ಮಸ್ತಕಾಭಿಷೇಕ ನೆನಪಿಗಾಗಿ 2018 ಸಸಿ

7

ಮಸ್ತಕಾಭಿಷೇಕ ನೆನಪಿಗಾಗಿ 2018 ಸಸಿ

Published:
Updated:

ಶ್ರವಣಬೆಳಗೊಳ: 2018ರಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವದ ಸವಿನೆನಪಿಗಾಗಿ ಶ್ರವಣಬೆಳಗೊಳದಲ್ಲಿ ಸೋಮವಾರ 2018 ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಸಿನೆಡುವ ಕಾರ್ಯವನ್ನು ಬೆಂಗಳೂರಿನ ವಿದ್ಯಾಶಂಕರ್ ಮಾಡುತ್ತಿದ್ದಾರೆ. ಗುಂಡಿಯಲ್ಲಿ ಸಸಿಯೊಂದಿಗೆ ಪ್ಲಾಸ್ಟಿಕ್‌ ಬಕೆಟ್‌ ಇಡಲಾಯಿತು. ಬಕೆಟ್‌ಗೆ ಹಾಕಿದ ನೀರು ಗಿಡದ ಬೇರಿಗೆ ಸರಾಗವಾಗಿ ಹರಿಯುವಂತೆ ಮಾಡಲು ಬಕೆಟ್‌ನ ತಳಭಾಗದಲ್ಲಿ ರಂಧ್ರ ನಿರ್ಮಿಸಲಾಗಿದೆ.

ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಸಿ.ಎನ್‌. ಬಾಲಕೃಷ್ಣ ಸಸಿನೆಟ್ಟರು. ಬಳಿಕ ಮಾತನಾಡಿ, ‘ಪ್ರವಾಸಿ ಮಂದಿರದ ಆವರಣ ಸೇರಿ ಶ್ರವಣಬೆಳಗೊಳ–ಚನ್ನರಾಯಪಟ್ಟಣ ಮಾರ್ಗದಲ್ಲಿನ ರಸ್ತೆಯ ಎರಡು ಭಾಗದಲ್ಲಿ 2018 ಸಸಿ ನೆಡಲಾಗುವುದು. ಇದಕ್ಕೆ ನೀರು ಹಾಕಿ ಪೋಷಿಸಲಾಗುವುದು. ಪರಿಸರವಾದಿ ವಿದ್ಯಾಶಂಕರ್‌ ನೆರವಿನೊಂದಿಗೆ ತಾಲ್ಲೂಕಿನ ವಿವಿಧೆಡೆ ಸಸಿಗಳನ್ನು ನೆಡಲಾಗುವುದು’ ಎಂದರು.

‘ಆಲದಗಿಡ, ಹತ್ತಿ, ಕದಂಬ, ಮಾವು, ನೇರಳೆ, ಹಲಸು, ಮಹಾಗನ್ನಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಜೂನ್‌ವರೆಗೆ ಪ್ರತಿ ಭಾನುವಾರ ವಿಂಧ್ಯಗಿರಿಯಲ್ಲಿ ಬಾಹುಬಲಿಗೆ ಅಭಿಷೇಕನಡೆಯಲಿದ್ದು, ಪ್ರತಿ ಭಾನುವಾರ ಶ್ರವಣಬೆಳಗೊಳಕ್ಕೆ ಬಂದು ಸಸಿ ನೆಡಲಾಗುವುದು’ ಎಂದು ವಿದ್ಯಾಶಂಕರ್‌ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್‌, ಎಪಿಎಂಸಿ ಅಧ್ಯಕ್ಷ ವಿ.ಎನ್‌. ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎನ್‌. ಕೃಷ್ಣೇಗೌಡ, ಮುಖಂಡರಾದ ಕೆ.ಆರ್. ರಮೇಶ್‌, ರಂಗೇಗೌಡ, ಎಸ್‌.ಎಂ.ಲಕ್ಷ್ಮಣ್‌, ಎಸ್‌.ಪಿ. ಶರತ್ ಕುಮಾರ್‌ ಇದ್ದರು.

ಗಾಲಿಕುರ್ಚಿಯಲ್ಲಿ ಅಂಗವಿಕಲರ ನೃತ್ಯ

ಶ್ರವಣಬೆಳಗೊಳ (ಚಾವುಂಡರಾಯ ಮಹಾವೇದಿಕೆ): ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದದ ಸಾಂಸ್ಕೃತಿಕ ಮಹೋತ್ಸವದಲ್ಲಿ ಗಾಲಿ ಕುರ್ಚಿಯಲ್ಲಿ ಅಂಗವಿಕಲರು ನೃತ್ಯಮಾಡಿ ಗಮನಸೆಳೆದರು.

ಶಿವತಾಂಡವ, ಕತ್ತಿವರಸೆ, ಸೈನಿಕರ ಶೌರ್ಯ, ಸಾಹಸ ಮೆರೆಯುವ ಹಾಡಿಗೆ ನೃತ್ಯ ಮಾಡಿ ಮನಸಿಗೆ ಮುದ ನೀಡಿದರು. ಅಂಗವೈಕಲ್ಯ ದೇಹಕ್ಕೆ ಹೊರತು ಸಾಧನೆಗೆ ಅಡ್ಡಿಬರುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರು.

ದೆಹಲಿಯ ಮಿರಾಕಲ್‌ ಆನ್‌ವೀಲ್ಸ್‌ ಸಲಾವುದ್ದೀನ್‌ ತಂಡದವರು ಈ ಕಾರ್ಯಕ್ರಮ ಸಾದರಪಡಿಸಿದರು. ‘ಉಳುವ ಯೋಗಿಯ ನೋಡಲ್ಲಿ...’, ‘ನೀ ಇಲ್ಲದೇ ಬಾಳು ಬರಡಾಗಿದೆ...’, ಹಾಡುಗಳು ಖ್ಯಾತ ಗಾಯಕರಾದ ಕಿಕ್ಕೇರಿ ಕೃಷ್ಣ ಮೂರ್ತಿ, ವೈ.ಕೆ. ಮುದ್ದುಕೃಷ್ಣ ಅವರ ಕಂಠಸಿರಿಯಲ್ಲಿ ಮೂಡಿಬಂದವು.

24 ತೀರ್ಥಂಕರರ ಜೀವನಚರಿತ್ರೆ ಸಾರುವ ಲೇಸರ್‌ ಪ್ರರ್ದಶನ ಏರ್ಪಡಿಸಲಾಗಿತ್ತು. ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್‌ ಕಲಾವಿದರು ‘ಮುಂಗುಂಡಾದ ಮಹದೇಶ್ವರಗೆ ಶರಣುಶರಣಯ್ಯ’ ಹಾಡಿಗೆ ಕಂಸಾಳೆ ನೃತ್ಯ ಮಾಡಿದರು. ರೋಣ ಕಲಾವಿದ ಮಜುಂದಾರ್ ತಂಡದವರು ಕೋಳಲುವಾದನ ಪ್ರಸ್ತುತಪಡಿಸಿದರೆ, ಐಶ್ವರ್ಯ ರಾಣಿ ತಂಡದವರು ಗೀತಗಾಯನ ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry