ಬ್ಯಾಂಕಿಂಗ್‌: ಹೊಸ ಸವಾಲುಗಳು

7

ಬ್ಯಾಂಕಿಂಗ್‌: ಹೊಸ ಸವಾಲುಗಳು

Published:
Updated:
ಬ್ಯಾಂಕಿಂಗ್‌: ಹೊಸ ಸವಾಲುಗಳು

ಜಾಗತಿಕವಾಗಿ ಬ್ಯಾಂಕಿಂಗ್‌ ಕ್ಷೇತ್ರ ಈಗ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಇದೆ. ಭಾರತದ ಬ್ಯಾಂಕಿಂಗ್‌ ವಲಯ ಸಹ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ‌ ವಹಿವಾಟು ಸ್ಥಿರವಾಗಿದೆ ಮತ್ತು ಅವುಗಳ ಹಣಕಾಸು ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿ ಇದೆ ಎನ್ನುವ ಅಭಿಪ್ರಾಯ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ವಾಸ್ತವವಾಗಿ ಅಂತರರಾಷ್ಟ್ರೀಯ ಲೆಕ್ಕಪತ್ರ ಪರಿಶೀಲನೆಯ ಗುಣಮಟ್ಟಕ್ಕೆ ತಕ್ಕಂತೆ ಅವುಗಳ ಕಾರ್ಯವೈಖರಿ ಉಳಿಸಿಕೊಳ್ಳುವ ಹೊಣೆಗಾರಿಕೆ ಇದೆ.

ಇತ್ತೀಚೆಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿನ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಎಲ್ಲರೂ ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆ ಹುಬ್ಬೇರಿಸುವಂತಾಗಿದೆ.  ಬ್ಯಾಂಕಿಂಗ್‌ ಲೆಕ್ಕಪರಿಶೋಧನೆಯ ನಿಯಮಾವಳಿಗಳ ಮೇಲೆ ಕಣ್ಗಾವಲು ಇಟ್ಟಿರುವ ಸಂಸ್ಥೆಗಳೂ ದಿಗಿಲುಪಡುವಂತಹ ವಿದ್ಯಮಾನ ಇದಾಗಿದೆ.

ಕೆಲವು ದಿನಗಳ ಹಿಂದೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿತು. ಅದರ ಬೆನ್ನಲ್ಲೇ ಜತೆಗೆ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನೂ  ಹೆಚ್ಚಿಸಿತು. ಇದೇ ನೀತಿಯನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಅನುಸರಿಸಿದವು. ಈ ಮೂರೂ ಬ್ಯಾಂಕ್‌ಗಳ ಬಡ್ಡಿದರಗಳ ಹೆಚ್ಚಳವು ಶೇ 0.15 ರಿಂದ ಶೇ 0.20ವರೆಗೆ ಇದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಈ ನಡೆಯು ಗ್ರಾಹಕರಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತು. ಮಾಧ್ಯಮಗಳಲ್ಲೂ ಚರ್ಚೆಗಳು ನಡೆದವು. ಸಾಲ ವಸೂಲಾಗದ ಕಾರಣಕ್ಕೆ ಬ್ಯಾಂಕ್‌ಗಳು ಇಂತಹ ನಿರ್ಧಾರ ಕೈಗೊಳ್ಳಲಾಗಿದೆಯೇ. ಜನಸಾಮಾನ್ಯರ ಹಣ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಇರಲಿದೆಯೇ ಎನ್ನುವ ಪ್ರಶ್ನೆಗಳು ಕಾಡತೊಡಗಿದವು.

ಠೇವಣಿ ಹಣ ಸುರಕ್ಷಿತವಾಗಿ ಇರಲಿದೆ. ಆದರೆ, ಲೆಕ್ಕಪತ್ರಕ್ಕೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ವ್ಯಾಪಕ ಬದಲಾವಣೆಗಳು ಈ ವರ್ಷದ ಏಪ್ರಿಲ್‌ 1ರಿಂದ ಕಂಡು ಬರಲಿವೆ. ಭಾರತೀಯ ರಿಸರ್ವ ಬ್ಯಾಂಕ್‌ ಈ ನಿಯಮಾವಳಿಗಳನ್ನು ರೂಪಿಸಿದೆ. ಇದರಲ್ಲಿ ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ ಸಂಗತಿಯೂ ಇದೆ. ಇದರಿಂದ, ಬ್ಯಾಂಕ್‌ಗಳಲ್ಲಿನ ಬಂಡವಾಳದ ಮೇಲೆಯೂ ಪರಿಣಾಮವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಠಿಣವಾದ ಮತ್ತು ಪರಿಣಾಮಕಾರಿಯಾಗಿ ಲೆಕ್ಕಪತ್ರ ಪರಿಶೀಲನೆ ವ್ಯವಸ್ಥೆ ಜಾರಿಗೊಳಿಸಿದರೆ ಬ್ಯಾಂಕ್‌ಗಳ ಹಣಕಾಸಿನ ಪರಿಸ್ಥಿತಿಯಲ್ಲಿ ₹80 ಸಾವಿರ ಕೋಟಿಗಳಷ್ಟು ಕೊರತೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

  ಅಂತರರಾಷ್ಟ್ರೀಯ ಲೆಕ್ಕಪತ್ರ ಗುಣಮಟ್ಟ ಮಂಡಳಿಯು (ಐಎಎಸ್‌ಬಿ) ಅಂತರರಾಷ್ಟ್ರೀಯ ಹಣಕಾಸು ವರದಿ ಗುಣಮಟ್ಟ ಸಂಸ್ಥೆಯನ್ನು (ಐಎಫ್‌ಆರ್‌ಎಸ್‌) ಆರಂಭಿಸಿದೆ. ಹಣಕಾಸಿಗೆ ಸಂಬಂಧಿಸಿದ ಲೆಕ್ಕಪತ್ರ ಸಮಸ್ಯೆಗಳಿಗೆ ಪರಿಹಾರವನ್ನು ‘ಐಎಫ್‌ಆರ್‌ಎಸ್‌’ ಒದಗಿಸುತ್ತದೆ. ಇದು ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಅಂಶಗಳನ್ನು ವರ್ಗೀಕರಣ ಮಾಡುವುದು, ಆಸ್ತಿಗಳು ಮತ್ತು ಲೆಕ್ಕಪತ್ರಗಳ ಬಗ್ಗೆ ಗಮನಹರಿಸುವುದಾಗಿದೆ.

ಇದರಿಂದ ವಸೂಲಾಗದ ಸಾಲದ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅವಕಾಶ ದೊರೆಯಲಿದೆ. ಉದಾಹರಣೆಗೆ ದೂರಸಂಪರ್ಕ ಕ್ಷೇತ್ರ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಈ ಕ್ಷೇತ್ರದಲ್ಲಿನ ಉದ್ಯಮ ವಲಯ ಮಾಡಿರುವ ಸಾಲವನ್ನು ಪಾವತಿಸದಿದ್ದರೆ ವಸೂಲಾಗದ ಸಾಲದ ಪ್ರಮಾಣ ಹೆಚ್ಚುತ್ತದೆ. ಇದು ಬ್ಯಾಂಕಿಂಗ್ ವಲಯದ ಮೇಲೆ ಹೊರೆಯಾಗಲಿದೆ.

ಹೌದು, ನಾವು ಪ್ರಗತಿ ಸಾಧಿಸಿದ್ದೇವೆ. ಆದರೆ, ನಮ್ಮ ದಾಖಲೆಗಳು ಅಸಮರ್ಪಕವಾಗಿವೆ. ತಪ್ಪು ಲೆಕ್ಕ ಮಾಡುವ ಪದ್ಧತಿಗಳಿಂದಾಗಿ ಕೆಲವು ಬ್ಯಾಂಕ್‌ಗಳು ವಾಸ್ತವಕ್ಕಿಂತ ಹೆಚ್ಚು ವರಮಾನ ತೋರಿಸುತ್ತಿವೆ.

ಹೀಗಾಗಿ, ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ.  ಆದರೆ, ಭಾರತದ ಬ್ಯಾಂಕ್‌ಗಳು ಇನ್ನೂ ವಂಚನೆಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ. ಕಾಲವೇ ಇದಕ್ಕೆ ಉತ್ತರ ಹೇಳಲಿದೆ. ಠೇವಣಿಗಳ ಮೇಲಿನ ಬಡ್ಡಿ ದರಗಳು ಇನ್ನೂ ಹೆಚ್ಚಲಿದೆ ಎಂದು ನಿರೀಕ್ಷಿಸಬಹುದು. ಜತೆಗೆ ಸಾಲಗಳ ಮೇಲಿನ ಬಡ್ಡಿ ದರಗಳೂ ಏರಿಕೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ.

ಆದ್ದರಿಂದ ಮಧ್ಯಮ ವರ್ಗದ ಜನತೆ ಕೇವಲ ನಿಶ್ಚಿತ ಠೇವಣಿಗಳ ಮೇಲೆಯೇ ಹೆಚ್ಚಾಗಿ ಅವಲಂಬನೆಯಾಗುವುದು ಉಚಿತವಲ್ಲ. ಅಂದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ  ನಿಶ್ಚಿತ ಠೇವಣಿ ಸುರಕ್ಷಿತವಾಗಿರುತ್ತದೆ  ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಸಕ್ತ ವರ್ಷದ ಏಪ್ರಿಲ್‌ 1ರಿಂದ ಲೆಕ್ಕಪತ್ರ ನಿಯಮಾವಳಿಗಳಲ್ಲಿ ಅಪಾರ ಬದಲಾವಣೆಗಳಾಗಲಿವೆ. ಇದರಿಂದ, ವಸೂಲಾಗದ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಮತ್ತು ಬ್ಯಾಂಕ್‌ಗಳು ಕಡಿಮೆ ಲಾಭ ಗಳಿಸಿರುವುದು ಪತ್ತೆಯಾಗುವ ಸಾಧ್ಯತೆಗಳಿವೆ. ಜತೆಗೆ ಸಾಲಕ್ಕೆ ನೀಡುವ ಬಂಡವಾಳದಲ್ಲಿಯೂ ಕೊರತೆ ಕಂಡು ಬರಬಹುದು. ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಮತ್ತು ಹೆಚ್ಚು ಬಂಡವಾಳ ಸಂಗ್ರಹಿಸುವ ಉದ್ದೇಶಕ್ಕೆ ಎಸ್‌ಬಿಐ ಕೆಲವು ದಿನಗಳ ಹಿಂದೆ ಠೇವಣಿಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. ಜತೆಗೆ ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸಿತು.

ಲೆಕ್ಕಪತ್ರಗಳ ಮೇಲಿನ ನಿಯಮಾವಳಿಗಳು ಐಎಫ್‌ಆರ್‌ಎಸ್‌ 9 ಅನ್ವಯ ರೂಪಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸರ್ಕಾರ ಬಂಡವಾಳ ಪುನರ್ಧನ ಮಾಡಲು ಹೊರಟಿರುವುದು ಸಹ ಉದ್ದೇಶಿತ ಫಲಿತಾಂಶ ನೀಡುವ ಸಾಧ್ಯತೆ ಕ್ಷೀಣಿಸಿದೆ. ಇದೊಂದು ರೀತಿಯಲ್ಲಿ ರಂಧ್ರ ಇರುವ ಪಾತ್ರೆಯಲ್ಲಿ ನೀರು ತುಂಬಿದಂತಹ ವ್ಯರ್ಥ ಪ್ರಯತ್ನ ಆಗಿರಲಿದೆ.

ಸರ್ಕಾರದ ಬಂಡವಾಳ ಪುನರ್ಧನ ಕೊಡುಗೆಯ ಫಲವಾಗಿ ಬ್ಯಾಂಕ್‌ಗಳು ಉದಾರವಾಗಿ ಸಾಲ ನೀಡಲು ಮುಂದಾಗಲಿವೆ. ಇದು ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲಿದೆ. ಇದರಿಂದಾಗಿ ಇನ್ನೂ ಕೆಲ ತಿಂಗಳುಗಳ ಕಾಲ ಹಣದುಬ್ಬರ ಏರುಗತಿಯಲ್ಲಿಯೇ ಇರಲಿದೆ.

ಈ ವಿದ್ಯಮಾನವು ಸಾರ್ವಜನಿಕವಾಗಿ ತುಂಬ ಮಹತ್ವದ ಸಂಗತಿಯಾಗಿದೆ. ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವು ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣದುಬ್ಬರ ಹೆಚ್ಚಳವು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳ  ಹೆಚ್ಚಳದ ಪ್ರಭಾವ ತಗ್ಗಿಸಲಿವೆ. ಜನಸಾಮಾನ್ಯರು ನಿಶ್ಚಿತ ಠೇವಣಿಗಳಿಗಿಂತ ಇತರ ವಿವಿಧ ಸುರಕ್ಷಿತ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಯೋಚಿಸಬೇಕು.

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿರುವುದನ್ನು ನಾವಿಲ್ಲಿ ಗಮನಿಸಬೇಕು.

ಮುಂದಿನ ವರ್ಷ ಬ್ಯಾಂಕ್‌ಗಳಿಗೆ ಹೆಚ್ಚುವರಿಯಾಗಿ ₹80 ಸಾವಿರ ಕೋಟಿಗಳಷ್ಟು ಬಂಡವಾಳ ಬೇಕಾಗುತ್ತದೆ. ತರಕಾರಿ ಬೆಲೆಗಳು ಕುಸಿಯುತ್ತಿದ್ದು, ಇಂಧನ ಬೆಲೆ ಹೆಚ್ಚುತ್ತಿದೆ. ಹೀಗಾಗಿ, ಭವಿಷ್ಯವು ಭಾರತದ ಬ್ಯಾಂಕಿಂಗ್‌ ಆರ್ಥಿಕತೆಗೆ ದೊಡ್ಡ ಸವಾಲಾಗಲಿದೆ. 

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry