ದೊಡ್ಡಬಳ್ಳಾಪುರ: ₹ 1.50 ಕೋಟಿ ಉಳಿತಾಯ ಬಜೆಟ್‌

ಭಾನುವಾರ, ಮಾರ್ಚ್ 24, 2019
31 °C

ದೊಡ್ಡಬಳ್ಳಾಪುರ: ₹ 1.50 ಕೋಟಿ ಉಳಿತಾಯ ಬಜೆಟ್‌

Published:
Updated:
ದೊಡ್ಡಬಳ್ಳಾಪುರ: ₹ 1.50 ಕೋಟಿ ಉಳಿತಾಯ ಬಜೆಟ್‌

ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ ಟಿ.ಎನ್‌. ಪ್ರಭುದೇವ್‌ ನಗರಸಭೆಯ 2018–19ನೇ ಸಾಲಿನ  ₹ 1.50 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದರು.

ಅವರು ಬುಧವಾರ ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಜೆಟ್‌ ಮಂಡಿಸಿ. ಸೀಮಿತ ಹಣಕಾಸು ಸಂಪನ್ಮೂಲದಲ್ಲಿ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಜನರ ಹಿತಸಂರಕ್ಷಣೆ, ಪೌರರಿಗೆ ಕಲ್ಪಿಸಬೇಕಾದ ಮೂಲ ಸೌಕರ್ಯಗಳ ಅನುಕೂಲತೆಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ ಎಂದರು.

ನಗರಸಭೆಗೆ ಅತಿ ಮುಖ್ಯ ಆದಾಯವಾದ ಮನೆ ಕಂದಾಯ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಪರವಾನಗಿ ಶುಲ್ಕ, ಇತರೆ ತೆರಿಗೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ 14ನೇ ಹಣಕಾಸು ಯೋಜನೆ, ಎಸ್.ಎಫ್.ಸಿ ಮೂಲಗಳಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ. ನಗರಸಭೆಯು ಅಗತ್ಯವಾಗಿ ನಿರ್ವಹಿಸಬೇಕಾಗಿರುವ ನಿರ್ವಹಣೆ ಮತ್ತು ಜನರ ಮೂಲ ಸೌಕರ್ಯಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಹಸಿರು ಹಾಗೂ ನೀಲನಗರ ನಿರ್ಮಾಣಕ್ಕಾಗಿ ನಗರದ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಸುಂದರ ನಗರವನ್ನಾಗಿ ಪರಿವರ್ತಿಸಲು ನಗರದ ಉದ್ಯಾನವನಗಳ ಅಭಿವೃದ್ಧಿಗಾಗಿ ₹ 46.35 ಲಕ್ಷ ಅಂದಾಜು ಮಾಡಲಾಗಿದೆ. ಸದರಿ ಉದ್ಯಾನವನಗಳ ನಿರ್ವಹಣೆಗಾಗಿ ₹23.45 ಲಕ್ಷ ಮೀಸಲಿಡಲಾಗಿದೆ ಎಂದರು.

ಒಳಚರಂಡಿ ಶುದ್ಧೀಕರಣ ಫಟಕ ಸುತ್ತಲು ಸಸಿಗಳನ್ನು ಬೆಳೆಸಲು ₹ 5.54 ಲಕ್ಷ ಹಾಗೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಮತ್ತು ಸಸ್ಯ ರಕ್ಷಕಗಳನ್ನು ಅಳವಡಿಸಲು ದಿವಂಗತ ಡಿ. ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ₹20 ಲಕ್ಷ ಮೊತ್ತ ಅಂದಾಜಿಸಲಾಗಿದೆ ಎಂದರು.

ನಗರವನ್ನು ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ ₹3.36 ಕೋಟಿ ಸ್ವಚ್ಛತೆಗಾಗಿಯೇ ಮೀಸಲಿಡಲಾಗಿದೆ. ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ನಗರವನ್ನು ಬಯಲು ಶೌಚಾಲಯ ಮುಕ್ತ ನಗರವನ್ನಾಗಿಸಲು ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕಾಗಿ ₹31.50ಲಕ್ಷ ಅಂದಾಜು ಮಾಡಲಾಗಿದೆ ಎಂದರು.

ಸಾರ್ವಜನಿಕರಲ್ಲಿ ಆರೋಗ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ಸ್ವಚ್ಛತೆ ಹಾಗು ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸುಮಾರು ₹10 ಲಕ್ಷ ವೆಚ್ಚ ಆಗಲಿದೆ. ನಗರದ ವಿವಿಧ ಭಾಗಗಳಲ್ಲಿ ಸುಂಧರ ವೃತ್ತಗಳ ಅಭಿವೃದ್ಧಿಗಾಗಿ ₹13 ಲಕ್ಷ ನೀಡಲಾಗುವುದು ಎಂದರು.

ಸ್ವಚ್ಛ ಭಾರತ್ ಅಭಿಯಾನದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನದಡಿ ನಗರ ನೈರ್ಮಲ್ಯ ನಿರ್ವಹಣೆಗಾಗಿ ಹಾಗೂ ಘನತ್ಯಾಜ್ಯ ನಿವೇಶನ ಅಭಿವೃದ್ಧಿಗಾಗಿ ಒಟ್ಟು ₹229.79 ಲಕ್ಷಗಳನ್ನು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ನೈರ್ಮಲ್ಯ ಕೆಲಸಗಳನ್ನು ನಿರ್ವಹಿಸಲು ಈ ವರ್ಷದ ಆಯ-ವ್ಯಯದಲ್ಲಿ ₹ 132.71 ಲಕ್ಷ ಹಾಗೂ ಪ್ರಸ್ತುತ ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಮನೆ ಮನೆಯಿಂದ ಕಸಸಂಗ್ರಹಣೆ ಕಾರ್ಯ ನಡೆಯುತ್ತಿದ್ದು, ಈ ಕಾರ್ಯವನ್ನು ನಗರದ ಇತರೆ ಭಾಗಗಳಿಗೂ ವಿಸ್ತರಿಸಿ ಏಜೆನ್ಸಿದಾರರಿಂದ ಹೊರಗುತ್ತಿಗೆ ಆದಾರದ ಮೇಲೆ ಪೂರೈಸಲು ಪ್ರಸಕ್ತ ಸಾಲಿನಲ್ಲಿ ₹ 50.28 ಲಕ್ಷಗಳನ್ನು ಅಂದಾಜಿಸಲಾಗಿದೆ.

ನಗರದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿ ಇರುವುದರಿಂದ ಅವುಗಳ ನಿಯಂತ್ರಣಕ್ಕಾಗಿ ₹15 ಲಕ್ಷ ಖರ್ಚು ಮಾಡಲು ಯೋಜಿಸಲಾಗಿದೆ. ಆರೋಗ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ಸ್ವಚ್ಛತೆ, ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸುಮಾರು ₹10 ಲಕ್ಷ ಖರ್ಚು ಮಾಡಲಾಗುವುದು ಎಂದರು.

ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಗಳ ವ್ಯವಸ್ಥೆ:

ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಲೈನ್ ಕಾಮಗಾರಿ, ಕೊಳವೆಬಾವಿ ಹಾಗೂ ಇತರೆ ಕಾಮಗಾರಿಗಳಿಗಾಗಿ ಸುಮಾರು ₹114.69 ಲಕ್ಷ ಖರ್ಚು ಮಾಡಲಾಗುವುದು. ಸಾರ್ವಜನಿಕರಿಗಾಗಿ ಶುದ್ದಕುಡಿಯುವ ನೀರು ಒದಗಿಸುಲು 500 ಎಲ್‌ಪಿಎಚ್‌ ಸಾಮರ್ಥ್ಯವುಳ್ಳ ಶುದ್ದೀಕರಣ ಘಟಕ ನಿರ್ಮಾಣಾಕ್ಕಾಗಿ ₹19.60ಲಕ್ಷ ಖರ್ಚು ಮಾಡಲಾಗುವುದು ಎಂದರು.

ಹೊಸದಾಗಿ ಅನುಷ್ಠಾನಗೊಂಡಿರುವ ಒಳಚರಂಡಿ ವ್ಯವಸ್ಥೆಯ ಹೊರಗುತ್ತಿಗೆ ನಿರ್ವಹಣೆಗಾಗಿ ₹50ಲಕ್ಷ ಹಾಗೂ ದುರಸ್ತಿಗೆ ₹54.81 ಲಕ್ಷ ಅಂದಾಜಿಸಲಾಗಿದೆ. 2018–19ನೇ ಸಾಲಿನಲ್ಲಿ ವಿವಿಧ ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ₹ 203.63 ಲಕ್ಷಗಳು, ಬೀದಿ ದೀಪ ಅಳವಡಿಕೆಗಾಗಿ ₹ 68.72 ಲಕ್ಷಗಳು, ಮಳೆನೀರು ಚರಂಡಿ, ಕಲ್ವರ್ಟ್‌ಗಳ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣ ₹ 126.89 ಲಕ್ಷಗಳು ಸದರಿ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ಸುಮಾರು ₹ 399.24ಲಕ್ಷಗಳ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ವಿವರ ನೀಡಿದರು.

ನೂತನ ಕೆ.ಆರ್.ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ ₹ 4.35ಕೋಟಿ ಗಳನ್ನು ಅಂದಾಜಿಸಲಾಗಿದೆ. ಶ್ರೀ ಕೊಂಗಾಡಿಯಪ್ಪ ಬಸ್ ನಿಲ್ದಾಣ ಉನ್ನತೀಕರಣಕ್ಕಾಗಿ ₹15 ಲಕ್ಷಗಳನ್ನು ಮೀಸಲಿರಿಸಲಾಗಿದೆ ಹಾಗೂ ಹಿಂಬದಿಯ ಜಾಗದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಹಾಗೂ ಅಂಗಡಿ ಮಳಿಗೆಗಳ ನಿರ್ಮಾಣ ಕಾಮಗಾರಿ ₹50 ಲಕ್ಷಗಳಿಗೆ ಪ್ರಗತಿಯಲ್ಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜನರ ಕಲ್ಯಾಣಕ್ಕಾಗಿ ₹ 142.95 ಲಕ್ಷಗಳು, ಇನ್ನಿತರೆ ವರ್ಗದ ಬಡ ಜನಾಂಗದವರ ಅಭಿವೃದ್ಧಿಗಾಗಿ ₹ 42.70ಲಕ್ಷಗಳು, ಅಂಗವಿಕಲರ ಕಲ್ಯಾಣಕ್ಕಾಗಿ ₹19.51ಲಕ್ಷಗಳು ಒಟ್ಟಾರೆ ಕಲ್ಯಾಣ ಕಾರ್ಯಕ್ರಮಗಳಿಂದ ₹ 205.16ಲಕ್ಷಗಳನ್ನು ಅಂದಾಜಿಸಲಾಗಿದೆ.

ಪೌರಕಾರ್ಮಿಕರ ಬಿಸಿಯೂಟಕ್ಕಾಗಿ ಶೇ 24.10ರ ಯೋಜನೆಯಡಿ ₹ 14ಲಕ್ಷಗಳನ್ನು ಮೀಸಲಿರಿಸಲಾಗಿದೆ. ರಾಜ್ಯ ಸರ್ಕಾರದ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರಕಾರ್ಮಿಕರಿಗೆ ₹ 14ಲಕ್ಷಗಳನ್ನು ವಿನಿಯೋಗಿಸಲಾಗುವುದು.

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದವರು ವಾಸವಿರುವ ವಿವಿಧ ವಾರ್ಡ್‌ಗಳ ರಸ್ತೆ ಮತ್ತು ಚರಂಡಿ ಅಭಿವೃದಿಗಾಗಿ ₹ 232ಲಕ್ಷಗಳನ್ನು ಅಂದಾಜಿಸಲಾಗಿದೆ.

ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವವರ ಉತ್ತೇಜನಕ್ಕಾಗಿ ಪ್ರೋತ್ಸಾಹ ಧನವಾಗಿ ₹ 5ಲಕ್ಷಗಳನ್ನು ಅಂದಾಜಿಸಲಾಗಿದೆ. ನಾಗರೀಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಯು.ಐ.ಡಿ.ಎಸ್.ಎಸ್.ಎಂ.ಟೆ ಯೋಜನೆಯಡಿ ₹ 3315.45ಲಕ್ಷಗಳಿಗೆ ನಗರದಲ್ಲಿ ಆಧುನಿಕವಾಗಿ ವಿತರಣಾ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸುವ ಮತ್ತು ಮೇಲ್ಮಟ್ಟದ ಜಲಸಂಗ್ರಹ ಹಾಗೂ ನೆಲಮಟ್ಟದ ಜಲಸಂಗ್ರಹಗಾರಗಳ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ರಾಜ್ಯ ಸರ್ಕಾರದ ವತಿಯಿಂದ ನಗರದ ಜನತೆಗಾಗಿ ಪೌಷ್ಟಿಕ ಮತ್ತು ಕೈಗೆಟುಕುವ ದರದಲ್ಲಿ ಒದಗಿಸಲು ಕೇವಲ ₹5ಗಳಿಗೆ ತಿಂಡಿ, ₹10ಗೆ ಊಟವನ್ನು ಇಂದಿರಾ ಕ್ಯಾಂಟೀನ್ ಆರಂಭಿಸುವ ಯೋಜನೆ ರೂಪಿಸಲಾಗಿದೆ.

***

2018–19ನೇ ಸಾಲಿನ ನಗರಸಭೆ ಆಯ-ವ್ಯಯ ಅಂದಾಜು

ಆರಂಭಿಕ ಶುಲ್ಕ : ₹11.41 ಕೋಟಿ

ಆದಾಯ : ₹ 39.44 ಕೋಟಿ

ಒಟ್ಟು ಜಮಾ : ₹ 50.86 ಕೋಟಿ

ಒಟ್ಟು ವೆಚ್ಚ : ₹ 49.39 ಕೋಟಿ

ಉಳಿತಾಯ : ₹1.50 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry