ಜಿಲ್ಲೆಯಲ್ಲಿ 14ಲಕ್ಷ ಮತದಾರರು

7
ಮಹಿಳಾ ಮತದಾರರ ಸಂಖ್ಯೆ ಇಳಿಮುಖ; ಮತದಾರರ ಗುರುತಿನ ಚೀಟಿ ಹಂಚಿಕೆಗೆ ಕ್ರಮ

ಜಿಲ್ಲೆಯಲ್ಲಿ 14ಲಕ್ಷ ಮತದಾರರು

Published:
Updated:

ಧಾರವಾಡ: ಜಿಲ್ಲೆಯಲ್ಲಿ ಒಟ್ಟು  14,48,748 ಮತದಾರರಿದ್ದಾರೆ. ಅದರಲ್ಲಿ, 7,35,065 ಪುರುಷರು ಹಾಗೂ 7,13,683 ಮಹಿಳೆಯರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮತದಾರರ ಪಟ್ಟಿ ಬಿಡುಗಡೆ ಮಾಡಿದ ಅವರು, ಸೇರ್ಪಡೆ, ಕೈಬಿಡುವುದು, ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 1,03,673 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ, 1,01,536 ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, 2,137 ಅರ್ಜಿಗಳನ್ನು ವಿವಿಧ ಕಾರಣಗಳಿಗೆ ತಿರಸ್ಕೃತಗೊಂಡಿವೆ. ಆನ್‌ಲೈನ್‌ ಮೂಲಕವೂ 4,232 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದರು.

2017ರ ನವೆಂಬರ್‌ ಅಂತ್ಯದಲ್ಲಿದ್ದ ಮತದಾರರ ಪಟ್ಟಿಗೆ ಹೋಲಿಸಿದಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗಿದೆ. ಈಗಿನ ಪಟ್ಟಿಯಲ್ಲಿ ಪ್ರತಿ ಒಂದು ಸಾವಿರ ಪುರುಷರಿಗೆ 964 ಮಹಿಳೆಯರು ಇದ್ದಾರೆ. ಹಿಂದಿನ ಪಟ್ಟಿಯಲ್ಲಿ ಈ ಸಂಖ್ಯೆ 975 ಇತ್ತು. ಮದುವೆಯಾಗಿ ಪರ ಊರಿಗೆ ಹೋಗಿರುವುದು ವಿಧ್ಯಾಭ್ಯಾಸಕ್ಕೆ ಬಂದ ಹಲವರು, ಮರಳಿ ತಮ್ಮ ಊರುಗಳಿಗೆ ತೆರಳಿರುವುದು ಹುಬಳ್ಳಿ–ಧಾರವಾಡ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಇನ್ನೂ ಹೆಸರು ದಾಖಲಿಸದವರು, ಚುನಾವಣೆ ಘೋಷಣೆಯಾಗಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ದಿನಾಂಕದ 10 ದಿನದ ಮೊದಲಿನವರೆಗೂ ಅರ್ಜಿ ಸಲ್ಲಿಸಬಹುದು. ಅವರಿಗೂ ಈ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಲಭಿಸಲಿದೆ ಎಂದು ಅವರು ತಿಳಿಸಿದರು.

ಈವರೆಗೂ ನೋಂದಣಿಯಾದ ಮತದಾರರಲ್ಲಿ 69 ಸಾವಿರ ಮಂದಿಗೆ ಗುರುತಿನ ಚೀಟಿ ವಿತರಣೆ ಮಾಡಬೇಕಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಬೊಮ್ಮನಹಳ್ಳಿ ಹೇಳಿದರು.

ಈ ಬಾರಿ ವಿವಿಪ್ಯಾಟ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಹೀಗಾಗಿ, ನಗರ ಪ್ರದೇಶದಲ್ಲಿ 1,400 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,200 ಮತದಾರರಿಗೆ ಒಂದು ಮತಗಟ್ಟೆಯಂತೆ ಮರು ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ 126 ಮತಗಟ್ಟೆಗಳು ಹೆಚ್ಚಾಗಿವೆ. ಧಾರವಾಡ ಕ್ಷೇತ್ರ ವ್ಯಾಪ್ತಿಯಲ್ಲಿನ ಮೂರು ಮತಗಟ್ಟೆಗಳನ್ನು ಬಂದ್ ಮಾಡಲು ಸಾರ್ವಜನಿಕರು ಅರ್ಜಿ ನೀಡಿದ್ದಾರೆ. ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಮಾತನಾಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿ ಶೇ 69ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಕಡಿಮೆ ಮತದಾನವಾದ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತೃತೀಯ ಲಿಂಗಿಗಳು, ಯುವ ಮತದಾರರನ್ನು ಸೆಳೆಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್‌ 4ರಂದು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ರ‍್ಯಾಂಪ್‌ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಬರಲು ಸಾಧ್ಯವಾಗದವರನ್ನು ಕರೆತರಲು ಎನ್‌ಎಸ್‌ಎಸ್‌ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry