ವಿಯೆಟ್ನಾಂ ಯುದ್ಧದ ಗತಿ ಬದಲಿಸಿದ ಚಿತ್ರ

7
ಯುದ್ಧವನ್ನು ಅಮೆರಿಕ ಗೆಲ್ಲಬಾರದು ಎಂದು ಅಮೆರಿಕನ್ನರು ಭಾವಿಸಲು ಈ ಚಿತ್ರ ಕಾರಣವಾಯಿತು

ವಿಯೆಟ್ನಾಂ ಯುದ್ಧದ ಗತಿ ಬದಲಿಸಿದ ಚಿತ್ರ

Published:
Updated:
ವಿಯೆಟ್ನಾಂ ಯುದ್ಧದ ಗತಿ ಬದಲಿಸಿದ ಚಿತ್ರ

ತಣ್ಣನೆಯ ಮುಖಭಾವ ಹೊತ್ತಿದ್ದ ದಕ್ಷಿಣ ವಿಯೆಟ್ನಾಂನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಐವತ್ತು ವರ್ಷಗಳ ಹಿಂದೆ, ಸೈಗಾನ್ (ಈಗಿನ ಹೋಚಿಮಿನ್‌ ನಗರ) ಪಟ್ಟಣದ ಬೀದಿಯೊಂದರಲ್ಲಿ ಒಬ್ಬ ಕೈದಿಯ ಬಳಿ ಬಂದು ಆತನ ತಲೆಗೆ ಒಂದು ಗುಂಡು ಹಾರಿಸಿದ. ಆ ಜಾಗದಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ, ‘ಅಸೋಸಿಯೇಟೆಡ್ ಪ್ರೆಸ್‌’ ಸುದ್ದಿಸಂಸ್ಥೆಯ ಛಾಯಾಗ್ರಾಹಕ ಎಡ್ಡಿ ಆ್ಯಡಮ್ಸ್‌ ಕ್ಯಾಮೆರಾ ಕಣ್ಣಿಗೆ ತನ್ನ ಕಣ್ಣನ್ನು ಒತ್ತಿಟ್ಟುಕೊಂಡು ಇದ್ದರು. ಗುಂಡು ಹಾರಿದ ಆ ಕ್ಷಣವನ್ನು ಕಪ್ಪು–ಬಿಳುಪು ರೀಲಿನಲ್ಲಿ ಆ್ಯಡಮ್ಸ್‌ ಸೆರೆಹಿಡಿದರು.

ಪೊಲೀಸ್ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ನುಯಾನ್ ನೌ ಲೋನ್ ಅವರು ಕ್ಯಾಮೆರಾ ಕಣ್ಣಿಗೆ ಬೆನ್ನು ಹಾಕಿ ನಿಂತಿದ್ದಾರೆ, ಅವರ ಬಲಗೈ ಪೂರ್ತಿಯಾಗಿ ಚಾಚಿದೆ, ಎಡಗೈಯನ್ನು ಅವರು ಕೆಳಗೆ ಬಿಟ್ಟುಕೊಂಡಿದ್ದಾರೆ. ಕೈದಿ ನುಯಾನ್ ವ್ಯಾನ್ ಲೆಮ್ ಅವರು, ವಿಯೆಟ್‌ ಕಾಂಗ್‌ ಸಂಘಟನೆಯ ಹೋರಾಟಗಾರ. ಕೈದಿ ಸಮವಸ್ತ್ರ ಧರಿಸಿಲ್ಲ. ಅವರು ಚೌಕಾಕಾರದ ಚಿತ್ರಗಳಿರುವ ಅಂಗಿ, ಕಪ್ಪು ಬಣ್ಣದ ಚೆಡ್ಡಿ ತೊಟ್ಟಿದ್ದಾರೆ. ಅವರ ಕೈಗಳನ್ನು ಬೆನ್ನ ಹಿಂದೆ ತಂದು, ಕೋಳ ತೊಡಿಸಲಾಗಿದೆ. ಕೈದಿಯು 30 ವರ್ಷ ವಯಸ್ಸಿನ ಆಸುಪಾಸಿನಲ್ಲಿ ಇದ್ದಾರಾದರೂ, ಒಬ್ಬ ಹುಡುಗನಿಗಿಂತ ತುಸು ಹೆಚ್ಚು ವಯಸ್ಸಾದಂತೆ ಕಾಣಿಸುತ್ತಾರೆ. ಗುಂಡಿನಿಂದ ಆಗಿರುವ ಗಾಯ ಅವರ ಮುಖದ ಮೇಲೆ ಕಾಣಿಸುತ್ತಿದೆ.

ಕೈದಿಯ ಜೀವನದ ಕೊನೆಯ ಕ್ಷಣಗಳು ಮಾರನೆಯ ದಿನದ ಮುಂಜಾನೆಯ ವೇಳೆಗೆ ದೇಶದಾದ್ಯಂತ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಚಿತ್ರದ ಮೂಲಕ ಅಜರಾಮರವಾದವು. ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯಲ್ಲಿ ಕೂಡ ಇದು ಪ್ರಕಟವಾಯಿತು. ಅಮೆರಿಕದ ನ್ಯಾಷನಲ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ (ಎನ್‌ಬಿಸಿ) ಪ್ರಸಾರ ಮಾಡಿದ ಇದಕ್ಕೆ ಸಂಬಂಧಿಸಿದ ದೃಶ್ಯಾವಳಿ ಮತ್ತು ಈ ಚಿತ್ರವು ವಿಯೆಟ್ನಾಂ ಯುದ್ಧದ ಕ್ರೌರ್ಯದ ಬಗ್ಗೆ ಅಮೆರಿಕನ್ನರಿಗೆ ತಿಳಿಸಿತು. ಇದು ಅಮೆರಿಕದಲ್ಲಿನ ಜನಾಭಿಪ್ರಾ

ಯದಲ್ಲಿ ನಿರ್ಣಾಯಕ ಬದಲಾವಣೆ ತರಲು ಸಹಕಾರಿ ಆಯಿತು.

‘ಸಂಭಾಷಣೆಗಳು ಇರುವ ವಿಡಿಯೊ ದೃಶ್ಯಾವಳಿಯೊಂದು ಬೀರಬಲ್ಲಂತಹ ಪರಿಣಾಮವನ್ನು ಈ ಸ್ಥಿರ ಚಿತ್ರವು ಜನರ ಮನಸ್ಸಿನ ಮೇಲೆ ಬೀರಿತು’ ಎನ್ನುತ್ತಾರೆ ಷಿಕಾಗೊ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಆಗಿರುವ ಮಿಷೆಲ್ ನಿಕರ್ಸನ್. ಇವರು ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ನಡೆದ ಯುದ್ಧ ವಿರೋಧಿ ಚಳವಳಿ ಬಗ್ಗೆ ಅಧ್ಯಯನ ನಡೆಸಿದ್ದಾರೆ. ‘ಆ ಸಂದರ್ಭದಲ್ಲಿ ಅದೆಷ್ಟು ಜನ ಯುದ್ಧ ವಿರೋಧಿ ಮನಸ್ಥಿತಿ ಬೆಳೆಸಿಕೊಂಡರು ಎಂಬುದನ್ನು ನೀವು ಅಂದಾಜಿಸಲು ಆಗದು’ ಎಂದೂ ಅವರು ಹೇಳುತ್ತಾರೆ.

ಕೈದಿಗೆ ಗುಂಡಿಕ್ಕಿದ್ದು 1968ರ ಫೆಬ್ರುವರಿ 1ರಂದು. ವಿಯೆಟ್ ಕಾಂಗ್ ಮತ್ತು ಉತ್ತರ ವಿಯೆಟ್ನಾಂನ ಪೀಪಲ್ಸ್‌ ಆರ್ಮಿ ಆಫ್‌ ವಿಯೆಟ್ನಾಂ ಪಡೆಗಳು ಜಂಟಿಯಾಗಿ ಆಕ್ರಮಣ ಆರಂಭಿಸಿದ ಎರಡು ದಿನಗಳ ನಂತರ. ನುಸುಳುಕೋರರು ಇದ್ದಕ್ಕಿದ್ದಂತೆಯೇ ಹಲವು ನಗರಗಳಲ್ಲಿ ಕಾಣಿಸಿಕೊಂಡರು. ದಕ್ಷಿಣ ವಿಯೆಟ್ನಾಂನ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲೂ ಅವರು ಕಾಣಿಸಿಕೊಂಡರು. ಸೈಗಾನ್‌ ನಗರದ ಬೀದಿಗಳಲ್ಲಿ ಅವರು ಕಂಡುಬಂದರು. ಭಾರಿ ಭದ್ರತೆ ಇದ್ದ ಅಮೆರಿಕದ ರಾಯಭಾರ ಕಚೇರಿ ಆವರಣದ ಒಳಗಡೆಯೂ ಅವರು ತೂರಿಕೊಂಡರು. ‘ಶತ್ರುಗಳು ಇನ್ನೇನು ಸೋಲುವ ಹಂತದಲ್ಲಿ ಇದ್ದಾರೆ’ ಎಂದು ಅಮೆರಿಕನ್ನರಿಗೆ ಅಲ್ಲಿನ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಮತ್ತು ವಿಯೆಟ್ನಾಮಿನಲ್ಲಿದ್ದ ಸೇನಾ ಪ್ರಮುಖ ವಿಲಿಯಂ ವೆಸ್ಟ್‌ಮೋರ್‌ಲ್ಯಾಂಡ್‌ ಹೇಳಿದ್ದರು. ಅವರ ಮಾತುಗಳನ್ನು ನಂಬಿದ್ದ ಅಮೆರಿಕನ್ನರಿಗೆ ನುಸುಳುಕೋರರು ಕಾಣಿಸಿಕೊಂಡಿದ್ದು ಆಘಾತ ಮೂಡಿಸುವಂಥದ್ದಾಗಿತ್ತು.

‘ಅವರು ನಡೆಸಿದ ಆಕ್ರಮಣವು ಜನರು ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿತು. ಯುದ್ಧದ ಬಗ್ಗೆ ಪ್ರಭುತ್ವವು ತಮಗೆ ಸುಳ್ಳು ಹೇಳಿತೇ, ತಮಗೆ ಈವರೆಗೆ ಹೇಳಿರುವ ರೀತಿಯಲ್ಲೇ ಯುದ್ಧ ನಡೆಯುತ್ತಿದೆಯೇ, ಶತ್ರುವು ಇಷ್ಟೊಂದು ಪ್ರಬಲವಾಗಿ ಕಾಣಿಸುತ್ತಿರುವಾಗ ಯುದ್ಧವನ್ನು ಗೆಲ್ಲುವುದು ನಿಜಕ್ಕೂ ಸಾಧ್ಯವೇ ಎನ್ನುವ ಪ್ರಶ್ನೆಗಳನ್ನು ಅಮೆರಿಕನ್ನರು ಕೇಳುವಂತೆ ಮಾಡಿತು’ ಎನ್ನುತ್ತಾರೆ ವಿಯೆಟ್ನಾಂ ಯುದ್ಧದ ಬಗ್ಗೆ ಅಧ್ಯಯನ ನಡೆಸಿರುವ ಮೆರೆಡಿತ್ ಎಚ್. ಲೇಯರ್. ಇವರು ಜಾರ್ಜ್‌ ಮೇಸನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಾರೆ.

ಯುದ್ಧರಂಗದ ಮೇಲೆ ಹಿಡಿತ ಸಾಧಿಸಿರುವುದಾಗಿ ಬಿಂಬಿಸಲು ಸರ್ಕಾರ ಯತ್ನಿಸುತ್ತಿತ್ತು. ಆದರೆ ಜಂಟಿ ಆಕ್ರಮಣವು, ಯುದ್ಧರಂಗದ ಚಿತ್ರಣ ಸರ್ಕಾರ ಹೇಳುತ್ತಿರುವಂತೆ ಇಲ್ಲ ಎಂಬುದನ್ನು ತೋರಿಸಿತು. ಆ್ಯಡಮ್ಸ್‌ ಕ್ಲಿಕ್ಕಿಸಿದ ಚಿತ್ರವು, ‘ಅಮೆರಿಕ ಯುದ್ಧ ನಡೆಸುತ್ತಿರುವುದು ನ್ಯಾಯಯುತ ಕಾರಣಕ್ಕಾಗಿಯೇ’ ಎಂಬ ಪ್ರಶ್ನೆಯನ್ನು ಜನ ಕೇಳುವಂತೆ ಮಾಡಿತು. ಯುದ್ಧದ ಪರ ಇದ್ದ ವಾದಗಳನ್ನು ಜಂಟಿ ಆಕ್ರಮಣ ಮತ್ತು ಈ ಚಿತ್ರ ತಣ್ಣಗಾಗಿಸಿದವು. ಈ ಯುದ್ಧ ಗೆಲ್ಲಲು ಸಾಧ್ಯವಿಲ್ಲ, ಬಹುಶಃ ಈ ಯುದ್ಧವನ್ನು ಅಮೆರಿಕ ಗೆಲ್ಲಲೂಬಾರದು ಎಂದು ಹಲವು ಜನ ಅಮೆರಿಕನ್ನರು ಭಾವಿಸಲು ಇವು ಕಾರಣವಾದವು.

‘ವಿಯೆಟ್ನಾಂ ಯುದ್ಧವು ಗೆಲ್ಲಲು ಸಾಧ್ಯವಾಗುವ ಯುದ್ಧದಂತೆ ಕಾಣಿಸುತ್ತಿಲ್ಲ ಎಂದು ಜಂಟಿ ಆಕ್ರಮಣದ ನಂತರ ಮೂಡುತ್ತಿದ್ದ ಜನಾಭಿಪ್ರಾಯಕ್ಕೆ ಪೂರಕವಾಗಿ ಈ ಚಿತ್ರ ಪ್ರಕಟವಾಯಿತು. ಹಾಗೆಯೇ, ಯುದ್ಧ ರಂಗದಲ್ಲಿ ನಾವು, ಅಂದರೆ ಅಮೆರಿಕನ್ನರು, ನ್ಯಾಯಸಮ್ಮತವಾಗಿ

ನಡೆದುಕೊಳ್ಳುತ್ತಿದ್ದೇವಾ ಎಂಬ ಪ್ರಶ್ನೆಯನ್ನೂ ಜನ ಕೇಳುವಂತೆ ಮಾಡಿತು’ ಎನ್ನುವುದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದಲ್ಲಿ ಇತಿಹಾಸಕಾರ ಆಗಿರುವ ರಾಬರ್ಟ್‌ ಜೆ. ಮೆಕ್‌ಮಹೋನ್‌ ನೀಡುವ ವಿವರಣೆ.

ಕೈಗೆ ಕೋಳ ಹಾಕಿದ್ದ ಕೈದಿಯೊಬ್ಬನಿಗೆ ಪೊಲೀಸ್‌ ಮುಖ್ಯಸ್ಥನೊಬ್ಬ ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದರು. ಇದು ಜಿನೀವಾ ಒಪ್ಪಂದದ ಉಲ್ಲಂಘನೆಯಂತೆ ಭಾಸವಾಗುತ್ತಿತ್ತು. ಅಲ್ಲದೆ, ಗುಂಡು ಹಾರಿಸಿದ ಅಧಿಕಾರಿ ಕಮ್ಯುನಿಸ್ಟ್‌ ಆಗಿರಲಿಲ್ಲ. ಅವರು ದಕ್ಷಿಣ ವಿಯೆಟ್ನಾಂ ಸರ್ಕಾರದ, ಅಂದರೆ ಅಮೆರಿಕದ ಮೈತ್ರಿ ಸರ್ಕಾರದ ಸದಸ್ಯರಾಗಿದ್ದರು. ‘ಈ ಯುದ್ಧವನ್ನು ಗೆಲ್ಲಬಹುದೋ, ಇಲ್ಲವೋ ಎಂಬುದಕ್ಕಿಂತ ಭಿನ್ನವಾದ ಪ್ರಶ್ನೆಯನ್ನು ಇದು ಅಮೆರಿಕನ್ನರಲ್ಲಿ ಮೂಡಿಸಿತು. ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ಚರ್ಚೆಗೆ ರೂಪ ಕೊಡುವ ಕೆಲವು ನೈತಿಕ ಪ್ರಶ್ನೆಗಳನ್ನು ಇದು ಮುನ್ನೆಲೆಗೆ ತಂದಿತು. ವಿಯೆಟ್ನಾಂನಲ್ಲಿ ಅಮೆರಿಕದ ಇರುವಿಕೆ ನ್ಯಾಯಸಮ್ಮತ ಆಗಿದೆಯೇ, ನಾವು ಯುದ್ಧ ನಡೆಸುತ್ತಿರುವುದು ನೈತಿಕವಾಗಿ ಸರಿಯಿದೆಯೇ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕಿತು’ ಎನ್ನುತ್ತಾರೆ ಮೆಸ್ಯಾಚುಸ್ಯಾಟ್ಸ್‌ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕ ಆಗಿರುವ ಕ್ರಿಶ್ಚಿಯನ್ ಜಿ. ಆ್ಯಪ್ಪಿ.

ಜಂಟಿ ಆಕ್ರಮಣದ ನಂತರದ ತಿಂಗಳುಗಳಲ್ಲಿ, ವಿಯೆಟ್ನಾಂ ಯುದ್ಧದ ಬೇರೆ ಯಾವುದೇ ಕಾಲಘಟ್ಟದಲ್ಲಿ ಆಗಿದ್ದಕ್ಕಿಂತ ಹೆಚ್ಚು ವೇಗವಾಗಿ ಜನಾಭಿಪ್ರಾಯ ಬದಲಾವಣೆ ಕಂಡಿತು ಎಂದರು ಮೆಕ್‌ಮಹೋನ್. ಆ್ಯಡಮ್ಸ್‌ ಕ್ಲಿಕ್ಕಿಸಿದ ಚಿತ್ರಕ್ಕೆ ಪುಲಿಟ್ಜರ್‌ ಪ್ರಶಸ್ತಿ ದೊರೆಯಿತು. ವಿಶ್ವ ಕಂಡ ನೂರು ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಇದೂ ಒಂದು ಎಂದು ‘ಟೈಮ್‌’ ನಿಯತಕಾಲಿಕೆ ಹೇಳಿತು.

‘ವಿಯೆಟ್ನಾಂ ಯುದ್ಧ ಸಂದರ್ಭದಲ್ಲಿ ಕೈದಿಗೆ ಗುಂಡಿಟ್ಟು ಕೊಂದ ಚಿತ್ರದ ಬಗ್ಗೆ ಆ ಕಾಲದ ಜನ ಮಾತ್ರವೇ ಅಲ್ಲದೆ, ಅದರ ನಂತರದ ತಲೆಮಾರುಗಳ ಜನ ಕೂಡ ನೆನಪಿಸಿಕೊಳ್ಳಬಲ್ಲರು. ಈ ಚಿತ್ರ ಉಳಿದೆಲ್ಲ ಚಿತ್ರಗಳಂತೆ ಅಲ್ಲವೇಅಲ್ಲ

ಎಂಬುದು ತಕ್ಷಣಕ್ಕೇ ಗೊತ್ತಾಗಿತ್ತು’ ಎಂದರು ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಪ್ರಾಧ್ಯಾಪಕ ಆಗಿರುವ ಸುಸಾನ್ ಡಿ. ಮೊಲ್ಲೆರ್.

ಈ ಚಿತ್ರ ಮತ್ತು ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ಇತರ ಚಿತ್ರಗಳನ್ನು ಪತ್ರಿಕೆಯ ಪುಟಗಳಲ್ಲಿ ಪ್ರಕಟಿಸುವುದು ಯಾವ ರೀತಿಯಲ್ಲಿ ಎಂಬ ಬಗ್ಗೆ ‘ದಿ ಟೈಮ್ಸ್‌’ ಪತ್ರಿಕೆಯ ಕಚೇರಿಯಲ್ಲಿ ಚರ್ಚೆ ಆಗಿತ್ತು. ‘ಕೆಲವು ಚಿತ್ರಗಳು ನನ್ನ ನೆನಪಿನಲ್ಲಿವೆ. ಆ ಚಿತ್ರಗಳು ಪತ್ರಿಕೆಯ ಮೊದಲ ಪುಟದಲ್ಲೇ ಪ್ರಕಟವಾಗಬೇಕು ಎಂಬುದು ನನ್ನ ನಿಲುವಾಗಿತ್ತು’ ಎಂದು ಪ್ರಭಾವಿ ಫೊಟೊ ಎಡಿಟರ್ ಜಾನ್‌ ಜಿ. ಮೋರಿಸ್ ಹೇಳಿದ್ದಾರೆ. ಇವರು ಕಳೆದ ವರ್ಷ ತೀರಿಕೊಂಡಿದ್ದಾರೆ.

ಕೈದಿಯನ್ನು ಕೊಲ್ಲುವ ಚಿತ್ರಕ್ಕೆ ದಕ್ಷಿಣ ವಿಯೆಟ್ನಾಂನಲ್ಲಿ ಬೇರೆಯೇ ರೀತಿಯಲ್ಲಿ ಪ್ರತಿಕ್ರಿಯೆ ಬಂತು. ಉತ್ತರ ವಿಯೆಟ್ನಾಂ ಮತ್ತು ವಿಯೆಟ್‌ ಕಾಂಗ್‌ ತಮಗೆ ಹೇಳಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿ ಎಂದು 1968ರ ಕಾಲಘಟ್ಟದ ಅಮೆರಿಕನ್ನರು ಭಾವಿಸಿದ್ದರು. ಆದರೆ, ‘ಈ ಗುಂಪಿನವರು ಮೊದಲಿನಷ್ಟು ಶಕ್ತರಲ್ಲ ಎಂದು ದಕ್ಷಿಣ ವಿಯೆಟ್ನಾಮಿನ ಜನ ಭಾವಿಸಿದರು’ ಎನ್ನುತ್ತಾರೆ ಷಿಕಾಗೊ

ವಿಶ್ವವಿದ್ಯಾಲಯದಲ್ಲಿ ಇತಿಹಾಸಕಾರ ಆಗಿರುವ ಮಾರ್ಕ್‌ ಫಿಲಿಪ್‌ ಬ್ರ್ಯಾಡ್ಲಿ.

ಇದಾದ ನಂತರ, ಕೈದಿಯನ್ನು ಕೊಂದ ಪೊಲೀಸ್ ಅಧಿಕಾರಿ ಲೋನ್‌ ಬದುಕಿನ ತಳಪಾಯ ಕುಸಿಯಲು ಆರಂಭವಾಯಿತು. ಇವರ ಬಗ್ಗೆ ಜನರಲ್ಲಿ ಅನುಕಂಪವಂತೂ ತೀರಾ ಕನಿಷ್ಠ ಎಂಬಂತೆ ಇತ್ತು. ಇವರು ಅಮೆರಿಕಕ್ಕೆ ವಲಸೆ ಬಂದರು. ಇವರ ಹಸಿರು ಕಾರ್ಡ್‌ ಅನ್ನು ರದ್ದು ಮಾಡಲು ಸರ್ಕಾರ 1978ರಲ್ಲಿ ಪ್ರಯತ್ನಿಸಿ ವಿಫಲವಾಯಿತು. ಇದಾದ ಇಪ್ಪತ್ತು ವರ್ಷಗಳ ನಂತರ ಇವರು ವರ್ಜಿನಿಯಾದಲ್ಲಿ ಮೃತಪಟ್ಟರು.

2004ರಲ್ಲಿ ನಿಧನರಾಗುವ ಮುನ್ನ ಆ್ಯಡಮ್ಸ್‌, ತಾವು ಕ್ಲಿಕ್ಕಿಸಿದ ಚಿತ್ರ ಉಂಟುಮಾಡಿದ ಪರಿಣಾಮಗಳ ಬಗ್ಗೆ ನೋವು ತೋಡಿಕೊಂಡಿದ್ದರು. ಕ್ಯಾಮೆರಾ ಮೂಲಕ ಸೆರೆಹಿಡಿಯುವ ಚಿತ್ರಗಳಲ್ಲಿ, ಒಂದು ಘಟನೆಯ ಸುತ್ತಲಿನ ಸಂದರ್ಭಗಳು ಏನಿದ್ದವು ಎಂಬುದು ದಾಖಲಾಗುವುದಿಲ್ಲ ಎಂದು ಅವರು ಹೇಳಿದ್ದರು. ಅವರು ಕ್ಲಿಕ್ಕಿಸಿದ ಚಿತ್ರದಲ್ಲಿದ್ದ ಕೈದಿಯು, ಪೊಲೀಸ್ ಅಧಿಕಾರಿಯ ಸಹೋದ್ಯೋಗಿಯೊಬ್ಬರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದ. ‘ಈ ಚಿತ್ರದಲ್ಲಿದ್ದ ಇಬ್ಬರೂ ಹತ್ಯೆಯಾದರು. ಕೈದಿ ಮತ್ತು ಅಧಿಕಾರಿ’ ಎಂದು ಆ್ಯಡಮ್ಸ್‌ ಅವರು ‘ಟೈಮ್‌’ ನಿಯತಕಾಲಿಕೆಯಲ್ಲಿ ಬರೆದಿದ್ದರು. ‘ಪೊಲೀಸ್ ಅಧಿಕಾರಿಯು ವಿಯೆಟ್‌ ಕಾಂಗ್‌ ಅನ್ನು ಕೊಂದರು. ನಾನು ನನ್ನ ಕ್ಯಾಮೆರಾ ಮೂಲಕ ಆ ಅಧಿಕಾರಿಯನ್ನು ಕೊಂದೆ. ಕ್ಯಾಮೆರಾ ಚಿತ್ರಗಳು ಜಗತ್ತಿನ ಅತ್ಯಂತ ಶಕ್ತಿಯುತ ಆಯುಧಗಳು’ ಎಂದೂ ಆ್ಯಡಮ್ಸ್‌ ಬರೆದಿದ್ದರು.

-ಮ್ಯಾಗಿ ಆ್ಯಸ್ಟರ್

ದಿ ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry