7

‘ಕೈ’ ಜಾರಿದ ಮೇಘಾಲಯ

Published:
Updated:
‘ಕೈ’ ಜಾರಿದ ಮೇಘಾಲಯ

ನವದೆಹಲಿ: ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ಮುಖ್ಯಸ್ಥ ಕಾನ್ರಾಡ್‌ ಸಂಗ್ಮಾ ಮೇಘಾಲಯ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ.

ತಮಗೆ 34 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿರುವ ಕಾನ್ರಾಡ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಮಂಗಳವಾರ ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

60 ಸದಸ್ಯರ ವಿಧಾನಸಭೆಯಲ್ಲಿ 21 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿದೆ. ಸರ್ಕಾರ ರಚನೆಗೆ ಕಾಂಗ್ರೆಸ್‌ ಹಕ್ಕನ್ನೂ ಮಂಡಿಸಿದೆ. ಆದರೆ ಬಹುಮತಕ್ಕೆ ಬೇಕಾದಷ್ಟು ಶಾಸಕರ ಬೆಂಬಲ ಪಡೆಯಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಮೇಘಾಲಯದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌ ಬಯಕೆ ಈಡೇರುವುದು ಕಷ್ಟ.

ಎನ್‌‍ಪಿಪಿ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ (ಯುಡಿಪಿ), ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಎಚ್‌ಎಸ್‌ಪಿಡಿಪಿ) ಕ್ರಮವಾಗಿ ಆರು ಮತ್ತು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ.

ಈ ಎಲ್ಲ ಪಕ್ಷಗಳು ಜತೆಯಾಗಿ ರೀಜನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಆರ್‌ಡಿಎ) ಎಂಬ ಮೈತ್ರಿಕೂಟವನ್ನು ರಚಿಸಿಕೊಂಡು ಸರ್ಕಾರ ರಚನೆಯ ಹಕ್ಕು ಮಂಡಿಸಿವೆ. ಈ ಮೈತ್ರಿಕೂಟಕ್ಕೆ 29 ಶಾಸಕರ ಬೆಂಬಲ ಇದೆ.

ಮೈತ್ರಿಕೂಟ ರಚನೆಯಾಗುವುದಕ್ಕೆ ಮೊದಲು ಬೆಂಬಲ ಕ್ರೋಡೀಕರಣಕ್ಕಾಗಿ ಭಾರಿ ಚಟುವಟಿಕೆ ನಡೆಯಿತು. ಕಾಂಗ್ರೆಸ್‌ನ ಮುಕುಲ್‌ ಸಂಗ್ಮಾ ಅವರು ಯುಡಿಪಿ ಮುಖ್ಯಸ್ಥ ಡೊಂಕುಪಾರ್‌ ರಾಯ್‌ ಅವರನ್ನು ಭೇಟಿಯಾಗಿ ಬೆಂಬಲ ಕೋರಿದರು. ಆದರೆ ‘ಈ ಪ್ರಸ್ತಾವವನ್ನು ನಾವು ತಿರಸ್ಕರಿಸಿದ್ದೇವೆ. ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೆಂಬಲ ಕೊಡಲು ನಿರ್ಧರಿಸಿದ್ದೇವೆ’ ಎಂದು ರಾಯ್‌ ತಿಳಿಸಿದ್ದಾರೆ.

ಎರಡನೇ ಬಾರಿ ಹಿನ್ನಡೆ: ಗೋವಾದಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಆದರೆ ತ್ವರಿ

ತವಾಗಿ ಬೆಂಬಲ ಒಟ್ಟಾಗಿಸಲು ಪಕ್ಷ ವಿಫಲವಾಗಿತ್ತು. ಬಿರುಸಿನ ಕಾರ್ಯಾಚರಣೆ ನಡೆಸಿದ್ದ ಬಿಜೆಪಿ ಗೋವಾದಲ್ಲಿ ಸರ್ಕಾರ ರಚಿಸಿತ್ತು. ಮೇಘಾಯದಲ್ಲಿಯೂ ಅದು ಪುನರಾವರ್ತನೆಯಾಗಿದೆ. ಸರ್ಕಾರ ರಚಿಸಲು ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಹಕ್ಕು ಮಂಡಿಸಿದರಾದರೂ ಬೆಂಬಲ ಒಟ್ಟಾಗಿಸಲು ಸಾಧ್ಯವಾಗಲಿಲ್ಲ. ಬಿಜೆಪಿ ಬೆಂಬಲದ ಪ್ರಾದೇಶಿಕ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿವೆ.

ಮಾಣಿಕ್ ಸರ್ಕಾರ್ ರಾಜೀನಾಮೆ

ಅಗರ್ತಲಾ (ಪಿಟಿಐ): ನೂತನ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ಸಲುವಾಗಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದರು.

ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ತಥಾಗತ ರಾಯ್ ಅವರಿಗೆ ಸಲ್ಲಿಸಿದರು.

‘ರಾಜ್ಯದ ಜನರ ಬೆಂಬಲವಿಲ್ಲದೆ ಕಳೆದ 25 ವರ್ಷಗಳಿಂದ ನಾವು ಇಲ್ಲಿ ಆಡಳಿತ ನಡೆಸಲು ಸಾಧ್ಯವಿರಲಿಲ್ಲ. ಜನರ ಸಹಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ತಿಳಿಸಿದರು.

ರಾಜ್ಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ 59ಕ್ಕೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿಕೂಟವು 43 ಸ್ಥಾನಗಳನ್ನು ಗೆದ್ದಿದೆ. ಎರಡೂ ಪಕ್ಷದ ಶಾಸಕರು ತಮ್ಮ ಶಾಸಕಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಮಂಗಳವಾರ ಸಭೆ ಸೇರಲಿದ್ದಾರೆ.

ನಾಗಾಲ್ಯಾಂಡ್ ಮೈತ್ರಿ ಸರ್ಕಾರ

ಕೊಹಿಮಾ (ಪಿಟಿಐ): ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ಮೈತ್ರಿಕೂಟವು ಬಹುಮತ ಪಡೆದಿದ್ದು, ಮೈತ್ರಿಕೂಟವೇ ಸರ್ಕಾರ ರಚಿಸಬೇಕು ಎಂದು ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದ್ದಾರೆ.

ಎನ್‌ಡಿಪಿಪಿ ಮುಖ್ಯಸ್ಥ ನೀಪಿಯ ರಿಯೊ ಅವರು ತಮ್ಮ ಬೆಂಬಲಿಗರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಬೆಂಬಲಿಗ ಶಾಸಕರ ಸಹಿ ಮಾಡಿಸಿಕೊಂಡು ಸೋಮವಾರ ಭೇಟಿ ಮಾಡುವಂತೆ ರಿಯೊ ಅವರಿಗೆ ರಾಜ್ಯಪಾಲರು ತಿಳಿಸಿದ್ದಾರೆ.

ತಮಗೆ 32 ಶಾಸಕರ ಬೆಂಬಲವಿದೆ ಎಂದು ರಿಯೊ ಹೇಳಿದ್ದರು. 60 ಕ್ಷೇತ್ರಗಳಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟವು 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎರಡು ಸ್ಥಾನ ಗೆದ್ದಿರುವ ಎನ್‌ಪಿಪಿ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry