ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗಾರಿಕಾ ಸಾಮ್ರಾಜ್ಯ’ ಆಳುವವರು ಯಾರು?

Last Updated 4 ಮಾರ್ಚ್ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ (ಸಣ್ಣ ಮತ್ತು ಮಧ್ಯಮ) ಒಂದಾದ ಪೀಣ್ಯವನ್ನು ಒಳಗೊಂಡ ವಿಧಾನಸಭಾ ಕ್ಷೇತ್ರ ದಾಸರಹಳ್ಳಿ. ಶೇ 90ರಷ್ಟು ಪಾಲು ವಲಸಿಗರೇ ನೆಲೆಸಿರುವ ಇಲ್ಲಿ ಪುನರ್ವಿಂಗಡಣೆ ಬಳಿಕ ನಡೆದ ಎರಡೂ ಚುನಾವಣೆಗಳಲ್ಲೂ ತ್ರಿಕೋನ ಸ್ಪರ್ಧೆ ಇತ್ತು. ಈ ಸಲವೂ ದೊಡ್ಡಮಟ್ಟದ ಹಣಾಹಣಿಗೆ ಇಲ್ಲಿ ವೇದಿಕೆ ಸಜ್ಜಾಗುತ್ತಿದೆ.

ಬಿಜೆಪಿಯ ಎಸ್‌.ಮುನಿರಾಜು ಇಲ್ಲಿನ ಶಾಸಕ. ಇಲ್ಲಿ ಎರಡು ಸಲ ಭಾರಿ ಬಹುಮತದಿಂದ ಗೆದ್ದಿರುವ ಅವರನ್ನೇ ಪಕ್ಷವು ಮತ್ತೆ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಪಕ್ಷದೊಳಗೂ ಅವರಿಗೆ ಪ್ರತಿಸ್ಪರ್ಧಿಗಳಿಲ್ಲ. ಮತದಾರರ ಜೊತೆ ನೇರ ಸಂಪರ್ಕ ಇಟ್ಟುಕೊಂಡಿದ್ದಾರೆ. ಆರೋಗ್ಯ ಶಿಬಿರ, ಕ್ರೀಡಾ ಚಟುವಟಿಕೆ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಮೂಲಕ ಈಗಾಗಲೇ ಚುನಾವಣೆಗೆ ಸಿದ್ಧತೆ ಕೈಗೊಂಡಿದ್ದಾರೆ.

‘ನಾನು ಶಾಸಕನಾದಾಗ ಬಹುತೇಕ ವಾರ್ಡ್‌ಗಳಿಗೆ ಕಾವೇರಿ ನೀರು ಹಾಗೂ ಒಳಚರಂಡಿ ಸಂಪರ್ಕ ಇರಲಿಲ್ಲ. ಈಗ ಎಲ್ಲ ವಾರ್ಡ್‌ಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. 40ಕ್ಕೂ ಅಧಿಕ ಉದ್ಯಾನಗಳನ್ನು ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ತಳಮಟ್ಟದವರೆಗೂ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ವರಿಷ್ಠರು ಟಿಕೆಟ್‌ ನೀಡಿದರೆ, ಮತ್ತೆ ಗೆದ್ದು ಬರುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಮುನಿರಾಜು.

‘ಕ್ಷೇತ್ರದಲ್ಲಿದ್ದ 30ಕ್ಕೂ ಹೆಚ್ಚು ಇಸ್ಪೀಟ್‌ ಕ್ಲಬ್‌ಗಳನ್ನು ನಾನು ಶಾಸಕನಾದ ಬಳಿಕ ಮುಚ್ಚಿಸಿದ್ದೇನೆ. ಈಗ ಒಂದೇ ಒಂದು ಇಸ್ಪೀಟ್‌ ಕ್ಲಬ್‌ ಇಲ್ಲ’ ಎಂದು ಅವರು ತಿಳಿಸಿದರು.

ಜೆಡಿಎಸ್‌ ಬಿರುಸಿನ ತಯಾರಿ: ದಾಸರಹಳ್ಳಿ ನಗರಸಭೆಯಾಗಿದ್ದ ಕಾಲದಿಂದಲೂ ಇಲ್ಲಿ ಜೆಡಿಎಸ್‌ ಭದ್ರ ನೆಲೆಯನ್ನು ಹೊಂದಿದೆ. ಪಕ್ಷ ಅಭ್ಯರ್ಥಿಯಾಗಿದ್ದ ಅಂದಾನಪ್ಪ 2008ರಲ್ಲಿ 28,024 ಹಾಗೂ 2013ರಲ್ಲಿ 43,049 ಮತ ಪಡೆದಿದ್ದರು. ದಾಸರಹಳ್ಳಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಅವರು ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಸೇರಿದ್ದರು. ಅವರ ಮಗ ಶ್ರೀಧರ್‌ ಅವರನ್ನು ಬಿಜೆಪಿ ಯುವ ಮೋರ್ಚಾ ಕ್ಷೇತ್ರ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಂದಾನಪ್ಪ ಇತ್ತೀಚೆಗೆ ಬಿಜೆಪಿಯನ್ನು ತೊರೆದು ಜೆಡಿಎಸ್‌ಗೆ ಮರಳಿದ್ದಾರೆ. ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ.

ಎಸ್‌.ಎಂ.ಕೃಷ್ಣ ಅವರಿಗೆ ಗನ್‌ಮ್ಯಾನ್‌ ಆಗಿದ್ದ ಆರ್‌.ಮಂಜುನಾಥ್‌ಗೆ (ಗನ್‌ಮ್ಯಾನ್‌ ಮಂಜಪ್ಪ) ಜೆಡಿಎಸ್‌ ಈಗಾಗಲೇ ಟಿಕೆಟ್‌ ನೀಡಿದೆ. ಎರಡು ಬಾರಿ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದ್ದರು.

ಬೇರೆ ಪಕ್ಷಗಳ ಮುಖಂಡರನ್ನೂ ಜೆಡಿಎಸ್‌ಗೆ ಸೆಳೆಯುವ ಪ್ರಯತ್ನವೂ ನಡೆದಿದೆ. ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕೆ.ಸಿ.ವೆಂಕಟೇಶ್‌, ಪಾಲಿಕೆಯ ಮಾಜಿ ಸದಸ್ಯ ತಮ್ಮಣ್ಣ, ಮುಖಂಡ ಕೆ.ಜಿ.ಹನುಮಂತರಾಯ, ಗುಂಡಪ್ಪ ಬಿಜೆಪಿ ನಂಟು ಕಡಿದುಕೊಂಡು ಬೆಂಬಲಿಗರೊಂದಿಗೆ ಈಗಾಗಲೇ ಜೆಡಿಎಸ್‌ ಸೇರಿ
ದ್ದಾರೆ. ಸ್ಥಳೀಯ ಮುಖಂಡರ ಪಕ್ಷಾಂತರ ಪರ್ವ ಇಲ್ಲಿ ಹೊಸ ರಾಜಕೀಯ ಸಮೀಕರಣವನ್ನು ಸೃಷ್ಟಿಸಿದೆ. ಪಕ್ಷದಿಂದ ದೂರವಾಗಿದ್ದ ನಾಯಕರನ್ನು ಮರಳಿ ಕರೆತರುವ ಪ್ರಯತ್ನವೂ ನಡೆದಿದೆ. ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರೇ ಈ ಬಗ್ಗೆ ಆಸ್ಥೆ ವಹಿಸಿದ್ದಾರೆ.

‘ಶಾಸಕರ ಕಾರ್ಯವೈಖರಿಯಿಂದ ಬೇಸತ್ತು ಅವರ ಪಕ್ಷದ ಮುಖಂಡರೇ ನಮ್ಮ ಪಕ್ಷದತ್ತ ಮುಖಮಾಡಿದ್ದಾರೆ. 2008ರ ಚುನಾವಣೆಗೆ ಹೋಲಿಸಿದರೆ 2013ರಲ್ಲಿ ಅವರ ಗೆಲುವಿನ ಅಂತರ ಸುಮಾರು 10 ಸಾವಿರದಷ್ಟು ಕಡಿಮೆ ಆಗಿತ್ತು. ಈ ಪ್ರದೇಶದಲ್ಲಿ ನಮ್ಮ ಪಕ್ಷಕ್ಕೆ ಹಿಂದಿನಿಂದಲೂ ಉತ್ತಮ ಜನಬೆಂಬಲ ಇತ್ತು. ಈ ಬಾರಿ ಪಕ್ಷದ ಮುಖಂಡರೆಲ್ಲ ಒಂದಾಗಿದ್ದೇವೆ. ಒಗ್ಗಟ್ಟಿನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಜೆಡಿಎಸ್‌ನ ಕ್ಷೇತ್ರ ಘಟಕದ ಅಧ್ಯಕ್ಷ ಎಂ.ಮುನಿಸ್ವಾಮಿ.

ಇಲ್ಲಿ (ಇದು 2008ಕ್ಕಿಂತ ಮುಂಚೆ ಉತ್ತರಹಳ್ಳಿ ವ್ಯಾಪ್ತಿಗೆ ಸೇರಿತ್ತು) 1989ರ ನಂತರ ಒಮ್ಮೆಯೂ ಕಾಂಗ್ರೆಸ್‌ ಗೆದ್ದಿಲ್ಲ. 1994ರ ನಂತರ ಸತತವಾಗಿ ಬಿಜೆಪಿ ಸದಸ್ಯರೇ ಇಲ್ಲಿ ಆಯ್ಕೆಯಾಗುತ್ತಿದ್ದಾರೆ. ಬಳಿಕದ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿದೆ. ಕಳೆದ ಬಾರಿ ಬಿ.ಎಲ್‌.ಶಂಕರ್‌ ಪಕ್ಷದ ಅಭ್ಯರ್ಥಿಯಾಗಿದ್ದರು. ಈ ಬಾರಿ ಅವರು ಚಿಕ್ಕಮಗಳೂರು ಜಿಲ್ಲೆಯಿಂದ ಸ್ಪರ್ಧಿಸುವ ನಿರೀಕ್ಷೆ ಇದೆ.

ಟಿಕೆಟ್‌ ಗಿಟ್ಟಿಸಲು ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಇದೆ. ಶೆಟ್ಟಿಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಕೆ.ನಾಗಭೂಷಣ್‌, ಕೆಪಿಸಿಸಿ ಮಾಜಿ ಸದಸ್ಯ ಸೌಂದರ್ಯ ಮಂಜಪ್ಪ, ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಅಮೃತ್‌ ಗೌಡ, ಪ್ರಧಾನ ಕಾರ್ಯದರ್ಶಿ ಉಮೇಶ್‌ ಬೋರೇಗೌಡ, ಜೆಡಿಎಸ್‌ನಿಂದ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕೆ.ಎಲ್‌.ತಿಮ್ಮನಂಜಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲೋಕೇಶ್‌ ಗೌಡ, ನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಜಯಂತಿ ಭಗವಾನ್‌ ಅವರು ಇಲ್ಲಿನ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

‘ಪಕ್ಷವು ಸೂಚಿಸಿದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ. ದಾಸರಹಳ್ಳಿಯಲ್ಲಿ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಹಾಗಾಗಿ ಇಲ್ಲಿ ಈ ಬಾರಿ ನಮಗೆ ಅವಕಾಶ ಹೆಚ್ಚು’ ಎನ್ನುತ್ತಾರೆ ಶಂಕರ್‌.

‘ಆರ್‌.ಮಂಜುನಾಥ್‌ ಪಕ್ಷ ತೊರೆದಿರುವುದರಿಂದ ಹೆಚ್ಚೇನೂ ನಷ್ಟವಾಗದು’ ಎಂದು ಅವರು ತಿಳಿಸಿದರು.

3,000ಕ್ಕೂ ಹೆಚ್ಚು ಕಾರ್ಮಿಕರಿರುವ 30ಕ್ಕೂ ಅಧಿಕ ಗಾರ್ಮೆಂಟ್‌ ಕಾರ್ಖಾನೆಗಳು ಇಲ್ಲಿವೆ. ಇವುಗಳಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ಈ ಕ್ಷೇತ್ರದ ಮತದಾರರು. ಕೈಗಾರಿಕಾ ಸಾಮ್ರಾಜ್ಯವನ್ನು ಹೊಂದಿರುವ ಈ ಕ್ಷೇತ್ರದ ಪ್ರತಿನಿಧಿಯ ಆಯ್ಕೆಯಲ್ಲಿ  ಮಹಿಳಾ ಮತದಾರರೇ ನಿರ್ಣಾಯಕ  ಪಾತ್ರ ವಹಿಸಲಿದ್ದಾರೆ.

ಕಾಯಕಲ್ಪಕ್ಕೆ ಕಾಯುತ್ತಿವೆ ಕೆರೆಗಳು

ಈ ಕ್ಷೇತ್ರದ ಮಲ್ಲಸಂದ್ರ, ಅಬ್ಬಿಗೆರೆ, ನಾಸಂದ್ರ, ನೆಲಗದರನಹಳ್ಳಿ ಕೆರೆಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ.

ಶಿವಪುರ ಕೆರೆ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಮಂಜೂರಾಗಿದೆ. ದಾಸರಹಳ್ಳಿ ಹಾಗೂ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುನಿರಾಜು ತಿಳಿಸಿದರು.

ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾಗಿರುವ ಶೆಟ್ಟಿಹಳ್ಳಿ, ಚಿಕ್ಕಸಂದ್ರ, ಸಿಡೇದಹಳ್ಳಿ, ಮ್ಯಾದರಹಳ್ಳಿ ಹಾಗೂ ಅಬ್ಬಿಗೆರೆಗಳಿಗೆ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸೌಕರ್ಯವನ್ನು ಇನ್ನಷ್ಟೇ ಕಲ್ಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT