ಶಿಕ್ಷಣ ತಜ್ಞ ಡಿ.ಬೋರಪ್ಪ ಇನ್ನು ನೆನಪು ಮಾತ್ರ

ಶುಕ್ರವಾರ, ಮಾರ್ಚ್ 22, 2019
28 °C

ಶಿಕ್ಷಣ ತಜ್ಞ ಡಿ.ಬೋರಪ್ಪ ಇನ್ನು ನೆನಪು ಮಾತ್ರ

Published:
Updated:
ಶಿಕ್ಷಣ ತಜ್ಞ ಡಿ.ಬೋರಪ್ಪ ಇನ್ನು ನೆನಪು ಮಾತ್ರ

ಚಿತ್ರದುರ್ಗ: ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಎಲ್ಲ ರೀತಿಯ ನೆರವು ನೀಡುತ್ತಿದ್ದ, ಜಿಲ್ಲೆಯ ಅಭಿವೃದ್ಧಿಗಾಗಿ ಅನವರಿತ ಸೇವೆ ಸಲ್ಲಿಸಿತ್ತಾ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದ ಶಿಕ್ಷಣ ತಜ್ಞ ಡಿ. ಬೋರಪ್ಪ ಶನಿವಾರ ಬೆಳಗಿನಜಾವ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

83ರ ಇಳಿ ವಯಸ್ಸಿನಲ್ಲಿಯೂ ಎಲ್ಲ ಕಾರ್ಯಕ್ರಮದಲ್ಲೂ  ಚಟುವಟಿಕೆಯಿಂದ ಪಾಲ್ಗೊಳ್ಳುತ್ತಿದ್ದ, ಅಭಿಮಾನಿಗಳಿಂದ ‘ಬೋರಪ್ಪಾಜಿ’ ಎಂದೇ ಕರೆಸಿಕೊಳ್ಳುತ್ತಿದ್ದ ಬೋರಪ್ಪ ಅವರು ಇನ್ನು ನೆನಪು ಮಾತ್ರ.

ಬೋರಪ್ಪ ಅವರು ಚಿತ್ರದುರ್ಗ ತಾಲ್ಲೂಕಿನ ದೊಡ್ಡಾಲಘಟ್ಟ ಗ್ರಾಮದಲ್ಲಿ ಜನವರಿ 8, 1935ರಂದು ಕೋಟೆ ಸಣ್ಣಬೋರಪ್ಪ ಮತ್ತು ಬೋರಮ್ಮ ದಂಪತಿ ಮಗನಾಗಿ ಜನಿಸಿದರು. ಬಿ.ಎಸ್ಸಿ, ಬಿ.ಇಡಿ, ಎಂ.ಎ, ಎಂ.ಎಲ್.ಬಿ ಸೇರಿದಂತೆ ಅನೇಕ ಪದವಿಗಳನ್ನು ಪಡೆದು, ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಅನುಭವ ಪಡೆದಿದ್ದರು.

‌ಶಿಕ್ಷಕನಿಂದ ಶಿಕ್ಷಣ ಸಂಸ್ಥೆ ಸ್ಥಾಪಕನವರೆಗೆ: ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು, ನಂತರ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತಿಯಾದರು. ನಿವೃತ್ತಿಯ ನಂತರವೇ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಸ್ಥಾಪಿಸಿದರು. ಶಾಲಾ – ಕಾಲೇಜುಗಳಿಲ್ಲದ ಕಾಲದಲ್ಲಿ, ಬೆರೆಳೆಣಿಕೆಯಷ್ಟು ವಿದ್ಯಾರ್ಥಿ ನಿಲಯಗಳಿದ್ದ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಕ್ಕಳಿಗೆ ಉನ್ನತ ಶಿಕ್ಷಣ ಅವಕಾಶ ಕಲ್ಪಿಸಿದ ಕೀರ್ತಿ ಬೋರಪ್ಪ ಅವರಿಗೆ ಸಲ್ಲುತ್ತದೆ.

ಬೋರಪ್ಪ ಅವರು, ದಾವಣಗೆರೆ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಐಮಂಗಲ, ಬಿ.ಜಿ.ಕೆರೆ, ಹಾಯ್ಕಲ್, ದೊಡ್ಡಾಲಘಟ್ಟ, ಜುಂಜರುಗುಂಟೆ, ಪರಶುರಾಂಪುರ, ಹಿರೇಗುಂಟನೂರು, ಬಳ್ಳಾರಿ ಜಿಲ್ಲೆಯ ಕಮಲಾಪುರ ಸೇರಿದಂತೆ ರಾಜ್ಯದ  ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿದ್ದಾರೆ.

ನರ್ಸರಿಯಿಂದ ಹಿಡಿದು ಆಯುರ್ವೇದ ಕಾಲೇಜಿನವರೆಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೂ ಸೇರಿದಂತೆ ಹಲವು ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಊಟ ಮತ್ತು ವಸತಿ ಸೌಲಭ್ಯವನ್ನೂ ಕಲ್ಪಿಸಿಕೊಟ್ಟಿದ್ದಾರೆ.

ಶಿಕ್ಷಣ ಕ್ಷೇತ್ರವಲ್ಲದೇ, ದೇವಾಲಯಗಳ ಜೀರ್ಣೋದ್ಧಾರ, ಹೊಸ ದೇವಾಲಯ, ಗೋಪುರ, ಕಳಸ, ತೇರು ನಿರ್ಮಾಣದಂತಹ  ಕಾರ್ಯಗಳಿಗೆ ಧನ ಸಹಾಯ ಮಾಡಿದ್ದರು. ಅನೇಕ ಸಂಘ, ಸಂಸ್ಥೆಗಳ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಗೌರವ ಜಿಲ್ಲಾಧ್ಯಕ್ಷರಾಗಿದ್ದ ಅವರು, ನಾಯಕ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ಮತ್ತು ಆಸಕ್ತಿ ಹೊಂದಿದ್ದು, ಕಲೆ, ಸಾಹಿತ್ಯದ ಪ್ರೊತ್ಸಾಹಕರಾಗಿದ್ದರು.

ಪ್ರಶಸ್ತಿ ಪುರಸ್ಕಾರಗಳು: ಮಹರ್ಷಿ ವಾಲ್ಮೀಕಿ ಹೆಸರಲ್ಲಿ ರಾಜ್ಯ ಸರ್ಕಾರ 2014ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿತು. ಮೊಟ್ಟ ಮೊದಲ ಬಾರಿಗೆ ಆ ಪ್ರಶಸ್ತಿಗೆ ಭಾಜನರಾದವರು ಡಿ. ಬೋರಪ್ಪ ಅವರು. ರಾಜ್ಯ ಸರ್ಕಾರ ಬೋರಪ್ಪ ಅವರ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿತು. ಇದರ ಜತೆಗೆ ಬಾಳೇಹೊನ್ನೂರು ಶ್ರೀಗಳು ‘ವಿದ್ಯಾ ಭೂಷಣ’, ದಾವಣಗೆರೆ ಜಿಲ್ಲಾ ಸಮಾಚಾರ ಪತ್ರಿಕೆಯ ‘ವರ್ಷದ ವ್ಯಕ್ತಿ’, ಚಿತ್ರದುರ್ಗದ ಧವಳಗಿರಿ ಬಡಾವಣೆ ವಾಲ್ಮೀಕಿ ಯುವಕ ಸಂಘವು ‘ವೀರ ಮದಕರಿ’, ಬೆಂಗಳೂರಿನ ನೇತಾಜಿ ಶಕ್ತಿ ಸೇವಾ ಸಂಸ್ಥೆಯು ‘ಆದರ್ಶ ಸೇವಾ ರತ್ನ’, ಎಸ್‌ಜೆಎಂ ವಿದ್ಯಾಪೀಠದಿಂದ ‘ಆದರ್ಶ ಸಮಾಜ ಸೇವಕ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry