾಳ ವೈದ್ಯ ಪಾರು

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಭಟ್ಕಳ– ಹೊನ್ನಾವರ ಶಾಸಕ ಮಂಕಾಳ ಎಸ್.ವೈದ್ಯ ಭಾನುವಾರ ರಾತ್ರಿ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯ ಸಮೀಪದಲ್ಲೇ ಪ್ರಬಲವಾದ ಸ್ಫೋಟಕ ಸಿಡಿದು, ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದಾರೆ.

ಹೊಸಾಡ ಗ್ರಾಮದ ರಂಗಿನಮೋಟಾದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯ ಕಾರ್ಯಕ್ರಮದಲ್ಲಿ ರಾತ್ರಿ 11 ಗಂಟೆಗೆ ಶಾಸಕರು ಭಾಗವಹಿಸಿದ್ದರು. ಈ ವೇಳೆ, ವೇದಿಕೆಯಿಂದ 30 ಮೀಟರ್ ದೂರದಲ್ಲಿ ನಿಂತಿದ್ದ ರೇಮಂಡ್‌ ಕೈತಾಂವ್ ಮಿರಾಂಡಾ ಎಂಬುವರ ಕೈಯಲ್ಲಿದ್ದ ಸ್ಫೋಟಕ, ಅವರ ಕೈಯಲ್ಲೇ ಸಿಡಿದಿದೆ. ಇದರಿಂದ ಅವರ ಕೈ ತುಂಡಾಗಿದೆ. ಮುಖ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲ್ಲೂಕಿನ ನಗರಬಸ್ತಿಕೇರಿ ಗ್ರಾಮದ ರೇಮಂಡ್‌ ಇಲ್ಲಿನ ಪ್ರಭಾತ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸ ಇದ್ದ. ಗ್ಯಾರೇಜ್‌ನಲ್ಲಿ ವಾಹನ ತೊಳೆಯುವ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲು: ‘ವೇದಿಕೆ ಸನಿಹದಲ್ಲೇ ಇದ್ದ ಫ್ರಾನ್ಸಿಸ್ ಮುನ್ವೇಲ್ ರೋಡ್ರಿಗಸ್ ಎಂಬುವರ ತೋಟದಲ್ಲಿ ನಿಂತಿದ್ದ ರೇಮಂಡ್‌ಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿದ್ದವರನ್ನು ಸಾಯಿಸುವ ಉದ್ದೇಶ ಇತ್ತು ಎಂಬುದು ಸ್ಫೋಟದ ತೀವ್ರತೆಯನ್ನು ಗಮನಿಸಿದಾಗ ಗೊತ್ತಾಗುತ್ತದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಹೊಸಾಡ ಗ್ರಾಮದ ಗಣಪತಿ ಮಾದೇವ ಅಂಬಿಗ ಎಂಬುವವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಶಾಸಕರನ್ನು ಹತ್ಯೆ ಮಾಡಲು ತರಲಾಗಿದ್ದ ನಾಡಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ’ ಎಂದೂ ಕೆಲವರು ಹೇಳುತ್ತಿದ್ದಾರೆ. ಆದರೆ, ಪೊಲೀಸರು ಇದನ್ನು ಖಚಿತಪಡಿಸಿಲ್ಲ. ರೇಮಂಡ್ ವಿರುದ್ಧ ಅಕ್ರಮ ಸ್ಫೋಟಕ ಹೊಂದಿದ್ದ ಆರೋಪದ ಮೇಲೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಾಂಬ್ ಇರಬಹುದು: ಶಾಸಕ ವೈದ್ಯ

‘ಸ್ಫೋಟದ ತೀವ್ರತೆ ಹಾಗೂ ವ್ಯಕ್ತಿ ಗಾಯಗೊಂಡಿದ್ದನ್ನು ನೋಡಿದರೆ ಇದು ಬಾಂಬ್ ಇರಬಹುದು ಎನಿಸುತ್ತದೆ. ಸ್ಫೋಟದ ಸಂದರ್ಭದಲ್ಲಿ ಅದು ನನ್ನ ಅರಿವಿಗೆ ಬಂದಿರಲಿಲ್ಲ. ನಂತರ ನನಗೆ ವಿಷಯ ತಿಳಿಯಿತು’ ಎಂದು ಶಾಸಕ ಮಂಕಾಳ ವೈದ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅದು ಜನರ ಮಧ್ಯದಲ್ಲಿ ಸ್ಫೋಟಿಸಿದ್ದರೆ ಅಲ್ಲಿದ್ದ ಯುವಕರು ಹಾಗೂ ಮಹಿಳೆಯರ ಜೀವಕ್ಕೆ ಅಪಾಯ ಉಂಟಾಗುತ್ತಿತ್ತು. ಅದನ್ನು ಊಹಿಸಿದರೆ ನನಗೆ ಭಯವಾಗುತ್ತಿದೆ. ಈ ರೀತಿಯಾಗುವುದು ಆತಂಕಕಾರಿ ಬೆಳವಣಿಗೆ. ಸೂಕ್ತ ತನಿಖೆಯ ಮೂಲಕ ನಿಜಾಂಶ ತಿಳಿಯಬೇಕು’ ಎಂದು ಒತ್ತಾಯಿಸಿದರು.

ಆರೋಪಿಗೆ ಐಸಿಯುನಲ್ಲಿ ಚಿಕಿತ್ಸೆ

ಸ್ಫೋಟದಲ್ಲಿ ಗಾಯಗೊಂಡಿರುವ ರೇಮಂಡ್‌ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಪ್ರಜ್ಞೆ ಮರಳಿದ ಬಳಿಕವೇ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ ತಿಳಿಸಿದರು.

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಹೊನ್ನಾವರಕ್ಕೆ ಭೇಟಿ ನೀಡಿದ್ದು, ಸ್ಫೋಟಕದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರು ವರದಿ ನೀಡಿದ ನಂತರ ಅದು ಯಾವ ರೀತಿಯ ಸ್ಫೋಟಕ ಎಂಬುದು ಗೊತ್ತಾಗಲಿದೆ ಎಂದು ಅವರು ಹೇಳಿದರು.

ಗನ್‌ಮ್ಯಾನ್ ಇದ್ದರು:

‘ಶಾಸಕರಿಗೆ ಈ ಮೊದಲೇ ಒಬ್ಬ ಗನ್‌ಮ್ಯಾನ್ ನಿಯೋಜಿಸಿದ್ದೇವೆ. ಅವರಿಗೆ ಅಪಾಯವಿರುವ ಬಗ್ಗೆ ಈಚಿನ ದಿನಗಳಲ್ಲಿ ಯಾವುದೇ ಮಾಹಿತಿ ಇರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry