ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಶರಣರ ಇಷ್ಟಲಿಂಗ ಪೂಜೆ

Last Updated 27 ಫೆಬ್ರುವರಿ 2018, 20:31 IST
ಅಕ್ಷರ ಗಾತ್ರ

ಬಸವಾದಿ ಶರಣರು ಬೋಧಿಸಿದ ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳ ಪಾತ್ರ ಬಹುಮುಖ್ಯವಾದುದು. ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಹಾಗೂ ಪ್ರಸಾದ ಇವು ಲಿಂಗವಂತ ಸಾಧಕನ ರಕ್ಷಾಕವಚಗಳು. ಅವನ ಅಧ್ಯಾತ್ಮ ಸಾಧನೆಗೆ ಪೂರಕವಾಗಿರುವ ಇವುಗಳ ಅನುಷ್ಠಾನವಿಲ್ಲದೆ ಅಧ್ಯಾತ್ಮದ ಪ್ರಗತಿಯಾಗಲಾರದು. ಇವುಗಳಲ್ಲಿ ಗುರುವಿನ ಸ್ಥಾನ ಮೊದಲನೆಯದು. ಪ್ರತಿಯೊಬ್ಬ ಸಾಧಕನು ಗುರುಕರುಣವನ್ನು ಪಡೆದು ತನ್ನ ಸಾಧನೆಗೆ ಮುನ್ನಡಿಯನ್ನಿಡಬೇಕು. ಗುರುಕರುಣೆಯಾದಾಗ ಗುರು ಸಾಧಕನ ಹಸ್ತದಲ್ಲಿ ಲಿಂಗವನ್ನನುಗ್ರಹಿಸುತ್ತಾನೆ. ‘ಗುರುಕರುಣವ ಪಡೆದುದಕ್ಕೆ ಚಿಹ್ನವಾವುದೆಂದಡೆ ಅಂಗದ ಮೇಲೆ ಲಿಂಗ ಸ್ವಾಯತವಾಗಿರಬೇಕು, ಲಿಂಗವಿಹೀನನಾಗಿ ಗುರುಕರುಣವುಂಟೆ? ಎಂದು ಅನುಭಾವಿಗಳು ಗುರುಕರುಣಕ್ಕೂ ಲಿಂಗಕ್ಕೂ ಇರುವ ಸಂಬಂಧವನ್ನು ವಿವರಿಸಿದ್ದಾರೆ. ಗುರು ಕರುಣದಿಂದ ಪ್ರಾಪ್ತವಾದ ಕರಸ್ಥಲದ ಲಿಂಗವೇ ಇಷ್ಟಲಿಂಗ. ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವಾದ ಪರವಸ್ತುವನ್ನೇ ಗುರು ಕರಸ್ಥಲದ ಲಿಂಗವಾಗಿಸಿದ್ದಾನೆ. ‘ವಿಶ್ವತೋಮುಖ, ವಿಶ್ವತೋಪಾದ, ವಿಶ್ವತೋಬಾಹು, ವಿಶ್ವತೋಚಕ್ಷು, ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ’- ಎಂದು ಸ್ತುತಿಸುವ ಷಣ್ಮುಖ ಶಿವಯೋಗಿಗಳು ವಿಶ್ವವನ್ನೇ ವ್ಯಾಪಿಸಿ ವಿಶ್ವಾತೀತವಾಗಿರುವ ಪರಶಿವ ಚೈತನ್ಯವೇ ಕರಸ್ಥಲದ ಲಿಂಗವೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರೇ ಇನ್ನೊಂದು ಕಡೆ ‘ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ, ಕಂಗಳಿಗೆ ಮಂಗಳವಾದ ದೇವನ ಕಂಡೆನಯ್ಯ, ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ, ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ ಕಂಡೆನಯ್ಯಾ ಎನ್ನ ಕರಸ್ಥಲದಲಿ’ ಎಂದು ಭಗವತ್ಸ್ವರೂಪಿಯಾದ ಇಷ್ಟಲಿಂಗದ ಹಿರಿಮೆಯನ್ನು ಮನಸಾರೆ ವರ್ಣಿಸಿದ್ದಾರೆ.

ಗುರುಕರುಣಿಸಿದ ಇಷ್ಟಲಿಂಗದಲ್ಲಿ ನಿಷ್ಠೆಯನ್ನಿಟ್ಟು ಪೂಜಿಸಬೇಕು. ‘ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ್ಕ?’ ಎಂದು ಬಸವಣ್ಣನವರು ಪೂಜೆಯಲ್ಲಿ ನಿಷ್ಠೆಯ ಆವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಪೂಜೆಯ ಮಾಡುವಲ್ಲಿ ವೇಷವರತಿರಬೇಕು, ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು, ಕೊಳುಕೊಡೆಯಲ್ಲಿ ಭೂತಹಿತನಾಗಿರಬೇಕು. ಪೂಜಿಸುವ ಸಾಧಕನ ವ್ಯಷ್ಟಿಗತ ನಡವಳಿಕೆಯೂ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿಯೇ ಅಕ್ಕಮಹಾದೇವಿ- ‘ಸಜ್ಜನಳಾಗಿ ಮಜ್ಜನಕ್ಕೆರೆವೆ, ಶಾಂತಳಾಗಿ ಪೂಜೆಯ ಮಾಡುವೆ, ಸಮರತಿಯಿಂದ ನಿಮ್ಮ ಹಾಡುವೆ ಚನ್ನಮಲ್ಲಿಕಾರ್ಜುನಯ್ಯಾ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ’ ಎನ್ನುತ್ತಾಳೆ. ಸಾಧಕನು ಸದಾಚಾರಿಯಾಗಿ, ಸದ್ವಿಚಾರಿಯಾಗಿ ಲಿಂಗದಲ್ಲಿ ಶ್ರದ್ಧೆ-ನಿಷ್ಠೆಯಿಂದ ಕೂಡಿದ ಭಕ್ತಿಯನ್ನು ಸಮರ್ಪಿಸುವುದು ನಿಜವಾದ ಪೂಜೆ ಎನಿಸುವುದು. ಬಾಹ್ಯಾಡಂಬರದ ವೈಭವೋಪೇತ ಪೂಜೆಗೆ ಶರಣರಲ್ಲಿ ಯಾವುದೇ ಸ್ಥಾನವಿಲ್ಲ ಎಂಬುದನ್ನು ಗಮನಿಸಬೇಕು.

‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲ ಸಂಗಮದೇವ’ ಭಗವಂತನು ಸಾಕಾರನೂ ಹೌದು, ನಿರಾಕರಾನೂ ಹೌದು. ಅವನು ಸಕಲ-ನಿಷ್ಕಲ ರೂಪನಾಗಿರುವನು. ಸಾಧಕನು ಸಕಲರೂಪವನ್ನೇ ಪೂಜಿಸಲಿ ಅಥವಾ ನಿಷ್ಕಲ ರೂಪವನ್ನೇ ಪೂಜಿಸಲಿ, ಯಾವುದನ್ನೇ ಪೂಜಿಸಿದರೂ ಇಷ್ಟಲಿಂಗದಲ್ಲಿಯೇ ಪೂಜಿಸಬೇಕು. ಕಣ್ಣುಗಳಿಂದ ಆ ಲಿಂಗವನ್ನೇ ದೃಷ್ಟಿಸಬೇಕು, ನಾಲಿಗೆಯಿಂದ ಸ್ಮರಿಸುವಾಗ ಅಂಗವ ಮರೆತು ಸ್ಮರಿಸಬೇಕು ಎಂದು ಶರಣರು ಲಿಂಗಪೂಜೆಯ ಮಾಟ-ಕೂಟವನ್ನು ವರ್ಣಿಸಿದ್ದಾರೆ. ‘ಅಂಗೈಯೊಳಗಣ ಲಿಂಗವ ನೋಡುತ್ತ, ಕಂಗಳು ಕಡೆಗೋಡಿವರಿವುತ್ತ ಸುರಿಯುತ್ತ ಎಂದಿಪ್ಪೆನೋ, ನೋಟವೇ ಪ್ರಾಣವಾಗಿ ಎಂದಿಪ್ಪೆನೋ? ಕೂಟವೇ ಪ್ರಾಣವಾಗಿ ಎಂದಿಪ್ಪೆನೋ? ಎನ್ನಂಗ ವಿಕಾರದ ಸಂಗವಳಿದು ಕೂಡಲ ಸಂಗಯ್ಯಾ, ಲಿಂಗಯ್ಯಾ ಲಿಂಗಯ್ಯಾ ಎನ್ನುತ್ತ ಎಂದಿಪ್ಪೆನೋ’? ‘ನಮ್ಮ ಲಿಂಗಪೂಜೆ ಹೇಗಿರಬೇಕು? ಎಂಬುದಕ್ಕೆ ಧರ್ಮಗುರು ಬಸವಣ್ಣನವರ ಈ ವಚನ ಮಾರ್ಗದರ್ಶಿಯಾಗಿದೆ. ‘ಕಣ್ಣಲ್ಲಿ ನಿದ್ದೆ ಕೈಯಲ್ಲಿ ಲಿಂಗ’ ಎನ್ನುವಂತಾದರೆ ‘ಕತ್ತಲೆ ಎಂಬುದು ಇತ್ತಲೆಯಯ್ಯಾ, ಗುಹೇಶ್ವರನೆಂಬುದು ಅತ್ತಲೆಯಯ್ಯಾ’ ಎಂಬುದು ಅದರ ಪರಿಣಾಮವಾಗುತ್ತದೆ. ಆದ್ದರಿಂದ ಅಜ್ಞಾನ ಆಶೆ-ಆಮಿಷಗಳೆಂಬ ಅಂಗವಿಕಾರವನ್ನಳಿದು ನಿಷ್ಠೆಯಿಂದ ನಿರತನಾಗುವುದೇ ಇಷ್ಟಲಿಂಗ ಪೂಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT