ಕರುಣ್ ನಾಯರ್–ಶ್ರೇಯಸ್ ಅಯ್ಯರ್ ಬಳಗಗಳ ಹಣಾಹಣಿ

ಮಂಗಳವಾರ, ಮಾರ್ಚ್ 26, 2019
31 °C
ಕರ್ನಾಟಕ ಮತ್ತು ಭಾರತ ‘ಬಿ’ ತಂಡ ಮುಖಾಮುಖಿ ಇಂದು

ಕರುಣ್ ನಾಯರ್–ಶ್ರೇಯಸ್ ಅಯ್ಯರ್ ಬಳಗಗಳ ಹಣಾಹಣಿ

Published:
Updated:
ಕರುಣ್ ನಾಯರ್–ಶ್ರೇಯಸ್ ಅಯ್ಯರ್ ಬಳಗಗಳ ಹಣಾಹಣಿ

ಬೆಂಗಳೂರು: ವಿಜಯ್ ಹಜಾರೆ ಕಪ್‌ ಏಕದಿನ ಟೂರ್ನಿಯನ್ನು ಗೆದ್ದು ಭರವಸೆಯಲ್ಲಿರುವ ಕರ್ನಾಟಕ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಕರುಣ್‌ ನಾಯರ್‌ ನೇತೃತ್ವದ ಬಳಗ ಭಾರತ ‘ಬಿ’ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದ ಕರ್ನಾಟಕ ತಂಡ ವಿಜಯ್‌ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಬಲಿಷ್ಠ ಸೌರಾಷ್ಟ್ರ ತಂಡವನ್ನು ಫೈನಲ್‌ನಲ್ಲಿ 41 ರನ್‌ಗಳಿಂದ ಮಣಿಸಿತ್ತು.

ವಿನಯ್‌ ಕುಮಾರ್‌ ಅನುಪಸ್ಥಿತಿಯಲ್ಲಿ ವಿಜಯ್ ಹಜಾರೆ ಟೂರ್ನಿಯ ನಾಕೌಟ್ ಹಂತದಿಂದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕರುಣ್‌ ನಾಯರ್‌ ದೇವಧರ್ ಟ್ರೋಫಿಯಲ್ಲೂ ರಾಜ್ಯ ತಂಡದ ನಾಯಕತ್ವ ವಹಿಸಲಿದ್ದಾರೆ. ಇರಾನಿ ಕಪ್‌ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅವರ ಮೇಲಿದೆ. ಆ ಪಂದ್ಯಕ್ಕೆ ‘ಅಭ್ಯಾಸ’ ನಡೆಸಲು ದೇವಧರ್ ಟ್ರೋಫಿ ಟೂರ್ನಿ ಕರುಣ್‌ಗೆ ಉತ್ತಮ ಅವಕಾಶ ಒದಗಿಸಿದೆ.

ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಭಾರತ ತಂಡದಲ್ಲಿ ಸ್ಥಾನ ಗಳಿಸಿರುವ ಮುಂಬೈನ ಶ್ರೇಯಸ್ ಅಯ್ಯರ್‌ ಭಾರತ ‘ಬಿ’ ತಂಡದ ನಾಯಕ. ಎರಡೂ ತಂಡಗಳಲ್ಲಿ ಉತ್ತಮ ಆಟಗಾರರು ಇರುವುದರಿಂದ ಸೋಮವಾರದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.

ರಣಜಿ, ಸೈಯದ್ ಮುಷ್ತಾಕ್‌ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್‌ ಹೊಳೆ ಹರಿಸಿದ್ದ ಮಯಂಕ್ ಅಗರವಾಲ್‌ ಈಗ ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆಯ ಸರದಿಯಲ್ಲಿ ಅವರು ಇದ್ದಾರೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥರೇ ಹೇಳಿದ್ದಾರೆ. ಆದ್ದರಿಂದ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಅವರು ಪ್ರಮುಖ ಆಕರ್ಷಣೆ ಆಗಲಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಇತರ ಇಬ್ಬರು ಆಟಗಾರರು ಪವನ್ ದೇಶಪಾಂಡೆ ಮತ್ತು ಕೆ.ಗೌತಮ್‌. ಇವರಿಬ್ಬರೂ ಕರ್ನಾಟಕ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕೆಪಿಎಲ್‌ನಲ್ಲಿ ಮಿಂಚಿ ವಿಜಯ್ ಹಜಾರೆ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಯುವ ವೇಗಿ ಮಂಗಳೂರಿನ ಟಿ.ಪ್ರದೀಪ್ ಕೂಡ ಉತ್ತಮ ಸಾಧನೆಯ ಭರವಸೆಯಲ್ಲಿದ್ದಾರೆ.

ಬಲಿಷ್ಠ ಎದುರಾಳಿ: ಮೊದಲ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ಕೂಡ ಬಲಿಷ್ಠವಾಗಿದೆ. ಶ್ರೇಯಸ್ ಅಯ್ಯರ್‌, ಹನುಮವಿಹಾರಿ, ಮನೋಜ್‌ ತಿವಾರಿ ಅವರು ರಾಜ್ಯದ ಬೌಲರ್‌ಗಳಿಗೆ ಸವಾಲಾಗಲಿದ್ದಾರೆ. ಉಮೇಶ್‌ ಯಾದವ್‌, ಜಯಂತ್ ಯಾದವ್‌ ಮುಂತಾದವರ ಜೊತೆಯಲ್ಲಿ ಧರ್ಮೇಂದ್ರ ಸಿಂಹ ಜಡೇಜ ಅವರು ಕರುಣ್ ನಾಯರ್ ನೇತೃತ್ವದ ಬ್ಯಾಟಿಂಗ್ ಬಳಗಕ್ಕೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.  ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಮಣಿಸಿದ ‘ಬಿ’ ತಂಡ ಆತ್ಮವಿಶ್ವಾಸದಲ್ಲಿದೆ.

ತಂಡಗಳು: ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ಮಯಂಕ್ ಅಗರವಾಲ್‌, ಸ್ಟುವರ್ಟ್ ಬಿನ್ನಿ, ಪವನ್ ದೇಶಪಾಂಡೆ, ಸಿ.ಎಂ.ಗೌತಮ್‌, ಶ್ರೇಯಸ್ ಗೋಪಾಲ್‌, ಕೃಷ್ಣಪ್ಪ ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್ ಮೋರೆ, ಟಿ.ಪ್ರದೀಪ್‌, ಪ್ರಸಿದ್ಧ್‌ ಕೃಷ್ಣ, ಅಭಿಷೇಕ್ ರೆಡ್ಡಿ, ಆರ್‌.ಸಮರ್ಥ್‌, ಬಿ.ಆರ್‌.ಸಮರ್ಥ್‌, ಜೆ.ಸುಚಿತ್‌.

ಭಾರತ ‘ಬಿ’: ಶ್ರೇಯಸ್ ಅಯ್ಯರ್ (ನಾಯಕ), ಎ.ಆರ್.ಈಶ್ವರನ್‌, ಮನೋಜ್ ತಿವಾರಿ, ಖಲೀಲ್‌ ಅಹಮ್ಮದ್‌, ಹನುಮ ವಿಹಾರಿ, ಹರ್ಷಲ್‌ ಪಟೇಲ್‌, ಜಯಂತ್ ಯಾದವ್‌, ರಜತ್ ಪಾಟಿದಾರ್‌, ಧರ್ಮೇಂದ್ರ ಸಿಂಹ ಜಡೇಜ, ಶ್ರೀಕರ್ ಭರತ್‌, ಅಕ್ಷದೀಪ್‌ ನಾಥ್‌, ಉಮೇಶ್ ಯಾದವ್‌, ಸಿದ್ದಾರ್ಥ್‌ ಲಾಡ್‌, ಸಿದ್ಧಾರ್ಥ್ ಕೌಲ್‌, ಋತುರಾಜ್ ಗಾಯಕವಾಡ್‌

ಸ್ಥಳ: ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಧರ್ಮಶಾಲಾ

ಪಂದ್ಯ ಆರಂಭ: ಮಧ್ಯಾಹ್ನ 1.30.

*

ಭಾರತ ‘ಬಿ’ ತಂಡಕ್ಕೆ ಜಯ

ಉತ್ತಮ ದಾಳಿ ಸಂಘಟಿಸಿದ ಧರ್ಮೇಂದ್ರ ಸಿಂಗ್‌ ಜಡೇಜ (36ಕ್ಕೆ4) ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಈಶ್ವರನ್‌ (43; 46 ಎ, 5 ಬೌಂ) ಮತ್ತು ಮೂರನೇ ಕ್ರಮಾಂಕದ ಹನುಮ ವಿಹಾರಿ (ಅಜೇಯ 95; 76ಎ, 1 ಸಿ, 16 ಬೌಂ) ಅವರು ಭಾರತ ‘ಬಿ’ ತಂಡಕ್ಕೆ ಜಯ ಗಳಿಸಿಕೊಟ್ಟರು.

ಭಾನುವಾರ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಶ್ರೇಯಸ್‌ ಅಯ್ಯರ್ ಬಳಗ ಎಂಟು ವಿಕೆಟ್‌ಗಳಿಂದ ಮಣಿಸಿತು. ಮಳೆಯಿಂದಾಗಿ ಪಂದ್ಯವನ್ನು 43 ಓವರ್‌ಗಳಿಗೆ ನಿಗದಿ ಮಾಡಲಾಗಿತ್ತು.

ಸಂಕ್ಷಿಪ್ತ ಸ್ಕೋರ್‌

ಭಾರತ ’ಎ’:
41.2 ಓವರ್‌ಗಳಲ್ಲಿ 178 (ಪೃಥ್ವಿ ಶಾ 28, ರಿಕಿ ಭೂಯಿ 78; ಉಮೇಶ್ ಯಾದವ್‌ 28ಕ್ಕೆ2, ಸಿದ್ಧಾರ್ಥ್ ಕೌಲ್‌ 39ಕ್ಕೆ2, ಧರ್ಮೇಂದ್ರ ಸಿಂಗ್‌ ಜಡೇಜ 36ಕ್ಕೆ4, ಜಯಂತ್ ಯಾದವ್‌ 25ಕ್ಕೆ2); ಭಾರತ ‘ಬಿ’: 26.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 (ಎ.ಆರ್.ಈಶ್ವರನ್‌ 43, ಹನುಮ ವಿಹಾರಿ 95, ಶ್ರೇಯಸ್ ಅಯ್ಯರ್‌ 28). ಫಲಿತಾಂಶ: ಭಾರತ ‘ಬಿ’ ತಂಡಕ್ಕೆ ವಿಜೆಡಿ ನಿಯಮದಡಿ ಎಂಟು ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry