‘ನನ್ನ ಪ್ರೀತಿ, ಸ್ನೇಹಿತೆ, ಮಕ್ಕಳ ಸರ್ವಸ್ವ ಶ್ರೀದೇವಿ’: ಬೋನಿ ಕಪೂರ್

7

‘ನನ್ನ ಪ್ರೀತಿ, ಸ್ನೇಹಿತೆ, ಮಕ್ಕಳ ಸರ್ವಸ್ವ ಶ್ರೀದೇವಿ’: ಬೋನಿ ಕಪೂರ್

Published:
Updated:
‘ನನ್ನ ಪ್ರೀತಿ, ಸ್ನೇಹಿತೆ, ಮಕ್ಕಳ ಸರ್ವಸ್ವ ಶ್ರೀದೇವಿ’: ಬೋನಿ ಕಪೂರ್

ಮುಂಬೈ: ‘ಆಕೆ ನನ್ನ ಪ್ರೀತಿ, ಸ್ನೇಹಿತೆ ಹಾಗೂ ಮಕ್ಕಳ ಸರ್ವಸ್ವವಾಗಿದ್ದಳು. ಒಬ್ಬ ಸ್ನೇಹಿತೆ, ಪತ್ನಿ ಮತ್ತು ಇಬ್ಬರು ಮಕ್ಕಳ ತಾಯಿಯನ್ನು ಕಳೆದುಕೊಂಡಿರುವ ನೋವನ್ನು ಶಬ್ದಗಳಲ್ಲಿ ವಿವರಿಸಲಾಗದು’. ಹೀಗೆಂದು ಹೇಳಿರುವುದು ಬಹುಭಾಷಾ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್.

ಶ್ರೀದೇವಿ ಅಗಲುವಿಕೆ ಬಗ್ಗೆ ಅವರ ಅಂತ್ಯಸಂಸ್ಕಾರ ನಡೆದ ಕೆಲವೇ ಗಂಟೆಗಳ ಬಳಿಕ ಅವರ ಪತಿ ಬೋನಿ ಕಪೂರ್ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಪತ್ರದ ಚಿತ್ರವನ್ನು ಪತ್ನಿಯ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮಕ್ಕಳಾದ ಜಾನ್ವಿ ಮತ್ತು ಖುಷಿಗೇ ಸದ್ಯ ಆದ್ಯತೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

‘ಅರ್ಜುನ್ ಮತ್ತು ಅಂಶುಲಾ ಅವರ ಪ್ರೀತಿ ಮತ್ತು ಬೆಂಬಲದ ಶ್ರೀರಕ್ಷೆ ನನಗೆ ದೊರೆತಿದೆ. ಇವರಿಬ್ಬರೂ ನನಗೆ ಹಾಗೂ ಮಕ್ಕಳಾದ ಖುಷಿ ಮತ್ತು ಜಾನ್ವಿಗೆ ಧೈರ್ಯ ನೀಡುವ ಆಧಾರ ಸ್ತಂಭವಾದರು. ಈ ತುಂಬಲಾರದ ನಷ್ಟವನ್ನು ಎದುರಿಸಲು ನಾವು ಒಂದು ಕುಟುಂಬವಾಗಿ ಪ್ರಯತ್ನಿಸಿದೆವು’ ಎಂದಿರುವ ಬೋನಿ, ಕಷ್ಟದ ಸಂದರ್ಭವನ್ನು ಬಂಡೆಯಂತೆ ಎದುರಿಸಲು ನೆರವಾದ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಪ್ರಪಂಚಕ್ಕೆ ಆಕೆ ಚಾಂದನಿ... ಶ್ರೇಷ್ಠ ನಟಿ... ಅವರ ಪಾಲಿನ ಶ್ರೀದೇವಿ... ಆದರೆ ನನಗೆ ಆಕೆ ಪ್ರೀತಿ, ಸ್ನೇಹಿತೆ, ಮಕ್ಕಳಿಗೆ ತಾಯಿ... ನನ್ನ ಅರ್ಧಾಂಗಿ. ನಮ್ಮ ಮಕ್ಕಳಿಗೆ ಆಕೆಯೇ ಸರ್ವಸ್ವ... ಅವರ ಜೀವ. ನಮ್ಮ ಕುಟುಂಬದ ಪಾಲಿಗೆ ಆಕೆಯೇ ಪ್ರಪಂಚ’ ಎಂದು ಪತ್ರದಲ್ಲಿ ಬೋನಿ ಉಲ್ಲೇಖಿಸಿದ್ದಾರೆ.

ಕಲಾವಿದೆಯಾಗಿ ಶ್ರೀದೇವಿ ಅವರ ಆಸ್ಮಿತೆಯನ್ನು ನೆನಪಿಸಿದ ಬೋನಿ, ನಟರಾದವರು ಬೆಳ್ಳಿ ತೆರೆಯಲ್ಲಿ ಸದಾ ಮಿನುಗುತ್ತಿರುತ್ತಾರೆ. ಹೀಗಾಗಿ ಅವರ ಜೀವನದಲ್ಲಿ ತೆರೆ ಎಳೆಯುವ ಪ್ರಮೇಯವೇ ಬರುವುದಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

‘ಖುಷಿ, ಜಾನ್ವಿಯರ ಅಮ್ಮ ಹಾಗೂ ನನ್ನ ಪ್ರೀತಿಯ ಪತ್ನಿಗೆ ಶುಭ ವಿದಾಯ ಹೇಳಿರುವ ಈ ಸಂದರ್ಭದಲ್ಲಿ ನನ್ನ ಕಳಕಳಿಯ ಮನವಿ, ನಮ್ಮ ಖಾಸಗಿತನ ಗೌರವಿಸಿ. ದುಃಖಿಸಲು ಬಿಡಿ. ಶ್ರೀದೇವಿ ಒಬ್ಬ ಸಾಟಿಯಿಲ್ಲದ ನಟಿ. ಅದಕ್ಕಾಗಿ ಆಕೆಯನ್ನು ಪ್ರೀತಿಸಿ ಮತ್ತು ಗೌರವಿಸಿ’ ಎಂದೂ ಬೋನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಈ ಸಂದರ್ಭದಲ್ಲಿ ಮಕ್ಕಳೇ ನನ್ನ ಆದ್ಯತೆ. ‘ಶ್ರೀ’ ಇಲ್ಲದೆ ಜೀವನ ಮುನ್ನಡೆಸುವ ಹಾದಿ ಕಂಡುಕೊಳ್ಳಬೇಕಿದೆ. ಆಕೆ ನಮ್ಮ ಜೀವನ, ಶಕ್ತಿ ಮತ್ತು ನಗುವಿಗೆ ಕಾರಣಳಾದವಳು. ಆಕೆಯನ್ನು ನಾವು ಮಿತಿಯಿಲ್ಲದೆ ಪ್ರೀತಿಸುತ್ತೇವೆ. ನನ್ನ ‘ಪ್ರೀತಿ’ಗೆ ಚಿರ ಶಾಂತಿ ದೊರೆಯಲಿ. ನಮ್ಮ ಜೀವನ ಮತ್ತೆ ಮೊದಲಿನಂತಿರದು’ ಎಂದು ಬೋನಿ ಬರೆದಿದ್ದಾರೆ.

ದುಬೈನಲ್ಲಿ ಕಳೆದ ವಾರ ಮೃತಪಟ್ಟಿದ್ದ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಬುಧವಾರ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದ ಸ್ಮಶಾನದಲ್ಲಿ ನಡೆದಿತ್ತು.

ಇದನ್ನೂ ಓದಿ...

ಸೂಪರ್‌ಸ್ಟಾರ್ ಶ್ರೀದೇವಿಗೆ ವಿದಾಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry