ಭುವಿಯಿಂದ ಮನುಷ್ಯ ಅಳಿದ ಮೇಲೆ

7

ಭುವಿಯಿಂದ ಮನುಷ್ಯ ಅಳಿದ ಮೇಲೆ

Published:
Updated:
ಭುವಿಯಿಂದ ಮನುಷ್ಯ ಅಳಿದ ಮೇಲೆ

ಜಗತ್ತಿನಲ್ಲಿ ಮನುಷ್ಯನಷ್ಟು ಚೆನ್ನಾಗಿ ಭೂಮಿಯನ್ನು ಆರೈಕೆ ಮಾಡಬಲ್ಲ ಜೀವಿ ಮತ್ತೊಂದಿಲ್ಲ. ಅದೇ ರೀತಿ ಮನುಷ್ಯನಷ್ಟು ಕೆಟ್ಟದಾಗಿ ಭೂಮಿಯನ್ನು ಹಾಳು ಮಾಡಿದ ಜೀವಿಯೂ ಇನ್ನೊಂದಿಲ್ಲ. ಬಗೆಬಗೆ ಮಾಲಿನ್ಯಗಳಿಂದ ವಾತಾವರಣ ಹಾಳುಮಾಡಿಕೊಂಡಿರುವ ನಮಗೆಂದು ಉಳಿದಿರುವ ಏಕೈಕ ವಿಳಾಸವನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಆತಂಕ ಎಲ್ಲ ದೇಶಗಳ ಸಹೃದಯರನ್ನು ಕಾಡುತ್ತಿದೆ.

ಇದೇ ಕಾರಣಕ್ಕೆ ಇರಬಹುದು, ಈಚೆಗೆ ‘ಮನುಷ್ಯರೆಲ್ಲಾ ನಾಪತ್ತೆಯಾದ ಮೇಲೆ ಭೂಮಿಗೆ ಏನಾಗುತ್ತೆ?’ ಎನ್ನುವ ಪ್ರಶ್ನೆಯೊಂದನ್ನು ಅನೇಕರು ಕೇಳಿಕೊಂಡು ತಮ್ಮದೇ ಆದ ರೀತಿಯಲ್ಲಿ ಉತ್ತರ ಹುಡುಕಿಕೊಳ್ಳುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ಲಕ್ಷಗಟ್ಟಲೆ ಜನರನ್ನು ಆಕರ್ಷಿಸಿರುವ ಹತ್ತಾರು ವಿಡಿಯೊ ಸಾಕ್ಷ್ಯಚಿತ್ರಗಳೂ ಸಿಗುತ್ತವೆ.

ಯುದ್ಧವೋ ಮತ್ತೊಂದು ನೆಪವೋ ನ್ಯೂಕ್ಲಿಯರ್‌ ಬಾಂಬುಗಳು ಸ್ಫೋಟಗೊಂಡು ಭೂಮಿ ಸಂಪೂರ್ಣ ನಿರ್ನಾಮವಾಗಬಾರದು ಅಷ್ಟೇ. ಇಷ್ಟಾಗದೆ ಮನುಷ್ಯನು ಭೂಮಿಯಿಂದ ನಿರ್ಗಮಿಸಿದರೆ ಭೂಮಿ ನೆಮ್ಮದಿಯಾಗಿ ತನ್ನನ್ನು ತಾನು ಆರೈಕೆ ಮಾಡಿಕೊಳ್ಳುತ್ತದೆ.

ಮನುಷ್ಯ ಇಳೆಯಿಂದ ನಾಪತ್ತೆಯಾದ ಒಡನಾಟವನ್ನು ರೂಢಿಸಿಕೊಂಡಿದ್ದ ಅನೇಕ ಜೀವಿಗಳಿಗೆ ತಕ್ಷಣ ನಮ್ಮ ಅನುಪಸ್ಥಿತಿ ಕಾಡುತ್ತದೆ. ಕೋಟ್ಯಂತರ ಸಾಕುಪ್ರಾಣಿಗಳು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುವುದನ್ನು ಕಲಿತುಕೊಳ್ಳಬೇಕಾಗುತ್ತದೆ. ಮನುಷ್ಯರು ಇಲ್ಲದ ಕಾರಣ ಅವುಗಳ ಪೈಕಿ ಅನೇಕ ಪ್ರಾಣಿಗಳು ಕೆಲವೇ ದಿನಗಳಲ್ಲಿ ಸತ್ತು ಹೋಗುತ್ತವೆ. ಉಳಿದವು ಬೇಟೆಯಂಥ ತಂತ್ರಗಳನ್ನು ರೂಢಿಸಿಕೊಂಡು ಸ್ವತಂತ್ರವಾಗಿ ಬದುಕುವನ್ನು ಕಲಿಯುತ್ತವೆ.

ನಾವು ಕಟ್ಟಿರುವ ಸೇತುವೆ, ರಸ್ತೆ, ಸೌಧಗಳನ್ನು ಪ್ರಕೃತಿ ಸುಲಭವಾಗಿ ಸ್ವಾಹ ಮಾಡುತ್ತದೆ. ಬೀದಿಗಳು ಮತ್ತು ಸುರಂಗಗಳನ್ನು ನೀರು ನುಂಗಿದರೆ, ಕಟ್ಟಡಗಳನ್ನು ಗಿಡಗಳು ನುಂಗುತ್ತವೆ. ಬೆಂಕಿ ಅಥವಾ ಗೆದ್ದಲುಗಳು ಮರದ ಕಟ್ಟಡಗಳನ್ನು ಪ್ರಕೃತಿಗೆ ಮರಳಿಸುತ್ತವೆ. ಉಕ್ಕಿನ ಆಕೃತಿಗಳನ್ನು ತುಕ್ಕು ತಿಂದು ಹಾಕುತ್ತದೆ. ಆಕಾಶಕ್ಕೆ ಮುತ್ತಿಡುವಷ್ಟು ಎತ್ತರದ ಅಪಾರ್ಟ್‌ಮೆಂಟ್‌ಗಳನ್ನು ಗಿಡಗಳು ನಿಧನಿಧಾನವಾಗಿ ಆವರಿಸಿ ಭೂಮಿಗೆ ಕೆಡವುತ್ತವೆ. ಈಗ ರಾಜಧಾನಿಗಳು, ಮಹಾನಗರಗಳಾಗಿರುವ ಊರುಗಳಲ್ಲಿ ಆನೆ, ಸಿಂಹಗಳು ಮೆರೆಯುತ್ತವೆ.

ಅಮೆರಿಕದಿಂದ ಪೆಸಿಫಿಕ್‌ವರೆಗೆ ಚಾಚಿಕೊಂಡಿರುವ ‘ವಿಶಾಲ ಪ್ಲಾಸ್ಟಿಕ್ ಕಸದ ಕಿಂಡಿ’ಯ (ಗ್ರೇಟ್ ಪ್ಲಾಸ್ಟಿಕ್ ಗಾರ್ಬೇಜ್ ಪ್ಯಾಚ್) ವಿಸ್ತೀರ್ಣ ಕುಗ್ಗುತ್ತಾ ಬಂದು, ಕೊನೆಗೊಂದು ದಿನ ಕೆಲವೇ ದ್ವೀಪಗಳಲ್ಲಿ ಶೇಖರಣೆಗೊಳ್ಳುತ್ತದೆ. ಮೀನುಗಾರಿಕೆ ಮತ್ತು ಮಾಲಿನ್ಯದಿಂದ ಮುಕ್ತಿ ಪಡೆದ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಸ್ವಾಭಾವಿಕ ಮಟ್ಟ ಮುಟ್ಟುತ್ತದೆ. ಭಾರಿ ತಿಮಿಂಗಲಗಳು ಮತ್ತೆ ಸಮುದ್ರವನ್ನು ಆಳುತ್ತವೆ.

ನಾವು ಈ ಭೂಮಿಯಿಂದ ನಾಪತ್ತೆಯಾದ ಅನೇಕ ವರ್ಷಗಳ ನಂತರವೂ ಭೂಗ್ರಹದಲ್ಲಿ ಮನುಷ್ಯರಿದ್ದರು ಎಂದು ಸಾರಿ ಹೇಳುವ ಸಾಮರ್ಥ್ಯ ಇರುವುದು ಪ್ಲಾಸ್ಟಿಕ್‌ಗೆ ಮಾತ್ರ. ಮನುಷ್ಯ ಸೃಷ್ಟಿಸಿದೆ ಉಳಿದೆಲ್ಲ ಕಸ ಕೊಳೆಯುತ್ತದೆ, ಮಣ್ಣಿನಲ್ಲಿ ಬೆರೆಯುತ್ತದೆ. ಪ್ಲಾಸ್ಟಿಕ್ ಮಾತ್ರ ಅದೇ ಸ್ವರೂಪದಲ್ಲಿ ಶಿಲಾಪದರಗಳಲ್ಲಿ ಸೇರಿಬಿಡುತ್ತದೆ. ಬಹುಕಾಲದ ನಂತರ ಇತರ ಗ್ರಹಗಳ ಜೀವಿಗಳೇನಾದರೂ ಭೂಮಿಗೆ ಭೇಟಿಕೊಟ್ಟು ಅಧ್ಯಯನ ನಡೆಸಿದರೆ, ‘ಇಲ್ಲಿದ್ದ ಅತಿಬುದ್ಧಿವಂತ ಪ್ರಾಣಿಯೊಂದು ಪ್ಲಾಸ್ಟಿಕ್‌ಗೆ ಮರುಳಾಗಿಯೇ ತನ್ನ ಅಸ್ತಿತ್ವ ಕೊನೆಗಾಣಿಸಿಕೊಂಡಿತು’ ಎಂಬ ನಿರ್ಧಾರಕ್ಕೆ ಬರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry