ನಿತ್ಯ ನೂತನ ‘ನೀತಾ’

7

ನಿತ್ಯ ನೂತನ ‘ನೀತಾ’

Published:
Updated:
ನಿತ್ಯ ನೂತನ ‘ನೀತಾ’

‘ಐ ಹೇಟ್‌ ಸೀರಿಯಲ್ಸ್. ಯಾವಾಗಲೂ ಸೀರಿಯಲ್ ನೋಡ್ತಾ ಟೈಮ್ ವೇಸ್ಟ್ ಮಾಡ್ತಿದ್ದೀಯಾ ಅಂತಾ ಅಮ್ಮನಿಗೆ ನಾನು ಮೊದ್ಲು ಹೇಳ್ತಿದ್ದೆ. ಆದ್ರೆ ಈಗ ಎಲ್ಲ ಉಲ್ಟಾ ಆಗಿದೆ. ನನ್ನ ಮಾತುಗಳೇ ನನಗೆ ವಾಪಸ್ ಬರ್ತಿವೆ’ ಎಂದು ನಗು ಚೆಲ್ಲುತ್ತಾ ತಮ್ಮ ಕಿರುತೆರೆ ವೃತ್ತಿ ಬದುಕಿನ ಕಥನ ಶುರುವಿಟ್ಟುಕೊಂಡರು ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಂದಿನಿ ಪಾತ್ರ ನಿರ್ವಹಿಸುತ್ತಿರುವ ನೀತಾ ಅಶೋಕ್.

‘ಆರಂಭದಲ್ಲಿ ಕ್ಯಾಮೆರಾ ಎದುರು ನಿಂತಿದ್ದೇ ಅಳುಮುಂಜಿ ಎನಿಸುವ ಪಾತ್ರ ಇದ್ದ ‘ಯಶೋದೆ’ ಧಾರಾವಾಹಿಯಲ್ಲಿ. ಆದರೆ, ನಾ ನಿನ್ನ ಬಿಡಲಾರೆ ಧಾರಾವಾಹಿ ಬಹುಮುಖಿ ಎನಿಸುವ ಪಾತ್ರಗಳಿಗೆ ನನ್ನನ್ನು ಒಡ್ಡಿಕೊಳ್ಳಲು ಮುಕ್ತ ಅವಕಾಶ ನೀಡಿತು. ಕಥೆಗೆ ಪೂರಕವಾಗಿ ದ್ವಿಪಾತ್ರವನ್ನೂ ಮಾಡಿದೆ. ನಟನೆಯನ್ನು ಹಾಗೇ ಎಂಜಾಯ್ ಮಾಡುತ್ತಿದ್ದೇನೆ’ ಎನ್ನುವಾಗ ಅವರಲ್ಲಿ ನಟನೆ ಬಗೆಗಿರುವ ಸಂತಸ ವೇದ್ಯವಾಗುತ್ತದೆ.

ಯಶೋದೆ ಧಾರಾವಾಹಿಯ ಆಡಿಷನ್‍ಗೆ ಹೋದಾಗ ನಿರ್ದೇಶಕ ವಿನೋದ್ ಅವರು ಹೇಳಿದ ಡೈಲಾಗ್ ಅನ್ನು ಸರಾಗವಾಗಿ ಹೇಳಿದೆ. ಅದನ್ನೇ ಕ್ಯಾಮೆರಾ ಮುಂದೆ ಹೇಳು ಎಂದಾಗ ಅಕ್ಷರಶಃ ನಡುಗಿ ಹೋಗಿದ್ದೆ. ನನ್ನ ಗೆಳತಿ ಧೈರ್ಯ ತುಂಬದಿದ್ದರೆ ನಾನು ಅಲ್ಲಿಂದ ಖಂಡಿತ ಓಡಿ ಬರ್ತಿದ್ದೆ ಎಂದು ತಮ್ಮ ಮೊದಲ ಅಭಿನಯದ ದಿನಗಳನ್ನು ನೀತಾ ನೆನಪಿಸಿಕೊಂಡರು.

ನಂದಿನಿ ಪಾತ್ರ ನಿರ್ವಹಿಸುತ್ತಿರುವ ನೀತಾ ಅಶೋಕ್ ಕೋಟಾದವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತ ಕುಟುಂಬದ ಕುಡಿ. ಸಂಬಂಧದಲ್ಲಿ ಅವರ ಮರಿಮೊಮ್ಮಗಳು. ಎರಡನೇ ತರಗತಿ ಓದುವವರೆಗೂ ಕಾರಂತರ ಜತೆಗಿನ ಒಡನಾಟ ನೀತಾ ಅವರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಸಾಲಿಗ್ರಾಮದಲ್ಲಿ ಕಾರಂತಜ್ಜನಿಂದ ಕಥೆ ಕೇಳಿದ್ದು, ಶಾಲೆಗೆ ರಜೆ ಹಾಕಿ ಅವರ ಬೆರಳು ಹಿಡಿದು ಓಡಾಡಿದ ನೆನಪುಗಳು ಈ ಕ್ಷಣಕ್ಕೂ ಹಸಿರಾಗಿವೆ.

ಬೆಂಗಳೂರಿನಲ್ಲಿ ಎಂ.ಬಿ.ಎ. ಓದುತ್ತಾ ಆರಾಮವಾಗಿದ್ದ ನೀತಾ ಅವರು ದೊಡ್ಡ ಎಂ.ಎನ್‍.ಸಿ.ಯಲ್ಲಿ ಎಚ್‍.ಆರ್. ವಿಭಾಗದ ಅಧಿಕಾರಿ ಆಗಬೇಕು ಅಂದುಕೊಂಡಿದ್ದರು. ಆದರೆ, ಫೇಸ್‍ಬುಕ್ ಮೂಲಕ ಧಾರಾವಾಹಿ ಆಫರ್ ಬಂದ ಬಳಿಕ ಅವರ ವೃತ್ತಿಜೀವನದ ಹೊಸ ಜಾಡು ತೆರೆಯಿತು. ಅಪ್ಪ ಬ್ಯಾಂಕ್‌ ಉದ್ಯೋಗಿ ಆಗಿದ್ದರಿಂದ ದೆಹಲಿಯಲ್ಲೂ ಓದಬೇಕಾಯಿತು.

ಮನೆಮಾತು ಕನ್ನಡವಾಗಿದ್ದರೂ ನೀತಾ, ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಅರಳು ಹುರಿದಂತೆ ಮಾತನಾಡಬಲ್ಲರು. ಇದೇ ಕಾರಣಕ್ಕಾಗಿ ಹಿಂದಿ ಭಾಷೆಯ ಧಾರಾವಾಹಿ ಪಾತ್ರಗಳನ್ನು ಸೊಗಸಾಗಿ ಮಾಡಿದ್ದಾರೆ. ಡಿ.ಡಿ. ಕಿಸಾನ್‍ಗಾಗಿ 82 ಕಂತುಗಳ ‘ಆಶಾಯೆ’, ಸೋನಿ ಟಿ.ವಿ.ಗಾಗಿ ಯಕ್ಷಗಾನ ಮುಖ್ಯಭೂಮಿಕೆಯ ‘ಮನ್ ಮೆ ವಿಶ್ವಾಸ್ ಹೇ’ ಹಾಗೂ ‘ಕ್ರೈಂ ಪೆಟ್ರೋಲ್’ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಡಸ್ಟ್ರಿಗೆ ಕಾಲಿಟ್ಟ ತಿಂಗಳಲ್ಲೇ ರಾಕಿಂಗ್ ಸ್ಟಾರ್ ಯಶ್ ಜೊತೆ ‘ಮಾಸ್ಟರ್‌ ಪೀಸ್’ನಲ್ಲಿ ನಟಿಸುವ ಆಫರ್ ಬಂದಿತ್ತು. ಆದರೆ, ಏನೂ ಗೊತ್ತಿಲ್ಲದೆ ಹೋಗೋದು ಬೇಡ ಅಂತಾ ನಿರ್ಧಾರ ತೆಗೆದುಕೊಂಡಿದ್ದರು. ಆಮೇಲೆ ಎಲ್ಲರಿಂದ ಬೈಸಿಕೊಳ್ಳಬೇಕಾಯಿತಂತೆ. ಈಗ ಕ್ಯಾಮೆರಾ ಸಲೀಸು ಎನಿಸಿದೆ. ಸಿನಿಮಾದಲ್ಲಿ ನಟನೆಗೆ ಅವಕಾಶಗಳು ಬರುತ್ತಿವೆ ಎನ್ನುವಾಗ ಅವರಲ್ಲಿ ದೃಢವಿಶ್ವಾಸ ಹೊಮ್ಮುತ್ತದೆ. ‘ನೆಗೆಟಿವ್ ರೋಲ್ ಮಾಡುವ ಇಚ್ಛೆಯಿದೆ. ನಿಜ ಜೀವನದಲ್ಲಿ ಇರುವಂತೆ ಬೋಲ್ಡ್ ಮತ್ತು ನೇರವಂತಿಕೆ ಬಯಸುವ ಪಾತ್ರಗಳಿಗೆ ಬಣ್ಣ ಹಚ್ಚುವ ಆಸೆಯಿದೆ’ ಎನ್ನುತ್ತಾರೆ ನೀತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry