ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವು ಜಿಲ್ಲೆಗಳಲ್ಲಿ ಇವಿಎಂ ಕಾರ್ಯಕ್ಷಮತೆ ಪರಿಶೀಲನೆ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ರಾಜ್ಯಗಳಿಂದ ತರಿಸುತ್ತಿರುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯಕ್ಷಮತೆ ಪರೀಕ್ಷಿಸುವ ಪ್ರಥಮ ಹಂತದ ಪರಿಶೀಲನೆ ಕಾರ್ಯಕ್ಕೆ ಕೆಲವು ಜಿಲ್ಲಾ ಚುನಾವಣಾಧಿಕಾರಿಗಳು ಚಾಲನೆ ನೀಡಿದ್ದಾರೆ.

ಇವಿಎಂಗಳ ದುರ್ಬಳಕೆ ಬಗ್ಗೆ ವಿರೋಧ ಪಕ್ಷಗಳು ಇನ್ನೂ ಸಂಶಯ ಹೊಂದಿರುವುದರಿಂದ ಪ್ರತಿ ಯಂತ್ರವನ್ನೂ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು, ಲೋಪವಿರುವ ಯಂತ್ರಗಳನ್ನು ಪತ್ತೆ ಮಾಡಬೇಕು ಎಂದು ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಮೊದಲ ಹಂತದ ಪರೀಕ್ಷೆಯ ಬಳಿಕ ಇವಿಎಂಗಳ ತಾಂತ್ರಿಕ ವಿವರವನ್ನು ಈ ಅಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಬೇಕು. ಇತರ ಜಿಲ್ಲೆಗಳಿಗೆ ಮತಯಂತ್ರ ತಲುಪುತ್ತಿದ್ದಂತೆ ಅಲ್ಲೂ ಪರಿಶೀಲನೆ ಕಾರ್ಯ ಆರಂಭವಾಗಲಿದೆ ಎಂದು ಆಯೋಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮತಯಂತ್ರಗಳ ಪರೀಶೀಲನೆ ಬಳಿಕ ಚುನಾವಣಾ ಅಧಿಕಾರಿಗಳ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳ ಸುಪರ್ದಿಗೆ ಇವಿಎಂಗಳನ್ನು ಒಪ್ಪಿಸಲಾಗುತ್ತದೆ. ಇವರು ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇಡುತ್ತಾರೆ. ಈ ಪ್ರಕ್ರಿಯೆಯನ್ನು ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳ ಸಮಕ್ಷಮದಲ್ಲಿ ನಡೆಸಲಾಗುತ್ತದೆ. ಇದರ ವಿಡಿಯೊ ಚಿತ್ರೀಕರಣ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಅಧಿಕಾರಿಗಳಿಗೆ ತರಬೇತಿ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರಾತ್ಯಕ್ಷಿಕೆಗಾಗಿ ಬಳಸುವ ಇವಿಎಂಗಳನ್ನು ಪ್ರತ್ಯೇಕ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ. ಇದರ ಜೊತೆಗೆ ಒಂದಷ್ಟು ಇವಿಎಂಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗುತ್ತದೆ. ಮತದಾನದ ದಿನ ಯಾವುದಾದರೂ ಇವಿಎಂ ಕಾರ್ಯ ನಿರ್ವಹಿಸದೇ ಇದ್ದರೆ, ಕಾಯ್ದಿರಿಸಿದ ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ಚುನಾವಣೆಯಲ್ಲಿ ಬಳಸುವ ಇವಿಎಂಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ.

ಇವಿಎಂಗಳಿಗೆ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಸೇರಿಸಲು ಭದ್ರತಾ ಕೊಠಡಿಯನ್ನು ತೆರೆಯಲಾಗುತ್ತದೆ. ಇದನ್ನೂ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಇದರ ವಿಡಿಯೊ ಚಿತ್ರೀಕರಣವೂ ನಡೆಯುತ್ತದೆ. ಬಳಿಕ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ. ಮತದಾನಕ್ಕಾಗಿ ಇವಿಎಂಗಳನ್ನು ಕಳುಹಿಸುವ ದಿನದಂದು ಮಾತ್ರ ಭದ್ರತಾ ಕೊಠಡಿ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

ಅಂತಿಮ ಪಟ್ಟಿ ಇಂದು ಪ್ರಕಟ

ವಿಧಾನಸಭೆ ಚುನಾವಣೆಗಾಗಿ ಮತದಾರರ ಪರಿಷ್ಕೃತ ಪಟ್ಟಿ ಬುಧವಾರ ಪ್ರಕಟವಾಗಲಿದೆ. ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸುವ ಮತ್ತು ಕೈಬಿಡುವ ಕಾರ್ಯ ನವೆಂಬರ್‌ನಿಂದ ಆರಂಭವಾಗಿತ್ತು. ಹೊಸದಾಗಿ ಎಷ್ಟು ಹೆಸರುಗಳನ್ನು ಸೇರಿಸಲಾಗಿದೆ ಮತ್ತು ಬಿಡಲಾಗಿದೆ ಎಂಬ ನಿಖರ ಮಾಹಿತಿ ನಾಳೆ ಸಿಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ನವೆಂಬರ್‌ 30ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದರೂ, ಚುನಾವಣೆವರೆಗೆ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT