ಮತಗಟ್ಟೆ ದುರಸ್ತಿ ಬಹುತೇಕ ಪೂರ್ಣ: ಡಿ.ಸಿ

ಸೋಮವಾರ, ಮಾರ್ಚ್ 25, 2019
31 °C
ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಅಂತಿಮ ಪಟ್ಟಿ ವಿತರಣೆ; ಮೂಲಸೌಕರ್ಯ ಕಲ್ಪಿಸಲು ಆದ್ಯತೆ

ಮತಗಟ್ಟೆ ದುರಸ್ತಿ ಬಹುತೇಕ ಪೂರ್ಣ: ಡಿ.ಸಿ

Published:
Updated:
ಮತಗಟ್ಟೆ ದುರಸ್ತಿ ಬಹುತೇಕ ಪೂರ್ಣ: ಡಿ.ಸಿ

ಬಳ್ಳಾರಿ: ‘ಜಿಲ್ಲೆಯಲ್ಲಿ ಮತಗಟ್ಟೆಗಳ ದುರಸ್ತಿ ಕಾರ್ಯ ವೇಗದಿಂದ ನಡೆದಿದ್ದು, ಶೇ 75ರಷ್ಟು ಪೂರ್ಣಗೊಂಡಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

‘ಶಾಲೆಗಳಲ್ಲಿರುವ ಮತಗಟ್ಟೆಗಳ ದುರಸ್ತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಗೆ ₹ 81.75 ಲಕ್ಷ ಬಿಡುಗಡೆ ಮಾಡಿದೆ. ಶೌಚಾಲಯ, ವಿದ್ಯುತ್‌ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮತಗಟ್ಟೆಗಳ ದುರಸ್ತಿಗೆ ಶಾಲಾ ಸಂಚಿತ ನಿಧಿಯನ್ನು ಬಳಸಬೇಕು ಎಂದು ಇಲಾಖೆಯ ಆಯುಕ್ತರು ಈ ಮುಂಚೆಯೇ ಆದೇಶ ಹೊರಡಿಸಿದ್ದರು. ಅದರಂತೆ ನಿಧಿಯನ್ನು ಈ ಸಂದರ್ಭದಲ್ಲಿಯಾದರೂ ಬಳಸಿದರೆ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮತದಾರರ ಅನುಪಾತ: ’ಜಿಲ್ಲೆಯಲ್ಲಿ ಮತದಾರರ ಅನುಪಾತ ಶೇ 65.94ರಷ್ಟು ಇದ್ದು, ಆ ಕುರಿತು ಚುನಾವಣೆ ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರತಿ 100 ಜನಸಂಖ್ಯೆಗೆ ಮತದಾರರ ಅನುಪಾತ 64ರಿಂದ 70ರವರೆಗೂ ಇರಬೇಕು ಎಂಬುದು ನಿಯಮ. ಜಿಲ್ಲೆಯ ಅನುಪಾತ ಆ ನಿಯಮವನ್ನು ಮೀರಿಲ್ಲ’ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅಂಗವಿಕಲ ಮತದಾರರ ಸಮಗ್ರ ಅಂಕಿ ಅಂಶವನ್ನು ಮತಗಟ್ಟೆವಾರು ಸಿದ್ಧಪಡಿಸಿದ್ದು, ಅದರ ವೆಬ್‌ಪೋರ್ಟಲ್‌ ಅನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮತದಾನ ಮಾಡಿದರೇ ಎಂಬುದನ್ನು ಗಮನಿಸಬಹುದು. ಅವರ ಬದಲಿಗೆ ಬೇರೊಬ್ಬರು ಮತದಾನಕ್ಕೆ ಯತ್ನಿಸಿದರೂ ಸುಲಭವಾಗಿ ಪತ್ತೆ ಹಚ್ಚಬಹುದು’ ಎಂದು ಹೇಳಿದರು.

ಮತದಾರರ ಪಟ್ಟಿ ವಿತರಣೆ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯುಳ್ಳ ಸಿ.ಡಿ ಮತ್ತು ಪಟ್ಟಿಯ ಮುದ್ರಿತ ಪುಸ್ತಕಗಳನ್ನು ವಿತರಿಸಿದರು.

**

18–19 ವಯಸ್ಸಿನ ಯುವ ಮತದಾರರ ನೋಂದಣಿ ಅಂಕಿ ಅಂಶತಾಲ್ಲೂಕು 

ಪುರುಷರು 

ಮಹಿಳೆಯರು

ಒಟ್ಟು

ಹಡಗಲಿ

736 

510 

1,246

ಎಚ್‌ಬಿಹಳ್ಳಿ

1,788

1,511

3,299

ವಿಜಯನಗರ 

1,606 

1,162 

2,768

ಕಂಪ್ಲಿ 

1,875

1,356

3,231

ಸಿರುಗುಪ್ಪ 

1,729

1,004 

2,733

ಬಳ್ಳಾರಿ ಗ್ರಾ

1,412 

1,265

2,677

ಬಳ್ಳಾರಿ ನಗರ

1,658 

1,631

3,289

ಸಂಡೂರು 

1,339 

1,183

2,522

ಕೂಡ್ಲಿಗಿ

1,732 

1,463

3,195

ಒಟ್ಟು

13,875

11,085

24,960

**

ಪಟ್ಟಿಗೆ ಸೇರ್ಪಡೆ: ಇನ್ನೂ ಅವಕಾಶ ಉಂಟು

ಬಳ್ಳಾರಿ: 2017ರ ನವೆಂಬರ್‌ನಿಂದ 2018ರ ಫೆಬ್ರುವರಿರೆಗೂ ಮತದಾರರ ನೋಂದಣಿ ವಿಶೇಷ ಅಭಿಯಾನ ನಡೆಸಲಾಗಿತ್ತು. ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ. ಚುನಾವಣೆ ಘೋಷಣೆಯಾಗಿ ಪ್ರಕ್ರಿಯೆ ಆರಂಭವಾದ ಬಳಿಕ, ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಾಂಕದವರೆಗೂ ಅರ್ಜಿ ಸಲ್ಲಿಸಬಹುದು. ಅಲ್ಲಿಯವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿ ನಡೆಯುತ್ತಿರುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

*

ಕ್ರೀಡಾ ಸಂಕೀರ್ಣ ಅಲಭ್ಯ

ಬಳ್ಳಾರಿ: ಚುನಾವಣೆ ಸಲುವಾಗಿ ಜಿಲ್ಲೆಗೆ ತರಲಾಗಿರುವ 2200 ಬ್ಯಾಲೆಟ್‌ ಯೂನಿಟ್‌ (ಬಿಯು), 2100 ಕಂಟ್ರೋಲ್‌ ಯೂನಿಟ್‌(ಸಿಯು) ಹಾಗೂ 2150 ವಿವಿ ಪ್ಯಾಟ್‌ ಗಳ ಪರಿಶೀಲನೆ ಕಾರ್ಯ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಫೆ.19ರಿಂದ ಆರಂಭವಾಗಿದ್ದು ಮಾ.10ರವರೆಗೂ ನಡೆಸಲು ನಿರ್ಧರಿಸಲಾಗಿದೆ. ನಿಗದಿತ ಗಡುವು ಒಂದು ವಾರ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಭದ್ರತೆ ಸಲುವಾಗಿ ಅಲ್ಲಿ ಪರಿಶೀಲನೆ ನಡೆಯುತ್ತಿದ್ದು, ಕ್ರೀಡಾ ಅಭ್ಯಾಸಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

**

ಜಿಲ್ಲೆಯಲ್ಲಿನ ಮತದಾರರ ವಿವರ

18,28,518 2017 ರ ನವೆಂಬರ್‌ವರೆಗಿನ ಮತದಾರರು

18,70,427 2018ರ ಪರಿಷ್ಕೃತ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರು.

41,909 ಹೊಸದಾಗಿ ಸೇರ್ಪಡೆಯಾದ ಒಟ್ಟು ಮತದಾರರು

18,234 ಜಿಲ್ಲೆಯಲ್ಲಿರುವ ಅಂಗವಿಕಲ ಮತದಾರರು

998 ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ)

ಶೇ 65.94 ಮತದಾರರ ಅನುಪಾತ (ಜನಸಂಖ್ಯೆವಾರು)

2121 ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಮತಗಟ್ಟೆಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry