ಕಾವೇರಿ ನಿರ್ವಹಣಾ ಮಂಡಳಿ: ರಾಜ್ಯದ ಹಿತ ಕಾಪಾಡಲು ದೇವೇಗೌಡ ಮನವಿ

ಬುಧವಾರ, ಮಾರ್ಚ್ 20, 2019
23 °C

ಕಾವೇರಿ ನಿರ್ವಹಣಾ ಮಂಡಳಿ: ರಾಜ್ಯದ ಹಿತ ಕಾಪಾಡಲು ದೇವೇಗೌಡ ಮನವಿ

Published:
Updated:
ಕಾವೇರಿ ನಿರ್ವಹಣಾ ಮಂಡಳಿ: ರಾಜ್ಯದ ಹಿತ ಕಾಪಾಡಲು ದೇವೇಗೌಡ ಮನವಿ

ನವದೆಹಲಿ: ಕೇಂದ್ರದ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಗುರುವಾರ ಭೇಟಿ ಮಾಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪ್ರಕಟಿಸಿರುವ ತೀರ್ಪಿನ ಬಗ್ಗೆ ಚರ್ಚಿಸಿದರು.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಆರು ವಾರಗಳಲ್ಲಿ ಸ್ಕೀಂ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದರಿಂದ, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಮುನ್ನ ಕರ್ನಾಟಕದ ರೈತರ ಸಮಸ್ಯೆಗಳ ಬಗ್ಗೆ ಗಮನಿಸುವಂತೆ ಅವರು ಗಡ್ಕರಿ ಅವರಲ್ಲಿ ಮನವಿ ಮಾಡಿದರು.

'ಮೇಕೆದಾಟು ಯೋಜನೆ, ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಹಾಗೂ ಕಣಿವೆ ಆಚೆಗೂ ನೀರಾವರಿ ಉದ್ದೇಶಕ್ಕೆ ನೀರು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಿರುವು ಯೋಜನೆಗೆ ಅವಕಾಶ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಸಚಿವ ಗಡ್ಕರಿ ಅವರಿಗೆ ಸಲ್ಲಿಸಲಾಗಿದೆ' ಎಂದು ದೇವೇಗೌಡ ಸುದ್ದಿಗಾರರಿಗೆ ತಿಳಿಸಿದರು.

'ಸುಪ್ರೀಂ ಕೋರ್ಟ್‌ ರಾಜ್ಯಕ್ಕೆ ಇನ್ನೂ 20 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಬೇಕು ಎಂಬುದು ರಾಜ್ಯದ ರೈತರ ಹಾಗೂ ಕಾನೂನು ತಂಡದ ನಿರೀಕ್ಷೆಯಾಗಿತ್ತು. ಆದರೆ, ಕೇವಲ 14.75 ಟಿಎಂಸಿ ಅಡಿ ನೀರಿನ ಹೊರೆಯನ್ನು ಕಡಿಮೆ ಮಾಡಲಾಗಿದೆ. ನಿರ್ವಹಣಾ ಮಂಡಳಿ ರಚಿಸುವುದು ಅನಿವಾರ್ಯವೇ ಆದರೂ ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ ಆಗಬಾರದು ಎಂಬ ಆಶಯ ರಾಜ್ಯ ರೈತರದ್ದಾಗಿದೆ' ಎಂದು ಅವರು ವಿವರಿಸಿದರು.

"ನ್ಯಾಯಮಂಡಳಿಯು ತಮಿಳುನಾಡಿನ ರೈತರಿಗೆ ಮೂರು ಬೆಳೆ ಬೆಳೆಯಲು ಅವಕಾಶ ನೀಡಿ, ರಾಜ್ಯದ ರೈತರಿಗೆ ಒಂದೇ ಬೆಳೆಗೆ ನೀರು ಹಂಚಿಕೆ ಮಾಡಿತ್ತು. ಸುಪ್ರೀಂ ಕೋರ್ಟ್‌ ಸಹ ಅದೇ ಮಾದರಿ ಅನುಸರಿಸಿದೆ. ಇನ್ನಷ್ಟು ನೀರು ಹಂಚಿಕೆ ಮಾಡಿದ್ದರೆ ಎರಡು ಬೆಳೆ ಬೆಳೆಯುವುದಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತಿತ್ತು ಎಂದು ಅವರು ತಿಳಿಸಿದರು.

‘ರಾಜ್ಯ ಸರ್ಕಾರ ತೀರ್ಪಿನ ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸ್ಕೀಂ ರೂಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾಲಾವಕಾಶ ಕೋರಿ ಕೇಂದ್ರವೂ ಅರ್ಜಿ ಸಲ್ಲಿಸಬೇಕು ಎಂದು ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಅವರು ಹೇಳಿದರು.

'ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನ ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ವಿವಾದಕ್ಕೆ

ಸಂಬಂಧಿಸಿದಂತೆ ಚರ್ಚಿಸಲು ಸರ್ವ ಪಕ್ಷಗಳ ಸಂಸತ್‌ ಸದಸ್ಯರ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಮನವರಿಕೆ ಮಾಡುವ ಪ್ರಯತ್ನಿಸಬೇಕು' ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry