ಶರಾವತಿ ವಿದ್ಯುದಾಗಾರ ನಾಳೆ ಲೋಕಾರ್ಪಣೆ

7
178 ದಿನಗಳ ಕಾಲ ನಡೆದ ದುರಸ್ತಿ ಕಾರ್ಯ

ಶರಾವತಿ ವಿದ್ಯುದಾಗಾರ ನಾಳೆ ಲೋಕಾರ್ಪಣೆ

Published:
Updated:
ಶರಾವತಿ ವಿದ್ಯುದಾಗಾರ ನಾಳೆ ಲೋಕಾರ್ಪಣೆ

ಶಿವಮೊಗ್ಗ: ಎರಡು ವರ್ಷಗಳ ಹಿಂದೆ ಅಗ್ನಿ ಆಕಸ್ಮಿಕಕ್ಕೆ ತುತ್ತಾಗಿದ್ದ ಶರಾವತಿ ಜಲ ವಿದ್ಯುದಾಗಾರ 178 ದಿನಗಳ ಅವಧಿಯಲ್ಲಿ ₹42 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದ್ದು, ಮಾರ್ಚ್‌ 2ರಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಂದು ಸಂಜೆ 4.30ಕ್ಕೆ ವಿದ್ಯುದಾಗಾರ ಲೋಕಾರ್ಪಣೆ ಮಾಡಲಿದ್ದಾರೆ.

ವಿದ್ಯುತ್ ಉತ್ಪಾದನೆಯ ಸುವರ್ಣ ಸಂಭ್ರಮದ ನೆನಪಿಗಾಗಿ ಲಾಲ್ ಬಹುದ್ದೂರ್ ಶಾಸ್ತ್ರಿ (ವಿದ್ಯುದಾಗಾರದ ಸ್ಥಾಪನೆಯ ಸಮಯದಲ್ಲಿ ಪ್ರಧಾನಿ

ಯಾಗಿದ್ದರು)  ಹಾಗೂ ಶರಾವತಿ ಕಣಿವೆ ಯೋಜನೆಗಳ ರೂವಾರಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಸ್ಥಾಪಿಸಲಾಗಿದೆ.

ವಿದ್ಯುದಾಗಾರದ 10 ಘಟಕಗಳಿಂದ 1,035 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಈ ವಿದ್ಯುತ್‌ ರವಾನಿಸಲು 220 ಕೆ.ವಿ. ಸಾಮರ್ಥ್ಯದ 9 ಮಾರ್ಗಗಳಿವೆ. ಪ್ರತಿ ಮಾರ್ಗದಲ್ಲೂ 200 ಮೆಗಾವಾಟ್‌ ವಿದ್ಯುತ್‌ ಸಾಗಿಸಬಹುದು. ಹೀಗೆ ಸಾಗುವ ಒಂದು ಮಾರ್ಗದ ಕೇಬಲ್‌ನಲ್ಲಿ ಫೆ. 18, 2016ರಂದು ಶಾರ್ಟ್ ಸರ್ಕಿಟ್‌ ಆದ ಪರಿಣಾಮ 21.38 ಕಿಲೊ ಆಂಪ್ಸ್‌ ಸಾಮರ್ಥ್ಯದ ವಿದ್ಯುತ್‌ ಪ್ರವಹಿಸಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು. ಕಂಟ್ರೋಲ್ ರೂಂ ಸೇರಿದಂತೆ ಹಲವು ಭಾಗಗಳು ಭಸ್ಮವಾಗಿದ್ದವು. ಆದರೆ ಟರ್ಬೈನ್ ಸೇರಿದಂತೆ ಮುಖ್ಯ ಯಂತ್ರಗಳಿಗೆ ಧಕ್ಕೆಯಾಗಿರಲಿಲ್ಲ.

ಘಟನೆಯ ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ್ದ ಇಂಧನ ಸಚಿವರು ಸ್ಥಳದಲ್ಲೇ ಅಧಿಕಾರಿಗಳು, ಎಂಜಿನಿಯರ್‌ಗಳ ಸಭೆ ನಡೆಸಿ ನವೀಕರಣಕ್ಕೆ ₹500 ಕೋಟಿಯಿಂದ 800 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದಿದ್ದರು. ವಿದ್ಯುದಾಗಾರದ ಘಟಕಗಳು 50 ವರ್ಷ ಹಳೆಯಾದಾಗಿದ್ದು, ಸುಟ್ಟು ಹೋಗಿರುವ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸಿಗುವುದು ಅನುಮಾನವಾಗಿತ್ತು. ಅಗತ್ಯ ಪರಿಕರ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಸ್ಥಳೀಯ ಎಂಜಿನಿಯರ್‌ಗಳ ಶ್ರಮದ ಫಲವಾಗಿ ಇಡೀ ವಿದ್ಯುದಾಗಾರದ ಪುನರ್ ನವೀಕರಣ ಕಾರ್ಯವನ್ನು ಕೇವಲ ₹42 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

(ಶರಾವತಿ ವಿದ್ಯುದಾಗಾರದ ವಿದ್ಯುತ್ ಉತ್ಪಾದನಾ ಘಟಕಗಳು‌)

ಎಲೆಕ್ಟ್ರಿಕಲ್‌ ಕಾಮಗಾರಿಗಳಿಗೆ ₹ 34.63 ವೆಚ್ಚ ಮಾಡಲಾಗಿದೆ. ಸಿವಿಲ್‌ ಕಾಮಗಾರಿಗಳಿಗೆ ₹ 7.37 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲಿ ಪ್ರಧಾನ ಕಾಮಗಾರಿಗಳನ್ನು ಮಾತ್ರ ಅಲಹಾಬಾದ್‌ನ ಎಬಿಬಿ ಕಂಪನಿಗೆ ನೀಡಲಾಗಿತ್ತು. ಉಳಿದ ಎಲ್ಲವನ್ನೂ ಸ್ಥಳೀಯರೇ ನಿರ್ವಹಿಸಿರುವುದು ವಿಶೇಷ.

ಬೆಂಕಿಗೆ ಆಹುತಿಯಾದ ಕೇವಲ 35 ದಿನದ ಒಳಗೆ ಒಂದು ಘಟಕದಲ್ಲಿ 100 ಮೆಗಾವಾಟ್‌ ಉತ್ಪಾದನೆ ಆರಂಭಿಸಲಾಗಿತ್ತು. ಎಬಿಬಿ ಕಂಪೆನಿ ₹22.75 ಕೋಟಿ ವೆಚ್ಚದಲ್ಲಿ 10 ಘಟಕಗಳಿಗೆ ಅಗತ್ಯವಾದ ನಿಯಂತ್ರಣ ಪರಿಕರ ಹಾಗೂ ಸಂರಕ್ಷಣಾ ಸಾಧನ ಪೂರೈಸಿತ್ತು. ಸ್ಥಳೀಯ ಎಂಜಿನಿಯರ್‌ಗಳೇ ವೇಗವಾಗಿ ಮರು ಜೋಡಣೆ ಮಾಡಿದ್ದರು.

ಜನರೇಟರ್, ಕೇಬಲ್‌ ಜಾಲ, ಉತ್ಪನ್ನ ಮತ್ತು ನಿಯಂತ್ರಣ ಘಟಕಗಳ ಸ್ಥಾಪನೆ, ಕಟ್ಟಡ ದುರಸ್ತಿ ಜತೆಗೆ ಎರಡು ನೂತನ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ.

‘ಅಂತರಾಷ್ಟ್ರೀಯ ಮಟ್ಟದ ವಿದ್ಯುತ್ ನಿಯಂತ್ರಣ ಕೊಠಡಿ, ಅತ್ಯಾಧುನಿಕ ಶೈಲಿಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ, ವಿತರಣಾ ಜಾಲ, ನೂತನ ಸುರಕ್ಷತಾ ಮಾರ್ಗ ಅಳವಡಿಸಲಾಗಿದೆ. ಭವಿಷ್ಯದಲ್ಲಿ ಮತ್ತೆ ಅವಘಡ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಆರ್.ವೈ. ಶಿರಾಲಿ, ಕೆಪಿಸಿ ಕಾಮಗಾರಿ ವಿಭಾಗದ ಸಿ.ಎಂ. ದಿವಾಕರ್ ಮಾಹಿತಿ ನೀಡಿದರು.

ಯೂನಿಟ್‌ಗೆ 24.18 ಪೈಸೆ

ಶರಾವತಿ ವಿದ್ಯುದಾಗಾರದಲ್ಲಿ ಉತ್ಪಾದಿಸುವ ಒಂದು ಯೂನಿಟ್‌ ವಿದ್ಯುತ್‌ಗೆ ತಗುಲುವ ವೆಚ್ಚ ಕೇವಲ 24.18 ಪೈಸೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಗರಿಷ್ಠ 1,035 ಮೆಗಾವಾಟ್. ಪ್ರತಿ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು 9 ಕ್ಯೂಸೆಕ್‌.

ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಸರ್ಚ್‌ ಟ್ಯಾಂಕ್‌ ಮೂಲಕ ಪ್ರತ್ಯೇಕ 10 ಪೈಪ್‌ಗಳ ಮೂಲಕ ವಿದ್ಯುದಾಗಾರಕ್ಕೆ ನೀರು ಪೂರೈಸಲಾಗುತ್ತದೆ.

₹42 ಕೋಟಿ ವೆಚ್ಚದಲ್ಲಿ ಜಲ ವಿದ್ಯುದಾಗಾರ ನವೀಕರಣ

ಘಟಕದಲ್ಲಿ ಮಹನೀಯರ ಪುತ್ಥಳಿಗಳ ಸ್ಥಾಪನೆ

ಮತ್ತೆ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry