ರುಪಯ್ಯಾ- ಅಪಾಯ

7

ರುಪಯ್ಯಾ- ಅಪಾಯ

Published:
Updated:
ರುಪಯ್ಯಾ- ಅಪಾಯ

ಸೀದಾ ‘ರುಪಯ್ಯಾ’ ಪಡೆಯದವರು ಯಾರಯ್ಯ?

ಕೆಲವರದು ಮುಂಗಡ,

ಹಲವರದು ಶೇಕಡ

ಒಮ್ಮೆ ನೋಡಿ ನಿಮ್ ನಿಮ್ಮ ಸಂಗಡ

ನೀವೆಲ್ಲ ಒಂದೇ ಪಂಗಡ

ಬೇಡ ಈ ವಿಷಯದಲ್ಲಿ ವಿಂಗಡ

‘ರುಪಯ್ಯಾ’ ನುಂಗುತ್ತಿದೆ ಅರ್ಧ ಆಯವ್ಯಯ

ಖಂಡಿತಾ ಇದು ಅಪಾಯ ‌

ಎಲ್ಲರೂ ಕೂಡಿ ಮಾಡಿ ಉಪಾಯ

ಉಳಿಸಬೇಕಿದೆ ದೇಶದ ಅಡಿಪಾಯ.

-ಗಿರಿರಾಜು, ಬೆಂಗಳೂರು

ಆಮೇಲೆ ನಾಪತ್ತೆ

ಚುನಾವಣೆ ಹತ್ತಿರ ಬಂದಾಗ ಎಲ್ಲಾ ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವ ರಾಜಕಾರಣಿಗಳು, ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಎಲ್ಲಿ ನಾಪತ್ತೆಯಾಗುತ್ತಾರೆ? ಈಗ ಅವರಿಗೆ ಬಡವರ ಮೇಲೆ ಇರುವ ಕನಿಕರ ಆಮೇಲೆ ಎಲ್ಲಿಗೆ ಹೋಗುತ್ತದೆ?

–ಪುಷ್ಪಲತಾ, ಮೈಸೂರು

ಭ್ರಷ್ಟಾಚಾರದ ಆಲ

ಕೆಲವು ರಾಜಕಾರಣಿಗಳು ಭ್ರಷ್ಟಮುಕ್ತ ರಾಜ್ಯ, ಭ್ರಷ್ಟಮುಕ್ತ ದೇಶ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಒಳ್ಳೆಯ ಕೆಲಸವೇ. ಆದರೆ ಈ ಹೇಳಿಕೆಯನ್ನು ಮತ ಗಳಿಕೆಗಷ್ಟೇ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತರಬೇಕು. ಒಬ್ಬ ಪ್ರಧಾನಿ ಅಥವಾ ಒಬ್ಬ ಮುಖ್ಯಮಂತ್ರಿಯಿಂದಷ್ಟೇ ಇಂತಹ ಕನಸಿನ ಸಾಕಾರ ಅಸಾಧ್ಯ. ಏಕೆಂದರೆ ಅವರವರ ಪಕ್ಷದಲ್ಲೇ ಭ್ರಷ್ಟಾಚಾರ ಆಲದ ಮರದಂತೆ ಬೆಳೆದು

ಕೊಂಡಿರುತ್ತದೆ.

ರಾಜಕಾರಣಿಗಳು ಮತ್ತು ಅವರ ಮಕ್ಕಳು ಜೈಲಿಗೆ ಹೋದರೆ ಅಲ್ಲಿಯೂ ಅವರಿಗೆ ಆದರಾತಿಥ್ಯ ದೊರೆಯುತ್ತದೆ. ನಮ್ಮ ಮತಗಳಿಂದ ಗೆದ್ದು, ನಮ್ಮ ದುಡ್ಡಿನಲ್ಲೇ ಐಷಾರಾಮಿ ಜೀವನ ನಡೆಸುತ್ತಿರುವ ರಾಜಕಾರಣಿಗಳ ಬಗ್ಗೆ ಮತದಾರರು ಎಚ್ಚೆತ್ತುಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಅವರು ಕೊಡುವ ದುಡ್ಡಿಗಾಗಿ ಮತಗಳನ್ನು ಹಾಕದೆ, ಪಕ್ಷಗಳನ್ನು ನೋಡದೆ, ತಮ್ಮ ಕ್ಷೇತ್ರದಲ್ಲಿನ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸಬೇಕು

-ಮಹಾಂತೇಶ, ರಬಕವಿ

ಕನಸೇನೋ ಚೆನ್ನಾಗಿದೆ ಆದರೆ...?

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ‘ಸುಖೀರಾಜ್ಯ’ದ ಕನಸು ಬಹಳ ಚೆನ್ನಾಗಿದೆ. ಆದರೆ ಅವರಲ್ಲಿ ದ್ವಂದ್ವ ಕಾಡುತ್ತಿದೆ ಎನಿಸುತ್ತದೆ. ಇಲ್ಲದಿದ್ದರೆ ಬಿಬಿಎಂಪಿಯಲ್ಲಿ ಕಾಂಗ್ರೆಸ್‌ನೊಂದಿಗೆ ಅವರ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧನೆಯ ಸ್ಪಷ್ಟವಾದ ಗುರಿ ತಲುಪ ಬೇಕಾದರೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದಿರುವುದು ಲೇಸು.‌

-ಕೆ.ಎನ್.ದೇವರಾಜ್, ಕುಶಾಲನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry