ಸಂಯಮ ಕೀರ್ತಿಸ್ತಂಭ

ಮಂಗಳವಾರ, ಮಾರ್ಚ್ 26, 2019
31 °C

ಸಂಯಮ ಕೀರ್ತಿಸ್ತಂಭ

Published:
Updated:
ಸಂಯಮ ಕೀರ್ತಿಸ್ತಂಭ

ಧ್ವಜಸ್ತಂಭ, ದೀಪಸ್ತಂಭ, ಬಾಣಸ್ತಂಭ, ಅಶೋಕಸ್ತಂಭ, ಜಯ/ವಿಜಯಸ್ತಂಭ, ಗರುಡಕಂಬ, ಬ್ರಹ್ಮಕಂಬ, ಮಾನಸ್ತಂಭ, ಕೀರ್ತಿಸ್ತಂಭ ಹೀಗೆ ಹಲವು ಹೆಸರಿನಲ್ಲಿ, ಹಲವು ರೂಪದಲ್ಲಿ ಭಾರತದ ತುಂಬೆಲ್ಲ ಗಮನಾರ್ಹ ಪ್ರಮಾಣದಲ್ಲಿ ಬಟ್ಟಬಯಲಿನಲ್ಲಿ ಸ್ತಂಭಗಳ ನಿರ್ಮಾಣವಾಗಿವೆ. ಇವುಗಳೆಲ್ಲದರ ಹಿಂದೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಆದ್ದರಿಂದ ಇವುಗಳು ಅಧ್ಯಯನ ಯೋಗ್ಯವಾಗಿವೆ. ಒಂದು ಊರಂತು ದೊಡ್ಡ ಕಂಬದ ಕಾರಣದಿಂದಲೇ ‘‘ಕಂಬದಹಳ್ಳಿ’’ ಎಂಬ ಹೆಸರನ್ನು ಪಡೆದಿದೆ. ಸಲ್ಲೇಖನದಿಂದ ಬಂಕಾಪುರದಲ್ಲಿ ಮುಡುಪಿದ (ಧಾರ್ಮಿಕ ಭಾವನೆಯಲ್ಲಿ ಪ್ರಾಣ ತ್ಯಜಿಸಿದ) ಗಂಗರಾಜ ಮಾರಸಿಂಹನ ವಿಷಯ; ಶಿವಗಂಗೆಯ ಜಿನಾಲಯದಲ್ಲಿ ಮುಡಿಪಿದ ರಾಣಿ ಶಾಂತಲೆಯ ಸಾವಿನ ವಿಷಯ, ಶ್ರವಣಬೆಳಗೊಳದ ಶಾಸನಗಳಲ್ಲಿ ದಾಖಲಾಗಿವೆ.

ಹೀಗೆ ಅನೇಕ ದಾಖಲೆಗಳಿಗೆ ಅಲ್ಲಿನ ಶಾಸನಗಳು ಮಾಧ್ಯಮವಾಗಿವೆ. ಈ ಸಾಲಿನಲ್ಲಿ 2018 ಜನವರಿ 27 ರಂದು ಲೋಕಾರ್ಪಣೆಗೊಂಡ, 25 ಅಡಿ ಎತ್ತರದ, ಆಚಾರ್ಯ ವಿದ್ಯಾಸಾಗರರ ಸಂಯಮ ಸ್ವರ್ಣ ಜಯಂತಿಯ ಅಂಗವಾಗಿ ನಿರ್ಮಾಣಗೊಂಡ ಕೀತಸ್ತಂಭವೂ ಸೇರುವುದು. ಭಾರತೀಯ ಜೈನ ಸಂಸ್ಕೃತಿಗೆ ಕರ್ನಾಟಕದ ಕೊಡುಗೆ ಅಪಾರ. ವಿಶೇಷವಾಗಿ ಯುಗಪ್ರವರ್ತಕ ಜೈನಾಚಾರ್ಯರನ್ನು ನೀಡಿದೆ. ಅಂಥವರಲ್ಲಿ ಇಂದು ಧರ್ಮ ಪ್ರಭಾವಕರಾಗಿರುವ ಆಚಾರ್ಯ ವಿದ್ಯಾಸಾಗರರು ಹುಟ್ಟಿ ಬೆಳೆದದ್ದು ಕರ್ನಾಟಕದ ಸದಲಗ ಎಂಬ ಊರಿನಲ್ಲಿ. ಅವರು ಬಾಲಕರಾಗಿದ್ದಾಗಲೇ ಜೀವನ ಪರ್ಯಂತ ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಅನಂತರ ದಿಗಂಬರ ಮುನಿಗಳಾದರು. ಕೆಲವು ವರ್ಷಗಳಲ್ಲೇ ಆಚಾರ್ಯರಾದರು. ತನಗೆ ಆಚಾರ್ಯ ಪದವಿಯನ್ನು ನೀಡಿದ ಗುರುವೇ, ತಮ್ಮ ಆಚಾರ್ಯ ಪದವಿಯನ್ನು ತ್ಯಜಿಸಿ, ಇವರನ್ನು ಆಚಾರ್ಯರನ್ನಾಗಿ ಸ್ವೀಕರಿಸಿ, ಇವರ ಮಾರ್ಗದರ್ಶನದಲ್ಲಿ ಸಲ್ಲೇಖನ ಸ್ವೀಕರಿಸಿ ಮುಡುಪಿದರು.

ಆಚಾರ್ಯ ವಿದ್ಯಾಸಾಗರರು ಇದುವರೆಗೆ 120 ದಿಗಂಬರ ನಿಗ್ರಂಥರಿಗೆ; 172 ಆರ್ಯಕಾ ಮಾತಾಜಿ ಅವರಿಗೆ; 151 ಐಲಕ, ಕ್ಷುಲ್ಲಕರಿಗೆ - ಹೀಗೆ 445

ಜನರಿಗೆ ಜೈನದೀಕ್ಷೆಯನ್ನು ನೀಡಿದ್ದಾರೆ. ಇವರೆಲ್ಲ ಆಜನ್ಮ ಬ್ರಹ್ಮಚಾರಿಗಳು. ಉನ್ನತ ಶಿಕ್ಷಣ ಪಡೆದವರು. ಭಾರತದ ಬಹುತೇಕ ಭಾಗಗಳಲ್ಲಿ ಇವರ ಶಿಷ್ಯರೇ

ಧರ್ಮವಿಹಾರ ಮಾಡುತ್ತಿದ್ದಾರೆ. ಪೂಜ್ಯ ವಿದ್ಯಾಸಾಗರರು ಅನೇಕ ತೀರ್ಥಗಳ ಜರ್ಣೋದ್ಧಾರ ಮಾಡಿದ್ದಾರೆ, ಅನೇಕ ಗೋ ಶಾಲೆಗಳನ್ನು ಸ್ಥಾಪಿಸಿದ್ದಾರೆ.

ಇವರು ಶ್ರೇಷ್ಠ ಕವಿಯೂ, ಉತ್ತಮ ಪ್ರವಚನಕಾರರೂ ಆಗಿದ್ದಾರೆ. ಮುಖ್ಯವಾಗಿ ಇವರು ಸಂಸ್ಕೃತದಲ್ಲಿ ಐದು ಶತಕ ಕೃತಿಗಳನ್ನು; ಹಿಂದಿಯಲ್ಲಿ ‘‘ಮೂಕಮಾಟಿ’’

ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಆಚಾರ್ಯರ ಬ್ರಹ್ಮಚರ್ಯಸ್ಥಲಿಯಾದ ಶ್ರವಣಬೆಳಗೊಳದಲ್ಲಿ, ಅವರ ಶ್ರೀಮಂತ ಶಿಷ್ಯರು ಅಮೃತಶಿಲೆಯಲ್ಲಿ ಕೀರ್ತಿಸ್ತಂಭವನ್ನು ನಿರ್ಮಿಸಿ ಲೋಕಕ್ಕೆ ಅರ್ಪಿಸಿದ್ದಾರೆ. ಇದು ಕಲೆಯ ದೃಷ್ಟಿಯಿಂದ ಅಪೂರ್ವವಾದುದು. ಕೀರ್ತಿಸ್ತಂಭ ಮೇಲೆ ಪೂಜ್ಯರ ಜೀವನ ಘಟನೆಗಳನ್ನು ಕೆತ್ತಲಾಗಿದೆ. ನೀವು ಮತ್ತೊಮ್ಮೆ ಬೆಳಗೊಳಕ್ಕೆ ಹೋದಾಗ, ಇದನ್ನು ನೋಡಿ ಬನ್ನಿ, ಇದರಿಂದ ನಮ್ಮ ಅಸಂಯಮ ಸ್ವಲ್ಪವಾದರು ಕಡಿಮೆ ಆದೀತು. ಅಸಂಯಮವೇ ನಮ್ಮ ಎಲ್ಲ ಸೋಲಿನ ಮೂಲಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry