ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

ಭಾನುವಾರ, ಮಾರ್ಚ್ 24, 2019
34 °C

ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

Published:
Updated:
ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

ಹೀಗೆ ಹೇಳಲು ನನಗೆ ಖುಷಿಯಾಗುತ್ತದೆ. ಜನಪ್ರಿಯ ಸಿನಿಮಾ ಎಂಬ ಬಹುಜನರ, ಸಾಮಾನ್ಯರ ಅಭಿರುಚಿಯನ್ನು ಕೆಲವು ಕಾರಣಗಳಿಗಾಗಿ ವಿರೋಧಿಸುವ, ಟೀಕಿಸುವ ಸೊಫಿಸ್ಟಿಕೇಟೆಡ್ ಸಿನಿಮಾ ಪ್ರಿಯರು ಮನುಷ್ಯರ ಬದುಕನ್ನು ನೇರವಾಗಿ ತೋರಿಸುವ, ವಾಸ್ತವದ ಜಟಿಲತೆಗಳನ್ನು ವಿವರಿಸುವ ಮತ್ತು ಮುಖ್ಯವಾಗಿ ಕಲಾಶ್ರೇಷ್ಠತೆಗಳನ್ನು ಹೊಂದಿರುವ ಕಲಾತ್ಮಕ ಚಲನಚಿತ್ರಗಳನ್ನೇ ನೋಡಲು ಬಯಸುತ್ತಾರೆ ಅಥವಾ ಅವೇ ಉತ್ತಮ ಚಿತ್ರ ಎಂದು ಭಾವಿಸುತ್ತಾರೆ. ಅದನ್ನು ಹೊಸ ಅಲೆ ಸಿನಿಮಾ ಎನ್ನುವ ಹೆಸರಿನೊಂದಿಗೆ ಹಲವರು ಗುರುತಿಸುತ್ತಾರೆ. ಶ್ರೇಷ್ಠ ಮಾನವೀಯ ಗುಣಗಳನ್ನು ಸ್ಫುರಿಸುವ ತಾಣಗಳಾಗಿ ಅವುಗಳನ್ನು ಅವರು ಕೊಂಡಾಡುತ್ತಾರೆ. ಇನ್ನು ಅದಕ್ಕೆ ನೇರ ವಿರುದ್ಧ ದಿಕ್ಕಿನಲ್ಲಿರುವ ಜನಪ್ರಿಯ ಸಿನಿಮಾಗಳ ಮಾದರಿಯಲ್ಲಿ ಬದುಕನ್ನು ತುಂಬಾ ರಮ್ಯವಾಗಿ, ಅವಾಸ್ತವ ನೆಲೆಯಲ್ಲಿ ಕಡೆದು ನೋಡುಗರನ್ನು ಬೆಚ್ಚಿಬೀಳಿಸುವ, ಅಳಿಸುವ, ಕೆರಳಿಸುವ ಕೀಳು ಮಟ್ಟದ ತಂತ್ರಗಳು ಬಳಕೆ ಆಗುತ್ತವೆ; ಆ ಮುಖೇನ ಯೋಚಿಸುವ ಅವಕಾಶವನ್ನು ವೀಕ್ಷಕರಿಗೆ ನೀಡದೆ ಅವರನ್ನು ನಿಶ್ಯಕ್ತಗೊಳಿಸಿ ಅವರ ಅಭಿರುಚಿಗಳನ್ನು ಹಾಳುಗೆಡವುತ್ತವೆ ಎನ್ನುವ ಆಪಾದನೆಯನ್ನು ಕೆಲವರು ಜನಪ್ರಿಯ ಸಿನಿಮಾಗಳ ಮೇಲೆ ಹೊರಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಆರ್ಟ್ ಹೌಸ್ ಸಿನಿಮಾಗಳ ಮೇಲಿರುವ ಆಪಾದನೆಯನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಪ್ರಮೇಯವಿಲ್ಲ ಎಂದುಕೊಳ್ಳುತ್ತೇನೆ. ಸಿನಿಮಾರಂಗದಲ್ಲಿ ಅಥವಾ ಯಾವುದೇ ಕಲಾಪ್ರಕಾರದಲ್ಲಿ ಈ ಬಗೆಯ ಭಿನ್ನತೆಗಳನ್ನು ಒಪ್ಪಿಕೊಳ್ಳದ ಮಂದಿ ನಮ್ಮ ನಡುವೆ ಇರುವಂತೆಯೇ ಜನಪ್ರಿಯ ಮತ್ತು ಆರ್ಟ್ ಸಿನಿಮಾಗಳ ನಡುವೆ ಕೊಂಡಿಯಂತೆ ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳಿವೆ. ಅದನ್ನು ನೀವು ಬ್ರಿಜ್ ಸಿನಿಮಾ ಎಂದಾದರೂ ಕರೆದುಕೊಳ್ಳಿ, ಮಿಡ್ಲ್ ಸಿನಿಮಾ ಎಂದಾದರೂ ಹೆಸರಿಡಿ, ಅದು ನಿಮಗೆ ಬಿಟ್ಟಿದ್ದು. ಆದರೆ ನನಗದು ನವ್ಯೋತ್ತರ ಕಾಲಘಟ್ಟದ, ಪೋಸ್ಟ್ ಮಾಡರ್ನ್ ಸಿದ್ಧಾಂತಗಳ ಸೆಲ್ಯುಲಾಯ್ಡ್ ರೂಪಾಂತರವಾಗಿಯೇ ಕಾಣುತ್ತದೆ.

ಇಂಡಿಪೆಂಡೆಂಟ್ ಸಿನಿಮಾ ಎಂದರೇನು ಎಂದು ತಿಳಿಯಲು ನಾವು ಕಳೆದ ಶತಮಾನದಲ್ಲಿ ಯುರೋಪ್‌ನಲ್ಲಿ ಹುಟ್ಟಿಕೊಂಡ ಹೊಸ ಅಲೆ ಸಿನಿಮಾದ ಇತಿಹಾಸಕ್ಕೆ ಹೋಗಬೇಕು. ಸಿನಿಮಾ ಎಂಬ ಬಹುಪ್ರಭಾವಿ ಅಭಿವ್ಯಕ್ತಿ ಕ್ರಮ ಹುಟ್ಟಿಕೊಂಡಿದ್ದು ಫ್ರಾನ್ಸ್‌ನಲ್ಲಿಯೇ ಆದರೂ ಅದರ ಹೊಸ ನೋಟ ಕ್ರಮ ಹುಟ್ಟಿಕೊಂಡಿದ್ದು ಇಟಲಿಯಲ್ಲಿ! ಹೊಸ ಅಲೆ ಸಿನಿಮಾ ಎಂಬ ಹೊಸ ಗ್ರಹಿಕೆಯಲ್ಲಿ ಪಸರಿಸಿದ ಈ ಸಿನಿಮಾ ಮುಟ್ಟಲು ಯತ್ನಿಸಿದ್ದು ಸಾಮಾನ್ಯರ ಕಷ್ಟಕೋಟಲೆಗಳನ್ನು ಮತ್ತು ಕುಣಿದಾಟಗಳನ್ನೇ ಹೊರತು ಬಂಗಲೆಗಳ ಆಡಂಬರಗಳನ್ನಲ್ಲ ಎನ್ನುವುದು ಅನೇಕರಿಗೆ ಗೊತ್ತೇ ಇದೆ. ಫ್ರಾನ್ಸ್, ಜರ್ಮನಿ ಎನ್ನುತ್ತಾ ಮೆಲ್ಲಗೆ ಯುರೋಪನ್ನು ವ್ಯಾಪಿಸಿಕೊಂಡು ಏಷ್ಯಾ, ಲ್ಯಾಟಿನ್ ಅಮೆರಿಕ, ಆಫ್ರಿಕಾಗಳಿಗೆ ಹರಡಿಕೊಂಡ ಈ ಹೊಸ ಅಲೆ ಸಿನಿಮಾದ ಹಿಂದೆ ಎಡ ಮತ್ತು ಬಲಪಂಥೀಯ ಎರಡೂ ನೆರಳುಗಳಿವೆ. ಇವುಗಳ ಎದುರು ಇದ್ದುದು ಅಮೆರಿಕದ ಹಾಲಿವುಡ್! ತನ್ನ ಅದ್ದೂರಿ ನಿರ್ಮಾಣಗಳಿಂದ ಜಗತ್ತನ್ನೇ ಸೆಳೆಯುತ್ತಿದ್ದ ಹಾಲಿವುಡ್, ಸಿನಿಮಾವನ್ನು ಒಂದು ವ್ಯಾಪಾರೀ ಸಾಧನ ಮಾಡಿಕೊಂಡಿತ್ತು. ಅಮೆರಿಕದ ಕ್ಯಾಪಿಟಲಿಸ್ಟರ ಹೂಡಿಕೆಯ ತಾಣವಾಗಿ ಬದಲಾಗಿ ಸ್ಟುಡಿಯೋಗಳ ಬಿಗಿಮುಷ್ಟಿಯೊಳಗೆ ಅದು ಕಾರ್ಯ ನಿರ್ವಹಿಸತೊಡಗಿತು. ಸ್ಟುಡಿಯೊಗಳು/ ಕಂಪನಿಗಳು ಹೇಳಿದಂತೆ, ಬಯಸಿದಂತೆಯೇ ಸಿನಿಮಾಗಳು ಬರುತ್ತಿದ್ದವು. ಕಥೆಗಳನ್ನು ತೀರ್ಮಾನಿಸುವುದೇ ಸ್ಟುಡಿಯೊಗಳು ಎನ್ನುವ ವ್ಯವಸ್ಥೆ ಗಟ್ಟಿಗೊಳ್ಳುತ್ತಿದ್ದಾಗ 1950ರ ಆಸುಪಾಸಿನಲ್ಲಿ ಕೆಲವು ಸ್ವತಂತ್ರ ನಿರ್ದೇಶಕರು ಸ್ಟುಡಿಯೊಗಳನ್ನು ಧಿಕ್ಕರಿಸಿ ತಾವೇ ಹಣ ಹೂಡಿ ಸಿನಿಮಾ ತಯಾರಿಸಿ ಹಾಲಿವುಡ್‌ನಲ್ಲಿ ಸಂಚಲನ ಮೂಡಿಸಿದರು. ಇಟಲಿ, ಫ್ರಾನ್ಸ್‌ಗಳಲ್ಲಿನ ನ್ಯೂ ವೇವ್ ಸಿನಿಮಾಗಳ ಪ್ರಭಾವದಿಂದ ಅಮೆರಿಕದಲ್ಲಿ ಹೊಸ ಬಗೆಯ ಸಿನಿಮಾವೊಂದು ರೂಪುಗೊಂಡಿತು; ಒಂದೇ ಬಗೆಯ, ಅಮಾನುಷ ಕತೆಗಳ, ನೈತಿಕ ಪಾಠಗಳ ಪಠಿಸುವ ಚಲನಚಿತ್ರಗಳನ್ನು ನೋಡಿ ಬಸವಳಿದಿದ್ದ ಕಳೆದ ಶತಮಾನದ ಕೆಲ ಅಮೆರಿಕದ ಪ್ರೇಕ್ಷಕರು ಸ್ವತಂತ್ರ ಹಾಲಿವುಡ್ ಸಿನಿಮಾಗಳ ಅಂದಕ್ಕೆ ಮಾರುಹೋದರು. ತಮ್ಮ ಕಣ್ಣೆದುರಿನ ಸಮಾಜಗಳು ಪರದೆಗಳ ಮೇಲೆ ಬಿಚ್ಚಿಕೊಂಡು ಹಲವರನ್ನು ಆಕರ್ಷಿಸಿದವು. ಮಡಿವಂತಿಕೆಯನ್ನು ಬಿಟ್ಟು ಸಿನಿಮಾ ಸಹಜವಾಗುತ್ತಿತ್ತು, ಅದರ ಪರಿಮಳದಲ್ಲಿ ಕಳೆದುಹೋದ ಪ್ರೇಕ್ಷಕರು ಸ್ವತಂತ್ರ ಸಿನಿಮಾಗಳ ಯಶಸ್ಸಿಗೆ ಕಾರಣರಾದರು. ಮೆಲ್ಲಗೆ ಸಿನಿಮಾ ಕಂಪನಿಗಳ ಏಕಾಧಿಪತ್ಯ ಕುಸಿಯತೊಡಗಿತು. ಸ್ವತಂತ್ರ ನಿರ್ದೇಶಕರನ್ನು ಬಾಗಿಲಿಗೂ ಬಿಟ್ಟುಕೊಳ್ಳದೇ ಇದ್ದ ದೈತ್ಯ ಸ್ಟುಡಿಯೋಗಳು ಅವರುಗಳನ್ನು ಸ್ವಾಗತಿಸತೊಡಗಿದವು. ಅವರನ್ನು ಆಹ್ವಾನಿಸಿ ಮತ್ತೆ ತಮ್ಮ ಅಧಿಪತ್ಯವನ್ನು ಮುಂದುವರೆಸಿದವು. ಯುರೋಪ್, ಏಷ್ಯಾ, ಲ್ಯಾಟಿನ್ ಅಮೆರಿಕ ಎಂದೆಲ್ಲ ಅದರ ವಿಸ್ತೀರ್ಣ ಬಹುದೊಡ್ಡದು. ಹಾಕಿದ ಬಂಡವಾಳದ ಎರಡರಷ್ಟು ಬಾಚಿಕೊಂಡ ಉದಾಹರಣೆಗಳು ಹೇರಳ. ಹೀಗೆ ಬಹು ಬಜೆಟ್ ಚಿತ್ರಗಳನ್ನು ನಿರ್ಮಿಸುತ್ತಾ ಮಾಯಾಜಾಲವನ್ನು ಸೃಷ್ಟಿಸಿ ಜಗತ್ತನ್ನು ಬೆಚ್ಚಿಬೀಳಿಸುತ್ತಿದ್ದ ಹಾಲಿವುಡ್ ದೊರೆಗಳು 1985- 1990ರಲ್ಲಿ ದಿಗ್ಭ್ರಮೆಗೊಂಡು ನಿಂತರು. ಆಗ ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾದ ಎರಡನೆಯ ಘಟ್ಟ ಶುರುವಾಗಿತ್ತು.

ಕಾಮ, ಹಿಂಸೆ, ಕಳ್ಳತನ- ದರೋಡೆಗಳ ನಿರೂಪಣೆಗಳು ಈ ಘಟ್ಟದ ಪ್ರಮುಖ ಅಂಶಗಳಾಗಿ ಮುನ್ನೆಲೆಗೆ ಬಂದು ನೋಡುಗರನ್ನು ರೋಮಾಂಚನಗೊಳಿಸಿದವು. ಇವುಗಳು ತೋರಿಸಿದ ಸೆಕ್ಸ್, ವಯಲೆನ್ಸ್‌ ಅಂಡ್ ಹೀಸ್ಟ್ ರೂಪಕಗಳು ಮನುಷ್ಯನ ಮೂಲಗುಣಗಳನ್ನು ನಿಕಷೆಗೊಡ್ಡಿದ್ದು ಮಾತ್ರವಲ್ಲದೆ ಹಣದ ಹೊಳೆ ಹರಿಸಿದವು. ಸ್ವತಂತ್ರ ಸಿನಿಮಾ ನಿರ್ಮಾಪಕರು ಹುಟ್ಟಿಕೊಂಡು ನೇರ, ದಿಟ್ಟ ಚಿತ್ರಗಳಿಗೆ ಬಂಡವಾಳ ಹೂಡತೊಡಗಿದರು. ಹಾಲಿವುಡ್‌ನ ಪ್ರಧಾನಧಾರೆ ಸಿನಿಮಾಗಳಿಗಿಂತ ಭಿನ್ನವಾಗಿ ರೂಪುಗೊಳ್ಳುತ್ತಿದ್ದ ಈ ಇಂಡಿಪೆಂಡೆಂಟ್ ಸಿನಿಮಾಗಳು ಯುರೋಪ್ ಮತ್ತು ಜಪಾನ್‌ಗಳ ಹೊಸ ಅಲೆ ಸಿನಿಮಾಗಳಿಂದ ಪ್ರಭಾವಿತವಾಗಿದ್ದವು. ಹೀಗಿದ್ದರೂ ಈ ಚಿತ್ರಗಳ ನೆಲೆಯೇ ವಿಶಿಷ್ಟವಾದುದು. ಹೊಸ ಅಲೆ ಸಿನಿಮಾಗಳ ಮೂಲ ಕಮ್ಯುನಿಸ್ಟ್ ಮತ್ತು ಅಸ್ತಿತ್ವವಾದಿ ಸಿದ್ಧಾಂತಗಳಿಗಿದ್ದರೆ ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳಿಗೆ ನವ್ಯೋತ್ತರ ಸಿದ್ಧಾಂತಗಳೇ ಆಸರೆ! ಪೋಸ್ಟ್ ಮಾಡರ್ನ್ ಸಿದ್ಧಾಂತಗಳ ಜೀವನದಿಯಾದ ತತ್ವಜ್ಞಾನಿ ಫೆಡ್ರಿಕ್ ನೀಷೆ ಈ ನಿರ್ದೇಶಕರನ್ನು ಬಹುವಾಗಿ ಸೆಳೆದ. ಧರ್ಮ ಹೇಳುವ ನೈತಿಕ ಪಾಠಗಳೆಲ್ಲವೂ ನೈಜವೂ ಸಹಜವೂ ಅಲ್ಲ, ಬದಲಿಗೆ ಬಹುಜನರನ್ನು ಯಾಮಾರಿಸುವ ಕಟ್ಟುಕತೆಗಳು ಎಂದು ನೂರಿಪ್ಪತ್ತು ವರ್ಷಗಳ ಹಿಂದೆ ಸಾರಿದ ನೀಷೆ ನೈತಿಕ / ಅನೈತಿಕ ಎನ್ನುವ ಅಂಶಗಳನ್ನು ನಿರಾಕರಿಸಿ ದೇವರು ಸತ್ತ ಎನ್ನುತ್ತಾ ಮನುಷ್ಯನ ಪೂರ್ಣ ಸ್ವಾತಂತ್ರ್ಯಕ್ಕೆ ದನಿಯೆತ್ತರಿಸಿದ. ಇಪ್ಪತ್ತನೇ ಶತಮಾನದ ತತ್ವಜ್ಞಾನಿ ನೀಷೆಯ ಅಂಶಗಳು ಈ ಕಾಲದ ಅಮಾನುಷ ಜ್ಞಾನಿಗಳಾದ ಮಿಷೆಲ್ ಫುಕೊ ಮತ್ತು ಜ಼ಾಕ್ ಡೆರಿಡಾರಂತಹ ನವ್ಯೋತ್ತರ ತತ್ವಜ್ಞಾನಿಗಳಲ್ಲಿ ಹೊಸ ರೂಪ ಪಡೆದುಕೊಂಡವು. ಈ ಜಗತ್ತಲ್ಲಿ ಸತ್ಯ ಎನ್ನುವುದೇ ಇಲ್ಲ, ವಾಸ್ತವ ಎನ್ನುವುದೊಂದು ಭ್ರಮೆ ಎಂದು ತೋರಿಸಿಕೊಟ್ಟ ಕೆಲವು ಸಿದ್ಧಾಂತಿಗಳು, ಬರಹಗಾರರು, ವಿಮರ್ಶಕರು ಹಾಲಿವುಡ್‌ನಲ್ಲಿ ಹೊಸ ಬಗೆಯ ಸಿನಿಮಾ ಬರಲು ಕಾರಣರಾದರು. ಫ್ರೆಂಚ್- ಇಟಾಲಿಯನ್ ಸಿನಿಮಾಗಳ ಪ್ರಭಾವದಿಂದ ರೂಪುಗೊಂಡ ಮಾರ್ಟಿನ್ ಸ್ಕಾರ‍್ಸೆಸಿ, ಸ್ಟೀವನ್ ಸೊಡೆರ್‌ಬರ್ಗ್, ಕ್ವಾಂಟಿನ್ ಟರಾಂಟಿನೊ, ಕ್ರಿಸ್ಟೋಫರ್ ನೊಲನ್ ರಂತಹ ಸ್ವತಂತ್ರ ನಿರ್ದೇಶಕರು ಪ್ರೇಕ್ಷಕರ ಕಣ್ಣುಗಳಿಗೆ ಹೊಸ ನೀರು ಹಾಯಿಸಿದರು. ತತ್ವಜ್ಞಾನಿ ನೀಷೆಯ ಎಷ್ಟೋ ಅಂಶಗಳನ್ನು ತೆರೆಯ ಮೇಲೆ ಬಿಡಿಸಿಟ್ಟು ಸಾಮಾನ್ಯರ ಅಭಿರುಚಿಗಳನ್ನು ಮತ್ತಷ್ಟು ಹರಿತಗೊಳಿಸಿದರು. ಹಾಸ್ಯ, ರಕ್ತ, ಲೈಂಗಿಕತೆಗಳನ್ನು ಒಟ್ಟಿಗೆ ಬೆರೆಸಿ ನೈತಿಕತೆ ಎಂಬ ಮಧ್ಯಮ ವರ್ಗದ ಸಿದ್ಧಾಂತದಿಂದ ಜನರನ್ನು ಬಿಡಿಸಿ ಪೂರ್ಣ ಜೀವ ಸ್ವಾತಂತ್ರ್ಯದತ್ತ ಕೊಂಡೊಯ್ಯಲು ಶ್ರಮಿಸಿದರು. ಇಲ್ಲೇ ಫೆಸ್ಟಿವಲ್ ಸಿನಿಮಾಗಳೂ ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳೂ ಪ್ರತ್ಯೇಕವಾಗಿ ನಿಲ್ಲುವುದು, ಬಹುಜನರನ್ನು ತಲುಪುವುದು.ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾದ ಮೂಲ ಯುರೋಪ್‌ನ ನ್ಯೂ ವೇವ್ ಸಿನಿಮಾ ಎನ್ನುವುದು ನಿಜವಾಗಿದ್ದರೂ ಅದರ ಖದರ್ರೇ ಬೇರೆ. ಹಿಂಸೆಯನ್ನು ಹಸಿ ಹಸಿಯಾಗಿ ತೋರಿಸುವ ಈ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಹಿಂಸೆ-ಅಹಿಂಸೆಗಳನ್ನು ಮೀರಿದ ಗ್ರಹಿಕೆ ಬೇಕು (ಪಿ.ಲಂಕೇಶರ ಈ ಮಾತನ್ನು ಇಲ್ಲಿ ಬಳಸಿಕೊಂಡಿದ್ದೇನೆ). ಇಲ್ಲಿಯ ಪ್ರತಿ ದೃಶ್ಯಗಳಲ್ಲೂ ರಕ್ತ ನಿಮ್ಮ ಕಣ್ಣಿಗೆ ರಾಚುತ್ತದೆ, ಅಥವಾ ಸೆಕ್ಸ್ ದೃಶ್ಯಗಳು ತೆರೆಯನ್ನು ಆವರಿಸಿಕೊಳ್ಳುತ್ತವೆ. ಟರಾಂಟಿನೋನ ಪಲ್ಪ್ ಫಿಕ್ಷನ್ ಚಿತ್ರದಲ್ಲಿ ಸಿಡಿಯುವ ರಕ್ತ ನಿಮ್ಮ ಮುಖಕ್ಕೆ ಬಡಿಯಬಹುದು; ಸೊಡರ್‌ಬರ್ಗ್‌ನ ಹೀರೋಗಳು ದರೋಡೆಕಾರರು, ಸೊಫಿಸ್ಟಿಕೇಟೆಡ್‌ ಕಳ್ಳರು! ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ, ಅವಮಾನಗೊಂಡ, ವಂಚಿಸಲ್ಪಟ್ಟ ಜನರ ಗುಂಪೊಂದು ಬ್ಯಾಂಕ್ ಅಥವ ಕ್ಯಾಸಿನೊಗಳ ದರೋಡೆಗಳಿಗಿಳಿಯುತ್ತದೆ. ಕ್ರಿಸ್ಟೋಫರ್ ನೊಲನ್ ಹೀರೊ-ವಿಲನ್ ಎಂಬ ವೈರುಧ್ಯಗಳನ್ನು ಒಡೆದು ಹಾಕುತ್ತಾನೆ; ಸಿರಿವಂತನೊಬ್ಬನ ಕನಸಿನೊಳಗೆ ಪ್ರವೇಶಿಸಿ ರಹಸ್ಯಗಳನ್ನು ತಿಳಿದುಕೊಂಡು ಕದಿಯುವ ತಂತ್ರಗಳನ್ನು ಹೆಣೆದು ಮನಃಶಾಸ್ತ್ರಕ್ಕೆ ಹೊಸ ಕ್ರಮವನ್ನೇ ಜೋಡಿಸುತ್ತಾನೆ. ಯೂರೋಪ್ ಅಥವ ಏಷ್ಯಾದ ಹೊಸ ಅಲೆ ಸಿನಿಮಾಗಳಿಗೆ ಸಾಧ್ಯವಾಗದ ನವ್ಯೋತ್ತರ ಸಿದ್ಧಾಂತಗಳನ್ನು ಇವರು ತಮ್ಮ ಚಿತ್ರಗಳಲ್ಲಿ ಮೂಡಿಸುತ್ತಾರೆ. ಬಹುಜನರನ್ನು ಸೆಳೆದು ಹೊಸ ಆಲೋಚನಾ ಕ್ರಮಕ್ಕೆ ನಮ್ಮನ್ನು ದೂಡುತ್ತಾರೆ. ಬಹುತೇಕ ನ್ಯೂ ವೇವ್ ಸಿನಿಮಾಗಳಲ್ಲಿ ಕಾಣುವ ಮಾನವೀಯತೆ ಎಂಬ ರಿನೈಸಾನ್ಸ್ ಯುಗದ ಪದದ ಅರ್ಥಗಳನ್ನು ಇವು ನಿರಾಕರಿಸಿ ಹೊಸ ಅರ್ಥ ಸಾಧ್ಯತೆಗಳಿಗೆ ಒಡ್ಡಿಕೊಳ್ಳುತ್ತವೆ ಎಂದೇ ಈ ಚಿತ್ರಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಮ್ಮ ಕಾಲದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬನಾದ ಅಲ್ಥೂಸರ್ ಹೇಳುವ anti humanism ಕಲ್ಪನೆಗೆ ಹತ್ತಿರವಿರುವ ಇವು ಚರ್ಚಿಸಬಯಸುವ ವಿಚಾರಗಳನ್ನು ಉದಾಹರಣೆಯೊಂದರ ಮೂಲಕ ಸ್ಪಷ್ಟಪಡಿಸುತ್ತೇನೆ. ಹಾಲಿವುಡ್‌ನ ಸಮಕಾಲೀನ ಇಂಡಿಪೆಂಡೆಂಟ್ ಸಿನಿಮಾಗಳಲ್ಲಿ ಯಥೇಚ್ಛವಾಗಿ ಬಳಸಲ್ಪಡುತ್ತಿರುವ ದರೋಡೆ, ಕಳ್ಳತನ - ಹೀಸ್ಟ್ (heist)- ವಿಷಯಗಳಾಧರಿತ ಚಲನಚಿತ್ರಗಳ ಹಿಂದಿರುವ ಫಿಲಾಸಫಿಯನ್ನು ನಿಮ್ಮ ಮುಂದಿಟ್ಟು ಫೆಸ್ಟಿವಲ್ ಸಿನಿಮಾಗಳಿಗೂ ಹಾಲಿವುಡ್‌ನ ಈ ಇಂಡಿಪೆಂಡೆಂಟ್ ಸಿನಿಮಾಗಳಿಗೂ ನಡುವಿನ ವ್ಯತ್ಯಾಸಗಳನ್ನು ಚರ್ಚಿಸುತ್ತೇನೆ.

ಪ್ರಭುತ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ನಂಬರ್ ಒನ್ ವಿರೋಧಿಯಾದ ಕಳ್ಳತನವನ್ನು ಬಹುಜಾಣತನದಿಂದ ನೆರವೇರಿಸುವ ಹಾಲಿವುಡ್‌ನ ಹೀಸ್ಟ್ ಚಲನಚಿತ್ರಗಳ ಕಳ್ಳಹೀರೊಗಳು ಸಾಮಾಜಿಕ ಚಲನೆಯನ್ನು ಮರುಪರಿಶೀಲನೆಗೆ ಒಡ್ಡುವವರು; ಉಳ್ಳವರ ಗೆಳೆಯನಾದ ಆಧುನಿಕ ಕಾನೂನುಗಳನ್ನು ಭಂಜಿಸಿ ಹೊಸ ಆರ್ಥಿಕ, ಸಾಮಾಜಿಕ ನೀತಿಗಳಿಗೆ ಒತ್ತಾಯಿಸುವವರು. ಪ್ರಭುತ್ವ ವಿರೋಧಿಸುವ ಎಲ್ಲವನ್ನೂ ಮಾಡಿಯೇ ತೀರುತ್ತೇವೆ ಎಂದು ಸವಾಲೊಡ್ಡುವ ಬಂಡುಕೋರರು! ಕಳ್ಳತನ- ಹೆಂಡ- ಅಫೀಮುಗಳು ಪ್ರಭುತ್ವವನ್ನು ಹೊಡೆದುರುಳಿಸುವ ಸಾಧನಗಳಾದ್ದರಿಂದ ಜಗತ್ತಿನ ಬಹುತೇಕ ಧರ್ಮ-ಪ್ರಭುತ್ವಗಳು ಇವನ್ನು ನಿಷೇಧಿಸುತ್ತವೆ; ನೈತಿಕತೆಯ ಚೌಕಟ್ಟಿನೊಳಗೆ ಅವುಗಳನ್ನು ಎಳೆದು ತಂದು ಕಳ್ಳತನ- ಕುಡಿತ- ಅಫೀಮುಗಳನ್ನು ದುಷ್ಟ ನಡವಳಿಕೆ- ಎಂದು ಸಹಜೀಕರಣಗೊಳಿಸಿ ತಮ್ಮ ಯಜಮಾನ್ಯಕ್ಕೆ ಧಕ್ಕೆಯೆರಗದಂತೆ ತಂತ್ರಗಳ ಹೂಡುತ್ತವೆ. ಆದರೆ ಸ್ವಾತಂತ್ರ್ಯ ಬಯಸುವ ಈ ಚಿತ್ರಗಳ ಹೀರೊಗಳು ಇವನ್ನೆಲ್ಲ ಕೇರ್ ಮಾಡದೆ ‘ನೀನ್ ಮಾಡಬೇಡ ಅನ್ನೋದನ್ನ ನಾವು ಮಾಡೋದೇ ಕಣೊ, ಅದೇನ್ ಕಿತ್ತಾಕಳ್ತಿಯೊ ಕಿತ್ತಾಕ್ಕಳ್ಳೊ’ ಎನ್ನುವಂತಹ ವಾದದ ವರಸೆಗಳನ್ನು ಲೀಲಾಜಾಲವಾಗಿ ಎಸೆಯುತ್ತಿರುತ್ತಾರೆ. ಇದರ ಮೂಲಕ ಆರ್ಥಿಕ ಅಸಮಾನತೆಗಳುಳ್ಳ ವ್ಯವಸ್ಥೆಯನ್ನು ತಮ್ಮ ಕಟು ಹಾಸ್ಯ ಮತ್ತು ಒಡೆಯುವ ಕ್ರಿಯೆಗಳ ಮೂಲಕ ಬುಡಮೇಲುಗೊಳಿಸಲು ಬಯಸುತ್ತಾರೆ. ನೀಷೆ ಹೇಳುವ ನಿಹಿಲಿಸಂನಿಂದ ಪ್ರಭಾವಗೊಂಡಿರುವ ಈ ಚಿತ್ರಗಳು ನೈತಿಕತೆ, ಮಾನವೀಯತೆ ಎಂಬ ಧರ್ಮ, ಸಮಾಜ ಹೇಳುವ ನಿಯಮಗಳನ್ನು ನಿರಾಕರಿಸಿ ಸ್ವರ್ಗ ನರಕ ಎನ್ನುವವು ಬಂಡಲ್ ಬೂಸಾ ಎನ್ನುತ್ತವೆ. ಸಮಾಜದ ನಿಯಮಗಳಿಗೆ ಹೆದರಿ ಸ್ವಾತಂತ್ರ್ಯ ಕಳೆದುಕೊಳ್ಳುವುದೇ ಇಲ್ಲಿ ನರಕ ಎಂದು ಕಳ್ಳತನವನ್ನು ಮೌಲ್ಯದ ಅಳತೆಗೋಲಾಗಿಟ್ಟು ನೋಡುವುದಿಲ್ಲ. ಹೀರೋ-ವಿಲನ್‌ಗಳೆಂಬ ಸಂಪ್ರದಾಯವೇ ಈ ಚಿತ್ರಗಳಲ್ಲಿ ನಗೆಪಾಟಲೀಗೀಡಾಗುತ್ತದೆ. ಮಾನವೀಯತೆ ಎಂಬ ಪದವೇ ಒಂದು ಖಾಲಿ ರೂಪಕ ಎನ್ನುವ ನವ್ಯೋತ್ತರ ಚಿಂತಕರ ಹಾದಿಯಲ್ಲಿ ಸಾಗುತ್ತಾ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ಯೋಚನೆಗಳನ್ನೇ ಮರುಪರಿಶೀಲನೆಗೊಡ್ಡಲು ಬಯಸುತ್ತವೆ. ಇವು ಕಲಾತ್ಮಕ ಸಿನಿಮಾಗಳಂತೆ ಕಾವ್ಯಾತ್ಮಕವಾಗಿ ಗಂಭೀರವಾಗಿ ಚರ್ಚಿಸುವುದಿಲ್ಲ, ಬದಲಿಗೆ ಜನಸಾಮಾನ್ಯರನ್ನು ಬಹುಬೇಗನೆ ತಲುಪುವ ಕೆಲವು ಜನಪ್ರಿಯ ತಂತ್ರಗಳನ್ನು ಬಳಸುತ್ತವೆ; ಕಳ್ಳರ ನಡುವಿನ ಹಾಸ್ಯ, ಆಸೆ ಆಕಾಂಕ್ಷೆಗಳು ತೆರೆಯ ಮೇಲೆ ಮೂಡಿ ಎಲ್ಲರನ್ನೂ ಸೆಳೆಯುತ್ತವೆ. ಈ ಕಾರಣಕ್ಕಾಗಿಯೇ ಸ್ಟೀವನ್ ಸೊಡರ್‌ಬರ್ಗ್‌ನ ಮೂರು ಚಿತ್ರಗಳಾದ Ocean Eleven, Ocean Twelve, Ocean Thirteen ಬಿಲಿಯನ್ ಡಾಲರ್‌ಗಳ ಲಾಭ ಮಾಡಿಕೊಂಡವು. ಮಾರ್ಟಿನ್ ಸ್ಕಾರ‍್ಸೆಸಿ ಆರಂಭಿಸಿದ್ದ ಇಂಡಿಪೆಂಡೆಂಟ್ ಹಾಲಿವುಡ್ ಸಿನಿಮಾಗಳ ಹಾದಿಯನ್ನು ಕ್ವಾಂಟಿನ್ ಟೊರಾಂಟಿನೊ ತನ್ನ Reservoir Dogs ಸಿನಿಮಾದ ಮೂಲಕ ಅಮೆರಿಕದ ಯುವಕರನ್ನು ಬಹುವಾಗಿ ಸೆಳೆದ. ಕಳ್ಳತನಕ್ಕಾಗಿ ಯೋಜನೆ ಸಿದ್ಧಮಾಡುವ ಕೆಲವರ ಕತೆಯೇ ರಿಸಾರ್ವಾಯರ್ ಡಾಗ್ಸ್! ಹಾಲಿವುಡ್‌ನಲ್ಲಿ ಈ ಚಿತ್ರ ಎಂತಹ ಹೊಸ ರಕ್ತ ಹರಿಸಿತೆಂದರೆ ಸಾಲುಸಾಲಾಗಿ ಹೀಸ್ಟ್ ಸಿನಿಮಾಗಳು ತೆರೆಗಳಿಗೆ ಅಪ್ಪಳಿಸಿದವು. ಆ ಚಿತ್ರದಲ್ಲಿ ಕಳ್ಳರ ಗ್ಯಾಂಗಿನ ಸದಸ್ಯರಲ್ಲೊಬ್ಬನಾದ ಮಿಸ್ಟರ್ ಆರೆಂಜ್‌ನ ಸಂಭಾಷಣೆಯೊಂದು ಹೀಗಿದೆ:

‘ಈ ಸಮಾಜ ಕೆಲವರನ್ನು ಒಳ್ಳೆಯವರೆಂದು ಒಂದು ಕಡೆಯೂ, ಮತ್ತೆ ಕೆಲವರನ್ನು ಕೆಟ್ಟವರೆಂದು ಮತ್ತೊಂದು ಕಡೆಯೂ ಇಡುತ್ತದೆ. ಬುಲ್‌ಶಿಟ್, ಫಕಿಂಗ್ ಸೊಸೈಟಿ! ಐ ಡೋಂಟ್ ಲೈಕ್ ಇಟ್!’ಫ್ರೆಂಚ್ ಹೊಸ ಅಲೆ ಸಿನಿಮಾಗಳಿಂದ ಪ್ರಭಾವಕ್ಕೊಳಗಾಗಿದ್ದ ಟರಾಂಟಿನೊನ ಈ ಸಿನಿಮಾದ ನಂತರ ಬಂದ ಗೇರಿ ಗ್ರೇನ The Italian Job, ಟೈಟಾನಿಕ್ ಚಿತ್ರದ ಹೀರೊ ಲಿಯಾನಾರ್ಡೊ ಡಿಕಾಪ್ರಿಯೋ ನಟಿಸಿರುವ ಕ್ರಿಸ್ಟೋಫರ್ ನೊಲನ್‌ನ Inception, ಹೀಗೆ ನೂರಾರು ದರೋಡೆ ಸಿನಿಮಾಗಳು ಇಂದಿಗೂ ಬರುತ್ತಿವೆ. ಸ್ಕಾರ‍್ಸೆಸಿ, ಟರಾಂಟಿನೊಗಳಿಗಿಂತ ಹಿಂದೆ ಈ ಬಗೆಯ ಕಳ್ಳತನದ ಕಥನಗಳು ಇರಲೇ ಇಲ್ಲವೆಂದೆಲ್ಲ. ಫ್ರೆಂಚ್‌ನ ಹೊಸ ಅಲೆ ಸಿನಿಮಾದ ಹಿಂದಿನ ಕಾಲ ಘಟ್ಟದ ರಾಬೊರ್ಟ್ ಬ್ರೊಸನೊ ಕೂಡ ಕಳ್ಳನೊಬ್ಬನ ಕಥೆಯನ್ನು 1959ರಲ್ಲೇ ತೆರೆಗೆ ತಂದಿದ್ದರೂ ಬಹಳ ಜನರನ್ನು ಸೆಳೆದಿರಲಿಲ್ಲ! ಹಾಲಿವುಡ್‌ನ ಈ ಇಂಡಿಪೆಂಡೆಂಟ್ ನಿರ್ದೇಶಕರ ಚಿತ್ರಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಜನರ ಮನಸ್ಸುಗಳನ್ನು ಸೂರೆ ಹೊಡೆದವು! ಇವುಗಳ ಪ್ರಭಾವಕ್ಕೊಳಗಾಗಿ ಜಗತ್ತಿನ ಹಲವಾರು ಭಾಷೆಗಳಲ್ಲಿ ಸಿನಿಮಾಗಳು ನಿರ್ಮಾಣವಾದವು. ನಮ್ಮ ಭಾರತದಲ್ಲೂ ಮುಖ್ಯವಾಗಿ ಹಿಂದಿ ಮತ್ತು ತಮಿಳುಗಳಲ್ಲಿ ಹೀಸ್ಟ್ ಸಿನಿಮಾಗಳು ಒಂದರ ಮೇಲೊಂದರಂತೆ ಬಂದವು. ಕೆಲವು ಯಶಸ್ವಿಯೂ ಆದವು. ಧೂಮ್ 1, 2, 3, ಹ್ಯಾಪಿ ನ್ಯೂ ಇಯರ್, ಸ್ಪೆಷಲ್ 26 (ಹಿಂದಿ), ಬಿಲ್ಲಾ, ಸೂದು ಕವ್ವುಂ, ಸದುರಂಗವೇಟ್ಟೈ, ರಾಜತಂತ್ರಂ (ತಮಿಳು) ಹೀಗೆ ಕೆಲವು ಚಿತ್ರಗಳು ಕಳ್ಳರನ್ನು ನಾಯಕರನ್ನಾಗಿಸಿಕೊಂಡವು. ನಮ್ಮ ಕನ್ನಡದಲ್ಲೂ ಉಪೇಂದ್ರ ಈ ಬಗೆಯ ಚಿತ್ರಗಳನ್ನು ಮಾಡಿದ್ದಾರೆ. ಅಮೀರ್ ಖಾನ್ ನಟಿಸುತ್ತಿರುವ ಥಗ್ಸ್ ಆಫ್ ಹಿಂದೂಸ್ಥಾನ್ ಇನ್ನೇನು ಬರಲಿದೆ. ಇಂತಹ ಚಿತ್ರಗಳು ಬಂದರೂ ನಮ್ಮ ಭಾರತದ ಹೀಸ್ಟ್ ಸಿನಿಮಾಗಳ ಸಮಸ್ಯೆಯೇನೆಂದರೆ, ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳಿಗಿರುವ ತಾತ್ವಿಕ ಹಿನ್ನೆಲೆಗಳಿಲ್ಲದಿರುವುದು! ಅದೆಷ್ಟೇ ಕಳ್ಳರನ್ನು ನಾಯಕರಂತೆ ತೆರೆಯಲ್ಲಿ ವಿಜೃಂಭಿಸಿ ತೋರಿಸಿದರೂ ಅವರ ಕಡೆಯಿರುವ ನ್ಯಾಯವನ್ನು ಚರ್ಚಿಸದೆ ಭಾರತೀಯ ಮೌಲ್ಯದ ಹೆಸರಲ್ಲಿ ಒಳ್ಳೆಯದೇ ಕೊನೆಗೆ ಗೆಲ್ಲುತ್ತದೆ! ನ್ಯಾಯ- ಅನ್ಯಾಯಗಳೆಂಬ ಕಲ್ಪನೆಗಳ ಹಿಂದಿರುವ ಸುಳ್ಳು ಮತ್ತು ಮಾನವೀಯತೆ ಹೆಸರಿನಲ್ಲಿರುವ ಅಮಾನವೀಯತೆಗಳ ಬಿಡಿಸಿ ತೋರದೆ ಕೊನೆಯಲ್ಲಿ ಸತ್ಯದ ಪರವಾಗಿ ನಿಲ್ಲುವ ಹೆಸರಲ್ಲಿ ಮತ್ತದೇ ಹಳೆಯ ಸಿದ್ಧಾಂತಕ್ಕೆ ಜೋತು ಬೀಳುತ್ತವೆ. ಆದರೆ ಟರಾಂಟಿನೊ, ಸ್ಕಾರ‍್ಸೆಸಿ, ಸೊಡರ್‌ಬರ್ಗ್‌ರ ಚಿತ್ರಗಳು ಸಮಕಾಲೀನ ತತ್ವಜ್ಞಾನಗಳನ್ನು ಸಿನಿಮಾ ಪರದೆಗೆ ತಂದು ಬಹುಜನರನ್ನು ಚಿಂತನೆಗೊಡ್ಡುತ್ತವೆ. ಹಳೆಯ ಮಾದರಿಗಳನ್ನೆಲ್ಲ ತೀವ್ರ ಪರೀಕ್ಷೆಗಳಿಗೊಡ್ಡುತ್ತವೆ. ತಮ್ಮ ಸಿನಿಮಾಗಳ ಮೂಲಕ 21ನೇ ಶತಮಾನದ ಜಗತ್ತನ್ನು ವಿಮರ್ಶಿಸುತ್ತವೆ. ಇವರ ಈ ವಿಮರ್ಶೆ ಎಲ್ಲರನ್ನೂ ರಂಜಿಸುತ್ತದೆ, ಆಲೋಚನೆಗೆ ತಳ್ಳುತ್ತದೆ. ವಿಶ್ವವಿದ್ಯಾಲಯಗಳ ಫ್ರೊಫೆಸರ್‌ಗಳಂತೆಯೊ, ಬುದ್ಧಿಜೀವಿಗಳ ಲೇಖನಗಳಂತೆಯೊ ಅಥವ ಕಲಾತ್ಮಕ ಚಿತ್ರಗಳ ಬೋರ್ಡಮ್ ವಾಸ್ತವಗಳಂತೆಯೊ ಇರದೆ ಸಾಮಾನ್ಯ ನೋಡುಗನನ್ನು ಕೆರಳಿಸುತ್ತದೆ. ಜನಪ್ರಿಯ ಸಿನಿಮಾಗಳ ವ್ಯಾಕರಣದಂತೆಯೇ ಚಿತ್ರಕಥೆಗಳನ್ನು ಕಟ್ಟಿಕೊಂಡು ಬಹು ಗಂಭೀರ ವಸ್ತುಗಳನ್ನು ಎಲ್ಲರಿಗೂ ಮುಟ್ಟಿಸುತ್ತವೆ. ಚಿತ್ರಕಥೆಯಲ್ಲಿ ಕುತೂಹಲ, ತಿರುವುಗಳನ್ನು ಒಪ್ಪದ ಕಲಾತ್ಮಕ ಚಿತ್ರಗಳ ಧಾಟಿಯಲ್ಲಿ ಸಾಗದ ಈ ಚಿತ್ರಗಳು ಅರಿಸ್ಟಾಟಲ್ ಹೇಳುವ ನಾಟಕ ಸ್ವರೂಪದಂತೆ ಅಥವ ಸಿದ್ ಫೀಲ್ಡ್‌ನ ಚಿತ್ರಕಥನದ ಪಾಠಗಳಂತೆ ನೋಡುಗರನ್ನು ಆರಂಭದಿಂದ ಕೊನೆಯವರೆಗೂ ಹಿಡಿದು ಕೂರಿಸಲೇ ಬಯಸುತ್ತವೆ. ಕಳ್ಳತನದ ಪ್ಲಾನ್, ಕಳ್ಳತನದ ಎಕ್ಸಿಕ್ಯೂಷನ್, ನಂತರ ಕಳ್ಳತನದ ರಿಸಲ್ಟ್ ಎಂದು ಮೂರು ಅಂಕಗಳಾಗಿ ವಿಂಗಡಿಸಲ್ಪಡುವ ಈ ಹೀಸ್ಟ್ ಸಿನಿಮಾಗಳು ವ್ಯವಸ್ಥೆಯೊಳಗಿದ್ದುಕೊಂಡೇ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು, ಅರಾಜಕತೆ ಸೃಷ್ಟಿಸಲು ಬಯಸುತ್ತವೆ ಮತ್ತದರಲ್ಲಿ ಯಶಸ್ಸನ್ನೂ ಕಂಡಿವೆ. ಆದರೆ ಕಲಾತ್ಮಕ ಚಿತ್ರಗಳಲ್ಲಿ ಇದೇ ವಿಷಯವನ್ನು ಚರ್ಚಿಸಿದರೂ ಅವುಗಳು ಬಹುಜನರನ್ನು ತಲುಪಲು ಸೋಲುತ್ತವೆ ಎನ್ನುವುದು ನನ್ನ ಅಭಿಪ್ರಾಯ. ಈ ಕಾರಣಕ್ಕಾಗಿಯೇ ಹಾಲಿವುಡ್‌ನ ಇಂಡಿಪೆಂಡೆಂಟ್ ಚಿತ್ರಗಳು ಭಿನ್ನವಾಗಿ ನಿಲ್ಲುತ್ತವೆ.

ಅತಿ ಸಾಮಾನ್ಯರನ್ನೂ ತಲುಪಿ ಸಮಾಜವನ್ನು ಹೊಸ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಇನ್ನು ಈ ಚಿತ್ರಗಳಲ್ಲಿ ಯಥೇಚ್ಛವಾಗಿ ಬರುವ ಹಿಂಸೆಯ ವಿಚಾರಕ್ಕೆ ಬರುವ.

ನವ್ಯೋತ್ತರ ಸಂಸ್ಕೃತಿ ಸಿದ್ಧಾಂತಗಳು ಪರಿಭಾವಿಸುವ ಹಿಂಸೆಯ ವಿಭಿನ್ನ ನೋಟಗಳನ್ನು ನಾವು ಇಲ್ಲಿ ಅರ್ಥೈಸಿಕೊಳ್ಳಬಹುದು. ಬಹುತೇಕ ಚಲನಚಿತ್ರಗಳಲ್ಲಿ ಹಿಂಸೆಯನ್ನು, ಕೇಡನ್ನು ಖಳನಾಯಕನ ಜೊತೆಗೆ ಅಂಟಿಸಿ ನಾಯಕ ಹಿಂಸೆಯಿಂದಲೇ ಹಿಂಸೆಯ ಗೆದ್ದು ನ್ಯಾಯ ಪರಿಪಾಲಿಸುವ ಪರಿಪಾಠವಿದೆ. ಬಹುತೇಕ ಕಮರ್ಷಿಯಲ್ - ಜನಪ್ರಿಯ ಸಿನಿಮಾಗಳಲ್ಲಿ ಇದು ಸಿದ್ಧ ಸೂತ್ರ. ಆದರೆ ಪರ್ಯಾಯ ಸಿನಿಮಾಗಳು ಹಿಂಸೆಯ ಹಿಂದಿನ ರಾಜಕೀಯವನ್ನು ಬಯಲಿಗೆಳೆಯುತ್ತವೆ. ಹಿಂಸೆಯನ್ನು ಅದರ ಮೂಲಕ್ಕೆ ಹೋಗಿ ಪರೀಕ್ಷಿಸಲು ಬಯಸುತ್ತವೆ. ಕಲಾತ್ಮಕ ಚಿತ್ರಗಳು ತನ್ನದೇ ಶೈಲಿಯಲ್ಲಿ ಹಿಂಸೆಯನ್ನು ನಿರೂಪಿಸುತ್ತವೆ. ಸಮಾಜದಲ್ಲಿ ಈಗಾಗಲೇ ಒಪ್ಪಿತವಾಗಿರುವ ಹಿಂಸೆ- ಅಹಿಂಸೆ ಎಂಬ ವೈರುಧ್ಯಗಳನ್ನು ನಿರ್ವಚಿಸಲು ಬಯಸುವ ಇವುಗಳು ಕಾವ್ಯಾತ್ಮಕವಾಗಿ ದೃಶ್ಯಗಳನ್ನು ಕಟ್ಟುತ್ತವೆ. ಆದರೆ ಹಾಲಿವುಡ್‌ನ ಇಂಡಿಪೆಂಡೆಂಟ್ ಚಲನಚಿತ್ರಗಳು ಹಿಂಸೆಯನ್ನು ವೈಭವೀಕರಿಸಿ ಸಮಾಜದಲ್ಲಿರುವ ಹಿಂಸೆಯ ಕುರಿತಾದ ಭ್ರಮೆಗಳನ್ನು ಒಡೆದುಹಾಕುತ್ತವೆ. ಅಹಿಂಸೆ ಎನ್ನುವ ಕಥನವೂ ಹೇಗೆ ಯಜಮಾನ್ಯದ ಮರುರೂಪವಾಗುತ್ತದೆ ಎನ್ನುವುದನ್ನ ಮಿಷೆಲ್ ಫುಕೊ ತನ್ನ ಅಧ್ಯಯನದಲ್ಲಿ ತೋರಿಸಿಕೊಟ್ಟಿದ್ದಾನೆ. ಅಹಿಂಸೆ ಎನ್ನುವುದೂ ಉಳ್ಳವರ ಚಾಟಿಯೇಟು ಎನ್ನುವುದು ಅನೇಕರಿಗೆ ತಿಳಿದೇ ಇದೆ. ಸೌಮ್ಯವಾಗಿ ಅಧಿಕಾರಕ್ಕೆ ತಗ್ಗಿ ಬಗ್ಗಿ ನಡೆಯುವ, ಎಷ್ಟೇ ನೋವುಂಡರೂ ವ್ಯವಸ್ಥೆಗೆ ಪ್ರತಿರೋಧ ತೋರದ ನಡತೆಯನ್ನು ಅಹಿಂಸೆಯೆಂತಲೂ ನಾಗರಿಕತೆ, ನೈತಿಕತೆಯ ಮೊದಲ ಹೆಜ್ಜೆ ಎಂತಲೂ ಭಾವಿಸಲಾಗುತ್ತದೆ. ಅದೇ ಸಮಯಕ್ಕೆ ಸಮಾಜದ ಅಂಚಿನಲ್ಲಿರುವವರ ಸಂಘರ್ಷಮಯ ಬದುಕು ಅನಾಗರಿಕವಾಗಿಯೂ ಮಾರ್ಪಡುತ್ತದೆ. ಸಮಾಜದ ನಿಯಮಗಳ ಪಾಲಿಸುವವರು ಒಳ್ಳೆಯವರಾಗಿಯೂ ಧಿಕ್ಕರಿಸುವವರು ದುಷ್ಟರಾಗಿಯೂ ಕಾಣುವ ಮನೋಭೂಮಿಕೆ ಹುಟ್ಟಿನಿಂದಲೇ ಮನುಷ್ಯರಲ್ಲಿ ಬಂದಿದೆಯೇನೊ ಎನ್ನುವಷ್ಟರ ಮಟ್ಟಿಗೆ ಈ ನೈತಿಕ ಪಾಠಗಳು ನಮ್ಮಲ್ಲಿ ಬಿತ್ತಲ್ಪಟ್ಟಿವೆ. ಇಂತಹ ನೈತಿಕ/ಅನೈತಿಕ ಎಂಬ ವೈರುಧ್ಯಗಳನ್ನು ತಳ್ಳಿಹಾಕುವ ಹಾಲಿವುಡ್‌ನ ಇಂಡಿಪೆಂಡೆಂಟ್ ಸಿನಿಮಾಗಳು ಪಶ್ಚಿಮದ ಜಗತ್ತನ್ನು (ಅಮೆರಿಕವೂ ಸೇರಿದಂತೆ) ಗಟ್ಟಿಯಾಗಿ ಹಿಡಿದಿದ್ದ ಹತ್ತೊಂಬತ್ತನೇ ಶತಮಾನದ ವಿಕ್ಟೋರಿಯನ್ ಯುಗದ ಮೌಲ್ಯಗಳನ್ನು ಕಿತ್ತು ಎಸೆಯುತ್ತವೆ. ಹಿಂಸೆಯನ್ನು ವಿಜೃಂಭಿಸಿ ಅದರ ನಾನಾ ಸಾಧ್ಯತೆಗಳಿಗೆ ಹುಡುಕಾಟ ನಡೆಸುತ್ತವೆ. ಫ್ರಾನ್ಸ್‌ನಲ್ಲಿ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಶುರುವಾಗಿದ್ದ ಟ್ರಾನ್ಸ್‌ಗ್ರೆಸ್ಸಿವ್ ಆರ್ಟ್ ಚಳವಳಿಗೆ ಜೀವ ತಂದು ಹಿಂಸೆಯನ್ನು ಹೊಸ ನೆಲೆಯಲ್ಲಿ ಅರ್ಥೈಸಿಕೊಳ್ಳಲು ಹೊರಡುತ್ತವೆ. ಸರಣಿ ಕೊಲೆಗಳು, ಸೈಕೊ ಕಿಲ್ಲರ್‌ಗಳ ಜೀವನವನ್ನು ಶೋಧಿಸುವ ಸಾಧನಗಳಾಗಿಯೂ ಮಾರ್ಪಾಡಾಗುತ್ತವೆ. ಮಿಷೆಲ್ ಫುಕೊ ಹದಿನೆಂಟನೇ ಶತಮಾನದಲ್ಲಿದ್ದ ಪಿಯರ್ ಎಂಬ ಸೈಕೊ ಕಿಲ್ಲರ್‌ನ ಕುರಿತು ಅಧ್ಯಯನ ನಡೆಸಿ ಸೈಕೊಪಾಥ್‌ ಕೊಲೆ ಸರಣಿಗಳಿಗೆ ಹೊಸ ನೋಟಕ್ರಮ ನೀಡಿದ. ಅಂತಹದ್ದೇ ಪ್ರಯತ್ನಗಳನ್ನು ನವ್ಯೋತ್ತರ ಚಲನಚಿತ್ರಗಳು ಮಾಡಲು ಬಯಸುತ್ತವೆ. (ಈ ತರಹದ ಪ್ರಯತ್ನವನ್ನು ಹಿಂದಿಯಲ್ಲಿ ಅನುರಾಗ್ ಕಶ್ಯಪ್‌ನ ರಾಘವ್ 2.0 ಮತ್ತು ವಿಶಾಲ್ ಭಾರದ್ವಾಜ್‌ ಅವರ ಚಿತ್ರಗಳಲ್ಲಿ ಕಾಣಬಹುದು). ನೈತಿಕ ಮೂಲದಿಂದ ಹಿಂಸೆಯನ್ನು ಅರ್ಥ ಮಾಡಿಕೊಳ್ಳಲು ಹೊರಡುವುದೇ ತಪ್ಪು ಎನ್ನುವ ನಿಲುವಿನ ಈ ಚಿತ್ರಗಳಲ್ಲಿ ರಕ್ತದ ಕೋಡಿ ಹರಿಯುತ್ತವೆ. ಹಿಂಸೆಯೆಂಬ ಮನುಷ್ಯ ಸಹಜ ನಡಾವಳಿಯನ್ನು ನೈತಿಕತೆ, ನಾಗರಿಕತೆ ಎಂಬ ಯಜಮಾನ್ಯದ, ಪ್ರಭುತ್ವದ ಅರ್ಥಗಳಲ್ಲಿ ಹಿಡಿದಿಡಲು ಬಯಸದ ಈ ಚಲನಚಿತ್ರಗಳು ಮನುಷ್ಯ ಬದುಕಿನ ಸಂಕೀರ್ಣತೆಗಳ ಚರ್ಚಿಸಲು ಹೊರಡುತ್ತವೆ. ಯುರೋಪ್‌ನ ಮೈಖೇಲ್ ಹನೆಕೆ ಕಲಾತ್ಮಕ ಚಿತ್ರಗಳಲ್ಲಿ ಹಿಂಸೆಯ ಅರ್ಥವನ್ನು ಶೋಧಿಸಿದಂತೆ ಟರಾಂಟಿನೊ, ಸ್ಕಾರ‍್ಸೆಸಿ ಮುಂತಾದ ಹಾಲಿವುಡ್‌ನ ಇಂಡಿಪೆಂಡೆಂಟ್ ನಿರ್ದೇಶಕರು ಜನಪ್ರಿಯ ಸಿನಿಮಾಗಳಲ್ಲಿ ಮಾಡಿದರು. ಹಾಲಿವುಡ್‌ನಲ್ಲಿ ಈ ಹಿಂದೆಯೇ ಬಂದಿದ್ದ ಫ್ರಾನ್ಸಿಸ್ ಫೋರ್ಡ್ ಕಪೋಲನ ಗಾಡ್‌ಫಾದರ್ ಚಲನಚಿತ್ರದಂತೆಯೇ ಗ್ಯಾಂಗ್ಸ್ ಆಫ್ ನ್ಯೂಯಾರ್ಕ್, ಪಲ್ಪ್ ಫಿಕ್ಷನ್, ಕಿಲ್ ಬಿಲ್ 1, ಇಂಗ್ಲೋರಿಯಸ್ ಬಾಸ್ಟರ್ಡ್ಸ್, ಸಿನ್ ಸಿಟಿಯಂತಹ ಹಿಂಸೆ ತುಂಬಿ ತುಳುಕಾಡುವ ಚಲನಚಿತ್ರಗಳು ಹೊರಬಂದು ಹೊಸ ಆಲೋಚನಾ ಕ್ರಮಕ್ಕೆ ಹಾದಿ ಮಾಡಿಕೊಟ್ಟವು. ಈ ಚಿತ್ರಗಳ ಪ್ರಭಾವದಿಂದ ಕೊರಿಯನ್, ಜಪಾನ್, ಲ್ಯಾಟಿನ್ ಅಮೆರಿಕದ ದೇಶಗಳು, ಮತ್ತು ನಮ್ಮ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಕಡೆಗಳಲ್ಲಿ ಹಿಂಸೆಯ ಮರುಪರೀಶೀಲನೆ ನಡೆಯಿತು. ಇಂತಹ ಚಿತ್ರಗಳಿಗೆ ಕೇನ್ಸ್‌, ವೆನಿಸ್ ಚಿತ್ರೋತ್ಸವಗಳಲ್ಲಿ ಪ್ರಮುಖ ಪ್ರಶಸ್ತಿಗಳು ದೊರಕಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಆಸ್ಕರ್ ಪ್ರಶಸ್ತಿಗಳೂ ಈ ಚಲನಚಿತ್ರಗಳಿಗೆ ಸಿಕ್ಕಿವೆ. ಒಟ್ಟಿನಲ್ಲಿ ಹಾಲಿವುಡ್‌ನ ಈ ಇಂಡಿಪೆಂಡೆಂಟ್ ಚಲನಚಿತ್ರಗಳು ಫೆಸ್ಟಿವಲ್‌ಗಳ ಆರ್ಟ್ ಸಿನಿಮಾಗಳಿಗಿಂತ ಭಿನ್ನ ಬಗೆಯಲ್ಲಿ ನಿಂತು ಬಹುಜನರನ್ನು ತಲುಪುತ್ತವೆ. ಹೊಸ ಆವಿಷ್ಕಾರ, ಚಳವಳಿಗಳಿಗೆ ಪೂರಕವಾಗುತ್ತವೆ. ಈ ಬಗೆಯ ಪ್ರಯತ್ನಗಳು ನಮ್ಮಲ್ಲೂ ನಡೆದಿವೆಯಾದರೂ ಕಡಿಮೆ ಎಂದೇ ಹೇಳಬೇಕು.

ಭಾರತದಂತಹ ಸಂಪ್ರದಾಯಬದ್ಧ ರಾಷ್ಟ್ರಗಳ ಸೆನ್ಸಾರ್ ಮಂಡಳಿಗಳು ಇಂದಿಗೂ ಹತ್ತೊಂಬತ್ತನೇ ಶತಮಾನದ ಬ್ರಿಟಿಷ್ ಕಾನೂನುಗಳ ಪರಿಧಿಯಲ್ಲೇ ನಲುಗುತ್ತಿರುವಾಗ ಇಂತಹ ಚಿತ್ರಗಳು ಬರಲು ಸಾಧ್ಯವೆ ಎನ್ನುವುದು ಅನುಮಾನ. ಬಾಲಿವುಡ್‌ನ ಅನುರಾಗ್ ಕಶ್ಯಪ್, ವಿಶಾಲ್ ಭಾರದ್ವಾಜ್, ತೆಲುಗಿನ ರಾಮ್ ಗೋಪಾಲ್ ವರ್ಮಾ, ತಮಿಳಿನ ತ್ಯಾಗರಾಜನ್ ಕುಮಾರಮಂಗಲಂರಂತಹ ಸಮಕಾಲೀನ ಸಿನಿಮಾದ ಶ್ರೇಷ್ಠ ನಿರ್ದೇಶಕರೂ ನಮ್ಮಲ್ಲಿ ಒದ್ದಾಡುವಂತಾಗಿದೆ. ರಕ್ತ ಕಂಡಿದ್ದೇ ಎ ಸರ್ಟಿಫಿಕೇಟ್ ನೀಡುವ ನಮ್ಮ ಭಾರತೀಯ ಸಿನಿಮಾ ವ್ಯವಸ್ಥೆ ನಮ್ಮ ಪ್ರೇಕ್ಷಕರನ್ನು ಸಂಪ್ರದಾಯವಾದೀ ಮನಸ್ಥಿತಿಯಲ್ಲಿಡಲೇ ಬಯಸುತ್ತದೆ. ನಮ್ಮ ಸಿನಿಮಾ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳೂ ಟೈಮ್ಲಿ ಆಗಬೇಕಿದೆ, ಅಪ್‌ಡೇಟ್ ಆಗಬೇಕಿದೆ. ಭಾರತದ ಕಲಾತ್ಮಕ ಚಿತ್ರಣವೇ ಶತಮಾನಗಳ ಹಿಂದೆ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಅದನ್ನು ಅಪೇಕ್ಷಿಸುವುದೂ ರಾಷ್ಟ್ರವಿರೋಧಿಯಾಗಿಬಿಡಬಹುದಾದ ಅಪಾಯಗಳಿವೆ! ಆ ಅಪಾಯಗಳನ್ನು ಇಲ್ಲವಾಗಿಸುವ ಜವಬ್ದಾರಿಯೂ ನಮ್ಮ ಮೇಲಿದೆ.

ಕೊನೆಯಲ್ಲೊಂದು ಮಾತು: ನಮ್ಮ ಕನ್ನಡದಲ್ಲಿ ಇತ್ತೀಚೆಗೆ ಬಂದ ಸಿನಿಮಾಗಳನ್ನು ನಮ್ಮಲ್ಲಿ ಕೆಲವು ತಜ್ಞರು ಕನ್ನಡದ ಹೊಸ ಅಲೆ ಸಿನಿಮಾ ಎಂದೆಲ್ಲಾ ಬಣ್ಣಿಸಿ ಇಟಲಿ, ಫ್ರಾನ್ಸ್‌ಗಳಲ್ಲಿ ಶುರುವಾದ ಹೊಸ ಬಗೆಯ ಸಿನಿಮಾಕ್ಕೇ ಅವಮಾನ ಮಾಡುತ್ತಿದ್ದಾರೆ. ಕಾರ್ನಾಡ್, ಲಂಕೇಶ್, ಕಾಸರವಳ್ಳಿಯಂತಹವರ ಚಿತ್ರಗಳೇ ಕನ್ನಡದ ನಿಜ ಅರ್ಥದ ಹೊಸ ಅಲೆ ಸಿನಿಮಾಗಳು. ಈ ಚಿತ್ರಗಳ ಕಲಾತ್ಮಕತೆಯನ್ನು ಹೀರಿಕೊಂಡು ಬಹುಜನರ ತಲುಪುವ ಟರಾಂಟಿನೊ, ಸ್ಕಾರ‍್ಸೆಸಿ, ನೊಲನ್‌ರ ಇಂಡಿಪೆಂಡೆಂಟ್ ಅಲೆಯ ಚಿತ್ರಗಳು ನಮಗೆ ಬೇಕಾಗಿದೆ. ಗೋಧಿ ಬಣ್ಣ, ಬೂಸಾ ಬಣ್ಣ... ಆಹಾ! ಓಹೋ! ಎಂದು ಹೊಗಳುವ ಸಿನಿಮಾತಜ್ಞರಿಂದ ಪಾರಾಗಿ ನಮ್ಮ ಕನ್ನಡ ಸಿನಿಮಾ ಹೊಸ ಹೆಜ್ಜೆಯಿಡಲು ಅಣಿಯಾಗಬೇಕಾಗಿದೆ. ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry