ರಾಜ್ಯಸಭೆ ಚುನಾವಣೆ: ಗರಿಗೆದರಿದ ಚಟುವಟಿಕೆ

7
ಬಿಜೆಪಿ ರಾಜ್ಯ ಘಟಕದಿಂದ ಸಂಕೇಶ್ವರ, ರಾಜೀವ್‌ ಹೆಸರು ಶಿಫಾರಸು

ರಾಜ್ಯಸಭೆ ಚುನಾವಣೆ: ಗರಿಗೆದರಿದ ಚಟುವಟಿಕೆ

Published:
Updated:

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 23ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ವಲಯದಲ್ಲಿ ತೆರೆಮರೆಯ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಗೊಂದಲ ಮುಂದುವರಿದಿರುವ ಮಧ್ಯೆಯೇ ಬಿಜೆಪಿಯು ಉದ್ಯಮಿ ವಿಜಯ ಸಂಕೇಶ್ವರ ಮತ್ತು ರಾಜೀವ ಚಂದ್ರಶೇಖರ್‌ ಹೆಸರುಗಳನ್ನು ಭಾನುವಾರ ನಡೆದ ಪ್ರಮುಖರ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಿದೆ.

ಈ ಎರಡೂ ಹೆಸರುಗಳನ್ನು ಪಕ್ಷದ ಅಧ್ಯಕ್ಷ ಅಮಿತ್‌ ಶಾಗೆ ಕಳುಹಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರ ಆಯ್ಕೆಗೆ ನಡೆಯಲಿರುವ ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಶಾಸಕರ ಬಲದಿಂದ ಒಂದು ಸ್ಥಾನ ಗೆಲ್ಲಬಹುದಾಗಿದೆ.

ಬಿಜೆಪಿ ಟಿಕೆಟ್‌ ಪಡೆಯಲು ಪಕ್ಷದ ರಾಜ್ಯ ಉಸ್ತುವಾರಿ ಕೆ. ಮುರುಳೀಧರ್ ರಾವ್ ಮತ್ತು  ಡಾ.ಎಂ. ನಾಗರಾಜ್ ಕೂಡಾ ಪ್ರಯತ್ನ ನಡೆಸಿದ್ದರು. ಜಾವಡೇಕರ್‌ ಹೆಸರೂ ಚಲಾವಣೆಯಲ್ಲಿತ್ತು. ಅಭ್ಯರ್ಥಿ ಯಾರಾಗಬೇಕೆಂಬುವುದನ್ನು ಅಂತಿಮವಾಗಿ ಶಾ ತೀರ್ಮಾನಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಸಭೆಯ ಒಂದು ಸ್ಥಾನವನ್ನು ತನಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಬಿಬಿಎಂಪಿಯಲ್ಲಿ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಜೆಡಿಎಸ್‌ ಪಟ್ಟು ಹಿಡಿದಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಕಾಂಗ್ರೆಸ್‌ ತನ್ನ ಶಾಸಕ ಬಲದ ಆಧಾರದಲ್ಲಿ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಇನ್ನೊಂದು ಸ್ಥಾನಕ್ಕೆ ಕೆಲವು ಮತಗಳ ಕೊರತೆ ಆಗಲಿದೆ. ಆ ಸ್ಥಾನ ತನಗೆ ಬಿಟ್ಟು ಕೊಡುವಂತೆ ಜೆಡಿಎಸ್‌ ನಾಯಕರು ಒತ್ತಡ ಹೇರುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ್ನು ಒಪ್ಪಿಸುವ ಹೊಣೆಯನ್ನು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಗೆ ಜೆಡಿಎಸ್‌ ನೀಡಿದೆ. ಹೀಗಾಗಿ, ಅವರು ದೆಹಲಿಯಲ್ಲಿರುವ ಕಾಂಗ್ರೆಸ್‌ ವರಿಷ್ಠರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಸುಲಭವಾಗಿ ಗೆಲ್ಲಬಹುದಾದ ಟಿಕೆಟ್‌ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌ ಒಳಗೆ ಪೈಪೋಟಿ ತೀವ್ರಗೊಂಡಿದೆ. ಮಗನಿಗೆ ಶಿವಾಜಿನಗರ ಕ್ಷೇತ್ರ ಬಿಟ್ಟುಕೊಟ್ಟು ರಾಜ್ಯಸಭೆಯತ್ತ ಮುಖ ಮಾಡಲು ಸಚಿವ ರೋಷನ್‌ ಬೇಗ್‌ ತುದಿಗಾಲಲ್ಲಿ ನಿಂತಿದ್ದಾರೆ. ಕೆ. ರೆಹಮಾನ್‌ ಖಾನ್‌ ಮತ್ತೆ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

ಅಲ್ಲದೆ, ನಜೀರ್ ಅಹಮದ್‌, ಸಲೀಂ ಅಹಮದ್‌, ರಾಣಿ ಸತೀಶ್‌, ಕೈಲಾಸನಾಥ ಪಾಟೀಲ, ಚೆನ್ನಾರೆಡ್ಡಿ, ಮಾಲಕರಡ್ಡಿ, ಶಾಮನೂರು ಶಿವಶಂಕರಪ್ಪ, ಲೋಕಸಭೆ ಮಾಜಿ ಸ್ಪೀಕರ್‌ಗಳಾದ ಮೀರಾ ಕುಮಾರ್‌ ಹಾಗೂ ಶಿವರಾಜ್‌ ಪಾಟೀಲರು ಕೂಡಾ ತೆರೆಮರೆಯಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಮೂರನೇ ಅಭ್ಯರ್ಥಿಯಾಗಿ ಉದ್ಯಮಿ ಚೆನ್ನಾರೆಡ್ಡಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೂಡಾ. ಬಿ.ಎಂ. ಫಾರೂಕ್‌ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ಚಿಂತನೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry