ಮಂದಗತಿಯಲ್ಲಿ ಸಾಗಿದ ಕಾಮಗಾರಿ

7
ಜಗಳೂರು ಕೆರೆಯಲ್ಲಿ ₹ 1.75 ಕೋಟಿ ವೆಚ್ಚದಲ್ಲಿ ವಾಕಿಂಗ್ ಪಾಥ್‌

ಮಂದಗತಿಯಲ್ಲಿ ಸಾಗಿದ ಕಾಮಗಾರಿ

Published:
Updated:
ಮಂದಗತಿಯಲ್ಲಿ ಸಾಗಿದ ಕಾಮಗಾರಿ

ಜಗಳೂರು: ಪಟ್ಟಣಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಜಗಳೂರು ಕೆರೆ ಅಂಚಿನಲ್ಲಿ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ಸಣ್ಣ ವಾಯು ವಿಹಾರ ಪಥ ಕಾಮಗಾರಿ ಮಂದಗರಿಯಲ್ಲಿ ಸಾಗಿದ್ದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

511 ಎಕೆರೆ ವಿಸ್ತೀರ್ಣದ ಜಗಳೂರು ಕೆರೆಯ ಸುತ್ತಾ ಸುಮಾರು 8 ಕಿ.ಮೀ ಉದ್ದದ ವಾಕಿಂಗ್‌ ಪಥ ನಿರ್ಮಾಣ ಕಾಮಗಾರಿ ಸಣ್ಣ ನೀರಾವರಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದೆ. ಕಾಮಗಾರಿಯ ಬಗ್ಗೆ ಪರ ಹಾಗು ವಿರೋಧ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಕೆರೆಯ ಅಂಚಿನಲ್ಲಿ ಮಣ್ಣಿನ ದಿಬ್ಬವನ್ನು ಉದ್ದಕ್ಕೂ ನಿರ್ಮಿಸಲಾಗಿದೆ. ಕಳೆದ ಆರೇಳು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಪ್ರಾರಂಭದಲ್ಲಿ ಬಿರುಸಾಗಿ ಸಾಗಿದ್ದ ಕಾಮಗಾರಿ ಕಳೆದ ತಿಂಗಳಿಂದ ಮಂದಗತಿಯಲ್ಲಿ ನಡೆಯುತ್ತಿದೆ.

ಪಥ ಕಾಮಗಾರಿಗೆ ಗುಣಮಟ್ಟದ ಮಣ್ಣನ್ನು ಬಳಸಿಲ್ಲ. ಸುಲಭವಾಗಿ ಸಿಗುವ ಕೆರೆಗೋಡು ಮಣ್ಣನ್ನೇ ಕಾಮಗಾರಿಗೆ ಬಳಸಲಾಗಿದೆ. ಹಂತಹಂತವಾಗಿ ರೋಲ್‌ ಮಾಡಿಲ್ಲ. ಏರಿಯುದ್ದಕ್ಕೂ ದೊಡ್ಡ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿವೆ. ಇದು ಮಳೆಗಾಲದಲ್ಲಿ ಏರಿ ಕುಸಿಯಲು ಕಾರಣವಾಗುತ್ತದೆ. ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡಿದ್ದು, ಬಂಡ್‌ ಕುಸಿಯದಂತೆ ಎರಡೂ ಭಾಗದಲ್ಲಿ ಸಮರ್ಪಕವಾಗಿ ರಿವಿಟ್‌ ಮೆಂಟ್‌ ನಿರ್ಮಿಸಿಲ್ಲ. ಹಣ ಉಳಿಸುವ ಉದ್ದೇಶದಿಂದ ಪಕ್ಕದಲ್ಲೇ ಉಚಿತವಾಗಿ ಸಿಗುವ ಕೆರೆ ಮಣ್ಣನ್ನು ಬಳಸಿದ್ದು, ಮಳೆಗಾಲದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಪಟ್ಟಣದ ಕೊಳಚೆಯೆಲ್ಲಾ ಕೆರೆಗೆ ಹರಿಸುತ್ತಿದ್ದು, ಕೆರೆ ಗಬ್ಬೆದ್ದು ನಾರುತ್ತಿದೆ. ಕೆರೆಯಲ್ಲಿ ಗಿಡಗಂಟಿಗಳು ವ್ಯಾಪಕವಾಗಿ ಆವರಿಸಿವೆ. ಇಂತಹ ಅನೈರ್ಮಲ್ಯ ಸ್ಥಳದಲ್ಲಿ ವಾಯು ವಿಹಾರ ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

‘ಪಟ್ಟಣದ ನಾಗರಿಕರು ಕೆರೆ ದಡದಲ್ಲಿ ಪರಿಶುದ್ಧವಾದ ಪರಿಸರದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಕೈಗೊಳ್ಳಲು ಅನುಕೂಲವಾಗುವಂತೆ ಶಾಸಕ ಎಚ್‌.ಪಿ. ರಾಜೇಶ್ ಅವರು ಆಸಕ್ತಿ ವಹಿಸಿ ವಾಯು ವಿಹಾರ ಪಥ ಯೋಜನೆ ರೂಪಿಸಿದ್ದಾರೆ. ಇದರಿಂದ ಕೆರೆ ಒತ್ತುವರಿ ತಡೆದಂತಾಗುತ್ತದೆ. ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕೆರೆಯನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಯುವ ಕಾಂಗ್ರೆಸ್‌ ಮುಖಂಡ ಆದರ್ಶ ಹೇಳುತ್ತಾರೆ.

ಅಗತ್ಯ ಇರುವ ಸ್ಥಳಗಳಲ್ಲಿ ಸೇತುವೆಗಳನ್ನು ಸ್ವರಿತವಾಗಿ ನಿರ್ಮಿಸಬೇಕು. ದಾವಣಗೆರೆಯ ಕುಂದವಾಡ ಕೆರೆಯ ಮಾದರಿಯಲ್ಲಿ ಸುಂದರ ವಾಯು ವಿಹಾರ ಪಥ ಇಲ್ಲಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಸರೋವರ್‌ ಯೋಜನೆಯಡಿ ₨18 ಕೋಟಿ ವೆಚ್ಚದಲ್ಲಿ ಈ ಕೆರೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಶಾಸಕ ರಾಜೇಶ್‌ ಅವರು ಯೋಜನೆ ರೂಪಿಸಿದ್ದಾರೆ ಎಂದು ಆದರ್ಶ ಹೇಳಿದರು.

‘ ವಾಯು ವಿಹಾರ ಪಥ ನಿರ್ಮಾಣದಿಂದ ಒತ್ತುವರಿದಾರರಿಗೆ ಅನುಕೂಲ ಆಗಿದೆ. ಕೆರೆಯ ಸುತ್ತಾ ಏರಿ ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಬರಲು ಕಷ್ಟವಾಗಿದೆ. ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ಮಳೆ ನೀರು ಸಂಗ್ರಹವಾಗುತ್ತಿಲ್ಲ ಮೊದಲು ಕೆರೆಯನ್ನು ಸ್ವಚ್ಛಗೊಳಿಸಲಿ. ಕಾಮಗಾರಿ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಆರ್‌. ತಿಪ್ಪೇಸ್ವಾಮಿ ಆರೋಪಿಸುತ್ತಾರೆ.

‘ ₨1.75 ಕೋಟಿ ವೆಚ್ಚದ ವಾಕಿಂಗ್ ಪಾಥ್ ಕಾಮಗಾರಿ ನಡೆಯುತ್ತಿದೆ. ಮುಗಿಯಲು ಇನ್ನೂ ನಾಲ್ಕೈದು ತಿಂಗಳು ಬೇಕಾಗಬಹುದು. ಕಾಮಗಾರಿಯ ವಿವರಗಳು ನನಗೆ ಗೊತ್ತಿಲ್ಲ. ನಾನು ಎಸ್ಟಿಮೇಟ್‌ ನೋಡಿಲ್ಲ’ ಎಂದು ಸಣ್ಣ ನೀರವಾರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

₨1.75 ಕೋಟಿ ವೆಚ್ಚದ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿರುವುದಿಲ್ಲ. ಸೂಕ್ತ ಉಸ್ತುವಾರಿ ಇಲ್ಲದೆ ಕಾಮಗಾರಿ ಕಳಪೆಯಾಗುತ್ತಿದ್ದು, ಏರಿಯುದ್ದಕ್ಕೂ ಬಿರುಕುಗಳು ಬಂದಿವೆ. ಕಾರ್ಯ ನಿರ್ವಾಹಕ ಎಂಜಿನಿಯರ್‌ ಸೊಮಶೇಖರ್‌ ಅವರು ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿ ಉಸ್ತುವಾರಿ ಕೈಗೊಂಡಿಲ್ಲ. ಕೆರೆಯ ಸಂರಕ್ಷಣೆಗಾಗಿ ಇನ್ನೂ ₨1 ಕೊಟಿ ಅನುದಾನ ಮಂಜೂರಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿಲ್ಲ. ಅನುದಾನ ಖರ್ಚು ಮಾಡುವ ನಿಟ್ಟಿನಲ್ಲಿ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹೊರಟಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry