‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ವರದಿ ತಿರಸ್ಕರಿಸದಿದ್ದರೆ ಧರ್ಮಯುದ್ಧ’

ಶನಿವಾರ, ಮಾರ್ಚ್ 23, 2019
34 °C

‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ವರದಿ ತಿರಸ್ಕರಿಸದಿದ್ದರೆ ಧರ್ಮಯುದ್ಧ’

Published:
Updated:
‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ವರದಿ ತಿರಸ್ಕರಿಸದಿದ್ದರೆ ಧರ್ಮಯುದ್ಧ’

ದಾವಣಗೆರೆ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ತಜ್ಞರ ಸಮಿತಿ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ರಾಷ್ಟ್ರೀಯ ಮಠಾಧೀಶರ ಪರಿಷತ್ ಆಗ್ರಹಿಸಿದೆ.

ನಗರದ ಶ್ರೀಶೈಲ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ವೀರಶೈವ ಧರ್ಮದಿಂದ ಲಿಂಗಾಯತವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಸರ್ಕಾರ ಪ್ರಯತ್ನಿಸಿದರೆ, ಮಠಾಧೀಶರು ಧರ್ಮಯುದ್ಧ ಸಾರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಬಹುಸಂಖ್ಯಾತ ವೀರಶೈವ ಲಿಂಗಾಯತರ ಮಾತಿಗೆ ಬೆಲೆ ಕೊಡದೆ, ಕೆಲವು ಮಠಾಧೀಶರ, ರಾಜಕಾರಣಿಗಳ ಒತ್ತಾಯಕ್ಕೆ ಮಣಿದು ತರಾತುರಿಯಲ್ಲಿ ವರದಿಯನ್ನು ಪಡೆದಿರುವುದು ಖಂಡನೀಯ. ತಜ್ಞರ ಸಮಿತಿಯಲ್ಲಿ ಇರುವವರು ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿದ್ದು, ಇವರಿಂದ ನ್ಯಾಯಸಿಗಲು ಸಾಧ್ಯವಿಲ್ಲ’ ಎಂದು ಖಡಕ್ಕಾಗಿ ಹೇಳಿದರು.

‘ಸಮಿತಿಯು ವರದಿ ನೀಡಲು 6 ತಿಂಗಳು ಕಾಲಾವಕಾಶ ಕೇಳಿದ್ದರೂ, ಎರಡೇ ತಿಂಗಳಲ್ಲಿ ಒತ್ತಾಯಪೂರ್ವಕವಾಗಿ ವರದಿ ಪಡೆದಿದ್ದು ಏಕೆ’ ಎಂದು ಪ್ರಶ್ನಿಸಿದ ಶ್ರೀಗಳು, ಬಸವಣ್ಣನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಕೈಹಾಕಿರುವುದು ಸರಿಯಲ್ಲ’ ಎಂದರು.

ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸ್ವತಂತ್ರ ಧರ್ಮ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರವು ತಿರಸ್ಕರಿಸಿತ್ತು. ಈ ಸತ್ಯ ಗೊತ್ತಿದ್ದರೂ ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಕೂಡಲೇ ಮುಖ್ಯಮಂತ್ರಿಗಳು ವರದಿಯನ್ನು ವಜಾಗೊಳಿಸಿ ವೀರಶೈವ, ಲಿಂಗಾಯತ ಒಂದೇ ಎಂಬ ಒಮ್ಮತದ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಬೇಕು. ಇಲ್ಲವಾದರೆ ತಪ್ಪಿಗೆ ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ ಎಂದು ರಂಭಾಪುರಿ ಶ್ರೀಗಳು ಎಚ್ಚರಿಸಿದರು.

ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ತಜ್ಞರ ಸಮಿತಿಯಲ್ಲಿರುವವರು ಬೇರೆ ರಂಗದಲ್ಲಿ ತಜ್ಞರಿರಬಹುದೇ ಹೊರತು, ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ಅಜ್ಞರು. ಧರ್ಮದ ಬಗ್ಗೆ ತಿಳಿವಳಿಕೆ ಇಲ್ಲದವರನ್ನು ನೇಮಿಸಿ ನಿರ್ಣಯ ತೆಗೆದುಕೊಳ್ಳುವುದು ಘೋರ ಅನ್ಯಾಯ’ ಎಂದರು.

ಲಿಂಗಾಯತ ಕುರುಬರು, ಭೋವಿಗಳು, ಗಂಗಾಮತಸ್ಥರು, ಕಮ್ಮಾರ, ಕುಂಚಿಟಿಗ, ಭಜಂತ್ರಿ ಹೀಗೆ 99 ಒಳಪಂಗಡಗಳನ್ನು ಲಿಂಗಾಯತರು ಎಂದು ಘೋಷಿಸಿಕೊಳ್ಳಲಾಗಿದೆ. ಇವರೆಲ್ಲ ಸರ್ಕಾರದ ಮೀಸಲಾತಿ ಬಿಟ್ಟುಕೊಡಲು ಸಿದ್ಧರಿದ್ದಾರಾ ಎಂದು ಸ್ವಾಮೀಜಿ ಪ್ರಶ್ನಿಸಿದರು.

‌ವೀರಶೈವ ಅಧ್ಯಯನ ಸಂಸ್ಥೆಯ ಧರ್ಮಕರ್ತ ಎಂದು ಕರೆದುಕೊಳ್ಳುವ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳು, ವೀರಶೈವ ಮಠದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡು ಲಿಂಗಾಯತ ಧರ್ಮ ಪ್ರತಿಪಾದನೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಗೊಂದಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದು ಸತ್ಯ–ಅಸತ್ಯ, ಧರ್ಮ–ಅಧರ್ಮ ಎಂಬುದನ್ನು ಕೆಲವೇ ತಿಂಗಳಲ್ಲಿ ನಿರ್ಧರಿಸಲಿದ್ದಾರೆ ಎಂದರು.

ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಸಂಗನಬಸವ ಸ್ವಾಮೀಜಿ, ವಿಮಲ ರೇಣುಕ ಸ್ವಾಮೀಜಿ, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ನುಗ್ಗೇಹಳ್ಳಿಯ ಮಹೇಶ್ವರ ಸ್ವಾಮೀಜಿ, ನಾಗಲಾಪುರದ ಮರಿ ಮಹಾಂತ ಸ್ವಾಮೀಜಿ, ಹಂಪಸಾಗರದ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry